ADVERTISEMENT

ಗೋವಿನಲ್ಲಿ ಗ್ಯಾಸ್ಟ್ರಿಕ್: ಯಾರು ದೋಷಿ?

ಅನ್ನಭಾಗ್ಯದ ಪುಕ್ಕಟೆ ಅಕ್ಕಿಯೆಂದು ಸೇರುಗಟ್ಟಲೆ ಗಂಜಿ ಮಾಡಿ ಜಾನುವಾರುಗಳಿಗೆ ಉಣಿಸುವುದು ಅಪರಾಧ

ಡಾ.ಮುರಳೀಧರ ಕಿರಣಕೆರೆ
Published 12 ಆಗಸ್ಟ್ 2021, 19:44 IST
Last Updated 12 ಆಗಸ್ಟ್ 2021, 19:44 IST
ಸಂಗತ
ಸಂಗತ   

ಹಬ್ಬ ಹರಿದಿನಗಳ ಹೆಬ್ಬಾಗಿಲು ತೆರೆಯುವ ಶ್ರಾವಣ ನಾಡಿಗೆ ಅಡಿಯಿಟ್ಟಿದೆ. ಜನರ ಈ ಹೊತ್ತಿನ ರಸಗವಳದ ಸಂಭ್ರಮ ಜಾನುವಾರುಗಳ ಆರೋಗ್ಯಕ್ಕೆ ಕುತ್ತು ತರುತ್ತಿರುವುದು ಮಾತ್ರ ಗಣನೆಗೆ ಬಾರದ ವಾಸ್ತವ. ಹಬ್ಬದಡುಗೆಯ ಉಳಿಕೆಯೆಲ್ಲಾ ಸೇರುವುದು ಮನೆಯ ದನ-ಕರುಗಳ ಉದರವನ್ನು. ಇನ್ನು ತಮ್ಮಲ್ಲಿ ಗೋವುಗಳಿಲ್ಲದವರು ಮನೆ ಮುಂದೆ ಬರುವ ಹಸುಗಳಿಗೆ ವಿಶೇಷದಡುಗೆಯನ್ನು ಉಣಿಸಿ ಪಾವನರಾಗುತ್ತಾರೆ!

ಹೀಗೆ ಬಹುತೇಕ ಮನೆಗಳಲ್ಲಿ ಪಾಯಸ, ಅನ್ನ, ಗಂಜಿ, ಕಲಗಚ್ಚು ಎಂದೆಲ್ಲಾ ತಿಂದು, ಕುಡಿಯುವ ಜಾನುವಾರುಗಳಿಗೆ ಆ ಕ್ಷಣದಲ್ಲಿ ತೊಂದರೆಯಾಗದಿದ್ದರೂ ಐದಾರು ಗಂಟೆ ಕಳೆಯುತ್ತಿದ್ದಂತೆ ಸಮಸ್ಯೆ ಆರಂಭವಾಗುತ್ತದೆ. ಇದೇ ಸಾಮಾನ್ಯ ಭಾಷೆಯಲ್ಲಿ ಗ್ಯಾಸ್ಟ್ರಿಕ್ ತೊಂದರೆ. ‘ರೂಮಿನಲ್ ಅಸಿಡೋಸಿಸ್’ ಎಂದು ಕರೆಸಿಕೊಳ್ಳುವ ಜಠರದ ಆಮ್ಲೀಯತೆಯ ಬಾಧೆ ದನ, ಎಮ್ಮೆ, ಕುರಿ, ಮೇಕೆಗಳಲ್ಲಿ ಸಾಮಾನ್ಯ.

