ADVERTISEMENT

ಸಂಗತ: ಬುದ್ಧ, ಪ್ರಬುದ್ಧ ಜನವಿಜ್ಞಾನಿ

ಮಹಾಸೋಂಕಿನ ಈ ದುರ್ದಿನಗಳಲ್ಲಿ ಬೋಧಿಸತ್ವದ ಬಲವು ನಮ್ಮನ್ನು ಕಾಯಬಲ್ಲದು..

​ಪ್ರಜಾವಾಣಿ ವಾರ್ತೆ
Published 6 ಮೇ 2021, 20:04 IST
Last Updated 6 ಮೇ 2021, 20:04 IST
ಸಂಗತ
ಸಂಗತ   

ಬಯಸಿದ್ದು ಎಟಕುತ್ತಲೇ ಹೊಸ ಬಯಕೆಗಳು ಹುಟ್ಟಿಕೊಳ್ಳುತ್ತವೆ. ಆಸ್ತಿ, ಹಣ, ಅಂತಸ್ತುಗಳಂತಹ ಕೆಲವಕ್ಕೆ ಇತಿಮಿತಿಯೇ ಇಲ್ಲ. ಎಗ್ಗಿಲ್ಲದ ಅಪೇಕ್ಷೆ, ಕೋರಿಕೆಗಳು ಸಮಸಮಾಜಕ್ಕೆ ವಿಘ್ನಗಳು. ಹಾಗಾಗಿ ನೋವು, ನಿರಾಸೆ, ದುಃಖ. ಹಾಗಾಗಿ ಸುಖ, ಸಂತಸವು ಆಸೆಗಳ ವೃದ್ಧಿಯಲ್ಲಿಲ್ಲ, ಬದಲಿಗೆ ಅವುಗಳ ಕ್ಷಯದಲ್ಲಿದೆ ಎಂದು ಸುಮಾರು ಎರಡೂವರೆ ಸಹಸ್ರಮಾನಗಳ ಹಿಂದೆಯೇ ಸಾರಿದ ಪ್ರಖರ ವಿಚಾರವಾದಿ ಬುದ್ಧ.

ಸಾವನ್ನು ನಿರೀಕ್ಷಿಸಬೇಕು, ಅರ್ಥೈಸಿಕೊಳ್ಳಬೇಕು ಹಾಗೂ ಸಮ್ಮತಿಸಬೇಕೆಂದ ಅವನ ವಿಚಾರನಿಷ್ಠುರತೆ, ನೇರ ಮತ್ತು ಪಾರದರ್ಶಕ ನುಡಿಗಳು ನಿತ್ಯ ಪ್ರಸ್ತುತವಾಗಿವೆ, ಸರ್ವರನ್ನೂ ಆತ್ಮಾವಲೋಕನಕ್ಕೆ ಪ್ರೇರೇಪಿಸುತ್ತವೆ. ‘ನಿಮ್ಮ ರೂವಾರಿಗಳು ನೀವೇ. ಪ್ರಶ್ನಿಸದೆ ಏನನ್ನೂ ಒಪ್ಪಬೇಡಿ’ ಎಂದ ಈ ಮಹಾನ್ ದಾರ್ಶನಿಕನಿಗೆ ಮನುಕುಲದ ಮೊದಲ ವಿಜ್ಞಾನಿಯೆಂಬ ಜಾಗತಿಕ ಮನ್ನಣೆಯಿದೆ.

