ADVERTISEMENT

ಖಾಲಿ ನಿವೇಶನ: ತ್ಯಾಜ್ಯದ ಗೂಡಲ್ಲ

ನಮ್ಮ ಮನೆಯ ಹೊರಗಿನ ಸ್ವಚ್ಛತೆ ನಮ್ಮ ಹೊಣೆಯಲ್ಲ ಎಂಬುದೇ ಎಲ್ಲರ ಭಾವನೆ

ಡಾ.ವಿನಯ ಶ್ರೀನಿವಾಸ್
Published 27 ಜನವರಿ 2021, 19:30 IST
Last Updated 27 ಜನವರಿ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನಿಮ್ಮ ಬಡಾವಣೆಯಲ್ಲಿ ಖಾಲಿ ನಿವೇಶನವಿದ್ದರೆ ಒಮ್ಮೆ ಅತ್ತ ದೃಷ್ಟಿ ಹಾಯಿಸಿ. ಅದು ಖಂಡಿತಾ ತ್ಯಾಜ್ಯಗಳಿಂದ ತುಂಬಿ ತುಳುಕುತ್ತಿರುತ್ತದೆ. ಅದರ ಸುತ್ತಮುತ್ತಲಿನ ಮನೆಗಳಷ್ಟೇ ಅಲ್ಲ, ಪಕ್ಕದ ಬಡಾವಣೆಯವರೂ ಒಂದಿಷ್ಟು ಕಸ ಕಡ್ಡಿಗಳನ್ನು ಅಲ್ಲಿ ತಂದು ಒಗೆದಿರುತ್ತಾರೆ. ಅಕ್ಕಪಕ್ಕದ ಮನೆಗಳಲ್ಲಿ ಸತ್ತು ಬಿದ್ದ ಇಲಿ, ಹೆಗ್ಗಣ, ಬೆಕ್ಕು, ಬಳಸದ ಚಪ್ಪಲಿ, ಮರದ ಹಲಗೆ, ಖಾಲಿ ಬಾಟಲಿ, ತಂಪು ಪಾನೀಯಗಳ ಪ್ಲಾಸ್ಟಿಕ್ ಡಬ್ಬಿಗಳು ಮೊದಲಾದವು ಆ ನಿವೇಶನದ ತುಂಬ ತುಂಬಿರುತ್ತವೆ. ಅಲ್ಲೊಂದು ಮರ ಇದ್ದರಂತೂ ಅದರ ಬುಡದಲ್ಲಿ ಹಳೆಯದಾದ ಒಂದೆರಡಾದರೂ ದೇವರ ಫೋಟೊಗಳು, ತುಂಡರಿಸಿದ ದೇವರ ವಿಗ್ರಹಗಳನ್ನು ನೀವು ನೋಡೇ ನೋಡುತ್ತೀರಿ!

ಸಾಮಾನ್ಯವಾಗಿ ಹೆಚ್ಚಿನ ನಗರಗಳಲ್ಲಿ ಕಸದ ವಿಲೇವಾರಿಗೆ ಒಳ್ಳೆಯ ವ್ಯವಸ್ಥೆ ಇದೆ. ಹಸಿ ಕಸ ಹಾಗೂ ಒಣ ಕಸ ಎಂದು ವಿಂಗಡಿಸಿ, ಮನೆಯ ಮುಂದೆ ಬರುವ ಕಸದ ಗಾಡಿಗೆ ಕೊಡಬೇಕೆನ್ನುವ ಸೂಚನೆಯನ್ನು ಕೊಟ್ಟಾಗಿದೆ. ಆದರೆ, ದೊಡ್ಡ ಗಾತ್ರದ ಕಸವನ್ನು ಕಸದ ಗಾಡಿಯವರು ಗಾಡಿಯಲ್ಲಿ ಸ್ಥಳದ ಅಭಾವದಿಂದಲೋ ಅಥವಾ ಮತ್ಯಾವುದೋ ಕಾರಣಗಳಿಂದ ತೆಗೆದುಕೊಂಡು ಹೋಗಲು ನಿರಾಕರಿ
ಸುತ್ತಾರೆ. ಅಂತಹ ಎಲ್ಲ ತ್ಯಾಜ್ಯಗಳೂ ಮುಲಾಜಿಲ್ಲದೆ ಹತ್ತಿರದ ಖಾಲಿ ನಿವೇಶನವನ್ನು ಸೇರುತ್ತವೆ.

