ADVERTISEMENT

ಸಂಗತ: ಶೈಕ್ಷಣಿಕ ಸಂಶೋಧನೆಯ ವರ್ತಮಾನ

ಪಿಎಚ್.ಡಿ ಪದವಿಗಾಗಿ ತಾವು ನಡೆಸುವ ಸಂಶೋಧನಾ ಕೆಲಸಕ್ಕಿಂತ, ತಮ್ಮ ಗೈಡ್ ಮನಃಸ್ಥಿತಿ ಎಂತಹದ್ದು ಎಂಬುದೇ ಅಭ್ಯರ್ಥಿಗಳಿಗೆ ಹೆಚ್ಚು ಚಿಂತೆಯ ವಿಷಯವಾಗಿದೆ!

ಎಚ್.ಕೆ.ಶರತ್
Published 28 ಜೂನ್ 2021, 19:14 IST
Last Updated 28 ಜೂನ್ 2021, 19:14 IST
Sangat 29-06-21
Sangat 29-06-21   

ರಾಜ್ಯದ ವಿಶ್ವವಿದ್ಯಾಲಯವೊಂದರಲ್ಲಿ ಪಿಎಚ್.ಡಿ ಪದವಿಗೆ ದಾಖಲಾಗಲು ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಳ್ಳುವ ಸಲುವಾಗಿ ತಮ್ಮದೇ ವಾಟ್ಸ್‌ಆ್ಯಪ್ ಗುಂಪೊಂದನ್ನು ರಚಿಸಿಕೊಂಡಿದ್ದಾರೆ. ಇತ್ತೀಚೆಗೆ ಆ ಗುಂಪಿನಲ್ಲಿ ನಡೆದ ಚರ್ಚೆ, ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಇಂದಿಗೂ ಚಾಲ್ತಿಯಲ್ಲಿರುವ ಬಿಕ್ಕಟ್ಟೊಂದರತ್ತಲೇ ಬೊಟ್ಟು ಮಾಡುತ್ತಿತ್ತು.

ಈ ಬಾರಿ ಸಂಶೋಧನಾರ್ಥಿಗಳಾಗಿ ಪಿಎಚ್.ಡಿಗೆ ಪ್ರವೇಶ ಪಡೆಯುವವರಿಗೆ ತಮಗೆ ಬೇಕಾದ ಮಾರ್ಗದರ್ಶಕರನ್ನು (ಗೈಡ್) ಆಯ್ಕೆ ಮಾಡಿಕೊಳ್ಳಲು ಅವಕಾಶ ಇದೆಯೋ ಇಲ್ಲವೋ ಎನ್ನುವ ಕುರಿತು ಶುರುವಾದ ಚರ್ಚೆ, ಒಂದು ವೇಳೆ ವಿಶ್ವವಿದ್ಯಾಲಯವೇ ಗೈಡ್‍ಗಳನ್ನು ಆಯ್ಕೆ ಮಾಡಿದರೆ ಭವಿಷ್ಯದಲ್ಲಿ ತಾವು ಎದುರಿಸಬೇಕಿರುವ ಸವಾಲುಗಳತ್ತ ವಾಲಿತು. ಕೆಲವರು, ಹಾಗೇನಾದರೂ ಆದಲ್ಲಿಪಿಎಚ್.ಡಿ ಮುಗಿಸುವುದೇ ಕಷ್ಟವೆಂದೂ, ಕೆಲ ಗೈಡ್‍ಗಳು ಲಕ್ಷಗಟ್ಟಲೆ ಹಣಕ್ಕೆ ಬೇಡಿಕೆ ಸಲ್ಲಿಸುತ್ತಾರೆ ಅಂತಲೂ ಅಳಲು ತೋಡಿಕೊಳ್ ಳತೊಡಗಿದರು. ಹಾಗೊಂದು ವೇಳೆ ಸಂಶೋಧನಾರ್ಥಿಗಳಿಗೆ ಗೈಡ್ ಆರಿಸಿಕೊಳ್ಳುವ ಅವಕಾಶ ಕಲ್ಪಿಸದೇ ಹೋದಲ್ಲಿ ಎಲ್ಲರೂ ಒಗ್ಗಟ್ಟಾಗಿ ಇದನ್ನು ವಿರೋಧಿಸಬೇಕೆನ್ನುವ ವಾದವನ್ನು ಕೆಲವರು ಮಂಡಿಸಿದರು. ಇದಕ್ಕೆ ಆ ಗುಂಪಿನಲ್ಲಿದ್ದ ಹಲವರು ಸಮ್ಮತಿ ಸೂಚಿಸಿದರು.

