ADVERTISEMENT

ಸಂಗತ– ಪ್ಲಾಸ್ಟಿಕ್ ವಿಷ: ನವ ಗಂಡಾಂತರ

ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ಲಾಸ್ಟಿಕ್ ಕಣಗಳು ಮಾನವ ದೇಹದ ಜೀವಕೋಶಗಳನ್ನು ಹೇಗೆ ಪರಿವರ್ತಿಸುತ್ತವೆ ಎಂಬುದರ ಬಗ್ಗೆ ಹೆಚ್ಚು ಸಂಶೋಧನೆ ನಡೆಯಬೇಕಾಗಿದೆ

ಡಾ.ಎಂ.ವೆಂಕಟಸ್ವಾಮಿ
Published 20 ಏಪ್ರಿಲ್ 2022, 19:53 IST
Last Updated 20 ಏಪ್ರಿಲ್ 2022, 19:53 IST
.
.   

ಭೂಮಿಯನ್ನೇ ಆವರಿಸಿಕೊಂಡಿರುವ ಪ್ಲಾಸ್ಟಿಕ್ ಮಾಲಿನ್ಯದ ಬಗ್ಗೆ ಎಷ್ಟು ಬರೆದರೂ ಸಾಲದು. ಮಾನವನ ದೇಹದಲ್ಲಿ ಮೊದಲ ಬಾರಿಗೆ ಪತ್ತೆಯಾಗಿರುವ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು ರಕ್ತದ ಮೂಲಕ ದೇಹದಲ್ಲೆಲ್ಲ ಹರಿದಾಡುತ್ತಿರುವುದು ಕಂಡುಬಂದಿದೆ. ಈ ವಿಷಕಾರಿಯಾದ ಕಣಗಳು ಅಂಗಾಂಗಗಳಲ್ಲೇ ನೆಲೆಸಿದರೆ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮಗಳನ್ನು ಬೀರುತ್ತವೆ ಎನ್ನುವುದರ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ವಾಯುಮಾಲಿನ್ಯದ ಕಣಗಳು ಈಗಾಗಲೇ ಮನುಷ್ಯನ ದೇಹ ಹೊಕ್ಕು ಜೀವಕೋಶಗಳಿಗೆ ಹಾನಿ ಮಾಡುತ್ತಾ ಲಕ್ಷಾಂತರ ಜನರ ಸಾವಿಗೆ ಕಾರಣವಾಗಿವೆ. ಇದರ ಜೊತೆಗೆ ಇದೀಗ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳೂ ಸೇರಿಕೊಂಡಿವೆ.

ಎವರೆಸ್ಟ್ ಶಿಖರದಿಂದ ಹಿಡಿದು ಆಳವಾದ ಸಾಗರಗಳವರೆಗೂ ಪ್ಲಾಸ್ಟಿಕ್ ತ್ಯಾಜ್ಯದಿಂದ ಕಲುಷಿತಗೊಂಡಿದ್ದು, ನೀರು, ಗಾಳಿ ಮತ್ತು ಆಹಾರದ ಮೂಲಕ ಪ್ಲಾಸ್ಟಿಕ್ ಸೂಕ್ಷ್ಮ ಕಣಗಳು ದಿನನಿತ್ಯ ಪಕ್ಷಿಪ್ರಾಣಿಗಳು ಹಾಗೂ ಮನುಷ್ಯನ ದೇಹ ಸೇರುತ್ತಿವೆ. ಈ ವಿಷ ಕಣಗಳು ವಯಸ್ಕರು ಮತ್ತು ಶಿಶುಗಳ ಮಲದಲ್ಲಿ ಹೆಚ್ಚಾಗಿ ಕಂಡುಬಂದಿವೆ. ವಿಜ್ಞಾನಿಗಳು 22 ಅನಾಮಧೇಯ ಆರೋಗ್ಯವಂತ ದಾನಿಗಳಿಂದ ರಕ್ತದ ಮಾದರಿ ಸಂಗ್ರಹಿಸಿ ಸಂಶೋಧನೆ ನಡೆಸಿದಾಗ, 17 ಮಾದರಿಗಳಲ್ಲಿ ಪ್ಲಾಸ್ಟಿಕ್ ಸೂಕ್ಷ್ಮ ಕಣಗಳು ಮತ್ತು ಅರ್ಧದಷ್ಟು ಮಾದರಿಗಳಲ್ಲಿ ಪಾಲಿಥಿಲೀನ್ ಟೆರೆಫ್ಥಾಲೇಟ್ (ಪಿಇಟಿ) ಪ್ಲಾಸ್ಟಿಕ್ ಕಂಡುಬಂದಿದೆ. ಪಿಇಟಿ ಅನ್ನು ಸಾಮಾನ್ಯವಾಗಿ ನೀರಿನ ಬಾಟಲಿಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ. ಆಹಾರ ಮತ್ತು ಇತರ ಉತ್ಪನ್ನಗಳ ಪ್ಯಾಕಿಂಗ್‍ನಲ್ಲೂ ಬಳಸಲಾಗುತ್ತದೆ. ಕಾಲು ಭಾಗದಷ್ಟು ರಕ್ತದ ಮಾದರಿಗಳಲ್ಲಿ ಪಾಲಿಥಿಲೀನ್ ಕಂಡುಬಂದಿದ್ದು ಇದನ್ನು ಪ್ಲಾಸ್ಟಿಕ್ ಚೀಲಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.

