ADVERTISEMENT

ಸಂಗತ | ಕಾಯಕ: ಪರಿಣಾಮಕಾರಿ ‘ವ್ಯಾಕ್ಸಿನ್’!

ಆರಾಮದಾಯಕ ಪರಿಧಿಯಲ್ಲಿ ಎಂದಿಗೂ ಬೆಳವಣಿಗೆ ಸಾಧ್ಯವಿಲ್ಲ

ಮಲ್ಲಿಕಾರ್ಜುನ ಹೆಗ್ಗಳಗಿ
Published 26 ಮೇ 2021, 19:55 IST
Last Updated 26 ಮೇ 2021, 19:55 IST
   

ಜಪಾನೀಯರಿಗೆ ಸಮುದ್ರದ ದಂಡೆಯಲ್ಲಿ ಫ್ರೈ ಮಾಡಿದ ಮೀನು ತಿನ್ನುವುದು ಬಹಳ ಇಷ್ಟ. ಆದರೆ, ದೇಶದ ಎಲ್ಲೆಡೆ ತಾಜಾ ಮೀನು ಸಿಗುವುದು ಸಾಧ್ಯವಿಲ್ಲ. ಹೀಗಾಗಿ, ದೊಡ್ಡ ನೀರಿನ ಟ್ಯಾಂಕುಗಳಲ್ಲಿ ಮೀನುಗಳನ್ನು ಬೆಳೆಸುವ ಸಂಪ್ರದಾಯ ಆರಂಭವಾಯಿತು. ಆದರೆ ಇವುಗಳಿಗೆ ಸಮುದ್ರದ ಮೀನುಗಳಷ್ಟು ರುಚಿ ಬರಲಿಲ್ಲ. ಅವರಿಗೆ ಕಾರಣ ಗೊತ್ತಾಯಿತು. ತಾವು ಸಾಕುವ ಮೀನುಗಳ ನೀರಿನ ಟ್ಯಾಂಕುಗಳಲ್ಲಿ ಒಂದೆರಡು ಷಾರ್ಕ್ ಮೀನುಗಳನ್ನು ಬಿಡತೊಡಗಿದರು. ಈ ಷಾರ್ಕ್ ಮೀನುಗಳು ಕೆಲವು ಮೀನುಗಳನ್ನು ತಿನ್ನುತ್ತವೆ ನಿಜ, ಆದರೆ ಉಳಿದ ಮೀನುಗಳು ಬದುಕುಳಿಯಲು ಪ್ರಯತ್ನಿಸಿ ತುಂಬಾ ಓಡಾಡುತ್ತವೆ. ಈ ಹೋರಾಟ ಮತ್ತು ಬದುಕಬೇಕೆಂಬ ಛಲ ಅವುಗಳ ಫ್ರೆಶ್‍ನೆಸ್ ಕಾಪಾಡುತ್ತದೆ. ಇದು ಮನುಷ್ಯ ಜೀವಿಗಳಿಗೆ ಹೆಚ್ಚು ಅನ್ವಯವಾಗುವ ಸಂದೇಶ.

ಈ ಕೋವಿಡ್ ಸಂಕಷ್ಟದ ದಿನಗಳಲ್ಲಿ ಶ್ರಮದ ದುಡಿಮೆ ಕಡಿಮೆಯಾಗುತ್ತಿದೆ. ದೈಹಿಕ ಶ್ರಮವಿಲ್ಲದೆ ಆರೋಗ್ಯವಿಲ್ಲ. ಕೆಲಸವೂ ಒಂದು ಧ್ಯಾನ. ಅದು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ವರ್ಕ್‌ ಫ್ರಮ್‌ ಹೋಮ್ ಎನ್ನುವ ಕಲ್ಪನೆಯಲ್ಲಿ ಕೆಲವರು ಆಫೀಸ್ ಕೆಲಸದಲ್ಲಿ ತೊಡಗಿದ್ದಾರೆ. ಆದರೆ ಶ್ರಮದ ದುಡಿಮೆ ಬೇಕೇ ಬೇಕು. ಸುಮ್ಮನೆ ಇದ್ದು ಹೋಗುವುದಕ್ಕೆ ಈ ಬದುಕು ಹೇಳಿ ಮಾಡಿಸಿದ್ದಲ್ಲ. ಸಂಪಾದನೆ, ಸಾಧನೆ, ಕೀರ್ತಿ, ಅಧಿಕಾರ, ಅಂತಸ್ತು ಮುಂತಾದ ಹೆಗ್ಗಳಿಕೆಗಳಿಗಾಗಿ ಈ ಜೀವ ಸದಾ ತುಡಿಯುತ್ತಿರುತ್ತದೆ. ಇದು ಜೀವಂತಿಕೆಯ ಲಕ್ಷಣ. ಬದುಕಿನ ಎಲ್ಲ ಸಾಧನೆ ಸಿದ್ಧಿಗಳಿಗೆ ಹುಮ್ಮಸ್ಸು ದೊಡ್ಡ ಬಂಡವಾಳ.

