ADVERTISEMENT

ಸಂಗತ: ಕಲಿಕೆಯ ಖಾತೆಗೆ ತುಂಬಿಸಿ ನಿಮ್ಮದೇ ಹಣ

ಪ್ರಿಯ ವಿದ್ಯಾರ್ಥಿಗಳೇ, ನೀವೀಗ ತಾಂತ್ರಿಕವಾಗಿ ಪಾಸ್ ಆಗಿರಬಹುದು. ಆದರೆ...

ಡಾ.ನಾಗೇಶ್ ಬಿದರಗೋಡು
Published 7 ಜುಲೈ 2021, 19:31 IST
Last Updated 7 ಜುಲೈ 2021, 19:31 IST
   

‘ಹೇಳಿಕೊಟ್ಟ ಮಾತು, ಕಟ್ಟಿಕೊಟ್ಟ ಬುತ್ತಿ ಹೆಚ್ಚುಕಾಲ ಬರುವುದಿಲ್ಲ’ ಅಂತ ಒಂದು ಗಾದೆ ಮಾತಿದೆ. ಅವರು ಹಾಗೆ ಕೇಳಿದರೆ ನೀನು ಹೀಗೆ ಹೇಳು, ಅವರು ಹೀಗೆ ಕೇಳಿದರೆ ನೀನು ಹಾಗೆ ಹೇಳು ಅಂತ ಒಂದಷ್ಟು ಮಾತು ಹೇಳಿಕೊಟ್ಟು ನೋಡಿ. ಅದನ್ನೇ ನಂಬಿಕೊಂಡು ಹೋದವನು ಸೋತು ಬಂದಿರುತ್ತಾನೆ. ಏಕೆಂದರೆ, ಕೇಳಬೇಕಾದವರು ಹಾಗೆ ಕೇಳದೆ ಇನ್ನು ಹೇಗೋ ಕೇಳಿದರೆ ಇವನ ಬಳಿ ಉತ್ತರವಿಲ್ಲ. ಅದೇ ರೀತಿ ಕಟ್ಟಿಕೊಟ್ಟ ಬುತ್ತಿ ಕೂಡ. ಒಂದು ಅಥವಾ ಎರಡು ಹೊತ್ತಿಗೆ ಮುಗಿದು ಹೋಗುತ್ತದೆ. ಹಾಗಾಗಿ ನಾವೇ ಮಾತನ್ನು ಅರಿತು ಆಡುವುದನ್ನು ಕಲಿಯಬೇಕು, ಬುತ್ತಿಯನ್ನು ನಾವೇ ಮಾಡುವುದನ್ನು ಕಲಿಯಬೇಕು. ಆಗ ಮಾತ್ರ ಒಂದಷ್ಟು ಕಾಲ ಉಳಿಯಬಹುದು, ಮುಂದೆ ಹೋಗಬಹುದು.

ಹೌದು, ಕೊರೊನಾ ವೈರಾಣು ಬದುಕಿನ ವ್ಯವಸ್ಥೆಯನ್ನೇ ಅಡಿಮೇಲು ಮಾಡಿದೆ. ವ್ಯಾಪಾರ ವ್ಯವಹಾರದ ಮಾತಿರಲಿ, ಆಟ ಊಟ ಪಾಠದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ನಮಗೆ ನಾವೇ ಹೇರಿಕೊಂಡ ಲಾಕ್‍ಡೌನ್‍ನಿಂದಾಗಿ ಒಂದಕ್ಕೊಂದು ಪೂರಕವಾಗಿದ್ದ ಬದುಕಿನ ಬಂಧಗಳೆಲ್ಲಾ ತುಂಡಾಗಿ ಚೆಲ್ಲಾಪಿಲ್ಲಿಯಾಗಿ ಹೋಗಿವೆ. ಮತ್ತೆ ಕೂಡಿಕೊಳ್ಳಲು ಒದ್ದಾಡಬೇಕಾಗಿದೆ. ನಮಗೆ ಬೇಕೋ ಬೇಡವೋ ಈ ಎಲ್ಲಾ ವಿಪರೀತಗಳ ಫಲವನ್ನು ನಾವು ಉಣ್ಣಲೇಬೇಕಾಗಿದೆ.

