ADVERTISEMENT

ಸಂಗತ | ಶಿಕ್ಷಣ ನೀತಿ: ಅಪನಂಬಿಕೆ ದೂರವಾಗಲಿ

ದೇಶದ ಶೈಕ್ಷಣಿಕ ದಿಕ್ಕನ್ನೇ ಪರಿವರ್ತಿಸಲು ಸಮರ್ಥವಾಗಿದೆ ಹೊಸ ಶಿಕ್ಷಣ ನೀತಿ

ಡಾ.ರೋಹಿಣಾಕ್ಷ ಶಿರ್ಲಾಲು
Published 15 ಆಗಸ್ಟ್ 2021, 19:45 IST
Last Updated 15 ಆಗಸ್ಟ್ 2021, 19:45 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದಲ್ಲಿ ರಾಜ್ಯ ಸರ್ಕಾರ ಈಗಾಗಲೇ ಕಾರ್ಯಪ್ರವೃತ್ತವಾಗಿರುವಾಗ, ಹಿರಿಯ ಸಾಹಿತಿ ಎಸ್.ಜಿ.ಸಿದ್ಧರಾಮಯ್ಯ ಅವರು ‘ಶಿಕ್ಷಣ ನೀತಿ: ಒಂದು ಚಿಂತನೆ’ ಎಂಬ ಲೇಖನದಲ್ಲಿ (ಪ್ರ.ವಾ., ಆ. 11) ಶಿಕ್ಷಣ ನೀತಿಯನ್ನು ವಿಮರ್ಶಿಸುತ್ತಾ, ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಮುಖ್ಯವಾಗಿ ಈ ನೀತಿಯನ್ನು ಅವರು ಟೀಕಿಸುತ್ತಿರುವುದು, ಇದು ಒಕ್ಕೂಟ ನೀತಿಗೆ ವಿರುದ್ಧದ ನಡೆ ಮತ್ತು ಖಾಸಗೀಕರಣಕ್ಕೆ ಒತ್ತು ಕೊಡುತ್ತದೆ ಎನ್ನುವ ಕಾರಣಕ್ಕಾಗಿ.

ಈ ಪ್ರಶ್ನೆಗಳು ನಮ್ಮ ಶೈಕ್ಷಣಿಕ ಮತ್ತು ವಿದ್ವತ್ ವಲಯದಲ್ಲಿ ಈಗಾಗಲೇ ಚರ್ಚೆಗೆ ಬಂದಿದ್ದು, ಅನೇಕ ಪ್ರಾಜ್ಞರು ಉತ್ತರಗಳನ್ನು ನೀಡಿದ್ದಾರೆ. ಆದರೂ ಮತ್ತೊಮ್ಮೆ ಈ ಅನುಮಾನಗಳನ್ನು ಪರಿಶೀಲಿಸೋಣ.

ಲೇಖಕರು ನಮ್ಮದು ಒಕ್ಕೂಟಗಳ ಭಾರತ, ಬಹುತ್ವ ಭಾರತ ಮತ್ತು ಬಹುಭಾಷಿಕ ಭಾರತ ಎನ್ನುತ್ತಾರೆ. ಆ ಮೂಲಕ ಹೊಸ ಶಿಕ್ಷಣ ನೀತಿಯು ಒಕ್ಕೂಟಕ್ಕೆ ಮತ್ತು ಬಹು ಭಾಷಿಕತೆಗೆ ವಿರುದ್ಧವಿದೆ ಎನ್ನುವ ಧ್ವನಿ ಪರೋಕ್ಷವಾಗಿ ಮೂಡಿದೆ. ವಾಸ್ತವದಲ್ಲಿ ನೀತಿಯು ಒಕ್ಕೂಟಕ್ಕೆ, ಇಲ್ಲಿನ ಬಹುತ್ವಕ್ಕೆ ಬೆಂಬಲವಾಗಿದೆಯೇ ಹೊರತು ಅಪಾಯಕಾರಿಯಾಗಿಲ್ಲ. ಸ್ಥಳೀಯ ಭಾಷೆ, ಸಂಸ್ಕೃತಿ ಇಲ್ಲಿ ಆದ್ಯತೆಯ ವಿಷಯಗಳಾಗಿವೆ.

