ADVERTISEMENT

ಸಂಗತ: ಪಾಷಾಣದ ಪಾಶ ಹರಿಯಬೇಕಿದೆ

ಜೀವಿಗಳು ಮತ್ತು ಪರಿಸರದ ಸ್ವಾಸ್ಥ್ಯದ ಮೇಲಾಗುವ ಗಂಭೀರ ಪರಿಣಾಮಗಳ ಅರಿವಿಲ್ಲದೆಯೋ ಇಲ್ಲಾ ಉಪೇಕ್ಷೆಯಿಂದಲೋ ರಾಸಾಯನಿಕಗಳ ಬಳಕೆ ಹದ ತಪ್ಪಿದೆ

ಡಾ.ಮುರಳೀಧರ ಕಿರಣಕೆರೆ
Published 30 ಆಗಸ್ಟ್ 2021, 19:31 IST
Last Updated 30 ಆಗಸ್ಟ್ 2021, 19:31 IST
   

ಹಸುವಿನ ಚಿಕಿತ್ಸೆಗಾಗಿ ಆ ರೈತನ ಮನೆಯಲ್ಲಿದ್ದೆ. ‘ಸಾರ್, ಈ ಕಡೆ ನಿಲ್ಲಿ. ಅಲ್ಲಿ ಕಟ್ಟಿರುವೆಗಳ ಸಂತೆನೇ ಇದೆ’ ಎಂದು ಎಚ್ಚರಿಸುತ್ತಾ ನಿಂಬೆಯ ಸುವಾಸನೆಯುಳ್ಳ ಗುಲಾಬಿ ವರ್ಣದ ಪೌಡರನ್ನು ಇರುವೆಗಳ ಸಾಲಿನ ಮೇಲೆ ಸುರಿದಿದ್ದ. ‘ಮಳೆಗಾಲ್ದಲ್ಲಿ ಒಂಚೂರು ಬಿಸ್ಲು ಹೊರಟ್ರೆ ಸಾಕು ಹೀಗೆ ಎದ್ದುಬಿಡ್ತವೆ. ಇವುಗಳ ಕಾಟಕ್ಕೆ ಈ ಪುಡಿ ಹೈ ಕ್ಲಾಸ್ ಸಾರ್. ಹಾಕೋದ್ರೊಳಗೆ ನೆಗ್ದು ಬೀಳ್ತವೆ. ರೇಟೂ ಬಾಳಾ ಕಮ್ಮಿ. ಪ್ಯಾಕೇಟಿಗೆ ಬರೇ ಐದು ರೂಪಾಯಿ’ ಎಂದು ಗುಣಗಾನ ಮಾಡುತ್ತಾ ಮತ್ತಷ್ಟು ಎರಚಿ ಸಂತೋಷಪಟ್ಟ. ನಾನು ತಡೆಯುವ ಮುನ್ನವೇ ಅವನ ಒಂದು ವರ್ಷದ ಮೊಮ್ಮಗು ಪುಡಿಯನ್ನು ತುಳಿದುಕೊಂಡು ಅಂಗಳಕ್ಕೋಡಿತು. ಆ ದೃಶ್ಯ ಕಂಡು ಬೆಚ್ಚಿಬಿದ್ದೆ!