ವಯಸ್ಕರಿಗೆ ಹೋಲಿಸಿದರೆ ಶಿಶುಗಳ ಮಲದಲ್ಲಿ 10 ಪಟ್ಟು ಹೆಚ್ಚು ಪ್ಲಾಸ್ಟಿಕ್ ಸೂಕ್ಷ್ಮ ಕಣಗಳು ಕಂಡುಬಂದಿವೆ. ಮಕ್ಕಳಿಗೆ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಹಾಲು, ನೀರು, ಟಾನಿಕ್‍ಗಳನ್ನು ಉಣಿಸುವ ಕಾರಣ, ಲಕ್ಷಾಂತರ ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು ಶಿಶುಗಳ ದೇಹ ಸೇರುತ್ತವೆ.

ADVERTISEMENT

ವಿಜ್ಞಾನಿಗಳ ಹಲವು ಗುಂಪುಗಳ ಮೂಲಕ ಈ ಸಂಬಂಧದ ಸಂಶೋಧನೆಯನ್ನು ಇನ್ನಷ್ಟು ತೀವ್ರಗೊಳಿಸಲಾಗಿದೆ ಎಂದು ನೆದರ್‌ಲ್ಯಾಂಡ್ಸ್‌ನ ಪ್ರೊ. ಡಿಕ್ ವೆಥಾಕ್ ಹೇಳಿದ್ದಾರೆ. ರಕ್ತದ ಮಾದರಿ ಸಂಗ್ರಹದ ಸಂದರ್ಭದಲ್ಲಿ ಉಂಟಾಗುವ ಪ್ಲಾಸ್ಟಿಕ್‌ ಮಾಲಿನ್ಯವನ್ನು ತಪ್ಪಿಸಲು ಪ್ರಯೋಗಾಲಯಗಳಲ್ಲಿ ಸ್ಟೀಲ್ ಸಿರಿಂಜ್‌ಗಳು ಮತ್ತು ಗಾಜಿನ ಟ್ಯೂಬ್‍ಗಳನ್ನು ಬಳಸಲಾಗುತ್ತಿದೆ.

‘ಮನುಷ್ಯ ದೇಹದಲ್ಲಿ ಏನಾಗುತ್ತಿದೆ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಸೂಕ್ಷ್ಮ ಪ್ಲಾಸ್ಟಿಕ್ ಕಣಗಳು ದೇಹದಲ್ಲಿಯೇ ಉಳಿದುಕೊಳ್ಳುತ್ತವೆಯೇ? ರಕ್ತ, ಮೆದುಳಿನ ತಡೆಗೋಡೆಗಳನ್ನು ದಾಟಿ ಅಂಗಾಂಗಗಳಲ್ಲಿ ಹಾದುಹೋಗುತ್ತವೆಯೇ? ಇದರಿಂದ ಇನ್ನಷ್ಟು ಹೊಸ ರೋಗಗಳಿಗೆ ಮನುಷ್ಯನ ದೇಹ ಈಡಾಗುತ್ತದೆಯೇ ಅಥವಾ ಈಗಾಗಲೇ ದೇಹದಲ್ಲಿ ಮನೆಮಾಡಿರುವ ರೋಗಗ
ಳನ್ನು ಪ್ರಚೋದಿಸಲು ಕಾರಣವಾಗುತ್ತವೆಯೇ ಎಂಬುದನ್ನು ತುರ್ತಾಗಿ ತಿಳಿದುಕೊಳ್ಳಬೇಕಾದ ಅವಶ್ಯಕತೆ ಇದೆ’ ಎಂದು ಡಿಕ್ ವೆಥಾಕ್ ಹೇಳಿದ್ದಾರೆ.

ಯಾವುದು ಏನೇ ಆಗಲಿ 2040ರ ವೇಳೆಗೆ ಪ್ಲಾಸ್ಟಿಕ್ ಉತ್ಪಾದನೆಯಂತೂ ದ್ವಿಗುಣಗೊಳ್ಳಲಿದೆ ಎಂದು ‘ಚಾರಿಟಿ ಕಾಮನ್ ಸೀಸ್’ ಸ್ಥಾಪಕ ಜೋ ರಾಯ್ಲೆ ಹೇಳಿದ್ದಾರೆ. ಈ ಸಂಸ್ಥೆಯ ಜೊತೆಗೆ ಇನ್ನೂ 80 ಎನ್‍ಜಿಒಗಳ ವಿಜ್ಞಾನಿಗಳು ಮತ್ತು ಯು.ಕೆ. ಜನಪ್ರತಿನಿಧಿಗಳು, ಪ್ಲಾಸ್ಟಿಕ್ ಮಾಲಿನ್ಯವು ಜನರ ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಬಗೆಗಿನ ಸಂಶೋಧನೆಗೆ ಅಗತ್ಯವಾದ ಹಣ ಬಿಡುಗಡೆ ಮಾಡುವಂತೆ ಯು.ಕೆ. ಸರ್ಕಾರವನ್ನು ಕೇಳಿಕೊಂಡಿದ್ದಾರೆ. ಪ್ಲಾಸ್ಟಿಕ್ ಮಾಲಿನ್ಯದಿಂದ ಭ್ರೂಣ ಮತ್ತು ಶಿಶುಗಳ ಮೇಲೆ ಆಗುತ್ತಿರುವ ವ್ಯತಿರಿಕ್ತ ಪರಿಣಾಮಗಳ ಅಧ್ಯಯನಕ್ಕಾಗಿ ಯುರೋಪ್ ಒಕ್ಕೂಟ ಈಗಾಗಲೇ ಧನಸಹಾಯ ಮಾಡುತ್ತಿದೆ.

