ADVERTISEMENT

ಚರ್ಚೆ: ದಿವ್ಯೋದ್ಯೋಗವೋ ಪೊಳ್ಳು ನಂಬಿಕೆಯೋ?

ಅರ್ಚಕತ್ವ ಎನ್ನುವುದನ್ನು ವರ್ಣೋತ್ತಮರ ಸ್ವತ್ತನ್ನಾಗಿ ಮಾಡಿಕೊಳ್ಳುವ ಹುನ್ನಾರವಲ್ಲದೆ ಬೇರೇನೂ ಅಲ್ಲ

ಮೀನಾಕ್ಷಿ ಬಾಳಿ
Published 27 ಜೂನ್ 2021, 19:31 IST
Last Updated 27 ಜೂನ್ 2021, 19:31 IST
   

ಸಾರ್ವಜನಿಕ ದೇವಸ್ಥಾನಗಳಲ್ಲಿ ಪೂಜಾ ಕೈಂಕರ್ಯಕ್ಕೆ ಬ್ರಾಹ್ಮಣೇತರರನ್ನು ನೇಮಿಸಬಾರದೇಕೆ ಎಂಬ ಚರ್ಚೆಯು ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಈ ಚರ್ಚೆಯಲ್ಲಿ ಭಾಗವಹಿಸಿದ್ದ ಗ.ನಾ.ಭಟ್ಟ ಅವರು ತಮ್ಮ ಲೇಖನದಲ್ಲಿ (ಪ್ರ.ವಾ., ಜೂನ್‌ 26) ‘ಅರ್ಚಕ ವೃತ್ತಿಯು ಹೊರಗಿನ ತರಬೇತಿಗೆ ದಕ್ಕುವುದಿಲ್ಲ. ಅದು ಸಿದ್ಧಿಸುವುದು ವಿದ್ಯೆ ಮತ್ತು ಸಂಸ್ಕಾರದಿಂದ’ ಎಂದಿ ದ್ದಾರೆ. ಅಲ್ಲದೆ, ‘ಸಂಸ್ಕೃತ ಮತ್ತು ವೇದಭಾಷೆಯಲ್ಲಿ ಪರಿಣತರಾದವರು ಮಾತ್ರ ಆ ವೃತ್ತಿಗೆ ಅರ್ಹರು. ಅಷ್ಟಕ್ಕೂ ವೇದಮಂತ್ರಗಳ ಉಚ್ಚಾರಣೆಯಿಂದಾಗುವ ಆನಂದವು ಪ್ರಾದೇಶಿಕ ಭಾಷೆಯಿಂದ ಉಂಟಾಗು ವುದಿಲ್ಲ’ ಎಂದಿದ್ದಾರೆ.

ಅರ್ಚಕ ವೃತ್ತಿಯೆಂಬುದು ದಿವ್ಯೋದ್ಯೋಗ, ಅದಕ್ಕೆ ವಿಶೇಷ ಅರ್ಹತೆ ಬೇಕು, ಬ್ರಾಹ್ಮಣರು ತುಂಬಾ ಕಷ್ಟಪಟ್ಟು ಅದನ್ನು ಸಂಪಾದಿಸಿಕೊಂಡಿದ್ದಾರೆ ಎಂಬ ಅವರ ಈ ವಾದವು ಮತ್ತದೇ ಹಳಸಲು ವ್ಯಾಧಿಯೆನ್ನದೆ ಗತ್ಯಂತರವಿಲ್ಲ. ದೇವಸ್ಥಾನದ ತಂಪಿನಲ್ಲಿ ಕುಳಿತು ಪೂಜೆ ಮಾಡುವುದೇ ಇಷ್ಟು ಕಷ್ಟವಾದರೆ ಮಳೆ, ಬಿಸಿಲು, ಚಳಿಯಲ್ಲಿ ಬೆವರಿಳಿಸಿ ದುಡಿಯುವ ರೈತರು, ಕೂಲಿಕಾರ್ಮಿಕರು ಅದೆಷ್ಟು ಕಷ್ಟ ಪಡುತ್ತಿರಬಹುದು?

