ADVERTISEMENT

ಸಂಗತ: ಹುಲಿರಾಯನಲ್ಲಿದೆ ಮನುಷ್ಯನುಳಿವು!

ಕೋವಿಡ್‌ ವ್ಯಾಧಿಯ ಉಪಟಳ ಹುಲಿಗಳ ಸಂರಕ್ಷಣೆಯ ಹೊಣೆ ಹೆಚ್ಚಿಸಿದೆ

ಬಿಂಡಿಗನವಿಲೆ ಭಗವಾನ್
Published 29 ಜುಲೈ 2021, 1:53 IST
Last Updated 29 ಜುಲೈ 2021, 1:53 IST
   

ಅರವತ್ತರ ದಶಕದಲ್ಲಿ ನಾನು ಮೈಸೂರಿನ ಮಾಧ್ಯಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗಿನ ಪ್ರಸಂಗ. ‘ಧರಣಿ ಮಂಡಲ ಮಧ್ಯದೊಳಗೆ...’ ಪದ್ಯದ ನಡುವೆ ನಮ್ಮ ಕನ್ನಡ ಮಾಸ್ತರರು ‘ನೋಡ್ರಪ್ಪ, ಹುಲಿ ಇಲ್ಲದಿದ್ರೆ ಕುಡಿಯೋಕೆ ನೀರೇ ಸಿಗೋಲ್ಲ’ ಎಂದಾಗ ನಮಗೋ ಬಲು ಅಚ್ಚರಿ. ಎತ್ತಿಂದೆತ್ತಣ ಸಂಬಂಧ ಅಂತ ಗೊಳ್ಳನೆ ನಗು. ‘ಹುಲಿಯ ಬೇಟೆ ಸಸ್ಯಾಹಾರಿ ಪ್ರಾಣಿಗಳು. ಗಿಡ, ಮರ ಬೋಳಾದರೆ ಎಲ್ಲಿಯ ಬಾವಿನಪ್ಪ?’ ಅಂತ ಗುರುಗಳು ಸರಳವಾಗಿ ಒಗಟು ಒಡೆದಿದ್ದರು.

ಕಾಡಿನಲ್ಲಿ ಸಸ್ಯಾಹಾರಿ ಮತ್ತು ಮಾಂಸಾಹಾರಿ ಪ್ರಾಣಿಗಳ ಸಂಖ್ಯೆಯ ಸಮತೋಲನ ನಿರಂತರ ಸಾಗುವ ಅಮೋಘ ವಿದ್ಯಮಾನ. ಅರಣ್ಯವು ಹುಲ್ಲು ಮೇಯುವ ಜೀವಿಗಳ ಜಹಗೀರಾದರೆ, ತೇವ ಹಿಡಿದಿಟ್ಟುಕೊಳ್ಳುವ ಮರ, ಗಿಡಗಳು ನಾಪತ್ತೆ. ಹೇಳಿ ಕೇಳಿ ಅರಣ್ಯಗಳು ಜಲಾನಯನ ಪ್ರದೇಶಗಳು. ಹಸಿರ ಸಮೃದ್ಧಿಗೆ ಹುಲಿಯ ಕೊಡುಗೆ ಅಮೂಲ್ಯ. ಅದು ಪರೋಕ್ಷವಾದ್ದರಿಂದ ನಮ್ಮ ಗಮನಕ್ಕೆ ‘ವ್ಯಾಘ್ರಮುಖ ಗೋವು’ ಗೌಣ. ಆಕ್ರಮಣಶೀಲತೆ, ರೋಷಾವೇಶದ ಹಿಂದೆ ಅವಿತಿರುವ ಉಪಕಾರ ಗುಣವನ್ನು ಕಾಣಬೇಕಿದೆ.

