ADVERTISEMENT

ಸಂಗತ: ಅಯ್ಯೋ ಹಬಲ್, ಏನಿದು ಟ್ರಬಲ್?

ಅನಂತ ವಿಶ್ವದ, ಅನೂಹ್ಯ ಮಾಹಿತಿಯನ್ನು ಮೊಗೆದು ಸುರಿಯುತ್ತಿದ್ದ ಹಬಲ್‍ನಲ್ಲಿನ ತಾಂತ್ರಿಕ ದೋಷ ವಿಜ್ಞಾನಿಗಳಲ್ಲಿ ತೀವ್ರ ಆತಂಕ ಉಂಟುಮಾಡಿದೆ

ಶ್ರೀಗುರು
Published 6 ಜುಲೈ 2021, 19:31 IST
Last Updated 6 ಜುಲೈ 2021, 19:31 IST
   

ಖಗೋಳ ವಿಜ್ಞಾನಿಗಳ ಪ್ರೀತಿಯ ದೂರದರ್ಶಕ ಹಬಲ್‍ನಲ್ಲಿ ಚಿಕ್ಕ ಟ್ರಬಲ್ ಕಾಣಿಸಿಕೊಂಡಿದೆ. ಕಳೆದ ಮೂವತ್ತೊಂದು ವರ್ಷಗಳಿಂದ ಭೂಮಿಯ ಮೇಲಿನ 570 ಕಿ.ಮೀ. ಕಕ್ಷೆಯಲ್ಲಿ ಪ್ರತೀ ಸೆಕೆಂಡಿಗೆ 8 ಕಿ.ಮೀ. ವೇಗದಲ್ಲಿ ದಿನಕ್ಕೆ ಹದಿನೈದು ಸಲ ಭೂಮಿಯನ್ನು ಸುತ್ತುತ್ತ ಗ್ರಹ, ನಕ್ಷತ್ರ, ನೀಹಾರಿಕೆ, ಕಪ್ಪುಕುಳಿ, ಕ್ಷುದ್ರಗ್ರಹ, ಸೂಪರ್‌ನೋವಾ, ಗೆಲಾಕ್ಸಿಗಳ ಸ್ಪಷ್ಟ ಚಿತ್ರಗಳ ಜೊತೆ ಅನಂತ ವಿಶ್ವದ, ಅನೂಹ್ಯ ಮಾಹಿತಿಯನ್ನು ಮೊಗೆದು ಸುರಿಯುತ್ತಿದ್ದ ಹಬಲ್‍ನ ಒಂದು ಕಂಪ್ಯೂಟರ್‌ನಲ್ಲಿ ತಾಂತ್ರಿಕ ದೋಷ ಉಂಟಾಗಿದೆ. ಹೀಗಾಗಿ, ಸುಮಾರು 25 ದಿನಗಳಿಂದ ಅದರಿಂದ ಯಾವ ಮಾಹಿತಿಯೂ ಭೂಮಿಗೆ ಬಂದಿಲ್ಲ!

ಅದನ್ನು ಜಂಟಿಯಾಗಿ ಕಕ್ಷೆಗೆ ಹಾರಿಸಿದ್ದ ನಾಸಾ ಮತ್ತು ಇಸಾದ (ಯುರೋಪಿಯನ್ ಸ್ಪೇಸ್ ಏಜೆನ್ಸಿ) ವಿಜ್ಞಾನಿಗಳು, ‘ಆತಂಕದ ಅಗತ್ಯವಿಲ್ಲ, ಇಲ್ಲಿಂದಲೇ ಕಂಪ್ಯೂಟರ್‌ ಸರಿಪಡಿಸಿ ಶೀಘ್ರದಲ್ಲಿ ಒಳ್ಳೆಯ ಸುದ್ದಿ ನೀಡುತ್ತೇವೆ’ ಎಂದಿದ್ದರು. ದುರಸ್ತಿಯಾಗದಿದ್ದರೆ, ಇದುವರೆಗೂ ಬಳಕೆಯಾಗದ ಇನ್ನೊಂದು ಕಂಪ್ಯೂಟರ್ ಇದ್ದೇ ಇದೆ ಎಂಬ ವಿಶ್ವಾಸದಲ್ಲಿದ್ದರು. ಆದರೆ ನಾಸಾ ವಿಜ್ಞಾನಿಗಳ ಇತ್ತೀಚಿನ ಹೇಳಿಕೆಯ ಪ್ರಕಾರ, ಬ್ಯಾಕಪ್‍ಗೆ ಇದ್ದ ಎರಡನೆಯ ಕಂಪ್ಯೂಟರ್ ಸಹ ಕೆಲಸ ಮಾಡುತ್ತಿಲ್ಲ!