‘ಅದು ವಿಷ ಮಾರಾಯ. ಮಗು ಮೆಟ್ಗಂಡು ಓಡಾಡ್ತಿದೆ. ಮೊದ್ಲು ಅದರ ಕಾಲು ತೊಳೆಸು’ ನನ್ನ ಗಾಬರಿಯ ಉದ್ಗಾರಕ್ಕೆ ಅವನದ್ದು ತಣ್ಣನೆ ಪ್ರತಿಕ್ರಿಯೆ: ‘ಇಲ್ಲ ಸಾರ್, ಈ ಪುಡಿ ಇರುವೆಗಳಿಗೆ ಮಾತ್ರ ವಿಷ. ಮಕ್ಳು ಮರಿಗೆ ಏನೂ ಆಗಲ್ಲ’. ಕೀಟನಾಶಕ ರಾಸಾಯನಿಕಗಳ ಬಗ್ಗೆ ಕನಿಷ್ಠ ತಿಳಿವಳಿಕೆಯೂ ಇಲ್ಲದವನಿಗೆ ಸಂಭವನೀಯ ಅಪಾಯಗಳ ಬಗ್ಗೆ ತಿಳಿಸಿ ಹೇಳಿದೆ. ಆ ಕ್ಷಣದಲ್ಲಿ ಎಲ್ಲವೂ ಅರ್ಥವಾದಂತೆ ತಲೆಯಾಡಿಸಿದರೂ ಬಹುಜನರ ಆಯ್ಕೆಯ ಈ ಸುಲಭದ ದಾರಿಯನ್ನು ಬಿಡುತ್ತಾನೆಂಬ ನಂಬಿಕೆ ಮೂಡಿಸುವಂತಿರಲಿಲ್ಲ ಅವನ ಚರ್ಯೆ.

ಇದು, ಒಂದು ಮನೆಯ ಕತೆ ಖಂಡಿತಾ ಅಲ್ಲ. ಹಳ್ಳಿ ಪಟ್ಟಣಗಳ ಭೇದವಿಲ್ಲದೆ ಎಲ್ಲೆಡೆಯೂ ಕಾಣಸಿಗುವುದು ಇಂಥದ್ದೇ ಆತಂಕಕಾರಿ ದೃಶ್ಯಗಳು. ಇರುವೆ, ಜಿರಲೆ, ನೊಣ, ಸೊಳ್ಳೆ, ಚಿಗಟ, ಉಣ್ಣೆಗಳ ಸಂಹಾರಕ್ಕೆ ವಿಷಗಳ ಬಳಕೆ ಎಗ್ಗಿಲ್ಲದೆ ನಡೆಯುತ್ತಿದೆ. ಜನ-ಜಾನುವಾರು, ಪಶು-ಪಕ್ಷಿ, ಜಲಚರ, ಪರಿಸರದ ಸ್ವಾಸ್ಥ್ಯದ ಮೇಲಾಗುವ ಗಂಭೀರ ಪರಿಣಾಮಗಳ ಅರಿವಿಲ್ಲದೆಯೋ ಅಥವಾ ಉಪೇಕ್ಷೆಯಿಂದಲೋ ರಾಸಾಯನಿಕಗಳ ಬಳಕೆ ಹದ ತಪ್ಪಿದೆ.

ADVERTISEMENT

ಹಿತವಾದ ವಾಸನೆ, ಆಕರ್ಷಕ ಬಣ್ಣ, ಕೈಗೆಟುಕುವ ದರ, ಬಳಸಲು ಸುಲಭವೆನಿಸುವ ಬಗೆ ಬಗೆಯ ವಿನ್ಯಾಸ, ಶೀಘ್ರ ಫಲಿತಾಂಶ, ಮೋಡಿಗೊಳಿಸುವ ಜಾಹೀರಾತು... ಧಾರಾಳವಾಗಿ ಉಪಯೋಗಿಸಲು ಇಂಥವೇ ಹತ್ತಾರು ಕಾರಣಗಳು. ಹುಡಿ, ಹರಳು, ಗುಳಿಗೆ, ದ್ರಾವಣ, ಬತ್ತಿ, ಜೆಲ್, ಸ್ಪ್ರೇ, ಕೇಕ್, ಕಾಯಿಲ್, ಚಾಕ್‍ಪೀಸ್‍ಗಳೆಂಬ ದಶಾವತಾರಗಳಲ್ಲಿ ಮೆರೆಯುತ್ತಿರುವ ಕೀಟನಾಶಕ
ಗಳದ್ದು ತಡೆರಹಿತ ಓಟ.