ಆದರೆ ಇದು ಎಷ್ಟರ ಮಟ್ಟಿಗೆ ಸರಿ? ಹೀಗೆ ಹಲವಾರು ಮನೆಗಳಿಂದ ತಂದು ಬಿಸಾಡುವ ಈ ತ್ಯಾಜ್ಯ, ನಿವೇಶನದ ಅಕ್ಕಪಕ್ಕದ ಮನೆಯವರಿಗೆ ಕಿರಿಕಿರಿ ಎನಿಸುತ್ತದೆ. ಅದರಿಂದ ಹೊರ ಬರುವ ದುರ್ನಾತದಿಂದ ಮನೆಯಲ್ಲಿ ಇರುವುದೇ ಕಷ್ಟಕರ ಎನಿಸಬಹುದು. ಅಷ್ಟೇ ಅಲ್ಲ, ಅದು ಅನೇಕ ರೋಗ ರುಜಿನಗಳಿಗೂ ಕಾರಣವಾಗಬಹುದು. ಆದರೆ ಅವರದ್ದು ಏನೂ ಮಾಡಲಾಗದ ಅಸಹಾಯಕ ಸ್ಥಿತಿ. ಏಕೆಂದರೆ ಈ ರೀತಿಯ ನಿವೇಶನಕ್ಕೆ ಕಸವನ್ನು ತಂದು ಎಸೆಯಲು ಜನ ಆಯ್ದುಕೊಳ್ಳುವ ಸಮಯ ಬೆಳಕು ಹರಿಯುವ ಮೊದಲು ಇಲ್ಲವೇ ಕತ್ತಲಾದ ನಂತರ! ಹಾಗಾಗಿ, ಯಾರು ಅಲ್ಲಿಗೆ ಕಸ ತಂದು ಎಸೆಯುತ್ತಾರೆ ಎಂಬುದು ಆ ಅಕ್ಕಪಕ್ಕದ ಮನೆಯವರಿಗೆ ಯಕ್ಷಪ್ರಶ್ನೆಯಾಗಿಯೇ ಉಳಿಯುತ್ತದೆ.

ADVERTISEMENT

ಮಹಾತ್ಮ ಗಾಂಧಿಯವರ ಕನಸಿನ ಸ್ವಚ್ಛ ಭಾರತವನ್ನು ನನಸಾಗಿಸುವ ಉದ್ದೇಶದಿಂದ ಸರ್ಕಾರವು ಸ್ವಚ್ಛತಾ ಅಭಿಯಾನ ಹಮ್ಮಿಕೊಂಡಿರುವುದು ಸರಿಯಷ್ಟೆ. ‘ಸ್ವಚ್ಛ ಭಾರತ, ಸ್ವಸ್ಥ ಭಾರತ’ ಎಂಬ ಘೋಷಣೆಯೊಂದಿಗೆ, ಸ್ವಚ್ಛತೆಯಿಂದ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು ಎಂಬ ಅರಿವನ್ನೂ ಜನಸಾಮಾನ್ಯರಲ್ಲಿ ಮೂಡಿಸುವ ಪ್ರಯತ್ನ ನಡೆಯುತ್ತಲಿದೆ. ನಿಜ, ಮಲೇರಿಯಾ, ಚಿಕೂನ್‌ ಗುನ್ಯ, ಡೆಂಗಿ, ಇಲಿ ಜ್ವರ ಮೊದಲಾದ ಕಾಯಿಲೆಗಳಿಗೆ ಮೂಲ ಕಾರಣ, ತ್ಯಾಜ್ಯ ತುಂಬಿದ ಈ ಬಗೆಯ ಪರಿಸರವೇ. ನಮ್ಮ ಮನೆಯ ಜೊತೆಯಲ್ಲಿಯೇ ಮನೆಯ ಸುತ್ತಲಿನ ಪರಿಸರವನ್ನು, ಆ ಮೂಲಕ ನಮ್ಮ ಬೀದಿಯನ್ನು, ನಮ್ಮ ಊರನ್ನು, ನಮ್ಮ ದೇಶವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಆದರೆ ಬಹುತೇಕ ಸಂದರ್ಭಗಳಲ್ಲಿ ಹಾಗಾಗುತ್ತಿಲ್ಲ.

ಎಲ್ಲರ ಚಿತ್ತ ತಂತಮ್ಮ ಮನೆಗಳ ಸ್ವಚ್ಛತೆಯತ್ತ ಮಾತ್ರವೇ ಇದ್ದಂತಿದೆ. ನಮ್ಮ ಮನೆಯ ಹೊರಗಿನದು ನಮ್ಮ ಜವಾಬ್ದಾರಿ ಅಲ್ಲ ಎನ್ನುವಂತೆ ಅನೇಕರು ವರ್ತಿಸುತ್ತಿದ್ದಾರೆ. ಇಂತಹ ಉದಾಹರಣೆಗಳನ್ನು ಕಂಡಾಗ, ಗಾಂಧಿಯವರ ಸ್ವಚ್ಛ ಭಾರತದ ಕನಸು ನನಸಾಗಲು ಸಾಧ್ಯವೇ ಎಂಬ ಜಿಜ್ಞಾಸೆ ಕಾಡತೊಡಗುತ್ತದೆ.