ಹನ್ನೆರಡು ವರ್ಷಗಳ ಕಾಲ ನಿರ್ಮಾಣಗೊಂಡ, ಖಗೋಳ ವಿಜ್ಞಾನಿ ಸರ್ ಎಡ್ವಿನ್ ಪೋವೆಲ್ ಹಬಲ್‍ ಅವರ ಹೆಸರಿನ ಈ ಖಗೋಳ ದೂರದರ್ಶಕವನ್ನು 1990ರ ಏಪ್ರಿಲ್ 24ರಂದು ಡಿಸ್ಕವರಿ ಬಾಹ್ಯಾಕಾಶ ಶಟಲ್‍ನಲ್ಲಿ ಮೇಲಾಕಾಶಕ್ಕೆ ಯಶಸ್ವಿಯಾಗಿ ಹಾರಿಸಲಾಗಿತ್ತು. ವಿವಿಧ ಗಾತ್ರ, ಶಕ್ತಿಯ ಕ್ಯಾಮೆರಾ, ಮಸೂರ, ಕಕ್ಷೆಯಲ್ಲಿ ಸುತ್ತುವಾಗ ಸ್ಥಿರತೆ ಮತ್ತು ದಿಕ್ಕನ್ನು ಸರಿಯಾಗಿಡುವ ಗೈರೋಸ್ಕೋಪ್‍ಗಳು, ಶಟಲ್ ಮತ್ತು ಕಂಪ್ಯೂಟರ್‌ಗಳಿಗೆ ಶಕ್ತಿ ನೀಡುವ
ಬ್ಯಾಟರಿಗಳೆಲ್ಲ ಅದರಲ್ಲಿವೆ. ದೂರದರ್ಶಕದ ಕಾರ್ಯವನ್ನು ಅಮೆರಿಕದ ಬಾಲ್ಟಿಮೋರ್‌ನ ಸ್ಪೇಸ್ ಟೆಲಿಸ್ಕೋಪ್ ಸೈನ್ಸ್ ಇನ್‌ಸ್ಟಿಟ್ಯೂಟ್‍ನಿಂದ ನಿರ್ವಹಿಸಲಾಗುತ್ತದೆ.ಭೂಮಿಯ ನಡುಗೆರೆಗೆ (ಸಮಭಾಜಕ ರೇಖೆ) 28.5 ಡಿಗ್ರಿ ವಾಲಿಕೊಂಡು, ಭೂಮಿಯನ್ನು 1,63,500 ಸಲ ಸುತ್ತಿ, ಇದುವರೆಗೆ 640 ಕೋಟಿ ಕಿಲೊ ಮೀಟರ್ ದೂರ ಕ್ರಮಿಸಿ 45 ಸಾವಿರಕ್ಕೂ ಹೆಚ್ಚು ಆಕಾಶಕಾಯಗಳನ್ನು ಹದಿನೈದು ಲಕ್ಷ ಸಲ ವೀಕ್ಷಿಸಿ, 160 ಟೆರಾಬೈಟ್‍ನಷ್ಟು ದತ್ತಾಂಶವನ್ನು ಅದು ಭೂಮಿಗೆ ರವಾನಿಸಿದೆ. ವಿಶ್ವದ ವಯಸ್ಸು, ವಿಸ್ತರಣೆ, ನಮ್ಮ ಗೆಲಾಕ್ಸಿಯ ತೂಕವನ್ನು ನಿರ್ಧರಿಸುವಲ್ಲಿ ಅತ್ಯಂತ ಮಹತ್ವದ ಮಾಹಿತಿ ನೀಡಿದೆ. ಪ್ರತೀ ತಿಂಗಳೂ 80 ಗಿಗಾಬೈಟ್‍ಗಳಷ್ಟು ಡೇಟಾ ಪಡೆಯುತ್ತಿದ್ದ ವಿಜ್ಞಾನಿಗಳು 16,000 ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.

