ADVERTISEMENT

ಸಂಗತ: ಸಾಕುಪ್ರಾಣಿಯಿಂದ ಪರಿಸರ ಅವ್ಯವಸ್ಥೆ?

ಸಾಕುಪ್ರಾಣಿಗಳ ಸಂಖ್ಯೆ ಇದೇ ದರದಲ್ಲಿ ವರ್ಧಿಸುತ್ತ ಹೋದರೆ ಮನುಷ್ಯ ಗಂಭೀರವಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎನ್ನುತ್ತವೆ ಸಮೀಕ್ಷಾ ವರದಿಗಳು

ಪ.ರಾಮಕೃಷ್ಣ
Published 4 ಆಗಸ್ಟ್ 2021, 20:09 IST
Last Updated 4 ಆಗಸ್ಟ್ 2021, 20:09 IST
   

ಕಾಡಿನ ಅಂಚಿನಲ್ಲಿ ವಾಸವಾಗಿರುವ ಬಹುತೇಕ ಕುಟುಂಬಗಳು ಭಯದ ನೆರಳಿನಲ್ಲೇ ಕ್ಷಣಗಣನೆ ಮಾಡುವಂತಹ ದಿನಗಳಿವೆ. ಒಂದೆಡೆ, ಬೆಳೆಗಳಿಗೆ ಹಾನಿ ಮಾಡುವ ಆನೆ, ಫಸಲಿಗೆ ಕಂಟಕವಾಗುವ ಕೋತಿ, ಬಿತ್ತಿದ ಬೀಜವನ್ನು ಕಿತ್ತು ತೆಗೆದು ನುಂಗುವ ನವಿಲು, ಸಾಕುಪ್ರಾಣಿಗಳನ್ನು ಹೊತ್ತೊಯ್ಯುವ ಚಿರತೆ... ಹೀಗೆ ನಾಲ್ದೆಸೆಯಿಂದಲೂ ಮನುಷ್ಯನಿಗೆ ಅವುಗಳಿಂದ ಕಂಟಕ ಎದುರಾಗುತ್ತಲೇ ಇದ್ದರೆ, ಜೀವವೈವಿಧ್ಯ ಮತ್ತು ಪರಿಸರ ವ್ಯವಸ್ಥೆಯ ಜಾಗತಿಕ ಮೌಲ್ಯಮಾಪನ (ಐಪಿಬಿಇಎಸ್) ವರದಿ ಹೇಳುವುದು ಬೇರೆಯೇ.

ಕಾಡಿನ ಜೀವವೈವಿಧ್ಯವಿಲ್ಲದೆ ಹೋದರೆ 800 ಕೋಟಿಯಷ್ಟಿರುವ ಭೂಗ್ರಹ ವಾಸಿಗಳ ಆರೋಗ್ಯ, ಆಹಾರ, ಆರ್ಥಿಕ ಭದ್ರತೆಯ ಜೀವನೋಪಾಯದ ತಳ ಹದಿಯೇ ಕಳಚುತ್ತದೆ. ಕೊರೊನಾದಂತಹ ಮಾರಕ ವೈರಸ್ ಹರಡುವುದಕ್ಕೂ ಇಳಿಮುಖವಾಗುತ್ತಿರುವ ಜೀವವೈವಿಧ್ಯದ ಸಂಖ್ಯೆಯೂ ಒಂದು ಕಾರಣ ಎಂದು ಈ ವರದಿ ಸ್ಪಷ್ಟಪಡಿಸಿದೆ.