ಈ ನಡುವೆ, ಯಾವುದೇ ಪಿಎಚ್.ಡಿ ಮಾರ್ಗದರ್ಶಕರೊಂದಿಗೂ ಸಂಪರ್ಕ ಹೊಂದಿರದ ಅಭ್ಯರ್ಥಿಯೊಬ್ಬರು, ‘ವಿಶ್ವವಿದ್ಯಾಲಯವೇ ಗೈಡ್ ಆಯ್ಕೆ ಮಾಡಿಕೊಟ್ಟರೆ ತಪ್ಪೇನು? ಗೈಡ್ ಆಗಲು ಅರ್ಹತೆ ಹೊಂದಿರುವ ಪ್ರಾಧ್ಯಾಪಕರ ಪರಿಚಯ ಇಲ್ಲದ ನಮ್ಮಂತಹವರು ಏನು ಮಾಡಬೇಕು’ ಅಂತೆಲ್ಲ ಪ್ರಶ್ನಿಸಿದರು. ‘ನಿಮಗೆ ಬೇಕಿದ್ದರೆ ವಿಶ್ವವಿದ್ಯಾಲಯವೇ ಗೈಡ್ ಹುಡುಕಿಕೊಡುತ್ತೆ. ಈಗಾಗಲೇ ಗೈಡ್ ಹುಡುಕಿಕೊಂಡಿರುವ ನಮಗೆ ಆಯ್ಕೆ ಅವಕಾಶ ನೀಡಲಿ’ ಎಂದು ಅವರನ್ನು ಸಮಾಧಾನಪಡಿಸಲು ಕೆಲವರು ಯತ್ನಿಸಿದರು.

ADVERTISEMENT

ಚರ್ಚೆಯಲ್ಲಿ ತೊಡಗಿದ್ದ ಬಹುತೇಕರು ರಾಜ್ಯದ ವಿವಿಧ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವವರು ಎನ್ನುವುದು ಇಲ್ಲಿ ಗಮನಾರ್ಹ. ಉಪನ್ಯಾಸಕರಿಗೇ ಅಪರಿಚಿತ ಪ್ರಾಧ್ಯಾಪಕರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸುವುದೆಂದರೆ, ಸಮಸ್ಯೆಗಳನ್ನು ತಾವಾಗೇ ಆಹ್ವಾನಿಸಿಕೊಂಡಂತೆ ಅನಿಸುತ್ತಿರುವುದು ನಮ್ಮ ಶೈಕ್ಷಣಿಕ ವಲಯದ ಆರೋಗ್ಯ ಹೇಗಿದೆ ಎಂಬುದಕ್ಕೆ ಹಿಡಿದ ಕನ್ನಡಿ.