ADVERTISEMENT

ಇದು ಭಾಷೆಗಳನ್ನು ಹೇರುತ್ತದೆ ಎನ್ನುವುದರಲ್ಲಿಯೂ ಸತ್ಯಾಂಶವಿಲ್ಲ. ಇದು ತ್ರಿಭಾಷಾ ಸೂತ್ರವನ್ನು ಹೇರುತ್ತಿಲ್ಲ. ನೀತಿಯಲ್ಲಿ ಸ್ಪಷ್ಟವಾಗಿ ಹೇಳಿರುವಂತೆ ‘ಮಕ್ಕಳು ಕಲಿಯುವ ಮೂರು ಭಾಷೆಗಳ ಪೈಕಿ ಆಯ್ಕೆ ಆಯಾ ರಾಜ್ಯಗಳ, ಪ್ರದೇಶಗಳ ಹಾಗೂ ಅದಕ್ಕಿಂತ ಮಿಗಿಲಾಗಿ ಕಲಿಯುವ ಮಕ್ಕಳ ಸ್ವಂತ ಆಯ್ಕೆಯೇ ಆಗಿರುತ್ತದೆ. ಆದರೆ ಕಲಿಯುವುದಕ್ಕೆ ಆಯ್ಕೆ ಮಾಡಿಕೊಳ್ಳುವ ಎರಡು ಭಾಷೆಗಳು ಭಾರತೀಯ ಭಾಷೆಗಳೇ ಆಗಿರಬೇಕು’.

‘ರಾಜ್ಯ ಭಾಷೆಗಳ ಪ್ರಸ್ತಾಪವೇ ಬರುವುದಿಲ್ಲ’ ಎನ್ನುವುದು ಕೂಡ ನಿರಾಧಾರ. ಶಾಲಾ ಶಿಕ್ಷಣದ ಭಾಷಾ ನೀತಿಯಲ್ಲಿ ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಯಾವುದೇ ತಾರತಮ್ಯವನ್ನು ತೋರಲಾಗಿಲ್ಲ. ನೀತಿಯ ಘೋಷಿತ ಉದ್ದೇಶವೇ ‘ಸಾಧ್ಯವಾದಷ್ಟು ಮಟ್ಟಿಗೆ ಕಡೇಪಕ್ಷ ಐದನೆಯ ತರಗತಿಯವರೆಗೆ ಅಥವಾ ಅದಕ್ಕಿಂತಲೂ ಮುಂದೆ ಅಂದರೆ ಎಂಟನೆಯ ತರಗತಿ ಯವರೆಗೆ ಅಥವಾ ಅದಕ್ಕಿಂತಲೂ ಮುಂದೆ ಶಿಕ್ಷಣದ ಮಾಧ್ಯಮ ಮನೆಭಾಷೆ, ಮಾತೃಭಾಷೆ, ಸ್ಥಳೀಯಭಾಷೆ, ಪ್ರಾದೇಶಿಕ ಭಾಷೆ ಆಗಿರಬೇಕು. ಇದಾದ ನಂತರ ಸಾಧ್ಯವಾದಷ್ಟು ಮಟ್ಟಿಗೆ ಮನೆಭಾಷೆಯನ್ನು, ಸ್ಥಳೀಯ ಭಾಷೆಯನ್ನು ಒಂದು ಭಾಷೆಯಾಗಿ ಓದುವಂತೆ ಅವಕಾಶ ಇರತಕ್ಕದ್ದು. ಸರ್ಕಾರಿ ಹಾಗೂ ಖಾಸಗಿ ಎರಡೂ ಬಗೆಯ ಶಾಲೆಗಳಲ್ಲಿ ಇದನ್ನು ಜಾರಿಗೆ ತರಲಾಗುತ್ತದೆ’.