ADVERTISEMENT

ಟೆಲಿಸ್ಕೋಪ್ ಹಾಳಾಗುತ್ತಿರುವುದು ಇದೇ ಮೊದಲೇನಲ್ಲ. ಉಡಾವಣೆಗೊಂಡ ದಿನದಿಂದ ಇಲ್ಲಿಯವರೆಗೆ ಐದು ಸಲ ದುರಸ್ತಿ ಮಾಡಲಾಗಿದೆ. ಮೂರು ವರ್ಷಗಳಿಗೊಮ್ಮೆ ಶಟಲ್ ಕಳುಹಿಸಿ ಹಾಳಾದ ಭಾಗವನ್ನು ಸರಿಪಡಿಸುವುದು, ಇಲ್ಲವೆ ಹೊಸದನ್ನು ಹಾಕುವುದು ನಡೆದೇ ಇದೆ. ಮೊದಲ ದುರಸ್ತಿ ಕಾರ್ಯ ನಡೆದದ್ದು 1993ರಲ್ಲಿ. ಅದರ ನಿಮ್ನ ಕನ್ನಡಿ (Concave Mirror) ದೋಷಪೂರಿತವಾಗಿದ್ದರಿಂದ, ಹಾರಿದ ನಾಲ್ಕೇ ವಾರಗಳಿಗೆ ಅದು ಕಳಿಸಿದ ಚಿತ್ರಗಳೆಲ್ಲ ಕಲೆಸಿದ ಮುದ್ದೆಯಂತಾಗಿದ್ದವು. ವೈಡ್ ಫೀಲ್ಡ್ ಕ್ಯಾಮೆರಾ ತೆಗೆದ ಚಿತ್ರಗಳಲ್ಲಿ ಅನಗತ್ಯ ಬೆಳಕಿನ ಸೆಳಕು ಕಾಣಿಸುತ್ತಿತ್ತು. ಅಂದಿನ ಕಾಲಕ್ಕೇ 200 ಕೋಟಿ ಡಾಲರ್ ವೆಚ್ಚದಲ್ಲಿ ತಯಾರಾಗಿದ್ದ ಹಬಲ್‍ನ ಕುರಿತು ಸಿಕ್ಕ ಸಿಕ್ಕಲ್ಲೆಲ್ಲ ಲೇವಡಿ ಶುರುವಾಗಿತ್ತು. ಮಹತ್ವಾಕಾಂಕ್ಷಿ ಯೋಜನೆಯನ್ನು ‘ಮಿಷನ್ ಇಂಪಾಸಿಬಲ್’, ‘ಆಸ್ಟ್ರಾನಾಮಿಕಲ್ ಎರರ್’ ಎಂದೆಲ್ಲ ಟೀಕಿಸಲಾಗಿತ್ತು.