ಕಾಯಕ ಮಾರ್ಗದ ಹಿರಿಮೆಯನ್ನು ಶರಣ ಆಯ್ದಕ್ಕಿ ಮಾರಯ್ಯ ತಮ್ಮ ಒಂದು ವಚನದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ.

ADVERTISEMENT

ಕಾಯಕದಲ್ಲಿ ನಿರತನಾದಡೆ, ಗುರು ದರ್ಶನವಾದಡೂ ಮರೆಯಬೇಕು
ಲಿಂಗಪೂಜೆಯಾದಡೂ ಮರೆಯಬೇಕು
ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು
ಕಾಯಕವೇ ಕೈಲಾಸವಾದ ಕಾರಣ
ಅಮರೇಶ್ವರ ಲಿಂಗವಾಯಿತ್ತಾದಡೂ ಕಾಯಕದೊಳಗು

ನಮ್ಮ ಮನೆಯ ಹೊರಾಂಗಣದಲ್ಲಿ ಸಂಜೆ ಪತ್ರಿಕೆಗಳನ್ನು ಓದುತ್ತ ಕುಳಿತುಕೊಳ್ಳುವುದು ನನಗೆ ತುಂಬ ಖುಷಿ ಕೊಡುತ್ತದೆ. ಆದರೆ, ಹಾಯಾಗಿ ಕುಳಿತುಕೊಳ್ಳುವುದಕ್ಕೆ ಸೊಳ್ಳೆಗಳು ಬಿಡುವುದಿಲ್ಲ. ಅವುಗಳನ್ನು ಸಂಹರಿಸಲು ಎಲೆಕ್ಟ್ರಿಕ್ ಬ್ಯಾಟ್ ಬೀಸಿದಾಗ ಪ್ರಾಣ ರಕ್ಷಣೆಗಾಗಿ ಅವು ಹಾರಿ ಹೋಗುತ್ತವೆ. ಆಗೊಂದು ಈಗೊಂದು ಸೊಳ್ಳೆ ಸುಟ್ಟುಕೊಂಡು ಸಾಯುತ್ತದೆ. ಗಮನಾರ್ಹ ಸಂಗತಿಯೆಂದರೆ, ಬ್ಯಾಟ್ ಎಂಬ ಆಯುಧ ಕೈಯಲ್ಲಿದ್ದರೂ ಸೊಳ್ಳೆಗಳು ಕಚ್ಚುವ ಪ್ರಯತ್ನವನ್ನು ಮಾತ್ರ ನಿಲ್ಲಿಸವು. ಹೊಂಚು ಹಾಕಿಬಂದು ಕಚ್ಚಿ ಪಾರಾಗುತ್ತವೆ. ಇದು ಅವುಗಳ ಬದುಕುವ ‘ಕಾಯಕ’.

ಸ್ವಾತಂತ್ರ್ಯ ಚಳವಳಿಯ ದಿನಗಳಲ್ಲಿ ಮಹಾತ್ಮ ಗಾಂಧಿ, ವಿನೋಬಾ ಭಾವೆ ಮುಂತಾದ ನಾಯಕರು ಜೈಲಿನಲ್ಲಿ ಕಳೆದ ಕ್ರಿಯಾಶೀಲ ದಿನಗಳು ಮಾದರಿಯಾಗಿವೆ. ಮುಖ್ಯವಾಗಿ ಎಲ್ಲರೂ ನೂಲುತ್ತಿದ್ದರು. ಜನಜಾಗೃತಿಯ ಲೇಖನಗಳನ್ನು ಬರೆಯುತ್ತಿದ್ದರು. ನೆಹರೂ ಅಲಹಾಬಾದ್ ಜೈಲನ್ನು ಸುಂದರ ಉಪವನವನ್ನಾಗಿ ರೂಪಿಸಿದರು. ಮೂಲ ಬಂಗಾಳಿ ಭಾಷೆಯಲ್ಲಿರುವ ‘ಗೀತಾಂಜಲಿ’ ಓದಲು ಅನೇಕ ಸ್ವಾತಂತ್ರ್ಯ ಯೋಧರು ಜೈಲಿನಲ್ಲಿ ಬಂಗಾಳಿ ಭಾಷೆ ಕಲಿತರು. ತಿಲಕರು ಜಗತ್ಪ್ರಸಿದ್ಧ ‘ಗೀತಾ ರಹಸ್ಯ’ ಕೃತಿ ರಚಿಸಿದರು. ತಮ್ಮ ಆತಂಕದ ದಿನಗಳಲ್ಲಿ ಇವರೆಲ್ಲ ಕ್ರಿಯಾಶೀಲರಾಗಿದ್ದರಿಂದಲೇ ದೊಡ್ಡ ನಾಯಕರಾಗಿ ಬೆಳೆದರು.