ಕ್ರಿಮಿನಾಶಕಗಳು ಕ್ರಿಮಿ, ಕೀಟಗಳಿಗೆ ಮಾತ್ರ ವಿಷಕಾರಿ; ಮಾನವ, ಪಶುಪಕ್ಷಿಗಳಿಗಲ್ಲ ಎಂಬುದು ಬಹುತೇಕ ಬಳಕೆದಾರರ ಬಲವಾದ ನಂಬಿಕೆ. ಆದರೆ ವಾಸ್ತವ ಹೀಗಿಲ್ಲ. ಈ ರಾಸಾಯನಿಕಗಳೆಲ್ಲಾ ಘೋರ ವಿಷಗಳೇ. ಕ್ರಿಮಿಗಳನ್ನು ಕೊಲ್ಲುವ ಪಾಷಾಣ ಇತರ ಜೀವಿಗಳ ಮೇಲೂ ಪರಿಣಾಮ ಬೀರುವುದೆಂಬುದನ್ನು ಅರಿಯಲು ವಿಜ್ಞಾನವನ್ನು ಆಳವಾಗಿ ಓದಬೇಕೆಂದೇನೂ ಇಲ್ಲ. ಸಾಮಾನ್ಯ ಜ್ಞಾನವಿದ್ದರೆ ಸಾಕು. ಆದರೆ, ನಮ್ಮಲ್ಲಿ ಅನೇಕರಿಗೆ ಈ ಪರಿಯ ಸಾಮಾನ್ಯ ತಿಳಿವಳಿಕೆಯೂ ಇಲ್ಲದಿರುವುದು ನಿಜಕ್ಕೂ ದೊಡ್ಡ ದುರಂತ.

ಕೀಟಗಳ ನಾಶಕ್ಕೆ ಅವುಗಳ ಗಾತ್ರದ ಕಾರಣ ಸಣ್ಣ ಪರಿಮಾಣದ ವಿಷ ಸಾಕು. ಈ ಪ್ರಮಾಣ ಮಾನವ ಸೇರಿದಂತೆ ಇತರ ಪ್ರಾಣಿಗಳ ಮೇಲೆ ಗಂಭೀರ ಪರಿಣಾಮ ಬೀರದಿದ್ದರೂ ನಿರಂತರ ಸಂಪರ್ಕ ಹಲವು ದುಷ್ಪರಿಣಾಮಗಳನ್ನು ತಂದೊಡ್ಡುತ್ತಾ ಸ್ವಾಸ್ಥ್ಯ ಹದಗೆಡಿಸುತ್ತದೆ. ತಲೆನೋವು, ವಾಕರಿಕೆ, ವಾಂತಿ, ಭೇದಿಯಂತಹ ತೊಂದರೆಗಳ ಜೊತೆಗೆ ದೀರ್ಘಾವಧಿ ಯಲ್ಲಿ ನರದೌರ್ಬಲ್ಯ, ಸಂಧಿವಾತ, ಪಾರ್ಶ್ವವಾಯು, ಕ್ಯಾನ್ಸರ್, ಹೃದಯಬೇನೆ, ಸಂತಾನಹೀನತೆ, ಅಂಗವೈಕಲ್ಯದಂತಹ ಹಲವು ಸಮಸ್ಯೆಗಳು ಬದುಕನ್ನು ಭಾರವಾಗಿಸಬಹುದು!