ಕೆಂಪು ರಕ್ತಕಣಗಳ ಹೊರ ಪೊರೆಗಳಿಗೆ ಪ್ಲಾಸ್ಟಿಕ್ ಕಣಗಳು ಅಂಟಿಕೊಳ್ಳುತ್ತಿರುವುದು ಮತ್ತು ರಕ್ತ ಸಾಗಿಸುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತಿರುವುದು ತಿಳಿದುಬಂದಿದೆ. ಈ ವಿಷ ಪ್ಲಾಸ್ಟಿಕ್ ಕಣಗಳು ಗರ್ಭಿಣಿಯರ ಜರಾಯುಗಳಲ್ಲಿಯೂ ಕಂಡುಬಂದಿವೆ. ಗರ್ಭಿಣಿ ಇಲಿಗಳಲ್ಲಿ ಈ ವಿಷ ಕಣಗಳನ್ನು ಹಾಯಿಸಿದಾಗ ಅವು ಹೃದಯ, ಮಿದುಳು, ಭ್ರೂಣ ಇತರ ಅಂಗಾಂಗಗಳ ಮೂಲಕ ವೇಗವಾಗಿ ಹಾದು
ಹೋಗುವುದು ಕಂಡುಬಂದಿದೆ. ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ಲಾಸ್ಟಿಕ್ ಕಣಗಳು ಮಾನವ ದೇಹದ ಜೀವಕೋಶಗಳನ್ನು ಹೇಗೆ ಪರಿವರ್ತಿಸುತ್ತವೆ ಮತ್ತು ಕ್ಯಾನ್ಸರ್ ರೋಗಕ್ಕೆ ಯಾವ ರೀತಿ ಪ್ರಚೋದಿಸುತ್ತವೆ ಎಂಬುದರ ಬಗ್ಗೆ ಹೆಚ್ಚು ಸಂಶೋಧನೆಗಳನ್ನು ನಡೆಸುವ ಅಗತ್ಯಇದೆ. ಒಟ್ಟಿನಲ್ಲಿ, ಮಾಡಿದ್ದುಣ್ಣೋ ಮಹರಾಯ ಎಂಬಂತೆ ಇನ್ನೊಂದು ಗಂಡಾಂತರ ಈಗ ಮಾನವನ ದೇಹ ಹೊಕ್ಕು ಕುಳಿತಿದೆ.

ಈಗ ನಡೆಯುತ್ತಿರುವ ಉಕ್ರೇನ್-ರಷ್ಯಾ ಯುದ್ಧದಿಂದ ಭೂಮಿ ತಲ್ಲಣಗೊಂಡಿದೆ. ಅಭಿವೃದ್ಧಿ ಹೊಂದಿದ, ಹೊಂದುತ್ತಿರುವ ದೇಶಗಳು ತಮ್ಮ ಜನರಿಗೆ ಅಗತ್ಯ ಆಹಾರ, ನೀರು ಒದಗಿಸಲು ಶಕ್ತವಾಗದಿದ್ದರೂ ಅಣುಬಾಂಬು ಮತ್ತು ಯುದ್ಧ ಸಾಮಗ್ರಿಗಳ ತಯಾರಿಕೆಗೆ ಅಪಾರ ಹಣವನ್ನು ತೊಡಗಿಸುತ್ತಿವೆ. ಭೀಕರ, ವಿಷಕಾರಕ ಅಣುಬಾಂಬುಗಳು ಮತ್ತು ಜೈವಿಕ ಯುದ್ಧ ಸಾಮಗ್ರಿಗಳನ್ನು ಗುಡ್ಡೆ ಹಾಕಿಕೊಂಡಿರುವ ದೇಶಗಳು ಜ್ವಾಲಾಮುಖಿಗಳ ಮೇಲೆ ಕುಳಿತುಕೊಂಡು ಉಸಿರುಬಿಡುತ್ತಿವೆ. ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಆ ಜ್ವಾಲಾಮುಖಿಗಳಿಗೆ ಸ್ವಯಂ ಆಪೋಶನವಾಗುವ ಅರಿವೇ ಅವುಗಳಿಗೆ ಇದ್ದಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.