ಸಂಸ್ಕೃತ ಭಾಷೆಯಲ್ಲಿ ಪೂಜೆ ಮಾಡಿದರೆ ದೇವರಿಗೆ ಅರ್ಪಿತ, ಮನಸ್ಸಿಗೆ ಶಾಂತಿ ಎಂಬ ವಾದವನ್ನು 12ನೇ ಶತಮಾನದ ವಚನಕಾರ ನಗೆಯ ಮಾರಿತಂದೆ ಅಂದೇ ಖಂಡಿಸಿದ್ದಾನೆ: ‘ಕಲ್ಲಿಯ ಹಾಕಿ ನೆಲ್ಲವ ತುಳಿದು/ ಗುಬ್ಬಿಯ ಸಿಕ್ಕಿಸುವ ಕಳ್ಳನಂತೆ/ ವಾಗದ್ವೈತವ ಕಲಿತು/ ಸಂಸ್ಕೃತದ ಮಾತಿನ ಪಸರವ ಮುಂದೆ ಇಕ್ಕಿಕೊಂಡು/ ಮತ್ಸ್ಯದ ವಕ್ತ್ರದಲ್ಲಿ ಗ್ರಾಸವ ಹಾಕುವನಂತೆ/ ಅದೇತರ ನುಡಿ, ಮಾತಿನ ಮರೆ/ ಆತುರವೈರಿ ಮಾರೇಶ್ವರಾ’.

ADVERTISEMENT

ಯಾವತ್ತೂ ಬಹುಜನರಿಗೆ ಅರ್ಥವಾಗದಿದ್ದ ಭಾಷೆ ಯಲ್ಲಿ ಮಂತ್ರಾದಿಗಳನ್ನು ಪಠಿಸಿ ಜನರನ್ನು ಸಮ್ಮೋಹನ ಗೊಳಿಸುವ, ಅದಕ್ಕಿಂತಲೂ ಹೆಚ್ಚಾಗಿ ದೇವರು-ಧರ್ಮ- ಕರ್ಮಗಳ ಹೆಸರಲ್ಲಿ ಭಯಗ್ರಸ್ತಗೊಳಿಸುವ ಹುನ್ನಾರ ವನ್ನು ನಗೆಯ ಮಾರಿತಂದೆಯು ಬಲೆಯಲ್ಲಿ ನೆಲ್ಲು ಚೆಲ್ಲಿ ಗುಬ್ಬಿಯನ್ನು ಹಿಡಿಯುವ ಕಪಟ ವಿದ್ಯೆ ಎಂದೇ ಸ್ಪಷ್ಟಪಡಿಸಿದ್ದಾನೆ. ಸಂಸ್ಕೃತ ಭಾಷಾ ಶ್ರೇಷ್ಠತೆಯ ವ್ಯಸನಿಗಳು, ಆ ಮೂಲಕ ಉಳಿದ ಭಾಷೆಗಳು ಹಾಗೂ ಆ ಭಾಷಿಕ ಸಮುದಾಯಗಳ ಸಂಸ್ಕೃತಿಯನ್ನು ನಗಣ್ಯಗೊಳಿಸು ತ್ತಿರುವ ಪುರೋಹಿತರ ಬಗೆಗೆ ಎಚ್ಚರವಿರಬೇಕು ಎನ್ನುತ್ತಾನೆ.