ಜನರು ನಡಿಗೆಯ ಗಮ್ಮತ್ತು ಕಳೆದುಕೊಳ್ಳುತ್ತಿದ್ದಾರೆ. ಸಮೀಪದ ಡೇರಿಗೆ ಹೋಗಿ ಹಾಲು ತರಲೂ ವಾಹನ ಬೇಕು. ನಡಿಗೆ ಎಂಬುದು ಅರಿವಿನ ಹಾದಿ. ಅದನ್ನು ಕಳೆದುಕೊಳ್ಳಬಾರದು. ಹಾಗೆಯೇ ಮನೆಯಲ್ಲಿ ನಮ್ಮ ಬಟ್ಟೆ ನಾವೇ ಸ್ವಚ್ಛ ಮಾಡಿಕೊಳ್ಳಬೇಕು. ಸಣ್ಣ ಸಣ್ಣ ಕೆಲಸಗಳು ಬದುಕಿಗೆ ದೊಡ್ಡ ಸಂತೋಷ ಕೊಡುತ್ತವೆ.

ಕೊರೊನಾ ಮತ್ತು ಇತರ ವೈರಸ್ ಜೊತೆಗೆ ನಾವು ಇಂದು ಮತ್ತು ಮುಂದೆಯೂ ಬದುಕಬೇಕಾಗಿದೆ. ಕೆಲಸಗೇಡಿಗಳಾಗಿ ಕುಳಿತುಕೊಳ್ಳುವುದರಿಂದ ಶಾರೀರಿಕ ಚಟುವಟಿಕೆಗಳಿಲ್ಲದೆ ಸೊರಗಬಹುದು. ಮನುಷ್ಯ ಸ್ವಾರ್ಥಿಯಾಗಬಹುದು. ಖಿನ್ನತೆಗೆ ಒಳಗಾಗುವವರ ಸಂಖ್ಯೆ ಹೆಚ್ಚಬಹುದು. ಇವುಗಳನ್ನು ಸರಳವಾಗಿ ಪರಿಣಾಮಕಾರಿಯಾಗಿ ಗೆಲ್ಲಲು ಕೆಲಸವೇ ದಿವ್ಯ ಔಷಧಿ. ಆರಾಮದಾಯಕ ಪರಿಧಿಯಲ್ಲಿ ಎಂದಿಗೂ ಬೆಳವಣಿಗೆ ಸಾಧ್ಯವಿಲ್ಲ.

ಮಹಾಲಿಂಗಪುರ ಪಟ್ಟಣದಲ್ಲಿ ರುದ್ರಪ್ಪ ಕರಡಿ ಎಂಬ 95 ವರ್ಷದ ಕಲಾವಿದರೊಬ್ಬರಿದ್ದಾರೆ. ಎದ್ದು ನಿಲ್ಲುವುದು ಕಷ್ಟ. ಆದರೆ ಕರಡಿ ವಾದ್ಯ ನುಡಿಸಲು ಹೇಳಿದರೆ ಭಾರವಾದ ಕರಡಿ ವಾದ್ಯವನ್ನು ಕೊರಳಲ್ಲಿ ಹಾಕಿಕೊಂಡು ಕುಣಿ ಕುಣಿದು ನುಡಿಸುತ್ತಾರೆ. ನೆಹರೂ, ದೇವರಾಜ ಅರಸು ಅವರ ಮುಂದೆ ತಾವು ಕರಡಿ ನುಡಿಸಿದ್ದ ಕಥೆಯನ್ನು ಹೇಳುತ್ತಾರೆ. ನಮ್ಮ ನಮ್ಮ ಆಸಕ್ತಿಯ ಕಲೆಗಳಲ್ಲಿ ತಲ್ಲೀನರಾದರೆ ಆರೋಗ್ಯ ಗಟ್ಟಿಯಾಗಿ ಉಳಿಯುತ್ತದೆ.

ಸರ್ಕಾರಿ ಕಚೇರಿಗಳಲ್ಲಿ ತಪ್ಪಿತಸ್ಥ ಉದ್ಯೋಗಿಗಳಿಗೆ ಯಾವುದೇ ಕೆಲಸ ಕೊಡದೆ ಸುಮ್ಮನೆ ಕುಳಿತು ಹೋಗುವ ಶಿಕ್ಷೆ ವಿಧಿಸುವ ಪದ್ಧತಿ ಇದೆ. ವಿವಿಧ ದೇಶಗಳಲ್ಲಿಯೂ ಇಂಥ ಶಿಕ್ಷೆಯ ವಿಧಾನ ಇದೆ. ಕೆಲಸ ಇಲ್ಲದೆ ಸುಮ್ಮನೆ ಕುಳಿತುಕೊಳ್ಳುವುದು ‘ಶಿಕ್ಷೆ’. ಈಗ ಅಂಥ ಒಂದು ‘ಶಿಕ್ಷೆ’ಯನ್ನು ನಮ್ಮ ಮೇಲೆ ಎಳೆದುಕೊಂಡಿದ್ದೇವೆ ಎಂಬ ಅನುಭವವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.