ಅರಿವಿನ ವಿಕಾಸಕ್ಕೆ ಜಿಜ್ಞಾಸೆಯೇ ಮೂಲ. ಯಾವುದೇ ಸಂಗತಿಯನ್ನು ಅವಲೋಕಿಸದೆ ಅನುಮೋದಿಸುವುದು ಒಂದು ದೌರ್ಬಲ್ಯ. ಎಲ್ಲರೂ ಅನುಸರಿಸುತ್ತಿದ್ದಾರೆಂದು, ತಾರ್ಕಿಕವಾಗಿದೆಯೆಂದು ನಂಬಬೇಡಿ. ನಿಮ್ಮ ಅನುಭವಕ್ಕೆ ಬಂದು ಅದು ನಿಮಗೂ ಇತರರಿಗೂ ಉತ್ತಮವೆಂದು ತೋರಿದರೆ ಮಾತ್ರವೇ ನಂಬಿ ಎನ್ನುವುದು ಈ ಜನವಿಜ್ಞಾನಿಯ ಹಿತವಾದ. ಕೇವಲ ಪರಸ್ಪರ ಪ್ರಶಂಸೆಯು ಸಮಾಜವನ್ನು ಪ್ರವಹಿಸಗೊಡದೆ ನಿಂತ ನೀರಾಗಿಸುವುದು.

ADVERTISEMENT

ಬುದ್ಧ ‘ಬೌದ್ಧಧರ್ಮ’ ಸ್ಥಾಪಿಸಿದ ಎನ್ನುವುದಕ್ಕೂ ಮೀರಿ ಆತ ಜಾತ್ಯತೀತ ಆಧ್ಯಾತ್ಮಿಕ ಶೋಧನೆಗೆ ಅಡಿಪಾಯ ಹಾಕಿದ್ದು ಮುಖ್ಯವಾಗುತ್ತದೆ. ಮನುಷ್ಯನ ಬದುಕು ಘನವಾಗಲು ಅದು ಎಂತಿರಬೇಕು ಎಂಬ ಕುರಿತು ಬುದ್ಧ ಆಳವಾಗಿ ವಿಶ್ಲೇಷಿಸಿದ. ಜನರಿಂದ ಅಗತ್ಯ ಪರಿಷ್ಕಾರಗಳನ್ನು ಸ್ವಾಗತಿಸಿದ ಕಾರಣಕ್ಕೆ ಅವನ ಮಹತ್ವದ ಗ್ರಹಿಕೆಗಳು ‘ಜನಧರ್ಮ’ ಎನ್ನಿಸಿದ್ದೇ ಹೆಚ್ಚು. ಬುದ್ಧನ ಚಿಂತನೆಗಳು ಅನ್ಯ ಧರ್ಮ, ಸಿದ್ಧಾಂತಗಳೊಂದಿಗೆ ಸಂಘರ್ಷಕ್ಕಿಳಿಯಲಿಲ್ಲ, ಬದಲಿಗೆ ಪರಸ್ಪರ ವಿಚಾರವಿನಿಮಯಕ್ಕಿಳಿದವು.

ಜೀವನವು ವ್ಯಾಧಿ, ದುಗುಡ, ವ್ಯಥೆ, ಆತಂಕ, ಸಾವು, ನೋವುಗಳ ಸರಮಾಲೆ ಎಂದ ಬುದ್ಧ. ಹಾಗೆಂದಮಾತ್ರಕ್ಕೆ ಆತ ನಿರಾಶಾವಾದಿಯಲ್ಲ. ಅವಕ್ಕೆ ತಕ್ಕ ಚಿಕಿತ್ಸೆಯನ್ನೂ ಸೂಚಿಸುವ ಕುಶಲ ವೈದ್ಯನೂ ಆದ. ದುಃಖ, ಅಸೌಖ್ಯಗಳಿದ್ದೂ ಅವು ಬಾಧಿಸದಂತೆ ಬದುಕನ್ನು ಸಾಗಿಸುವುದನ್ನು ಜನಮಾನಸಕ್ಕೆ ಕಲಿಸಿದ. ಆ ಪ್ರಬುದ್ಧತೆಯೆ ‘ನಿರ್ವಾಣ’. ಆರೋಗ್ಯದ ರಹಸ್ಯವೆಂದರೆ ವರ್ತಮಾನದಲ್ಲಿ ಬದುಕುವುದು. ನಿಮ್ಮ ಕೋಪಕ್ಕೆ ನಿಮ್ಮನ್ನು ಯಾರೂ ಶಿಕ್ಷಿಸುವುದಿಲ್ಲ, ನಿಮ್ಮ ಕೋಪವೇ ನಿಮ್ಮನ್ನು ಶಿಕ್ಷಿಸುವುದು. ಕಲಹಪ್ರಿಯ ತನ್ನ ಎದುರಾಳಿಯೊಂದಿಗೆ ಕಲಹವಾಡುವುದಿಲ್ಲ, ಅವನ ಕಲಹ ತನ್ನೊಂದಿಗೇ!