ಗೈಡ್ ಆಯ್ಕೆಯನ್ನು ವಿಶ್ವವಿದ್ಯಾಲಯ ಮಾಡ ಬೇಕೋ ಅಥವಾ ಸ್ವತಃ ಸಂಶೋಧನಾರ್ಥಿಗೇ ಆಯ್ಕೆ ಸ್ವಾತಂತ್ರ್ಯ ನೀಡಬೇಕೋ ಎಂಬುದನ್ನು ನಿರ್ಧರಿಸಲು ಮಾನದಂಡ ಆಗಬೇಕಿರುವುದು ಸಂಶೋಧನಾ ಗುಣಮಟ್ಟವಲ್ಲವೇ? ವಿಶ್ವವಿದ್ಯಾಲಯವೇ ಗೈಡ್ ಆಯ್ಕೆ ಮಾಡಿದರೆ ತಮ್ಮ ಸಂಶೋಧನಾ ಗುಣಮಟ್ಟ ಕುಸಿಯಲಿದೆ ಎನ್ನುವ ಆತಂಕವನ್ನು ಸಂಶೋಧನಾರ್ಥಿ ಗಳ ವಾಟ್ಸ್‌ಆ್ಯಪ್ ಗುಂಪಿನ ಯಾವೊಬ್ಬ ಸದಸ್ಯರೂ ವ್ಯಕ್ತಪಡಿಸದೇ ಇದ್ದುದು ಇಲ್ಲಿ ಗಮನಾರ್ಹ.

ಪಿಎಚ್.ಡಿ ಪದವಿ ಪೂರೈಸಲು ತಾವು ನಡೆಸುವ ಸಂಶೋಧನಾ ಕೆಲಸಕ್ಕಿಂತ, ಮಾರ್ಗದರ್ಶಕರ ಮನಃಸ್ಥಿತಿ ಎಂತಹದ್ದು ಎಂಬುದೇ ನಿರ್ಣಾಯಕಎನ್ನುವ ಅಭಿಪ್ರಾಯ ಬದಲಿಸಲು ಸಾಧ್ಯವಾಗುವಂತಹ ಸುಧಾರಣಾ ಕ್ರಮಗಳನ್ನು ವಿಶ್ವವಿದ್ಯಾಲಯಗಳುಕೈಗೊಳ್ಳಬೇಕಲ್ಲವೇ? ಅಭ್ಯರ್ಥಿಗಳು ಸಂಶೋಧನಾ ಕೆಲಸಕ್ಕಿಂತ ತಮ್ಮ ಗೈಡುಗಳ ವೈಯಕ್ತಿಕ ಕೆಲಸವನ್ನೇ ಹೆಚ್ಚು ಮಾಡಿ ಪಿಎಚ್.ಡಿ ಪೂರೈಸಿರುವ ನಿದರ್ಶನಗಳು ಅನೇಕ ಕ್ಯಾಂಪಸ್‌ಗಳಲ್ಲಿ ಹಾಸುಹೊಕ್ಕಾಗಿವೆ.

ನಮ್ಮ ವಿಶ್ವವಿದ್ಯಾಲಯಗಳಲ್ಲಿನ ಸಂಶೋಧನಾ ಗುಣಮಟ್ಟ ಸುಧಾರಣೆಯಾಗದಿದ್ದರೂ ಪೇಟೆಂಟ್‍ಗೆ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಿದೆ. ವಿಜ್ಞಾನ ಮತ್ತು ತಾಂತ್ರಿಕ ಶಿಕ್ಷಣ ನೀಡುವ ಕಾಲೇಜುಗಳ ಗುಣ ಮಟ್ಟದ ಮೌಲ್ಯಮಾಪನ ನಡೆಸುವ ವಿವಿಧ ಸಂಸ್ಥೆ ಹಾಗೂ ಮಂಡಳಿಗಳು, ಅಲ್ಲಿ ಕಾರ್ಯ ನಿರ್ವಹಿಸುವ ಅಧ್ಯಾಪಕರ ಬಳಿ ಎಷ್ಟು ಪೇಟೆಂಟುಗಳಿವೆ ಎಂಬು ದನ್ನೂ ಮುಖ್ಯ ಮಾನದಂಡವಾಗಿ ಪರಿಗಣಿಸುತ್ತಿವೆ. ಹೀಗಾಗಿ, ಸಂಶೋಧನೆಗಳಲ್ಲಿ ತೊಡಗಿರುವವರ ಮೇಲೆ ಪೇಟೆಂಟ್‍ಗೆ ಅರ್ಜಿ ಸಲ್ಲಿಸಬೇಕೆನ್ನುವ ಒತ್ತಡ ಹೇರಲಾಗುತ್ತಿದೆ. ವೇತನ ಹೆಚ್ಚಳ, ಬಡ್ತಿ ಮತ್ತು ಇರುವ ಕೆಲಸ ಉಳಿಸಿಕೊಳ್ಳುವ ಸಲುವಾಗಿ, ಆಸಕ್ತಿ ಇಲ್ಲದಿದ್ದರೂ ಪಿಎಚ್.ಡಿ ಪೂರೈಸಬೇಕಿರುವ ಒತ್ತಡಕ್ಕೆ ಸಿಲುಕಿದ್ದ ಅಧ್ಯಾಪಕರಿಗೆ ಈಗ ಪೇಟೆಂಟ್ ಹೊಂದುವುದು ಕೂಡ ಮುಖ್ಯವಾಗತೊಡಗಿದೆ.