ಇದರ ಬೆನ್ನಲ್ಲೇ, ಸಾಕುಪ್ರಾಣಿಗಳ ಸಂಖ್ಯೆ ಭೂಮಿಯಲ್ಲಿ ಬೇಡ ಎನ್ನುವಷ್ಟು ಹೆಚ್ಚಾಗುತ್ತಿದೆ ಎಂದು ಹೇಳುತ್ತವೆ ಆಕ್ಸ್‌ಫರ್ಡ್ ಲಾಫೆಯೇಟ್ ಹ್ಯೂಮನ್ ಸೊಸೈಟಿ ಸಂಗ್ರಹಿಸಿದ ಅಂಕಿಅಂಶಗಳು. ಮನುಷ್ಯನ ಸಂಖ್ಯೆಯೇ ಪ್ರಕೃತಿಯ ಉದ್ದೇಶಕ್ಕಿಂತ ಸಾವಿರ ಪಟ್ಟು ಹೆಚ್ಚಾಗಿದೆ. ಕಳೆದ 40 ವರ್ಷಗಳಲ್ಲಿ ಸಸ್ತನಿ, ಪಕ್ಷಿ, ಸರೀಸೃಪ, ಮೀನುಗಳ ಸಂತತಿ ಶೇ 40ರಷ್ಟು ಕಡಿಮೆಯಾಗಿದೆ. ಹಸು, ನಾಯಿ, ಬೆಕ್ಕು, ಕುದುರೆ, ಒಂಟೆ, ಹಂದಿ, ಆಡು, ಕುರಿಯಂತಹ ಸಾಕು ಪ್ರಾಣಿಗಳ ಸಂಖ್ಯೆ ಮನುಷ್ಯನಿಗೆ ಸಮಾನವಾಗಿದೆ. ಕಾಡುಪ್ರಾಣಿಗಳಿಗಿಂತ ಹೆಚ್ಚು ಭೂಮಿ, ಸಸ್ಯಮೂಲದ ಆಹಾರ ಮತ್ತು ನೀರನ್ನು ಬಳಸುವ ಸಾಕುಪ್ರಾಣಿಗಳ ಸಂಖ್ಯೆ ಇದೇ ದರದಲ್ಲಿ ವರ್ಧಿಸುತ್ತ ಹೋದರೆ ಮನುಷ್ಯ ಗಂಭೀರವಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪ್ರಾಣಿಜನ್ಯವಾಗಿ ಬರುವ ಹಲವಾರು ಸಾಂಕ್ರಾ ಮಿಕ ಕಾಯಿಲೆಗಳಿಂದ ಕಂಗೆಡಬೇಕಾಗುತ್ತದೆ ಎಂದು ಸೊಸೈಟಿ ಎಚ್ಚರಿಸಿದೆ.

ADVERTISEMENT

ಅಮೆರಿಕದ ನಗರಗಳನ್ನೇ ಪರಿಗಣಿಸಿದರೂ ಅಲ್ಲಿ ನಿಮಿಷಕ್ಕೆ 50ರಂತೆ ದಿನದಲ್ಲಿ 70 ಸಾವಿರ ನಾಯಿ ಮತ್ತು ಬೆಕ್ಕಿನಮರಿಗಳು ಹುಟ್ಟುತ್ತವೆ. ಹೆಚ್ಚಾದ ಮರಿ ಗಳನ್ನು ಮನೆಯವರು ಬೀದಿಯಲ್ಲಿ ಬಿಟ್ಟುಬರುತ್ತಾರೆ. ಹೀಗಾಗಿ, ದಿನಕ್ಕೆ 10 ಸಾವಿರ ಸಂಖ್ಯೆಯಲ್ಲಿ ಅವುಗಳಿಗೆ ದಯಾಮರಣ ನೀಡಲಾಗುತ್ತಿದೆ.

ಪ್ರಜೆಗಳು ಕೊಡುವ ತೆರಿಗೆಯ ಹಣದಲ್ಲಿ ಲಕ್ಷಾಂತರ ಡಾಲರ್ ಇದಕ್ಕಾಗಿ ಖರ್ಚಾಗುತ್ತದೆ ಎನ್ನುವ ಸ್ಥಳೀಯ ಆಡಳಿತಗಳು, ನಿಯಂತ್ರಣ ಮೀರಿ ಅವುಗಳ ಸಂಖ್ಯೆ ವೃದ್ಧಿಯಾದರೆ ಮುಂಬರುವ ದಿನಗಳಲ್ಲಿ ಅಮೆರಿಕ ಎದುರಿಸಬೇಕಾದ ಆಹಾರ ಮತ್ತು ಕುಡಿಯುವ ನೀರಿನ ಅಭಾವ ಅಲ್ಲದೆ ರೇಬಿಸ್ ಮುಂತಾದ ಹಾನಿಕಾರಕ ರೋಗಗಳಿಂದ ಉಂಟಾಗುವ ಹಾನಿ ಎಷ್ಟೆಂಬುದು ಅನೂಹ್ಯವಾಗಿದೆ ಎನ್ನುತ್ತವೆ.

