ADVERTISEMENT

ಸಂಗತ: ಪರಿಸರ ತನ್ನನ್ನು ರಕ್ಷಿಸಿಕೊಳ್ಳಲಿ!

ಪರಿಸರದ್ರೋಹಿ ಆಗದಿರೋಣ, ಸಹಜವಾಗಿ ಬದುಕೋಣ

​ಪ್ರಜಾವಾಣಿ ವಾರ್ತೆ
Published 8 ಜೂನ್ 2021, 19:30 IST
Last Updated 8 ಜೂನ್ 2021, 19:30 IST
ಪರಿಸರ
ಪರಿಸರ   

ಪರಿಸರ ದಿನವನ್ನು ನಾವು ತುಂಬಾ ವಿಚಿತ್ರವಾಗಿ ಆಚರಿಸುತ್ತೇವೆ, ಈ ಕುರಿತು ಅನೇಕ ಜೋಕುಗಳು, ಟ್ರೋಲುಗಳು ಹುಟ್ಟಿಕೊಳ್ಳುವಷ್ಟು. ಆದರೆ ಈ ವರ್ಷ ಮರಗಳ ಮಹತ್ವವನ್ನು ಮನುಷ್ಯ ಕೊಂಚ ಅರಿತುಕೊಂಡಿದ್ದಾನೆ. ಲಾಕ್‌ಡೌನ್ ಹೊತ್ತಿನಲ್ಲಿ ಏಕಾಗ್ರತೆಯಿಂದ ಆಡುವ ಆಟವೆಂದರೆ ಕೇವಲ ‘ಉಸಿರಾಟ’!

ಆಕ್ಸಿಜನ್ ಪೂರೈಕೆ ಇಲ್ಲದ ಕಾರಣದಿಂದ ದೇಶದಲ್ಲಿ ಅನೇಕರು ಸಾವನ್ನಪ್ಪಿದ್ದಾರೆ. ಜಾಗತಿಕ ತಾಪಮಾನ ಹೆಚ್ಚುತ್ತಲೇ ಇದೆ. ಬೆಂಗಳೂರಿನಂತಹ ಗಾರ್ಡನ್ ಸಿಟಿಯು ಗಾರ್ಬೇಜ್ ಸಿಟಿಯಾಗಿದೆ. ಅಗತ್ಯಕ್ಕಿಂತ ಹೆಚ್ಚು ಬಳಸಲಾಗುವ ವಾಹನಗಳು, ಜಂಕ್‌ಫುಡ್, ಪ್ಲಾಸ್ಟಿಕ್, ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ, ನಿತ್ಯ ವಿಷದೌತಣ ಸಾಗಿದೆ.

ತಂತ್ರಜ್ಞಾನದ ಬಳಕೆಯ ಅಪಾಯ ಅರಿತ ಚೀನಾ, ಜಪಾನ್, ಜರ್ಮನಿ ಮತ್ತು ಅಮೆರಿಕದಂತಹ ರಾಷ್ಟ್ರಗಳು ನಿರಂತರ ಪರಿಸರ ಪಾಠ ಮಾಡುತ್ತವೆ. ಆದರೆ ನಮ್ಮಲ್ಲಿ ಗಿಡ ನೆಡುವ, ಬೆಳೆಸುವ ಪಾಠ ಕೇವಲ ಪರಿಸರ ದಿನಾಚರಣೆಗೆ ಮೀಸಲಾಗಿದೆ.

ADVERTISEMENT

ಜಪಾನ್ ವಿದ್ಯಾರ್ಥಿಗಳಿಗೆ ಸ್ವಯಂ ಶಿಸ್ತು ಬದುಕಿನ ಅವಿಭಾಜ್ಯ ಅಂಗ. ಶಾಲೆಗಳಲ್ಲಿ ಗುಡಿಸಲು, ಶೌಚಾಲಯ ಸ್ವಚ್ಛ ಮಾಡಲು ಆಳುಗಳು ಇರುವುದಿಲ್ಲ. ಮಕ್ಕಳು ಖುದ್ದಾಗಿ ಸ್ವಚ್ಛಗೊಳಿಸುತ್ತಾರೆ. ಅದು ಅವರ ನೈತಿಕ ಪಾಠ.

ವಿದೇಶಕ್ಕೆ ಹೋಗಿ ಬರುವವರಿಗೆ ಅಲ್ಲಿನ ಸ್ವಚ್ಛತೆಯ ಮಹತ್ವ ಅರ್ಥವಾದರೂ ಭಾರತಕ್ಕೆ ಬಂದ ಕೂಡಲೇ ಮರೆತುಬಿಡುತ್ತಾರೆ. ಹೊರಗಡೆ ಹೊರಟಾಗ ಕಸ ಒಗೆಯಲು ಕೊರಳಿಗೆ ಬ್ಯಾಗು ನೇತಾಡಿಸಿಕೊಂಡು ವಿದೇಶಿಗರು ತಿರುಗುತ್ತಾರೆ. ಆದರೆ ನಮ್ಮಲ್ಲಿ ಹೊರಗೆ ಹೋಗಿ ಮನೆಯಲ್ಲಿದ್ದ ಕಸ ಚೆಲ್ಲಿ ಬರುತ್ತಾರೆ.