ಸಂಪ್ರದಾಯ, ಪರಂಪರೆ, ಆರಾಧನೆ, ಆಚರಣೆಗಳಿಗಿಂತ ನೈತಿಕ ಹೊಣೆಗಾರಿಕೆಗಳು ಹಾಗೂ ಸಾಧ್ಯತೆಗಳತ್ತ ಗಮನಹರಿಸುವುದೇ ಶ್ರೇಯಸ್ಸು. ಅಹಮಿಕೆ ಎಂಬುದು ನಮ್ಮ ಭಾರವನ್ನು ನಾವೇ ಹೊತ್ತಂತೆ. ಪ್ರಾರ್ಥನೆಗೆ ಓಗೊಡುವ ಯಾವ ಶಕ್ತಿಯೂ ಜಗತ್ತಿನಲ್ಲಿ ಇಲ್ಲ. ಫಲ ಸಿಗುವುದು ಕೋರಿಕೆಯಿಂದಲ್ಲ, ಕಾಯಕದಿಂದ. ಎಲ್ಲ ವಿದ್ಯಮಾನಗಳೂ ಕಾರ್ಯಕಾರಣ ನಿಯಮಕ್ಕೊಳಪಟ್ಟಿವೆ. ಜೀವನ ತೀರಾ ವೈಭವದ್ದಾಗಲಿ ಅಥವಾ ತೀರಾ ದಾರಿದ್ರ್ಯದ್ದಾಗಲಿ ಸಲ್ಲದು. ಇವೆರಡರ ನಡುವಿನ ಪಥವನ್ನು ಆರಿಸಿಕೊಳ್ಳುವುದು ಜಾಣ್ಮೆ... ಹೀಗೆ ಆಪ್ತ ಹಿರೀಕರೊಬ್ಬರು ನಮ್ಮ ಬೆನ್ನು ಸವರಿ ಕಿವಿಯಲ್ಲಿ ಉಸುರಿದಂತೆ ಭಾಸವಾಗುತ್ತವೆ ಬುದ್ಧನ ಜಾಣ ಮಾತುಗಳು. ಆತನ ಬೋಧನೆಗಳನ್ನು ಇಂದಿನ ಸಾಮಾಜಿಕ, ರಾಜಕೀಯ ವಿವಾದಾಂಶಗಳ ಪರಿಹಾರಕ್ಕೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು.

ಬುದ್ಧನ ಸಿದ್ಧಾಂತ ಎಲ್ಲದರಲ್ಲೂ ಅಂತರ್‌ಸಂಬಂಧವನ್ನು ಗುರುತಿಸುತ್ತದೆ. ಅದಿಲ್ಲದೆ ಇದಿಲ್ಲ. ಇದಿದ್ದರೇನೆ ಅದು. ಒಬ್ಬರೇ ಒಂಟಿಯಾಗಿ ಸಂತಸವಾಗಿರುವುದು ಹೇಗೆ ತಾನೆ ಸಾಧ್ಯ? ದುಃಖವೆಂಬ ಕಡಲಿನಲ್ಲಿ ಸೌಖ್ಯವೆಂಬ ಒಂದು ನಡುಗಡ್ಡೆಯನ್ನು ಊಹಿಸಲೂ ಆಗದು. ಕುಟುಂಬದಲ್ಲಿ, ಸಮಾಜದಲ್ಲಿ, ಸಂಸ್ಕೃತಿಯಲ್ಲೇ ಸಂತೋಷವನ್ನು ಅರಸಬೇಕು.