ಪಶುಸಂಗೋಪನಾ ಕ್ಷೇತ್ರದಲ್ಲೂ ರಾಸಾಯನಿಕ ಪೀಡೆನಾಶಕಗಳ ಬಳಕೆ ಯಥೇಚ್ಛವಾಗಿದೆ. ಉಣ್ಣೆ, ಚಿಗಟ, ಹೇನುಗಳ ನಿವಾರಣೆಗೆ ಪದೇ ಪದೇ ವಿಷಕಾರಿ ರಾಸಾಯನಿಕಗಳನ್ನು ಬಳಸಲಾಗುತ್ತಿದೆ. ಜಾನುವಾರುಗಳ ಚರ್ಮದಿಂದ ಹೀರಲ್ಪಡುವ ಈ ರಾಸಾಯನಿಕಗಳು ಅವುಗಳ ಆರೋಗ್ಯಕ್ಕೆ ಹಾನಿ ಮಾಡುವುದಲ್ಲದೆ ಹಾಲು, ಮಾಂಸದ ಮೂಲಕ ಬಳಕೆದಾರರ ದೇಹ ಸೇರಿ ಸಮಸ್ಯೆಗಳ ಸರಪಣಿ
ಮುಂದುವರಿಸುತ್ತವೆ. ಕೊಟ್ಟಿಗೆಯಲ್ಲಿನ ಉರಿನೊಣಗಳ ಹತೋಟಿಗೆ ಕೀಟನಾಶಕ ಸಿಂಪಡಿಸುವುದು, ಜಾನುವಾರುಗಳ ಕೋಡು, ಮೈಮೇಲೆ ಕೀಟನಾಶಕದ ಚಾಕ್ ತುಂಡಿನಿಂದ ಗೀಟುಗಳನ್ನು ಎಳೆಯುವುದು ಈಗ ಸಾಮಾನ್ಯವಾಗಿದೆ. ಇನ್ನು ಇಲಿ, ಹೆಗ್ಗಣಗಳಿಗೆ ಇಟ್ಟ ಪಾಷಾಣವನ್ನು ಆಕಸ್ಮಿಕವಾಗಿ ತಿಂದೋ ಇಲ್ಲಾ ಇದರಿಂದ ಕಲುಷಿತ ನೀರನ್ನು ಕುಡಿದೋ ಸಾವನ್ನಪ್ಪಿದ ಜಾನುವಾರುಗಳು, ನಾಯಿಗಳ ಸಂಖ್ಯೆ ಅಂಕಿ ಅಂಶಗಳಿಗೆ ನಿಲುಕದ್ದು.

ಕಳೆನಾಶಕ, ಕೀಟನಾಶಕಗಳ ಹಾನಿಕರ ಪಾರ್ಶ್ವ ಪರಿಣಾಮಗಳ ಬಗ್ಗೆ ರೈತರಿಗೆ ಅರಿವು ಮೂಡಿಸುವುದು ಸವಾಲಿನ ಕೆಲಸ. ಜಾನುವಾರುಗಳ ಜೊತೆಗೆ ಪರಿಸರದ ಸ್ವಚ್ಛತೆ, ನೈರ್ಮಲ್ಯ ಕಾಪಾಡುವುದು, ರಾಸಾಯನಿಕ ವಿಷಗಳನ್ನು ಅತಿ ಅಗತ್ಯವಿದ್ದಾಗ ಮಾತ್ರ ಸೂಕ್ತ ನಿಗಾದೊಂದಿಗೆ ಮಿತಿಯಲ್ಲಿ ಬಳಸುವುದು, ಸುರಕ್ಷಿತ ಸಾವಯವ ವಸ್ತುಗಳನ್ನು ಬಳಸಿ ಪೀಡೆಗಳನ್ನು ನಿಯಂತ್ರಿಸುವುದು, ಸಸ್ಯಜನ್ಯ ಪದಾರ್ಥಗಳ ಧೂಮ ಹಾಕುವುದು ಸದ್ಯಕ್ಕೆ ನಮ್ಮ ಮುಂದಿರುವ ವಿಷ ದೂರವಿರಿಸುವ ಆಯ್ಕೆಗಳು.

ಹೌದು, ಪಾಷಾಣದ ಪಾಶ ತುಂಡರಿಸಲು ಅರಿವು ಮಾತ್ರವೇ ಪರಿಣಾಮಕಾರಿ ಅಸ್ತ್ರ.

ಲೇಖಕ: ಮುಖ್ಯ ಪಶುವೈದ್ಯಾಧಿಕಾರಿ, ತೀರ್ಥಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.