ಹಸುಗಳಲ್ಲಿ ಹೊಟ್ಟೆಯದು ತುಂಬಾ ಸಂಕೀರ್ಣ ರಚನೆ. ಮಾನವನಿಗಿರುವುದು ಒಂದೇ ಉದರ. ಅದೇ ಹುಲ್ಲು, ಸೊಪ್ಪುಸದೆಗಳನ್ನು ಮೇಯುವ ಜಾನುವಾರುಗಳ ಹೊಟ್ಟೆಯಲ್ಲಿ ರೂಮೆನ್, ರೆಟಿಕ್ಯುಲಮ್, ಒಮೇಸಮ್ ಮತ್ತು ಅಬೊಮೇಸಮ್ ಎಂಬ ನಾಲ್ಕು ಪ್ರತ್ಯೇಕ ಕೋಣೆಗಳಿರುವುದು ವಿಶೇಷ. ತಮಗೆ ಸಿಕ್ಕಿದ್ದು, ಮಾನವ ಕೊಟ್ಟಿದ್ದನ್ನೆಲ್ಲಾ ಹಿಂದೆ ಮುಂದೆ ನೋಡದೆ ಗಬಗಬನೆ ನುಂಗಿದಾಗ ಅವು ಸೇರುವುದು ಉದರದ ಮೊದಲ ಚೀಲವನ್ನು. ಇದು ಗಾತ್ರದಲ್ಲಿ ತುಂಬಾ ದೊಡ್ಡದು. ಆಹಾರ ತಿಂದು ಮುಗಿಸಿ ವಿಶ್ರಾಂತಿ ತೆಗೆದುಕೊಳ್ಳುವಾಗ ಹೊಟ್ಟೆಯಿಂದ ಬಾಯಿಗೆ ವಾಪಸ್‌ ತಂದುಕೊಂಡು ಜೊಲ್ಲುರಸದೊಂದಿಗೆ ಚೆನ್ನಾಗಿ ಜಗಿದು ಪುನಃ ನುಂಗುತ್ತವೆ. ಇದೇ ಮೆಲುಕು ಹಾಕುವ ಕ್ರಿಯೆ.

ADVERTISEMENT

ಹೀಗೆ ಜಗಿದು ನುಂಗಿದ ಆಹಾರ ಒಂದು ಹಂತದವರೆಗೆ ಜೀರ್ಣವಾಗಿ, ಜೇನುಗೂಡಿನಂತಿರುವ ಮುಂದಿನ ಕೋಣೆಗೆ ಹೋಗುತ್ತದೆ. ಮೇವು ತಿನ್ನುವಾಗ ಅಕಸ್ಮಾತ್ತಾಗಿ ಸೇರಿಕೊಂಡ ಮೊಳೆ, ತಂತಿ, ಕಬ್ಬಿಣದ ಚೂರುಗಳು ಇಲ್ಲಿಯೇ ತಡೆಯಲ್ಪಟ್ಟು ಮುಂದೆ ಕರುಳಿಗೆ ಗಾಸಿಯಾಗುವುದು ತಪ್ಪುತ್ತದೆ.

ಮೂರನೇ ಭಾಗದಲ್ಲಿ ಆಹಾರ ಮತ್ತಷ್ಟು ಜೀರ್ಣವಾಗಿ ಬಹುಪಾಲು ನೀರಿನಂಶ ಹೀರಲ್ಪಡುತ್ತದೆ. ಹೊಟ್ಟೆಯ ಕೊನೆಯ ಕೋಣೆಯದ್ದು ಮಾನವನ ಜಠರದ ರೀತಿಯ ಕಾರ್ಯನಿರ್ವಹಣೆ. ಇಲ್ಲಿನ ಜಠರಾಮ್ಲದಿಂದಾಗಿ ಪಚನಕ್ರಿಯೆ ಸರಾಗವಾಗುತ್ತದೆ.