ದೇವಾಲಯಗಳು ಮುಚ್ಚಿದ್ದರೂ ಮನೆಯಲ್ಲೇ ಕುಳಿತು ಪ್ರಾರ್ಥಿಸಲಾಗಿದೆ. ಆದರೆ ಶಾಲಾಕಾಲೇಜುಗಳು ಮುಚ್ಚಿದ್ದರಿಂದ ಮಕ್ಕಳು ಒಂದು ಅಮೂಲ್ಯ ಅನುಭವ ದಿಂದ ವಂಚಿತರಾಗಿದ್ದಾರೆ. ಇದರ ಪರಿಣಾಮವು ಭವಿತವ್ಯದ ವಿದ್ಯಮಾನಗಳನ್ನು ನಿರ್ಧರಿಸುತ್ತದೆ ಎಂಬುದು ಅನೇಕರಿಗೆ ತಿಳಿದಿದೆ. ಶಾಲೆ ಕಾಲೇಜುಗಳು ಕೇವಲ ಇಟ್ಟಿಗೆ ಮೇಲೆ ಇಟ್ಟಿಗೆ ಇಟ್ಟು ಕಟ್ಟಿದ ಕಟ್ಟಡಗಳಲ್ಲ. ಅಲ್ಲಿ ಮನಸುಗಳು ಬೆರೆಯುತ್ತವೆ, ಕನಸುಗಳು ಅರಳುತ್ತವೆ, ಅನುಭವಗಳು ತೆರೆಯುತ್ತವೆ. ಇವೆಲ್ಲವೂ ವ್ಯಕ್ತಿತ್ವವೊಂದನ್ನು ರೂಪಿಸುತ್ತವೆ.

ADVERTISEMENT

ಪರೀಕ್ಷೆಯ ಮಾದರಿಗಳ ಬಗ್ಗೆ ನಮಗೆ ಯಾವುದೇ ತಕರಾರುಗಳಿರಲಿ. ಆದರೆ ಪರೀಕ್ಷೆಯೆಂಬುದು ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಜೀವಂತವಾಗಿ ಇರಿಸಿತ್ತು. ಪಠ್ಯಗಳು ಪ್ರಶ್ನೆಗಳಾಗಿ ಬರುತ್ತವೆ ಎಂದಾದರೂ ಮತ್ತೆ ಮತ್ತೆ ತಿರುವಿಹಾಕುವುದಿತ್ತು. ಈ ವರ್ಷ ಅದೂ ಇಲ್ಲ ವಾಗಿದೆ. ಮಾನವಿಕ ಶಾಸ್ತ್ರದ ಪಠ್ಯಗಳಿರಲಿ, ವಿಜ್ಞಾನ ವಿಷಯದ ಪ್ರಾಯೋಗಿಕ ಪಠ್ಯಗಳು ಕೂಡ ಪರೀಕ್ಷೆಯಿಲ್ಲದೆ ಹೋಗಿವೆ. ಬೇರು ನೆಲಕ್ಕಿಳಿಯದೆ ಹೂಬಿಟ್ಟರೆ ಅದು ಎಷ್ಟುಕಾಲ ಉಳಿಯಬಹುದೋ ತಿಳಿಯದಾಗಿದೆ. ಪರೀಕ್ಷೆಯೇ ಇಲ್ಲದೆ ಪಾಸ್ ಆಗುವ ಪ್ರಕ್ರಿಯೆ ನಡೆದಿರುವ ಈ ಹೊತ್ತಲ್ಲಿ, ಈ ಬಗ್ಗೆ ಸರಿತಪ್ಪುಗಳ ಆಚೆಗೆ ನಿಂತು ನಾವೆಲ್ಲರೂ ಯೋಚಿಸಬೇಕಾಗಿದೆ.