ಪಿಎಚ್.ಡಿ ಸಂಶೋಧನಾರ್ಥಿಗಳ ವಾಟ್ಸ್‌ಆ್ಯಪ್ ಗುಂಪಿನಲ್ಲಿ ಕೆಲವರು, ‘ನಾವು ಪೇಟೆಂಟ್‍ಗೆ ಅರ್ಜಿ ಸಲ್ಲಿಸುತ್ತಿದ್ದೇವೆ. ಅರ್ಜಿ ಶುಲ್ಕದಲ್ಲಿ ಒಂದು ಪಾಲು ಭರಿಸಲು ಸಿದ್ಧರಿರುವವರು ನಮ್ಮೊಂದಿಗೆ ಕೈಜೋಡಿಸಬಹುದು’ ಎನ್ನುವ ಆಹ್ವಾನವನ್ನು ಆಗಾಗ ನೀಡುತ್ತಿರುತ್ತಾರೆ.

ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಪೂರಕ ವಾಗಿ ನಡೆಯಬೇಕಿದ್ದ ಸಂಶೋಧನಾ ಚಟುವಟಿಕೆಗಳ ದಿಕ್ಕು ದೆಸೆಯನ್ನು ವೇತನ ಹೆಚ್ಚಳ ಮತ್ತು ಬಡ್ತಿ ಎಂಬ ಬಾಹ್ಯ ಒತ್ತಡಗಳೇ ನಿರ್ಧರಿಸುತ್ತಿರುವುದು ಮುಂದುವರಿದಿದೆ. ಇಂಥ ನಿರಾಸಕ್ತ ಸಂಶೋಧನಾರ್ಥಿಗಳ ಅಗತ್ಯ ಪೂರೈಸಲೆಂದೇ ಹೊಸ ರಿಸರ್ಚ್ ಕನ್‍ಸಲ್ಟೆನ್ಸಿಗಳು ಹುಟ್ಟಿಕೊಳ್ಳುತ್ತಿವೆ. ಅವರು ಸೂಚಿಸುವ ಮೊತ್ತ ಪಾವತಿಸಿದರೆ ಸಂಶೋಧನಾ ವಿಷಯದ ಆಯ್ಕೆಯಿಂದ ಹಿಡಿದು ಪ್ರಬಂಧ ಮಂಡನೆಯವರೆಗೆ ಕೈಹಿಡಿದು ನಡೆಸುವುದಾಗಿ ಭರವಸೆ ನೀಡುತ್ತಿವೆ.

ದುಡ್ಡು ಕೊಟ್ಟು ಪಡೆಯಬಹುದಾದದ್ದು ಗೌರವ ಡಾಕ್ಟರೇಟ್ ಒಂದೇ ಅಲ್ಲ, ಪಿಎಚ್.ಡಿ. ಪದವಿಯನ್ನೂ ಕೊಂಡುಕೊಳ್ಳಬಹುದಾದ ಸನ್ನಿವೇಶ ಎಂದೋ ನಿರ್ಮಾಣವಾಗಿದೆ. ಇಂದು ಅದರ ವ್ಯಾಪ್ತಿ ಮತ್ತಷ್ಟು ವಿಸ್ತಾರಗೊಳ್ಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.