ಕೋವಿಡ್ ಖಂಡಾಂತರ ವ್ಯಾಧಿ ಕಾಡುತ್ತಿರುವ ಈ ದುರ್ದಿನಗಳನ್ನು ಧೈರ್ಯಗೆಡದೆ ನಿಭಾಯಿಸಲು ಬುದ್ಧನಿಂದ ನಾವು ಪ್ರಭಾವಿತರಾಗುವುದು ಹೇಗೆ? ಅಂತರ ಕಾಪಾಡಿಕೊಳ್ಳಬೇಕಾದದ್ದು ಭೌತಿಕವಾಗಿಯೇ ವಿನಾ ಮಾನಸಿಕವಾಗಿ ಅಲ್ಲವೆಂಬ ಪ್ರಜ್ಞೆ. ತನ್ನದಲ್ಲದೆ ಪರರ ಭದ್ರತೆಯ ದೃಷ್ಟಿಯಿಂದಲೂ ಮುಖಗವಸು ಧಾರಣೆ, ಸ್ಯಾನಿಟೈಸರ್ ಲೇಪನ ಎನ್ನುವ ಜಾಗೃತಿ. ‘ಬೋಧಿಸತ್ವ’ ಎಂದರೆ ಜ್ಞಾನೋದಯಕ್ಕೆ ಸರ್ವ ಶಕ್ತಿಯನ್ನೂ ಮೈಗೂಡಿಸಿಕೊಂಡು ಅಣಿಯಾಗುವ ಪರಿಕಲ್ಪನೆ. ಎಂದಮೇಲೆ ಕೊರೊನಾ ಎದುರಿಸಲು ಬೋಧಿಸತ್ವ ಅರ್ಥಾತ್ ಜಾಗೃತಿ ಮತ್ತು ಯೋಧನ ಬಲ ಒಗ್ಗೂಡಿಸಿಕೊಳ್ಳುವುದು ಇಂದಿನ ಜರೂರು.

ಬುದ್ಧ ತನ್ನನ್ನು ‘ದೇವರು’ ಎಂದುಕೊಳ್ಳಲಿಲ್ಲ. ವಿಪರ್ಯಾಸವೆಂದರೆ, ಆತನ ಆದರ್ಶಗಳ ಪಾಲನೆಗಿಂತ ಜಗತ್ತಿನೆಲ್ಲೆಡೆ ಅವನ ಮೂರ್ತಿಗಳ ಸ್ಥಾಪನೆಯೇ ಮೇಲುಗೈ ಸಾಧಿಸಿದೆ. ಇಷ್ಟು ಎತ್ತರ, ಅದಕ್ಕೂ ಎತ್ತರ ಎನ್ನುವ ಪೈಪೋಟಿ, ಪ್ರತಿಷ್ಠೆಯ ತಾಂಡವ. ಭಾವಿ ಪೀಳಿಗೆಗಳು ಸಂಪನ್ನರ ಮಾದರಿ ನಡೆ, ನುಡಿಗಳಿಂದ ಪ್ರಭಾವಿತಗೊಳ್ಳುವುವೇ ಹೊರತು ಅವರ ಪ್ರತಿರೂಪಗಳಿಂದಲ್ಲ. ಇತಿಹಾಸದಲ್ಲಿ ಸಂದ ಸಂತರೆಲ್ಲ ಸ್ಥಾವರದ ಕಡುವಿರೋಧಿಗಳೇ. ಕಾರಣ ಸ್ಪಷ್ಟವಿದೆ, ಕಾಲದ ನಾಗಾಲೋಟದಲ್ಲಿ ಸ್ಥಾವರ ಭಗ್ನವಾಗುವುದು ಖಾತರಿ. ಆದರೆ ಜಂಗಮ ಅಳಿವಿಗೆ ಅತೀತ. ಹಾಗಾಗಿ ಬುದ್ಧ ಅಥವಾ ಅವನಂತಹ ಶ್ರೇಷ್ಠರ ನಡೆ, ನುಡಿಗಳು ಅಂತರಂಗವನ್ನು ಬೆಳಗಿದರೆ ಪುತ್ಥಳಿಯ ಹಂಗೇಕೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.