‘ಹೀಗೇ ಇದ್ರೆ ನೀನು ಈ ವರ್ಷ ಫೇಲ್ ಆಗ್ತೀಯ’ ಅಂತ ಪದೇಪದೇ ಹೇಳ್ತಿದ್ದ ಉಪನ್ಯಾಸಕರಿಗೆ ಆ ವಿದ್ಯಾರ್ಥಿ ‘ನೋಡಿ ಸರ್, ನಾವು ಪರೀಕ್ಷೆನೇ ಇಲ್ಲದೆ ಪಾಸ್ ಆಗಿಬಿಟ್ಟೆವು’ ಅಂತ ಬಹಳ ಖುಷಿಯಿಂದ ಹೇಳುವುದನ್ನು ಕೇಳಿ ಆತಂಕವಾಗುತ್ತಿದೆ. ಪಾಸ್ ಆಗಿರುವುದೇನೋ ಆ ಹುಡುಗನಿಗೆ ಖುಷಿಯಿರಬಹುದು. ತಾಂತ್ರಿಕ ಲೆಕ್ಕಾಚಾರದಲ್ಲಿ ಅವನು ಪಾಸ್ ಆಗಿರಬಹುದು. ಇದೊಂದು ಸಂಕೀರ್ಣ ಕಾಲ. ವಿದ್ಯಾರ್ಥಿಯೊಬ್ಬ ತನ್ನ ಕಲಿಕೆಯ ಪಾತ್ರೆಯನ್ನು ತನ್ನ ವಯೋಮಾನಕ್ಕೆ ತಕ್ಕಂತೆ ತುಂಬಿಕೊಳ್ಳದೆ ಹೊರಬರುತ್ತಿದ್ದಾನೇನೋ ಎಂಬ ಗುಮಾನಿ ಸದ್ಯದ ವಿದ್ಯಾರ್ಥಿಗಳ ಕಾರ್ಯನಿರ್ವಹಣೆಯನ್ನು ಕಂಡವರಿಗೆ ಕಾಡುತ್ತಿದೆ.

ಇದನ್ನು ತುಂಬುವುದು ಯಾರು? ಹೇಗೆ ಮತ್ತು ಯಾವಾಗ? ನಮ್ಮ ವ್ಯವಸ್ಥೆಯಲ್ಲಿ ಈ ಆನ್‍ಲೈನ್ ಪಾಠ ಎನ್ನುವುದು ದಿಢೀರ್ ಬಂದಿದ್ದರಿಂದ ನಮಗದು ಒಗ್ಗಿಬರಲಿಲ್ಲ. ಅದೂ ತಾಂತ್ರಿಕ ಲೆಕ್ಕಾ ಚಾರದ ಭಾಗವಾಗಿ ಉಳಿಯಿತೇ ಹೊರತು ಅದರ ಫಲಶ್ರುತಿ ತೀರಾ ಕೆಳಮಟ್ಟದ್ದು ಎಂದರೆ ತಪ್ಪಾಗಲಿಕ್ಕಿಲ್ಲ. ಖಾಸಗಿ ಶಾಲಾಕಾಲೇಜು ಮಕ್ಕಳ ವಿಚಾರ ಒಂದು ಕಡೆ ಇರಲಿ. ಸರ್ಕಾರಿ ಶಾಲಾಕಾಲೇಜಿನಿಂದ ಹೊರಬರುವ ಬಹಳಷ್ಟು ಮಕ್ಕಳು ವಾಸ್ತವದ ವ್ಯಾವಹಾರಿಕ ಜಗತ್ತಿನಲ್ಲಿ ಎಷ್ಟರಮಟ್ಟಿಗೆ ಗೆಲ್ಲಬಲ್ಲವ ರಾಗಿದ್ದಾರೆ ಎಂದು ಎಲ್ಲರೂ ಚಿಂತಿಸುತ್ತಿದ್ದಾರೆ. ಏಕೆಂದರೆ ಪಿಯುಸಿ ನಂತರ ಆತ ಎಂಜಿನಿಯರಿಂಗ್, ಮೆಡಿಕಲ್, ಕೃಷಿವಿಜ್ಞಾನ ಅಥವಾ ಸಾಮಾನ್ಯ ಪದವಿಗೆ ಹೋಗಬೇಕಾಗಿದೆ. ಹಿಂದಣ ಹೆಜ್ಜೆಯ ಬಲದಿಂದಲೇ ಮುಂದಣ ಹೆಜ್ಜೆ ಇಡಬೇಕಾಗಿರುತ್ತದೆ. ಕಳೆದ ಎರಡು ವರ್ಷಗಳ ನಮ್ಮ ಕಲಿಕೆಯ ಹೆಜ್ಜೆಗಳು ದುರ್ಬಲವಾಗಿರು ವಾಗ ಮುಂದಣ ಹೆಜ್ಜೆಯ ನಿರೀಕ್ಷೆಗಳೇನು? ಇವು ಸದ್ಯದ ಪ್ರಶ್ನೆಗಳಾಗಿವೆ.