ಸಂಸ್ಕೃತ ಭಾಷೆಯ ಎತ್ತರ-ಬಿತ್ತರ, ಅಲ್ಲಿನ ದಾರ್ಶನಿಕ ಧಾರೆಗಳ ಕುರಿತು ಯಾರದೂ ತಕರಾರು ಇಲ್ಲ. ಆದರೆ ಉಳಿದ ಭಾಷೆಗಳಿಗೆ ಆ ಹೊಳಹು ಇಲ್ಲ ಎನ್ನುವುದು ಎಷ್ಟರಮಟ್ಟಿಗೆ ಸರಿ? ಪ್ರತಿಯೊಂದು ಭಾಷೆಗೂ ತನ್ನದೇ ಆದ ಶಕ್ತಿ, ಸಾಮರ್ಥ್ಯಗಳು ಇರು ತ್ತವೆ. ಭಾಷೆ ಎಂಬುದು ಯಾವತ್ತಿದ್ದರೂ ಒಂದು ಸಾಧನ ಅಥವಾ ಮಾಧ್ಯಮ ತಾನೇ? ಕನ್ನಡಕ್ಕೆ ಜಗತ್ತಿ ನೆಲ್ಲ ದಾರ್ಶನಿಕ ಧಾರೆಗಳನ್ನು ಬಸಿದುಕೊಳ್ಳುವ ಶಕ್ತಿ ಇದೆ ಎಂಬುದನ್ನು ಶರಣರು, ತತ್ವಪದಕಾರರು, ದಾಸರು ಉದ್ದಕ್ಕೂ ತೋರಿಸಿಕೊಟ್ಟಿದ್ದಾರೆ. ಹಾಗೇ ಉಳಿದ ಪ್ರಾದೇಶಿಕ ಭಾಷೆಗಳಿಗೂ ಇಂಥದ್ದೊಂದು ಧಾರಣಶಕ್ತಿ ಇರಲಾರದು ಎಂದು ಭಾಷಾತಜ್ಞರೇನಾದರೂ ಹೇಳಿದ್ದಾರೆಯೇ?

ಪೌರೋಹಿತ್ಯ ಯಾವುದೇ ಒಂದೇ ಜಾತಿಯಲ್ಲಿ ಇಲ್ಲದೆ, ದೈವಭೀರುತ್ವದ ಅಮಲಿನಲ್ಲಿ ಎಲ್ಲ ಸಮುದಾಯಗಳಲ್ಲೂ ಮನೆ ಮಾಡಿಕೊಂಡಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಸನಾತನ ಸಂಸ್ಕೃತಿಯಲ್ಲಿನ ಪೊಳ್ಳು ದೈವಿಕತೆಯನ್ನು ಬಸವಣ್ಣನವರು ಅಂದೇ ಜಗಜ್ಜಾಹೀರುಗೊಳಿಸಿದ್ದಾರೆ.

‘ಕಿಚ್ಚು ದೈವವೆಂದು ಹವಿಯನಿಕ್ಕುವ ಹಾರುವರ ಮನೆಯಲು/ ಕಿಚ್ಚೆದ್ದು ಸುಡುವಾಗ/ ಬಚ್ಚಲ ನೀರು ಬೀದಿಯ ಧೂಳ ಹೊಯ್ದು/ ಬೊಬ್ಬಿಟ್ಟೆಲ್ಲರ ಕರೆವರಯ್ಯಾ/ ಕೂಡಲಸಂಗಮದೇವಾ/ ವಂದನೆಯ ಮರೆದು ನಿಂದಿಸುತ್ತಿದ್ದರು’.

ಹೋಮ ಹವನಗಳ ಅಗ್ನಿಯಲ್ಲಿ ತುಪ್ಪ, ದವಸ ಧಾನ್ಯಾದಿಗಳನ್ನು ಸುಟ್ಟು, ದೇವರಿಗೆ ಸಂದಿತು ಎನ್ನುವ ಭ್ರಮೆಜೀವಿಗಳನ್ನು ಬಸವಣ್ಣ ಉಗ್ರವಾಗಿ ಖಂಡಿಸಿದ್ದಾರೆ. ಕಿಚ್ಚು ಅರ್ಥಾತ್ ಅಗ್ನಿಯನ್ನು ದೇವರು ಎನ್ನುವಿರಾದರೆ ಅದೇ ಬೆಂಕಿ ನಿಮ್ಮ ಮನೆಗೆ ತಗುಲಿ ದಾಗ, ಹೊಯ್ಕೊ ಬಡ್ಕೊ ಮಾಡಿ ಬೆಂಕಿ ನಂದಿಸಲು ಬಚ್ಚಲ ನೀರು, ಬೀದಿಯ ಮಣ್ಣು ಎರಚಿ ಆರಿಸಲು ಬಡಿ ದಾಡುವುದೇಕೆ? ಆಗಲೂ ಅಗ್ನಿ ದೇವಾಯ ಸ್ವಾಹಾ ಅನ್ನಬಾರದೆ ಎಂದು ವಿಡಂಬಿಸಿದ್ದು ಇದೆಯಲ್ಲ ಇದು ಈ ಕ್ಷಣಕ್ಕೂ ನುಂಗಲಾರದ ತುತ್ತು.