ಶಟಲ್‍ನಲ್ಲಿ ಗಗನಯಾತ್ರಿಗಳನ್ನು ಕಳುಹಿಸಿ ಹತ್ತು ದಿನಗಳ ಕಾಲ ಸರಿಪಡಿಸಿದ ಮೇಲೆ ಬಂದ ಚಿತ್ರಗಳು ಅತ್ಯುತ್ತಮ ಗುಣಮಟ್ಟ ಹೊಂದಿದ್ದವು. ಹದಿನೆಂಟು ವರ್ಷಗಳ ಹಿಂದೆ ಸೌರಫಲಕ ಹಾಳಾದಾಗ ಅಮೆರಿಕವು ಕೊಲಂಬಿಯಾ ಶಟ್ಲ್ ನೌಕೆಯನ್ನು ಕಳಿಸಿ ಹೊಸ ಫಲಕವನ್ನು ಜೋಡಿಸಿತ್ತು. ನಾಲ್ಕು ಗೈರೋಸ್ಕೋಪ್‌ಗಳನ್ನು ದುರಸ್ತಿ ಮಾಡಲಾಗಿತ್ತು. 2009ರಲ್ಲಿ ಮಾಡಿದ ಕೊನೆಯ ದುರಸ್ತಿಯಲ್ಲಿ ಕಾಸ್ಮಿಕ್ ಆರಿಜಿನ್ಸ್ ಸ್ಪೆಕ್ಟ್ರೊಗ್ರಾಫ್‌, 3ನೆಯ ವೈಡ್ ಫೀಲ್ಡ್ ಕ್ಯಾಮೆರಾ, ಟೆಲಿಸ್ಕೋಪ್ ಇಮೇಜಿಂಗ್ ಸ್ಪೆಕ್ಟ್ರೊಗ್ರಾಫ್‌ ಮತ್ತು ಸುಧಾರಿತ ಸರ್ವೆ ಕ್ಯಾಮೆರಾಗಳನ್ನು ಕಕ್ಷೆಯಲ್ಲೇ ಅಳವಡಿಸಲಾಗಿತ್ತು.

3 ಸಿಪಿಯುಗಳನ್ನು ಹೊಂದಿರುವ, 40 ವರ್ಷಗಳಷ್ಟು ಹಳೆಯ ಕಂಪ್ಯೂಟರ್‌ಗಳು 1.25 ಮೆಗಾಹರ್ಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದವು. 1999ರಲ್ಲಿ 25 ಮೆಗಾಹರ್ಟ್ಸ್‌ ಪ್ರೋಸೆಸರ್‌ ಅನ್ನು ಅಳವಡಿಸಿದ ನಂತರ ಕಂಪ್ಯೂಟರ್‌ನ ವೇಗ 20 ಪಟ್ಟು ಹೆಚ್ಚಾಗಿತ್ತು ಮತ್ತು ಮೆಮೊರಿ 6 ಪಟ್ಟು ವೃದ್ಧಿಸಿತ್ತು. ಈಗ ಸಮಸ್ಯೆ ಉದ್ಭವಿಸಿರುವುದು ಒಂದು ಮೆಮೊರಿ ಯುನಿಟ್‍ನಲ್ಲಿ. ಉಳಿದೆರಡು ಮೆಮೊರಿ ಯುನಿಟ್‍ಗಳಿಂದ ಕೆಲಸ ಮುಂದುವರಿಸುವ ಪ್ರಯತ್ನ ನಡೆಯುತ್ತಿದೆ. ಜೊತೆಗೆ ಬ್ಯಾಕಪ್‍ಗಾಗಿ ಇರುವ ಇನ್ನೊಂದು ಪೇಲೋಡ್ ಕಂಪ್ಯೂಟರ್‌ ಅನ್ನು ಆ್ಯಕ್ಟಿವೇಟ್ ಮಾಡುವ ಪ್ರಯತ್ನವೂ ವಿಫಲವಾಗಿದೆ.

ಇಡೀ ದೂರದರ್ಶಕವನ್ನು ನಿಯಂತ್ರಿಸುವ ಎರಡೂ ಕಂಪ್ಯೂಟರ್‌ಗಳು ಕೆಲಸ ನಿಲ್ಲಿಸಿರುವುದು ವಿಜ್ಞಾನಿಗಳಲ್ಲಿ ತೀವ್ರ ಆತಂಕ ಹುಟ್ಟಿಸಿದೆ. ಸದ್ಯಕ್ಕೆ ಟೆಲಿಸ್ಕೋಪ್ ಯಾವ ಕೆಲಸವನ್ನೂ ಮಾಡದೆ ಸೇಫ್ ಮೋಡ್‍ನಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.