ಪರಿಸರ ವ್ಯವಸ್ಥೆಯ ಆರೋಗ್ಯ ಮತ್ತು ವೈವಿಧ್ಯ ಕಾಪಾಡುವುದರಲ್ಲಿ ಸಿಂಹ, ಚಿರತೆಗಿಂತ ಹುಲಿಯ ಪಾತ್ರ ಒಂದು ವರಸೆ ಹೆಚ್ಚು ನಿಷ್ಕರ್ಷಕ. ತನ್ನ ‘ಟೈಗರ್’ ಕವನದಲ್ಲಿ ಕವಿ ಬೈರನ್ ‘ಹುಲಿಯ ಅದ್ಭುತ ಕಣ್ಣುಗಳನ್ನು ರಚಿಸಿದ ಆ ಭೂಪ ಯಾರು?’ ಎಂದುಪ್ರಶಂಸಿಸುತ್ತಾನೆ. ತಾಸಿಗೆ 60 ಕಿ.ಮೀ. ವೇಗದ ಓಟಗಾರ, ಅಪ್ರತಿಮ ಈಜುಪಟು ಹುಲಿರಾಯ. ಕಲ್ಲು ಮುಳ್ಳಿರಲಿ, ಸುಡುವ ಬಿಸಿಲಿರಲಿ ಅಥವಾ ಅತ್ಯಂತ ಕಡಿಮೆ ತಾಪವಿರಲಿ, ಎಂತಹ ಸಂಕೀರ್ಣ ಪರಿಸ್ಥಿತಿಗೂ ಒಗ್ಗಿ, ತಾಳಿ ಬಾಳುವ ಜಾಯಮಾನ. ಅದರದು ‘ಆಹಾರ ಜಾಲ’ದ ಶಿಖರಸದೃಶ ಉಸ್ತುವಾರಿ. ಹಾಗಾಗಿ ಕಾಡಿನಲ್ಲಿ ಹುಲಿಗಳಿದ್ದರೆ ಅಲ್ಲಿ ಮಾತ್ರವಲ್ಲ, ನಾಡಿನಲ್ಲೂ ಸುಸ್ಥಿರ ಪರಿಸರ ವಿನ್ಯಾಸ, ಸುಭಿಕ್ಷ. ಹುಲಿಗಳು ನಲಿದಾಡಿದರೆ ಮಣ್ಣು, ಮಳೆ ನೀರಿನ ಪಾಲನೆಯಾಗಿ ನದಿಗಳು ಜೀವಂತವಾಗಿರುತ್ತವೆ. ಹುಲಿಗಳ ಸಂಖ್ಯೆ ಕ್ಷೀಣಿಸಿದರೆ ಬರ, ಬಡತನ, ಕ್ಷಾಮ ಕಟ್ಟಿಟ್ಟ ಬುತ್ತಿ.

ADVERTISEMENT

ಒಂದು ನಿದರ್ಶನವು ನಮಗೆ ಪಾಠವಾಗಬೇಕಿದೆ. ಮಾರಿಷಸ್ ದ್ವೀಪದ ಅರಣ್ಯ ಪ್ರದೇಶಗಳಲ್ಲಿ 1861ರ ತನಕವೂ ಡೋಡೋ ಹಕ್ಕಿಗಳು ವಿರಾಜಮಾನವಾಗಿದ್ದವು. ಅದರ ಮಾಂಸ, ಮೊಟ್ಟೆ ರುಚಿಕರ ವಾಗಿದ್ದೇ ಬಂತು. ಜನ ಎಗ್ಗಿಲ್ಲದಂತೆ ಅವುಗಳ ಬೇಟೆಯಾಡಿದರು. ಡೋಡೋ ನಿರ್ವಂಶವಾಯಿತು. ‘ಅಕೇಷಿಯ’ ಎಂಬ ಗೋಂದು ಸ್ರವಿಸುವ, ವಾಣಿಜ್ಯ ಪ್ರಾಮುಖ್ಯದ ಮರ ಪುನರ್‌ಭವಿಸುವುದು ನಿಂತಿತು ಕೂಡ! ಸಸ್ಯವೋ ಪ್ರಾಣಿಯೋ ಒಂದು ಪ್ರಭೇದದ ಅಳಿವು ಇನ್ನೊಂದನ್ನು ವಿನಾಶಗೊಳಿಸಬಹುದು ಎನ್ನುವುದಕ್ಕೆ ಒಂದು ಪುರಾವೆ ಇತಿಹಾಸದಲ್ಲಿ ಸೇರಿತು.

2010ರಲ್ಲಿ ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಹುಲಿ ಸಂತತಿ ವೃದ್ಧಿ ಕುರಿತ ಅಧಿಕೃತ ಸಮ್ಮೇಳನ ನೆರವೇರಿತು. ಭಾರತವೂ ಸೇರಿದಂತೆ 13 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಅಲ್ಲಿ ನಿರ್ಣಯಿಸಿದಂತೆ ಪ್ರತಿವರ್ಷ ಜುಲೈ 29‘ಅಂತರರಾಷ್ಟ್ರೀಯ ಹುಲಿ ದಿನ’ ಆಚರಣೆ. ಈ ಬಾರಿಯ ಧ್ಯೇಯವಾಕ್ಯ ‘ಹುಲಿಗಳ ಉಳಿವು ನಮ್ಮ ಕೈಯಲ್ಲಿದೆ’.

ಮಹತ್ವದ ಸಂಗತಿಯೆಂದರೆ, ಹುಲಿ ಭಾರತದ ರಾಷ್ಟ್ರೀಯ ಪ್ರಾಣಿ. ನಮ್ಮ ರಿಸರ್ವ್ ಬ್ಯಾಂಕಿನ ಲಾಂಛನದಲ್ಲಿ ತಾಳೆ ಮರ, ಹುಲಿ ಇರುವುದು ಅರ್ಥಪೂರ್ಣ. ಕಾಡನ್ನು ಮಿತಿಮೀರಿ ಕಾಂಕ್ರೀಟಾಗಿಸಿದರೆ ಕೊಟ್ಟಿಗೆಯಲ್ಲಿ ಹುಲಿ, ಚಿರತೆ ಪ್ರತ್ಯಕ್ಷವಾಗುವುವು. ಇದು ಸರಳ ತರ್ಕ.