ಪ್ರಿಯ ವಿದ್ಯಾರ್ಥಿಗಳೇ... ನೀವೀಗ ತಾಂತ್ರಿಕವಾಗಿ ಪಾಸ್ ಆಗಿರಬಹುದು. ಆದರೆ ಬದುಕಿನ ಪ್ರಶ್ನೆಪತ್ರಿಕೆಗೆ ನೀವು ಉತ್ತರಿಸಲೇಬೇಕು. ಅಲ್ಲಿ ಪ್ರಯೋಗಶಾಲೆಯ ಕಲಿಕೆಯೂ ಬೇಕು, ಪಾಠಶಾಲೆಯ ಕಲಿಕೆಯೂ ಬೇಕು. ಒಂದೊಂದು ಪ್ರಶ್ನೆಗೆ ಬಹುಮಾದರಿಯ ಉತ್ತರಗಳಿಗೆ ತಯಾರಿ ಮಾಡಿಕೊಂಡಿರಬೇಕು. ಇಷ್ಟಾದರೂ ಒಮ್ಮೊಮ್ಮೆ ಕೊನೇ ಗಳಿಗೆಯಲ್ಲಿ ಪ್ರಶ್ನೆ ಪತ್ರಿಕೆಯ ವಿನ್ಯಾಸವೇ ಬದಲಾಗಬಹುದು. ಆಗ ಯಾರೂ ನಿಮ್ಮ ಕೈಹಿಡಿಯುವುದಿಲ್ಲ. ಈ ಎಚ್ಚರ ನಿಮಗಿದ್ದರೆ ಪರೀಕ್ಷೆಯಿಲ್ಲದೆ ಪಾಸ್ ಆದ ಬಗ್ಗೆ ಸಂಭ್ರಮಿಸದೆ, ಯಾವುದನ್ನು ಕಲಿಯಬೇಕೋ ಅದನ್ನು ಕಲಿಯಲು ಪ್ರಯತ್ನಿಸಿ. ದ್ವಿತೀಯ ಪಿಯುಸಿಯ ಕನ್ನಡ ಪಠ್ಯದಲ್ಲಿ ‘ಆಯ್ಕೆಯಿದೆ ನಮ್ಮ ಕೈಯಲ್ಲಿ’ ಅನ್ನುವ ಪಾಠವೊಂದಿದೆ. ಅದರ ಆಶಯದಂತೆ, ನಿಮ್ಮ ನಾಳೆಗಳಿಗಾಗಿ ನೀವೇ ಸಿದ್ಧರಾಗಬೇಕು. ಯಾರನ್ನೂ ಯಾವುದನ್ನೂ ದೂರುವ ಸ್ಥಿತಿಯಲ್ಲಿ ಯಾರೂ ಇಲ್ಲದ ಕಾಲವಿದು.

ಆಕಸ್ಮಿಕವಾಗಿ ಅಕೌಂಟಿಗೆ ಬಂದು ಬಿದ್ದ ಹಣವನ್ನೇ ನೆಚ್ಚಿಕೊಳ್ಳಬೇಡಿ. ಅದು ಇನ್ಯಾರದೋ ಆಗಿದ್ದರೆ ನಿಮ್ಮ ಜೊತೆ ಖಾತೆಯಲ್ಲಿ ಬಹಳಕಾಲ ಉಳಿಯುವುದಿಲ್ಲ. ಹೀಗಾಗಿ ನಿಮ್ಮ ಖಾತೆಗೆ ನೀವೇ ದುಡಿದು ಡೆಪಾಸಿಟ್ ಮಾಡಿಕೊಳ್ಳಿ. ಕಲಿಕೆಯೆಂದರೆ ಅರಿವಿನ ಖಾತೆಯನ್ನು ತುಂಬಿಕೊಳ್ಳುವುದೇ ಆಗಿದೆ.

ಲೇಖಕ: ಉಪನ್ಯಾಸಕ, ಸರ್ಕಾರಿ ಪದವಿಪೂರ್ವ ಕಾಲೇಜು, ಶೆಟ್ಟಿಹಳ್ಳಿ, ಶಿವಮೊಗ್ಗ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.