ನೆಲಕ್ಕೆ ಕ್ಯಾಕರಿಸಿ ಉಗುಳುವ ದೃಶ್ಯ ಭಾರತದಲ್ಲಿ ಸಾಮಾನ್ಯ. ಹಾಗೆ ನೋಡಿದರೆ, ನಮ್ಮ ಪುರಾತನರು ಉಗುಳುವುದು ಅನಾರೋಗ್ಯಕರ ಎಂದು ಹೇಳಿದ್ದಾರೆ. ‘ಉಗುಳಿ ಉಗುಳಿ ರೋಗ, ಹಾಡಿ ಹಾಡಿ ರಾಗ’ ಎಂಬ ನಾಣ್ಣುಡಿಯೇ ಸಾಕ್ಷಿ.

ಗ್ರಾಮೀಣ ಭಾಗದಲ್ಲಿ ಹೊರಗಿನಿಂದ ಬಂದ ಅತಿಥಿಗಳಿಗೆ ಕೈ ಕಾಲು ತೊಳೆಸಿ ತಿನ್ನಲು ಬೆಲ್ಲ ಕೊಡುತ್ತಿದ್ದರು. ಹಾಗೆ ನಡೆದುಕೊಳ್ಳುವುದು ಅನಾಗರಿಕತೆ ಎಂದು ನಂಬಿಸಿದ ಬ್ರಿಟಿಷರು, ಮನೆ ತುಂಬಾ ಬೂಟು ಹಾಕಿಕೊಂಡು ಓಡಾಡುವ ಸಂಸ್ಕೃತಿ ಕಲಿಸಿದರು. ಇಂಗ್ಲೆಂಡ್ ದೇಶದಲ್ಲಿ ವಿಪರೀತ ಚಳಿ. ಅದಕ್ಕೆ ತಕ್ಕಂತೆ ಅವರು ಇರುತ್ತಾರೆ. ಅದೇ ಅನುಕರಣೆ ನಮಗೆ ಸರಿಹೊಂದುವುದಿಲ್ಲ. ಭಾರತದ
ವಾತಾವರಣದಲ್ಲಿ ಮನೆಯಲ್ಲಿ ಚಪ್ಪಲಿ ಹಾಕಿಕೊಂಡು ಓಡಾಡುವುದು ಅವೈಜ್ಞಾನಿಕ.

ಉಡುಗೆ, ತೊಡುಗೆಗಳು ಆಯಾ ದೇಶದ ಹವಾಮಾನಕ್ಕೆ ಸರಿ ಹೊಂದುವಂತೆ ಇರುತ್ತವೆ. ಮೈ ಬೆಚ್ಚಗೆ ಇರಲಿ ಎಂಬ ಕಾರಣದಿಂದ ಬಿಗಿ‌ ಉಡುಪುಗಳನ್ನು ಧರಿಸುತ್ತಾರೆ. ನಮ್ಮ ದೇಶದ ಉಷ್ಣತೆಗೆ ಬಿಗಿ ಉಡುಪು ಹೊಂದುವುದಿಲ್ಲ. ನಾವು ವಿದ್ಯಾರ್ಥಿಗಳಾಗಿದ್ದಾಗ ಬಿಗಿ ಕಾಚ ಹಾಕಿಕೊಳ್ಳುವುದು ಆ ಕಾಲದ ಟ್ರೆಂಡ್ ಆಗಿತ್ತು. ಅನೇಕ ವಿದ್ಯಾರ್ಥಿಗಳು ತುರಿಕೆ ಮತ್ತು ಫಂಗಸ್ ಸೋಂಕಿನಿಂದ ಬಳಲುತ್ತಿದ್ದರು. ಆಗ ಪರೀಕ್ಷೆ ಮಾಡಿದ ವೈದ್ಯರು, ‘ಹಿಂಗ ಬಿಗಿ ಚಡ್ಡಿ ಹಕ್ಕೊಂಡ್ರ ಒಳಗಿನ ಅಂಗಾಂಗಗಳು ಕೊಳತು ಹೋಗುತ್ತವೆ...’ ಎಂದು ಹೆದರಿಸಿ, ಸಡಿಲ ಒಳ ಉಡುಪಿನ ಮಹತ್ವ ತಿಳಿಸಿದ್ದರು. ಇಂತಹ ಸಾವಿರಾರು ಉದಾಹರಣೆಗಳನ್ನು ನಾವು ನಿತ್ಯ ಬದುಕಿನಲ್ಲಿ ಕಾಣಬಹುದು.