ಕಾಡೆಂದರೆ ಪ್ರಾಣಿಗಳ ದಟ್ಟಣೆ ಎಂದೇ ನಮ್ಮ ಪರಿಭಾವನೆ. ಇದೆಷ್ಟು ಹುಸಿಯೆನ್ನುವುದು ಭಾರತದ ಸಂದರ್ಭದ ಅಂಕಿ ಅಂಶ ಗಮನಿಸಿದರೆ ತಿಳಿಯುತ್ತದೆ. ನಮ್ಮ ಕಾಡುಗಳಲ್ಲಿ ಮುಖ್ಯವಾಗಿ ಒಟ್ಟು 2,967 ಹುಲಿಗಳು, 27,312 ಆನೆಗಳು, 674 ಸಿಂಹಗಳು, 9,265 ಚಿರತೆಗಳು, 3,700 ಘೇಂಡಾಮೃಗಗಳು ಇವೆ. ಅರಣ್ಯನಾಶದಿಂದ ಹುಲಿಗಳ ಶೇ 93ರಷ್ಟು ಆವಾಸ ಕ್ಷಯಿಸಿದೆ. ಹುಲಿಯೊಂದಿಗೆ ಮನುಷ್ಯ ಪೈಪೋಟಿಗಿಳಿದರೆ ಮನುಷ್ಯನಿಗಾಗುವ ನಷ್ಟವೆ ಹೆಚ್ಚು. ಅಂದಹಾಗೆ ಪರಿಸರ ಮಾಲಿನ್ಯದ ದುಷ್ಫಲವಾದ ಸಾಗರ ಮಟ್ಟ ಏರಿಕೆಯಿಂದಲೂ ಹುಲಿಗಳ ಸಂಖ್ಯೆ ಕಡಿಮೆಯಾದೀತು. ಕೋವಿಡ್ ಖಂಡಾಂತರವ್ಯಾಧಿಯ ಉಪಟಳ ಹುಲಿಗಳ ಸಂರಕ್ಷಣೆಯ ಹೊಣೆ ಹೆಚ್ಚಿಸಿದೆ.

ಪ್ರಾಣಿ ಸಂಗ್ರಹಾಲಯದ ಬಗೆಗಿನ ‘ಪ್ರಾಣಿಗಳು ಮನುಷ್ಯರ ವರ್ತನೆ ಅಭ್ಯಸಿಸಲು ಮಾಡಿರುವ ಏರ್ಪಾಡು’ ಚಟಾಕಿಯು ನಗೆಗಿಂತಲೂ ನಾವು ವಹಿಸ ಬೇಕಾದ ಶಿಸ್ತನ್ನೇ ಬಿಂಬಿಸುತ್ತದೆ. ಮೃಗಾಲಯದ ಬೋನಿನಲ್ಲಿ ಹುಲಿಗಳ ಬಂಧನವೇಕೆ? ಬದಲಿಗೆ ಪಕ್ಷಿಧಾಮಗಳು, ನೈಸರ್ಗಿಕ ಜಲಾಶಯಗಳಿಗೆ ಹೊಂದಿ ಕೊಂಡಂತೆ ಸುರಕ್ಷಿತವಾಗಿ ಅವಕ್ಕೆ ತಾಣಗಳನ್ನು ಕಲ್ಪಿಸು ವುದು ಲೇಸು. ಹುಲಿಗಳು ವಿಶಾಲ, ನಿರಾಳ ಸ್ಥಳಇಷ್ಟಪಡುತ್ತವೆ. ಎಷ್ಟಾದರೂ ಮನುಷ್ಯನ ಭಯವಿಲ್ಲದ ಬಿಡುಬೀಸಾದ ವಾತಾವರಣ!

ಹುಲಿಯ ತುಪ್ಪಳ, ಚರ್ಮ, ಮೂಳೆ, ಉಗುರು, ಕೂದಲಿಗಾಗಿ ಹುಲಿ ಬೇಟೆಯಾಡುವವರನ್ನು ಇನ್ನಷ್ಟು ಉಗ್ರವಾದ ಶಿಕ್ಷೆಗೆ ಗುರಿಪಡಿಸುವ ಕಾನೂನು ಬರಬೇಕಿದೆ. ಸಾರ್ವಜನಿಕರು ಅವುಗಳ ಖರೀದಿ, ಮಾರಾಟವನ್ನು ಉತ್ತೇಜಿಸಬಾರದು. ವಿನಾಕಾರಣ ನರಭಕ್ಷಕ ಎಂದು ಆರೋಪಿಸಿ ಗುಂಡಿಕ್ಕಿ ಹುಲಿಗಳನ್ನು ಕೊಂದ ಪ್ರಸಂಗಗಳಿವೆ. ಮೂಕಪ್ರಾಣಿಗಳು ಮನುಷ್ಯನ ಪ್ರೀತಿ, ವಿಶ್ವಾಸವನ್ನಲ್ಲದೆ ಬೇರೆ ಯಾವುದನ್ನು ನೆಚ್ಚಬೇಕು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.