ಇಂಥ ಮಾತುಗಳನ್ನು ಹೇಳಿದಾಗ, ಯಾವುದೇ ಜಾತಿಯ ಭಾವನೆಗಳಿಗೆ ಧಕ್ಕೆಯಾಯಿತು ಎಂದು ಬೊಬ್ಬಿಡಬೇಕಿಲ್ಲ. ಅದು ಅವರವರ ನಂಬಿಕೆ ಎಂದೂ ತೇಲಿಸಬೇಕಿಲ್ಲ. ಮೌಢ್ಯ, ಕಂದಾಚಾರಗಳು ಯಾವ ಕಾಲಕ್ಕಾದರೂ ವಿಡಂಬನೆ, ಟೀಕೆಗಳಿಗೆ ಒಳಗಾಗಲೇ ಬೇಕಾಗುತ್ತವೆ. ಖಂಡಿತ ಇದು ಯಾವುದೇ ಜಾತಿ, ವರ್ಗ, ವರ್ಣದ ಅವಹೇಳನವಲ್ಲ. ಬ್ರಾಹ್ಮಣ್ಯದ ಹುಸಿ ನಂಬಿಕೆಗಳು, ಅರ್ಥಹೀನ ಆಚರಣೆಗಳ ಕುರಿತು ಮೂಡಿಸುವ ಜಾಗೃತಿ ಎಂಬುದನ್ನು ಮನವರಿಕೆ ಮಾಡಿ ಕೊಡಬೇಕಿದೆ.

ಭಟ್ಟರು ಒಂದೆಡೆ, ಇಂದು ವೈದಿಕತೆಯನ್ನು ಕಲಿಯಲು ಬಹಳಷ್ಟು ಕಾಲೇಜುಗಳಿವೆ, ಯಾವುದೇ ಜಾತಿಯವರಾದರೂ ಓದಿ ಉತ್ತೀರ್ಣರಾಗಬಹುದು ಎಂದರೆ, ಇನ್ನೊಂದೆಡೆ, ಹೀಗೆ ತರಬೇತುಗೊಳಿಸುವುದರಿಂದ ಅರ್ಚಕ ವಿದ್ಯೆ ಕೈಗೂಡದು ಎನ್ನುತ್ತಾರೆ. ಈ ದ್ವಂದ್ವ ಯಾಕೆ? ಶಾಲಾ, ಕಾಲೇಜುಗಳಲ್ಲಿ ಓದಿಸುವುದು ಅಂದರೆ ತರಬೇತಿ ತಾನೇ? ಹುಟ್ಟಿನಿಂದ ಬ್ರಾಹ್ಮಣರಲ್ಲದವರಿಗೆ ಇವರು ಹೇಳುವ ಬ್ರಹ್ಮವಿದ್ಯೆ, ಸಂಸ್ಕಾರ ಕೈಗೆ ಎಟುಕಲಾರವು ಎಂಬುದನ್ನು ಖುಲ್ಲಂಖುಲ್ಲಾ ಹೇಳಿಲ್ಲ ವಾದರೂ ಇಡೀ ಲೇಖನದ ಧ್ವನಿ ಅದೇ ಅಲ್ಲವೆ? ಒಟ್ಟಾರೆ, ಅರ್ಚಕತ್ವ ಎನ್ನುವುದನ್ನು ವರ್ಣೋತ್ತಮರ ಸ್ವತ್ತನ್ನಾಗಿ ಮಾಡಿಕೊಳ್ಳುವ ಹುನ್ನಾರವಲ್ಲದೆ ಬೇರೇನೂ ಇಲ್ಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.