ಆರೋಗ್ಯ ಮತ್ತು ಪರಿಸರ ಹಾಳಾಗಲು ಅನಗತ್ಯ ಮೊಪೆಡ್ ಬಳಕೆ ಮುಖ್ಯ ಕಾರಣ. ನಾನು ಪ್ರಾಧ್ಯಾಪಕ ನಾದ ಹೊಸತರಲ್ಲಿ ಸೈಕಲ್ ತುಳಿದುಕೊಂಡು ಕಾಲೇಜಿಗೆ ಹೋಗುತ್ತಿದ್ದೆ. ಕೆಲವು ವಿದ್ಯಾರ್ಥಿಗಳು ‘ಸರ್ ನಿಮ್ಮ ಸೂಟು, ಬೂಟು ಮತ್ತು ಕಪ್ಪು ಕನ್ನಡಕಕ್ಕೆ ಸೈಕಲ್ ಸವಾರಿ ಚಂದ ಕಾಣೋದಿಲ್ಲ’ ಎಂದು ನೇರವಾಗಿ ಹೇಳಿದ್ದರು. ಅದಕ್ಕೆ ಕಾರಣ ಬಹುಪಾಲು ಶ್ರೀಮಂತರ ಮಕ್ಕಳು ಕಾಲೇಜಿಗೆ ಲೂನಾ, ಮೊಪೆಡ್‌ನಲ್ಲಿ ಬರುತ್ತಿದ್ದರು.

ಈಗ ಜಿಮ್ಮಿಗೆ ಹೋಗಿ ಸೈಕಲ್ ತುಳಿದು ಬೆವರಿಳಿಸಲು ಸಾವಿರಾರು ರೂಪಾಯಿ ಫೀ ತುಂಬುತ್ತಾರೆ. ಆದರೆ ಜಿಮ್ಮಿಗೆ ಹೋಗಲು ಬೈಕ್, ಕಾರು ಬಳಸುವುದು ಆಧುನಿಕ ಬದುಕಿನ ವಿಪರ್ಯಾಸ‌.

ಚೀನಾವು ಸೈಕಲ್ ಬಳಸಲು ಭಿನ್ನ ರಸ್ತೆ ನಿರ್ಮಿಸಿ, ನೆರಳು ನೀಡಲು ಸಾಲು ಸಾಲು ಮರಗಳನ್ನು ಬೆಳೆಸಿದೆ. ನೆರಳಿನಲ್ಲಿ ಸೈಕಲ್ ತುಳಿದುಕೊಂಡು ಹೋಗುವುದು ಆರೋಗ್ಯ ರಕ್ಷಣೆಯ ಭಾಗವಾಗಿದೆ.

ಒಂದು ಕಡೆ ಪೆಟ್ರೋಲ್ ಉಳಿತಾಯದ ಜೊತೆಗೆ ಚೀನಾ, ಜಪಾನಿನ ಆರೋಗ್ಯಕರ ಜೀವನಶೈಲಿ ನಮಗೆ ಮಾದರಿಯಾಗದೆ, ನಮ್ಮದೇ ಆದ ‘ಸೂಡೊ ಅಹಮಿಕೆ’ಯ ಕೃತಕ ಬದುಕಿನ ದಾಸರಾಗಿದ್ದೇವೆ. ಮಕ್ಕಳಿಗೆ ದೊಡ್ಡ ಬೈಕ್, ಬೆಲೆಬಾಳುವ ಮೊಬೈಲ್ ಫೋನ್‌ ಕೊಡಿಸುವುದು ಹುಸಿ ಪ್ರತಿಷ್ಠೆ ಎಂಬ ಅರಿವೇ ಇಲ್ಲದಾಗಿದೆ.

ನಮ್ಮ ದೈಹಿಕ, ಮಾನಸಿಕ ನೆಮ್ಮದಿ ಹಾಳು ಮಾಡುವ ಸಾಧನಗಳ ಅನಗತ್ಯ ಬಳಕೆಯಿಂದ ಪರಿಸರ ದ್ರೋಹಿಗಳಾಗಿದ್ದೇವೆ. ಸಹಜವಾಗಿ ಬದುಕೋಣ ಮತ್ತು ಪರಿಸರ ತನ್ನನ್ನು ತಾನು ರಕ್ಷಣೆ ಮಾಡಿಕೊಳ್ಳಲು ಅವಕಾಶ ನೀಡುವ ದೃಢ ಸಂಕಲ್ಪ ಮಾಡೋಣ.

ಲೇಖಕ: ಪ್ರಾಚಾರ್ಯ, ಕೆ.ವಿ.ಎಸ್‌.ಆರ್. ಕಾಲೇಜು, ಗದಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.