ಉದರದ ಒಳಾವರಣದ್ದು ಹೆಚ್ಚುಕಮ್ಮಿ ತಟಸ್ಥ ರಸಸಾರ ಮಟ್ಟ. ಅಂದರೆ ಒಡಲ ಪಿಎಚ್ 6.5ರಿಂದ 7.0. ಆಹಾರದಲ್ಲಿ ಹೆಚ್ಚು ನಾರಿನಂಶವಿದ್ದಾಗ ಮಾತ್ರ ಜಾನುವಾರುಗಳು ಮೆಲುಕು ಹಾಕಲು ಸಾಧ್ಯ. ಹಾಗಾಗಿ ಹುಲ್ಲು, ಸೊಪ್ಪುಸದೆ, ಹಣ್ಣು ತರಕಾರಿಗಳ ಸಿಪ್ಪೆಗಳನ್ನು ಸರಾಗವಾಗಿ ಮತ್ತೊಮ್ಮೆ ಬಾಯಿಗೆ ತಂದುಕೊಂಡು ಜಗಿದು ನುಂಗುತ್ತವೆ. ತುಂಬಾ ಮೆದುವಾಗಿರುವ ಅನ್ನ, ಗಂಜಿ, ಪಾಯಸಗಳು ಮೆಲುಕಿಗೆ ಸಿಗವು. ಮೆಲುಕು ಹಾಕುವ ಕ್ರಿಯೆ ನಿಂತಾಗ ಹೊಟ್ಟೆಯಲ್ಲಿರುವ ಬ್ಯಾಕ್ಟೀರಿಯಾಗಳು ಈ ಶರ್ಕರಪಿಷ್ಟಭರಿತ ಆಹಾರವನ್ನು ಲ್ಯಾಕ್ಟಿಕ್ ಆಮ್ಲವಾಗಿ ಪರಿವರ್ತಿಸುವುದರಿಂದ ಉದರದ ಆಮ್ಲೀಯತೆ ಹೆಚ್ಚುತ್ತದೆ. ಪಿಎಚ್ ಮಟ್ಟವು 5.5ಕ್ಕಿಂತ ಕೆಳಗೆ ಕುಸಿದಾಗ ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸುತ್ತವೆ.

ಇಂತಹ ವಾತಾವರಣದಲ್ಲಿ ಜೀರ್ಣಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವ ಉಪಯುಕ್ತ ಸೂಕ್ಷ್ಮಾಣು ಜೀವಿಗಳು ನಾಶವಾಗುವುದರಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ. ಹೊಟ್ಟೆಯ ಚಲನೆ ಸ್ಥಗಿತವಾಗುವುದರಿಂದ ಮೇವು ಮುಟ್ಟವು. ಹಾಲಿನ ಇಳುವರಿಯಲ್ಲೂ ಏಕಾಏಕಿ ಕುಸಿತ. ಶರೀರ ತಣ್ಣಗಾಗಿ ಎದ್ದೇಳಲಾಗದೆ ಒದ್ದಾಡುತ್ತವೆ. ಅದರಲ್ಲೂ ಗರ್ಭ ಧರಿಸಿದ ಹಸುಗಳು, ಸಣ್ಣ ಕರು ಹೊಂದಿರುವ ದನಗಳಲ್ಲಿ ಇದು ಮಾರಣಾಂತಿಕವಾಗಬಹುದು.

ಯಕೃತ್ ಸೇರಿದಂತೆ ಅಂಗಗಳ ಮೇಲೆ ಆಮ್ಲದ ಪರಿಣಾಮ ಅಧಿಕವಾಗಿದ್ದರೆ ಚಿಕಿತ್ಸೆಗೆ ಸ್ಪಂದನೆ ಕಷ್ಟ. ಔಷಧೋಪಚಾರದಿಂದ ಚೇತರಿಸಿಕೊಂಡರೂ ಹಾಲಿನ ಉತ್ಪಾದನೆ ಸಹಜ ಸ್ಥಿತಿಗೆ ಮರಳಲು ತುಂಬಾ ದಿನಗಳು ಬೇಕು. ಹಾಗಾಗಿ ರೈತರಿಗೆ ಆರ್ಥಿಕವಾಗಿ ತುಂಬಾ ನಷ್ಟ. ಜೊತೆಗೆ ನಿರಂತರ ಆಮ್ಲೀಯತೆಯ ಕಾರಣ ಜಾನುವಾರುಗಳ ಗೊರಸು ಮೃದುವಾಗಿ, ಅಲ್ಲಲ್ಲಿ ಹುಣ್ಣಾಗಿ ಕುಂಟು ರೋಗಕ್ಕೂ ಕಾರಣವಾಗುತ್ತದೆ.

