ADVERTISEMENT

ಆರ್ಥಿಕ ಹಿನ್ನಡೆ: ಅಸಂಬದ್ಧ ಹೇಳಿಕೆ

ವೈಫಲ್ಯ ಮುಚ್ಚಿಕೊಳ್ಳಲು ಹರಿದುಬರುತ್ತಿದೆ ‘ಉಪದೇಶಾಮೃತ’!

ಡಾ.ಜಿ.ವಿ.ಜೋಶಿ
Published 14 ಅಕ್ಟೋಬರ್ 2019, 20:00 IST
Last Updated 14 ಅಕ್ಟೋಬರ್ 2019, 20:00 IST
   

ಆರ್ಥಿಕ ಬೆಳವಣಿಗೆ ಕುಂಠಿತಗೊಂಡಿರುವುದಕ್ಕೆ ಕೇಂದ್ರ ಸರ್ಕಾರದ ತಪ್ಪು ನೀತಿಗಳೇ ಕಾರಣ ಎನ್ನುವ ಸತ್ಯ ದಿನದಿಂದ ದಿನಕ್ಕೆ ಬಯಲಾಗುತ್ತಿದೆ. ಆದರೂ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ವೈಫಲ್ಯಗಳನ್ನು ಮುಚ್ಚಿಕೊಳ್ಳುವ ತರಾತುರಿಯಲ್ಲಿ, ತಿಳಿದೋ ತಿಳಿಯದೆಯೋ ಅಸಂಬದ್ಧ ಹೇಳಿಕೆಗಳ ಪ್ರವಾಹವನ್ನೇ ಹರಿಯಬಿಡುತ್ತಿದ್ದಾರೆ.

ಮುಂದಾಲೋಚನೆಯಿಲ್ಲದೆ ಕೈಗೊಂಡ ನೋಟು ರದ್ದತಿಯಿಂದ ಮಾರುಕಟ್ಟೆಯಲ್ಲಿ ಸರಕು, ಸೇವೆಗಳಿಗಿದ್ದ ಬೇಡಿಕೆ ಗಣನೀಯವಾಗಿ ಕುಸಿಯಿತು ಎಂದು ರಿಸರ್ವ್ ಬ್ಯಾಂಕ್‌ನ ವರದಿಗಳು ತೋರಿಸಿದ್ದರೆ, ದೋಷಪೂರಿತ ಜಿಎಸ್‌ಟಿಯು ಆರ್ಥಿಕ ಮಂದಗತಿಗೆ ಕಾರಣವಾಗಿದೆ ಎಂದು ಪ್ರಧಾನಿ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ವಿವೇಕ್‌ ದೆಬೊರಾಯ್‌ ಕೆಲವೇ ದಿನಗಳ ಹಿಂದೆ ಒಪ್ಪಿಕೊಂಡರು. ಆಗಿರುವ ತಪ್ಪನ್ನು ಕೇಂದ್ರ ಸರ್ಕಾರವು ವಿನಯಪೂರ್ವಕವಾಗಿ ಒಪ್ಪಿಕೊಂಡು, ಕುಂಠಿತ ಪ್ರಗತಿಗೆ ಚೈತನ್ಯ ತುಂಬಲು ಕ್ರಮ ತೆಗೆದುಕೊಳ್ಳ ಬೇಕೆಂದು ಮಾಜಿ ಪ್ರಧಾನಿ, ಆರ್ಥಿಕ ತಜ್ಞ ಮನ ಮೋಹನ್‌ ಸಿಂಗ್‌ ಇತ್ತೀಚೆಗೆ ಸಲಹೆ ನೀಡಿದರು. ಇದಕ್ಕೆ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ‘ಅವರು ಹೇಳಿದ್ದನ್ನು ನಾನು ಕೇಳಿಸಿಕೊಂಡೆ’ ಎಂದು ಅಸಂಬದ್ಧವಾಗಿ ಪ್ರತಿಕ್ರಿಯಿಸಿಬಿಡಬೇಕೇ! ಏಪ್ರಿಲ್- ಜೂನ್ ತ್ರೈಮಾಸಿಕದಲ್ಲಿ ಆದ ಕಳವಳಕಾರಿ ಬೆಳವಣಿಗೆ ದರ ಶೇ 5ನ್ನು ದೃಷ್ಟಿಯಲ್ಲಿಟ್ಟು ಸಿಂಗ್ ಅವರು ನೀಡಿದ ಹಿತನುಡಿಯನ್ನು ಅರ್ಥ ಮಾಡಿಕೊಳ್ಳುವ ವ್ಯವಧಾನ ಕೂಡ ಸಚಿವೆಗೆ ಇಲ್ಲವಾಗಿ ಹೋಯಿತು.