ಸಿರಿಯಾದಲ್ಲಿ ಎರಡು ವರ್ಷಗಳ ಹಿಂದೆ ಸಂಖ್ಯೆ ಹೆಚ್ಚಾದ ಕಾರಣಕ್ಕೆ ಸಾವಿರಾರು ಒಂಟೆಗಳ ಮಾರಣ ಹೋಮ ನಡೆಯಿತು. ಹೈನುಗಾರಿಕೆಯಲ್ಲಿ ಅದ್ಭುತ ಸಾಧನೆ ಮಾಡಿರುವ ಇಸ್ರೇಲ್ ಗಂಡುಕರುಗಳನ್ನು ಅರೆ ಕ್ಷಣವೂ ಉಳಿಸುವುದಿಲ್ಲ. ಮೂರು ಕರುಗಳಾದ ಬಳಿಕ ಆಹಾರ ಮತ್ತು ನೀರು ಹೆಚ್ಚಾಗಿ ಬೇಕಾಗುತ್ತದೆಂಬ ಕಾರಣಕ್ಕೆ ಹಸುವಿನ ಸಾಕಾಣಿಕೆಯನ್ನೂ ಮುಂದುವರಿ ಸುವುದಿಲ್ಲ.

ವಿಶ್ವ ಪರಿಸರ ಸಮತೋಲನ ವ್ಯವಸ್ಥೆಯ ಬಗೆಗೆ ನಡೆದ ಸಮೀಕ್ಷೆಗಳು, ಪ್ರಾಣಿಗಳನ್ನು ಆಧರಿಸಿದ ಕೃಷಿ ಪದ್ಧತಿಯನ್ನು ಬದಲಿಸಿ ಶಾಶ್ವತ ಸಸ್ಯಗಳಿಂದ ಹೊಸ ಆಹಾರ ಪಡೆಯುವ ಕ್ರಮವನ್ನು ರೂಪಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳುತ್ತವೆ.

ಅನೇಕ ದೇಶಗಳಲ್ಲಿ ಆಡುಗಳನ್ನು ಸಾಕುವುದು, ದೇಶದೊಳಗೆ ಅವುಗಳನ್ನು ತರುವುದು ಕೂಡ ಶಿಕ್ಷಾರ್ಹ ಅಪರಾಧ. ಆಡು, ಕುರಿಗಳಿಂದಾಗಿ ಸಂಪೂರ್ಣವಾಗಿ ಅಳಿದುಹೋದ ಸಸ್ಯವರ್ಗಗಳ ದೊಡ್ಡ ಪಟ್ಟಿಯನ್ನೇ ಅಲ್ಲಿ ಪ್ರದರ್ಶಿಸಲಾಗುತ್ತಿದೆ.