ನೀತಿಯ ಮುನ್ನೋಟವನ್ನು ಸಹಬಾಳ್ವೆ, ಸಮಾನತೆಯ ಆಶಯವನ್ನು ಪ್ರತಿನಿಧಿಸುವಂತೆ ರೂಪಿಸಲಾಗಿದೆ ಎನ್ನುವ ಲೇಖಕರು, ನೀತಿಯು ಒಕ್ಕೂಟ ನೀತಿಗೆ ವಿರುದ್ಧವಾಗಿದೆ, ಖಾಸಗೀಕರಣಕ್ಕೆ ಹೆಚ್ಚು ಒತ್ತು ನೀಡಿದೆ ಎನ್ನುತ್ತಾರೆ. ಇದು ಮೊಸರಲ್ಲಿ ಕಲ್ಲು ಹುಡುಕಿದಂತೆ.

ಶಿಕ್ಷಣ ನೀತಿಯು ವಿಕೇಂದ್ರೀಕರಣದ ತತ್ವಕ್ಕೆ ಯಾವ ರೀತಿಯಿಂದಲೂ ವಿರುದ್ಧವಾಗಿಲ್ಲ. ರಾಜ್ಯಗಳ ಜತೆಗೂಡಿ ಕೇಂದ್ರ ಸರ್ಕಾರ ಈ ನೀತಿಯನ್ನು ಅನುಷ್ಠಾನಕ್ಕೆ ತರುತ್ತಿದೆ. ಶಿಕ್ಷಣ ಸಂಸ್ಥೆಗಳ ಮಟ್ಟಿಗೂ ವಿಕೇಂದ್ರೀಕರಣದ ನೀತಿಯನ್ನು ಜಾರಿಗೊಳಿಸುತ್ತದೆ. ನೂರಾರು ಕಾಲೇಜುಗಳಿಗೆ ವಿಶ್ವವಿದ್ಯಾಲಯದ ಮಟ್ಟದಲ್ಲಿ ಯಾವುದೇ ಸ್ವಾತಂತ್ರ್ಯವಿಲ್ಲ. ಆದರೆ ಈ ನೀತಿಯು ಕಾಲೇಜುಗಳಿಗೆ ಹೆಚ್ಚಿನ ಸ್ವಾಯತ್ತತೆ ನೀಡುವುದರ ಬಗ್ಗೆ ಮಾತನಾಡುತ್ತಿದೆ. ಪಠ್ಯಗಳನ್ನು ರೂಪಿಸುವಲ್ಲಿಂದ ಪದವಿ ಪ್ರದಾನದವರೆಗೆ ಈ ಸ್ವಾಯತ್ತತೆ ಇರುತ್ತದೆ.

ಶಿಕ್ಷಣ ಉಳ್ಳವರಿಗೊಂದು, ಬಡವರಿಗೊಂದು ಎಂಬಂತೆ ಆಗುತ್ತಿರುವುದರ ಬಗ್ಗೆ ಲೇಖನ ಪ್ರಸ್ತಾಪಿಸಿದೆ. ಆದರೆ ಈ ಅಂತರವು ಹೊಸ ನೀತಿಯ ಪರಿಣಾಮದ್ದಲ್ಲ. ಯಾಕೆಂದರೆ ಈ ನೀತಿ ಇನ್ನೂ ಪ್ರಾಯೋಗಿಕವಾದ ಅನುಷ್ಠಾನದ ಹಂತದಲ್ಲಿದೆ. ಹಿಂದಿನ ಸರ್ಕಾರಗಳ ಕಾರ್ಯನಿರ್ವಹಣೆಯ ವೈಫಲ್ಯವದು. ಹಿಂದಿನ ಸರ್ಕಾರಗಳು ಸಮಾನ ಶಿಕ್ಷಣಕ್ಕಾಗಿ ನಡೆಸಿದ ಪ್ರಯತ್ನ ಗಳೇನು? ಹೊಸ ನೀತಿಯನ್ನು ಹಳಿಯುವುದಕ್ಕಾಗಿ, ಹಿಂದೆ ಸೃಷ್ಟಿಯಾದ ಅಸಮಾನತೆಯನ್ನು ಎತ್ತಿ ತೋರಿಸುತ್ತಿರುವುದು ನ್ಯಾಯವೇ?