ಜಾನುವಾರುಗಳು ಇಷ್ಟದಿಂದ ತಿನ್ನುವ ಮುರುವಿನ ಸೊಪ್ಪಿನ ಜೊತೆಯಲ್ಲಿ ಪ್ರತಿನಿತ್ಯ ಒಂದು ಮಿತಿಯಲ್ಲಿ ಗಂಜಿ ಬೇಯಿಸಿಕೊಡುವುದು ದೇಹಾರೋಗ್ಯಕ್ಕೆ ಒಳ್ಳೆಯದು. ಹಿಂದಿದ್ದ ಈ ಪದ್ಧತಿ ಮರೆಯಾಗಿ ನೇರವಾಗಿ ಗಂಜಿ ಉಣಿಸುವ ಕ್ರಮ ಮಲೆನಾಡು, ಕರಾವಳಿ ಭಾಗಗಳಲ್ಲಿ ಈಗ ಮಾಮೂಲಾಗಿದೆ.

ಅನ್ನಭಾಗ್ಯದ ದೊಡ್ಡ ಪಾಲು ಅಕ್ಕಿಅನ್ನ, ಗಂಜಿಯ ರೂಪದಲ್ಲಿ ಜಾನುವಾರುಗಳ ದೇಹ ಸೇರುತ್ತಿರುವುದು ಆತಂಕಕಾರಿ. ಪಶು ಆಹಾರ, ಹಿಂಡಿಯ ಬೆಲೆ ದಿನೇ ದಿನೇ ಹೆಚ್ಚುತ್ತಿರುವುದೇ ಇದರ ಹಿಂದಿರುವ ತರ್ಕ! ಪಡಿತರ ಅಕ್ಕಿ ಮಿಕ್ಕಿದರೆ ವಿಲೇವಾರಿಗೆ ಬೇರೆ ದಾರಿ ಹುಡುಕಬೇಕೇ ಹೊರತು ಅನ್ನ ಬೇಯಿಸಿ ಅನವಶ್ಯಕವಾಗಿ ಬೀದಿಯಲ್ಲಿ ಚೆಲ್ಲುವುದು, ಪುಕ್ಕಟೆ ಅಕ್ಕಿಯೆಂದು ಸೇರುಗಟ್ಟಲೆ ಗಂಜಿ ಮಾಡಿ ಜಾನುವಾರುಗಳಿಗೆ ಉಣಿಸುವುದು ಅಪರಾಧ.

ಇಂದಿಗೂ ಹಬ್ಬ ಹರಿದಿನಗಳು, ಜಾತ್ರೆ, ಮದುವೆ ಎಂದೆಲ್ಲಾ ಕಾರ್ಯಕ್ರಮಗಳಾದಾಗ ಹೊರಗೆ ಚೆಲ್ಲಿದ ಅನ್ನ, ಪಾಯಸ, ಸಿಹಿಪದಾರ್ಥಗಳಿಗೆ ಅಮಾಯಕ ಜಾನುವಾರುಗಳು ತೊಂದರೆಗೀಡಾಗುತ್ತಿರುವುದು ನಿಜಕ್ಕೂ ಆಘಾತಕಾರಿ.

ಲೇಖಕ: ಮುಖ್ಯ ಪಶುವೈದ್ಯಾಧಿಕಾರಿ,

ಬಾಳೆಬೈಲು, ತೀರ್ಥಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.