ನಿಸರ್ಗವೇ ಸಮತೋಲನ ಮಾಡುತ್ತಿರುವ ಅರಣ್ಯವಾಸಿ ಪ್ರಾಣಿಗಳ ಬದುಕನ್ನು ಕಸಿದುಕೊಂಡು ಅವುಗಳ ವಾಸದ ವ್ಯಾಪ್ತಿಯಲ್ಲಿ ಮನುಷ್ಯನು ಕೃಷಿ ಮಾಡುತ್ತಿದ್ದಾನೆ. ಜಾನುವಾರುಗಳ ಮೇವು ಬೆಳೆಯು ತ್ತಿದ್ದಾನೆ. 1980- 2000ದ ಮಧ್ಯಾವಧಿಯಲ್ಲಿ ಆಗ್ನೇಯ ಏಷ್ಯಾದ ಉಷ್ಣವಲಯದ ಅರಣ್ಯಗಳಲ್ಲಿ ಲಕ್ಷಾಂತರ ಹೆಕ್ಟೇರ್ ಅರಣ್ಯದಲ್ಲಿ ತೋಟದ ಬೆಳೆಗಳ ಕೃಷಿ ಮತ್ತು ಪಶು ಸಂಗೋಪನೆ ಮಾಡಲಾಗಿದೆ ಎನ್ನುವ ವರದಿಯೂ ಇದೆ. ಇಷ್ಟು ವಿಸ್ತಾರವಾದ ಪ್ರದೇಶದಲ್ಲಿ ಬದುಕಿಕೊಂಡಿದ್ದ ನಾನಾ ಪ್ರಾಣಿಗಳ ಬದುಕಿನ ಪಥವನ್ನು ಮನುಷ್ಯ ತುಂಡರಿಸಿದರೆ ಆನೆಗಳು, ಚಿರತೆಗಳು ಊರಿಗೆ ನುಗ್ಗದೆ ಇನ್ನೇನಾದೀತು?

ಮನುಷ್ಯ ಬೆಳೆಯುವ ಒಂದು ಹಿಡಿ ಅಕ್ಕಿಗೆ ನಲವತ್ತು ಲೀಟರ್ ನೀರು ಬೇಕು. ಆದರೆ ಸಂಖ್ಯೆಗೆ ಸಿಗದಷ್ಟು ಜೀವಿಗಳ ಸಮೂಹಕ್ಕೆ ಯಾವ ರಸಗೊಬ್ಬರ, ಅಣೆಕಟ್ಟಿನ ನೀರನ್ನೂ ಬಯಸದೆ ನಿಸರ್ಗವು ಕಾಡಿನಲ್ಲಿ ಆಹಾರ ಕೊಡುತ್ತಿದೆ. ಆಹಾರ ಸರಪಣಿಯ ಮೂಲಕ ಜೀವಿಗಳ ಸಂಖ್ಯೆ ಹೆಚ್ಚಾಗದಂತೆ ಸಮತೋಲನ ಮಾಡುತ್ತಿದೆ. ಆದರೆ ಮನುಷ್ಯನು ಕೃಷಿಗಾಗಿ, ಆಹಾರ ಕ್ಕಾಗಿ, ಶೋಕಿಗಾಗಿ ಸಾಕುವ ವಿವಿಧ ಪ್ರಾಣಿಗಳೂ ನಿಸರ್ಗದ ಸಮತೋಲನಕ್ಕೆ ಒಳಪಡುವುದಿಲ್ಲ. ಬೀದಿ ಪಾಲಾಗಿ ಕಂಟಕ ತರುತ್ತಿವೆ.

ಭವಿಷ್ಯದಲ್ಲಿ ಆಹಾರಕ್ಕೆ, ನೀರಿಗೆ, ಆರೋಗ್ಯಕ್ಕೆ ಆತಂಕವಾಗಬಲ್ಲ ಸಾಕುಪ್ರಾಣಿಗಳು ನಿಸರ್ಗಕ್ಕೆ ಅನಿವಾರ್ಯವಲ್ಲ ಎನ್ನುವ ವೈಜ್ಞಾನಿಕ ವರದಿಗಳು, ಇಂತಹ ಶೋಕಿಗೆ ಮಿತಿಯಿರಲಿ ಎಂದು ಎಚ್ಚರಿಸುವ ಮಾತನ್ನು ಗಮನಿಸಬೇಕಾಗಿದೆ. ಮನೆಗೆ ಬೇಡವಾದ ನಾಯಿ, ಬೆಕ್ಕಿನಮರಿಗಳನ್ನು ಬೀದಿಪಾಲು ಮಾಡುವ ಪ್ರವೃತ್ತಿಗೂ ನಿಯಂತ್ರಣ ಅಗತ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.