ನೀತಿಯ ‘ಎಚ್’ ವಿಭಾಗದಲ್ಲಿ ಹೇಳಲಾದ ‘ಶಾಲಾ ಕಾರ್ಯನಿರ್ವಹಣೆ ಹಾಗೂ ನಿಯಂತ್ರಣಗಳನ್ನು ಭಿನ್ನ ಭಿನ್ನ ಸಂಸ್ಥೆಗಳ ಮೂಲಕ ಜಾರಿಗೊಳಿಸಲಾಗುವುದು’ ಎನ್ನುವ ಮಾತುಗಳನ್ನು ಲೇಖಕರು ಖಾಸಗೀಕರಣದ ವಶಕ್ಕೆ ಶಿಕ್ಷಣ ವ್ಯವಸ್ಥೆಯನ್ನು ಒಪ್ಪಿಸುವ ಪ್ರಯತ್ನ ಎನ್ನುತ್ತಾರೆ. ಅದಕ್ಕೆ ಆಧಾರ ಏನು? ಶಾಸನಬದ್ಧವಾಗಿ ಸ್ಥಾಪಿತವಾದ ಯಾವುದೇ ಸಂಸ್ಥೆಗಳೂ ಈ ಪ್ರಕ್ರಿಯೆಯ ಭಾಗವೇ ಆಗಬಹುದಲ್ಲವೇ? ಒಂದೆಡೆ ಶಿಕ್ಷಣ ವ್ಯವಸ್ಥೆಯಲ್ಲಿ ಸಮುದಾಯಗಳ ಪಾಲ್ಗೊಳ್ಳುವಿಕೆ ಹೆಚ್ಚಾಗಬೇಕು ಎನ್ನುವವರು ನಾವು. ಆದರೆ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಸಮುದಾಯಗಳ ಭಾಗವಹಿಸುವಿಕೆಯನ್ನು ಮತ್ತು ಸ್ವಯಂಸೇವಾ ಸಂಸ್ಥೆಗಳ ಸ್ವಯಂಸೇವಕರನ್ನು ಭಾಗಿದಾರರನ್ನಾಗಿಸಬಹುದಾದ ಅವಕಾಶವನ್ನು ಅನುಮಾನದಿಂದ ನೋಡಲಾಗುತ್ತಿದೆ.

ನೀತಿಯ ಮೊದಲ ಭಾಗದಲ್ಲಿನ ಒಟ್ಟು ಕಾಳಜಿ, ಆಶಯ ಇರುವುದೇ ಸರ್ಕಾರಿ ವ್ಯವಸ್ಥೆಯನ್ನು ಸುಧಾರಣೆ ಮಾಡುವ ಕುರಿತು. ವಾಸ್ತವದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಈ ಶತಮಾನದಲ್ಲಿ ಜಾರಿಗೊಳ್ಳುತ್ತಿರುವ ಬಹುಮುಖ್ಯ ನೀತಿಗಳಲ್ಲಿ ಒಂದು. ಮುಂದಿನ ದಿನಗಳಲ್ಲಿ ನಮ್ಮ ದೇಶದ ಶೈಕ್ಷಣಿಕ ದಿಕ್ಕನ್ನೇ ಪರಿವರ್ತಿಸಲು ಸಮರ್ಥವಾಗಿದೆ. ಆದರೆ ರಾಜಕೀಯ ಪ್ರೇರಿತ ಆರೋಪಗಳು ನೀತಿಯ ಘನತೆಯನ್ನು ಕುಗ್ಗಿಸುತ್ತವೆ.

ಲೇಖಕ: ಸಹಾಯಕ ಪ್ರಾಧ್ಯಾಪಕ,ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರ್ಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.