ವಾಸ್ತವದಲ್ಲಿ, ಮನೆಗಳಿಂದ ಕೆಲವು ಬಗೆಯ ತ್ಯಾಜ್ಯಗಳ ವಿಲೇವಾರಿ ನಿಜಕ್ಕೂ ಸಮಸ್ಯೆಯೆ. ಸಾಕುಪ್ರಾಣಿ, ಪಕ್ಷಿಗಳು ತೀರಿಕೊಂಡಾಗ, ಅವುಗಳ ವಿಲೇವಾರಿ ಕಷ್ಟವೇ. ಮನೆಯ ಮುಂದೆ ಸತ್ತು ಬೀಳುವ ಇಲಿ, ಹೆಗ್ಗಣ ಮೊದಲಾದವೂ ಅದೇ ಪಟ್ಟಿಯಲ್ಲಿ ಸೇರುತ್ತವೆ. ಮನೆಯ ಮುಂದಿನ ಜಾಗದಲ್ಲಿ ಪ್ರೀತಿಯಿಂದ ಬೆಳೆಸಿದ ಬಹೂಪಯೋಗಿ ತೆಂಗಿನ ಮರಗಳ ತ್ಯಾಜ್ಯದ ವಿಲೇವಾರಿಯಂತೂ ದೊಡ್ಡ ಸಮಸ್ಯೆಯೇ ಸರಿ. ಒಣಗಿದ ಗರಿಗಳನ್ನು ಕಸದ ಗಾಡಿಯವರು ತೆಗೆದುಕೊಂಡು ಹೋಗಲು ನಿರಾಕರಿಸುತ್ತಾರೆ. ಅಲ್ಲದೆ, ಒಂದು ಕಾಲದಲ್ಲಿ ಬಹು ಬೇಡಿಕೆಯಿದ್ದ ಈ ಗರಿಗಳನ್ನು ಸೌದೆ ಒಲೆಗಳು ಕಣ್ಮರೆಯಾಗುತ್ತಿರುವ ಈ ಕಾಲದಲ್ಲಿ ತಿರುಗಿ ನೋಡುವವರೇ ಇಲ್ಲದಂತಾಗಿದೆ.

ಕಸದ ಗಾಡಿಯವರು ತೆಗೆದುಕೊಂಡು ಹೋಗ ಲಾರದ ಇಂತಹ ಕಸದ ವಿಲೇವಾರಿಗೂ ಒಂದು ವ್ಯವಸ್ಥೆ ಯಾಗಬೇಕು. ವಾರಕ್ಕೊಮ್ಮೆಯಾದರೂ ಅಂತಹ ಕಸವನ್ನು ತೆಗೆದುಕೊಂಡು ಹೋಗುವ ವ್ಯವಸ್ಥೆ ಶುರುವಾದರೆ ನಾಗರಿಕರು ಅದಕ್ಕೆ ಹೊಂದಿಕೊಳ್ಳುತ್ತಾರೆ. ಆ ರೀತಿಯ ವ್ಯವಸ್ಥೆಯೂ ಕಷ್ಟವೆನಿಸಿದರೆ ಕನಿಷ್ಠಪಕ್ಷ ಅಂತಹ ತ್ಯಾಜ್ಯಗಳನ್ನು ಸಾಗಿಸುವ ವ್ಯವಸ್ಥೆಯ ಸಂಪರ್ಕ ಸಂಖ್ಯೆಯನ್ನು ಬಡಾವಣೆಗಳ ಮುಖ್ಯ ಸ್ಥಳಗಳಲ್ಲಿ ಸೂಚಿಸುವಂತಾಗಬೇಕು. ಆ ಸಂಖ್ಯೆ ಸಾರ್ವಜನಿಕರ ಕರೆಗಳಿಗೆ ಎಲ್ಲ ಸಮಯದಲ್ಲಿ ಸ್ಪಂದಿಸುವಂತಿರಬೇಕು.

ಅನೇಕ ನಗರಗಳಲ್ಲಿ ಈಗಾಗಲೇ ವೈಜ್ಞಾನಿಕವಾದ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಇದ್ದರೂ ಇಂತಹ ಸಣ್ಣ ಪುಟ್ಟ ಪ್ರಾಯೋಗಿಕ ಸಮಸ್ಯೆಗಳಿಂದಾಗಿ ಜನ ಒಮ್ಮೊಮ್ಮೆ ಪರದಾಡುವಂತಾಗುತ್ತದೆ. ಸೌಲಭ್ಯಗಳನ್ನು ಒದಗಿಸುವಾಗ ಇಂತಹ ಸಮಸ್ಯೆಗಳನ್ನೂ ಗಮನದಲ್ಲಿ ಇರಿಸಿಕೊಳ್ಳಬೇಕು. ಕಡೆಯದಾಗಿ, ಎಂತಹ ಒಳ್ಳೆಯ ವ್ಯವಸ್ಥೆಗಳಿದ್ದರೂ ನಮ್ಮ ಮನಸ್ಸು ವಿಶಾಲವಾಗದ ಹೊರತು, ಅವು ಪ್ರಯೋಜನಕ್ಕೆ ಬಾರದಂತಾಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.