ಮಂದಗತಿಗೆ ಕಾರಣ ಹಾಗೂ ಅದರ ಪರಿಣಾಮ ಗಳ ಬಗ್ಗೆ ವಿಶ್ಲೇಷಣೆ ನಡೆಯುತ್ತಿದ್ದಾಗಲೇ ‘ಭಾರತದ ಆರ್ಥಿಕ ಬೆಳವಣಿಗೆ ದರ ಉತ್ಪ್ರೇಕ್ಷೆಯಿಂದ ಕೂಡಿದೆ’ ಎಂದು ಕೇಂದ್ರ ಸರ್ಕಾರದ ಮಾಜಿ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್ ತಮ್ಮ ಸಂಶೋಧನೆಯ ನೆಲೆಯಲ್ಲಿ ತಿಳಿಸಿದ್ದರು. ಅದಕ್ಕೆ, ಅವರ ಉತ್ತರಾಧಿಕಾರಿ ಕೆ.ವಿ. ಸುಬ್ರಮಣಿಯನ್, ಭಾರತದ ಬೆಳವಣಿಗೆ ದರ ವನ್ನು ಪ್ರಶ್ನಿಸುವವರು ಹೈಸ್ಕೂಲ್ ಮಟ್ಟದ ಅಂಕಗಣಿತವನ್ನು ನೆನಪಿಸಿಕೊಳ್ಳುವಂತೆ ಅಸಂಬದ್ಧವಾಗಿ ಪ್ರತಿಕ್ರಿಯಿಸಿದರು. ಬೆಳವಣಿಗೆ ದರ ಉತ್ಪ್ರೇಕ್ಷೆಯಿಂದ ಕೂಡಿರಲಿ ಅಥವಾ ವಾಸ್ತವಕ್ಕಿಂತ ಕಡಿಮೆಯಾದ ಅಂದಾಜು ಹೊಂದಿರಲಿ ಅದೊಂದು ವಿಶೇಷ ಸಂಗತಿಯೇ ಅಲ್ಲ ಎಂದು ಹೇಳುವ ಮಿತಿಮೀರಿದ ಧೈರ್ಯ ಪ್ರದರ್ಶಿಸಿಬಿಟ್ಟರು!

ತಮ್ಮ ಕಚೇರಿಯಲ್ಲಿ ಅಸಹಾಯಕರಾಗಿ ಅಂಕಿ ಗಳೊಡನೆ ಮರುಹೊಂದಾಣಿಕೆ ಮಾಡಿಕೊಳ್ಳುತ್ತಿರುವ, ಕಚೇರಿಯ ಹೊರಗೆ ಆಗಾಗ ಮುಜುಗರದ ಸನ್ನಿವೇಶಗಳನ್ನು ಎದುರಿಸುತ್ತಿರುವ ನಿರ್ಮಲಾ, ರಾಜ್ಯ ತೆರಿಗೆದಾರರ ಸಂಘವು ಧಾರವಾಡದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಬ್ಯಾಂಕ್‌ಗಳಲ್ಲಿ ಲೆಕ್ಕಕ್ಕೆ ಸಿಗದ ವ್ಯವಹಾರಗಳ ಪ್ರಮಾಣ ಶೇ 85ರಷ್ಟು ಇರುವಾಗ, ಆರ್ಥಿಕ ಪ್ರಗತಿಯ ದರವನ್ನು ಲೆಕ್ಕ ಹಾಕು ವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು. 2015-16ರಲ್ಲಿ ಪ್ರಗತಿ ದರ ಶೇ 7.6ಕ್ಕೆ ಜಿಗಿದಿದೆ ಎಂದು ಕೇಂದ್ರೀಯ ಸಾಂಖ್ಯಿಕ ಸಂಸ್ಥೆ ಹೇಳಿದಾಗ, ಆಗ ವಾಣಿಜ್ಯ ಸಚಿವೆಯಾಗಿದ್ದ ನಿರ್ಮಲಾ ಸಂಭ್ರಮಿಸಿದ್ದರು. ಆಗ ಸರಿಯಾಗಿದ್ದ ಪ್ರಗತಿ ದರದ ಅಂದಾಜಿನ ವಿಧಾನ ಈಗೇಕೆ ಅವರಿಗೆ ಸರಿಯೆನಿಸಲಿಲ್ಲ?

ಹೊಸ ಪೀಳಿಗೆಯವರು ಸಂಚಾರಕ್ಕೆ ಉಬರ್ ಮತ್ತು ಓಲಾ ಕ್ಯಾಬ್‌ಗಳನ್ನು ನೆಚ್ಚಿಕೊಳ್ಳುತ್ತಿರುವುದು ಕೂಡ ವಾಹನ ತಯಾರಿಕಾ ವಲಯದಲ್ಲಿ ಮಾರಾಟ ಕುಸಿತಕ್ಕೆ ಕಾರಣ ಎಂದು ಸಚಿವೆ ಚೆನ್ನೈನಲ್ಲಿ ಹಾಸ್ಯಾಸ್ಪದ ಹೇಳಿಕೆ ನೀಡಿದರು. ಅಲ್ಲದೆ ಹಣದುಬ್ಬರದ ದರ ಶೇ 4ರೊಳಗೆ ಇರುವಂತೆ ಸರ್ಕಾರ ನೋಡಿಕೊಂಡಿ ದ್ದರಿಂದ ಆರ್ಥಿಕ ಹಿನ್ನಡೆಯು ಜನಸಾಮಾನ್ಯರ ಜೀವನದ ಮೇಲೆ ಯಾವುದೇ ಅಡ್ಡಪರಿಣಾಮ ಬೀರಿಲ್ಲ ಎಂದರು. ಕೃಷಿ, ಕೈಗಾರಿಕೆ, ತಯಾರಿಕೆ, ವ್ಯಾಪಾರ, ರಫ್ತು ವಹಿವಾಟು- ಹೀಗೆ ಎಲ್ಲಾ ರಂಗಗಳಲ್ಲಿ ಮಂಕು ಕವಿದಿದೆ. ನಿರುದ್ಯೋಗದ ಪ್ರಮಾಣ ಏರಿಕೆಯಾಗಿ 2019ರ ಆಗಸ್ಟ್‌ ತಿಂಗಳಿನಲ್ಲಿ ಅದು ಶೇ 8.2ರಷ್ಟಾಗಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ ವರದಿ ಮಾಡಿದೆ. ಹೀಗಿರುವಾಗ, ಜನ ನಿಶ್ಚಿಂತೆಯಿಂದ ಇರುವುದಾದರೂ ಹೇಗೆ?

ಕೇಂದ್ರ ಸರ್ಕಾರವು2014ರಿಂದ ಅಸಂಘಟಿತ ವಲಯದಲ್ಲಿ ಉದ್ಯೋಗ ಸೃಷ್ಟಿಸಿದ್ದು, ಅದು ಅಧಿಕೃತ ವಾದ ದಾಖಲೆಗೆ ಸೇರಿಲ್ಲವೆಂಬ ನಿರ್ಮಲಾ ಅವರ ಸಮರ್ಥನೆ ವಿಚಿತ್ರವಾಗಿದೆ. ಸರ್ಕಾರ ಎಸಗಿದ ಪ್ರಮಾದ ಗಳಿಂದ ಸಂಘಟಿತ ವಲಯದಲ್ಲಿ ಕೆಲಸ ಕಳೆದುಕೊಂಡ ಕಾರ್ಮಿಕರು ಅಸಂಘಟಿತ ವಲಯ ಸೇರಿದ್ದಾರೆ ಎಂಬ ಸಂಗತಿಯನ್ನು ತಿಳಿಸುವ ಉದ್ದೇಶ ಅವರಿಗಿದ್ದರೆ ಅದು ಸರಿ! ಅಸಂಘಟಿತ ವಲಯದಲ್ಲಿ ತೀರಾ ಕಡಿಮೆ ಸಂಬಳದ, ಅಭಿವೃದ್ಧಿರಹಿತ ಉದ್ಯೋಗ ಸೃಷ್ಟಿಸುವುದು ಕೇಂದ್ರದ ಪಾಲಿಗೆ ಒಂದು ಸಾಧನೆಯೇ?

‘ಉದ್ಯೋಗ ನಷ್ಟ ಈಗ ದೊಡ್ಡ ಸಮಸ್ಯೆ. ಇದು ಕ್ರಿಯಾತ್ಮಕ ಅರ್ಥವ್ಯವಸ್ಥೆಯಲ್ಲಿ ತೀರಾ ಸಾಮಾನ್ಯ’ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ಹೇಳಿಕೆ ನೀಡಿ ಜಾಣ್ಮೆ (!) ಮೆರೆದರು. ಆರ್ಥಿಕ ಮಂದ ಗತಿ ಇಡೀ ವಿಶ್ವದ ಸಮಸ್ಯೆಯಾಗಿರುವಾಗ ನಾವು ಬಹಳ ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂಬ ಉಪದೇಶಾಮೃತ ಅವರಿಂದ!

ಆರ್ಥಿಕ ಬೆಳವಣಿಗೆ ದರ ಮಂದಗತಿಯಲ್ಲಿದ್ದರೂ ಲಕ್ಷ ಕೋಟಿಗಳದ್ದೇ ದರ್ಬಾರು. 2024-25ರ ಹೊತ್ತಿಗೆ ಗೋಚರಿಸಲಿರುವ ₹ 350 ಲಕ್ಷ ಕೋಟಿ ಗಾತ್ರದ ಆರ್ಥಿಕತೆಯ ಭವ್ಯ ಚಿತ್ರಣವನ್ನು ಕಲ್ಪಿಸಿಕೊಂಡು ನಲಿಯಿರಿ ಎಂದು ಹೇಳಿ ವಾಣಿಜ್ಯ ಸಚಿವ ಪೀಯೂಷ್ ಗೋಯಲ್ ಸುದ್ದಿಯಾಗಿದ್ದಾರೆ. ಸದ್ಯ, ಗಗನಕುಸುಮ ವನ್ನು ತೆಗೆದು ಮುಡಿಗೇರಿಸಿಕೊಳ್ಳಿ ಎಂದು ಅವರು ಹೇಳಿಲ್ಲವೆಂಬುದೇ ಸಮಾಧಾನದ ಸಂಗತಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.