ADVERTISEMENT

ಸಂಗತ: ಕ್ರೀಡಾ ಅಧ್ಯಯನಕ್ಕೆ ಸಿಗಲಿ ಪ್ರಾಶಸ್ತ್ಯ

ಕ್ರೀಡಾ ತರಬೇತಿಗಾಗಿ ಪ್ರತ್ಯೇಕ ಸುಸಜ್ಜಿತ ವಿದ್ಯಾಲಯಗಳ ಸಂಖ್ಯೆ ಹೆಚ್ಚಲಿ

ಮಾಲತಿ ಪಟ್ಟಣಶೆಟ್ಟಿ
Published 9 ಸೆಪ್ಟೆಂಬರ್ 2021, 23:48 IST
Last Updated 9 ಸೆಪ್ಟೆಂಬರ್ 2021, 23:48 IST
ಸಂಗತ
ಸಂಗತ   

ಜಪಾನಿನ ಟೋಕಿಯೊದಲ್ಲಿ ಇತ್ತೀಚೆಗೆ ಜರುಗಿದ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ಏಳು ಪದಕಗಳನ್ನು ಗೆದ್ದು ತಂದರು. ಪ್ಯಾರಾಲಿಂಪಿಕ್ಸ್‌ನಲ್ಲಿ ನಮ್ಮ ಕ್ರೀಡಾಳುಗಳು 19 ಪದಕಗಳನ್ನು ತಂದು ದಾಖಲೆ ಮೂಡಿಸಿದರು. ಇದನ್ನು ಕಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಭ್ರಮಿಸಿದವು. ಈ ಹಿಂದಿನ ಚಾಳಿಯಂತೆ ಅದನ್ನು ಅವು ಬಳಿಕ ಮರೆತೂಬಿಡಬಹುದು. ಇದು ನಮ್ಮ ಸರ್ಕಾರಗಳು ಕ್ರೀಡೆಗೆ, ಕ್ರೀಡಾಪಟುಗಳಿಗೆ ನೀಡುವ ಖದರು!

ದೂರದೃಷ್ಟಿಯುಳ್ಳ ಯಾವುದೇ ಸರ್ಕಾರ ಹೀಗೆ ಮಾಡುವುದು ಸಾಧ್ಯವಿಲ್ಲ. ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆಗಾಗಿ ನಾವು ಸಿದ್ಧರಾಗಿದ್ದೇವೆ. ಈ ಸುದೀರ್ಘ ಅವಧಿಯಲ್ಲಿ ದೇಶದ ಸರ್ವಾಂಗೀಣ ವಿಕಾಸವಾಗಿದೆಯೇ? ಸಮತೋಲನದ ಮುನ್ನಡೆ ಸಾಧ್ಯವಾಗಿದೆಯೇ ಎಂದು ನಮ್ಮನ್ನು ನಾವು ಕೇಳಿಕೊಂಡಾಗ, ‘ಆಗಿಲ್ಲ’ ಎಂಬ ಉತ್ತರ ಯಾರಿಂದಲಾದರೂ ಸಿಕ್ಕಬಹುದು.

ವಜ್ರ ವೈಢೂರ್ಯ, ಮುತ್ತು ರತ್ನ ಮತ್ತು ಬಂಗಾರದ ನಾಣ್ಯಗಳನ್ನು ಜೀರ್ಣವಾದ ವಸ್ತ್ರದಲ್ಲಿ ಕಟ್ಟಿ ಸುರಕ್ಷಿತವಾಗಿ ಇಡಲು ಹೇಗೆ ಸಾಧ್ಯವಿಲ್ಲವೋ ಹಾಗೇ ಅಶಕ್ತವಾದ ದೇಹವೆಂಬ ದೇಗುಲದಲ್ಲಿ ಜ್ಞಾನದ ದೇವರ ಸ್ಥಾಪನೆಯಾಗಲಾರದು! ಆರೋಗ್ಯವಂತ, ಸಶಕ್ತ ದೇಹದಲ್ಲಿ ಮಾತ್ರ ಲೋಕಜ್ಞಾನ, ಪುಸ್ತಕೀಯ ಜ್ಞಾನ ದೃಢವಾಗಿ ನಿಲ್ಲಬಲ್ಲವು. ಭಾರತೀಯ ಶಿಕ್ಷಣ ನೀತಿಯಲ್ಲಿ ಜ್ಞಾನ ದಾನಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದೆ. ಬೆಳಿಗ್ಗೆಯಿಂದ ಸಂಜೆಯವರೆಗೂ ಪಾಠ ಪ್ರವಚನಗಳಿಗೆ ಕೊಡುವ ಸಮಯದಲ್ಲಿ ವ್ಯಾಯಾಮಕ್ಕೂ ಯೋಗ್ಯವಾದ ಸಮಯ ಕೊಡುತ್ತಿಲ್ಲ ಎಂಬುದು ಅತ್ಯಂತ ವಿಷಾದನೀಯ ಸಂಗತಿ.

ADVERTISEMENT

ಪ್ರಾಥಮಿಕ ಶಾಲೆಗಳಲ್ಲಿ ವಾರದ ಒಂದು ದಿನ ಒಂದು ಗಂಟೆ ಪಿ.ಟಿಗೆ ಮೀಸಲಾಗಿದ್ದರೆ, ಮಾಧ್ಯಮಿಕ, ಪದವಿ ಮತ್ತು ಸ್ನಾತಕೋತ್ತರ ಹಂತಗಳಲ್ಲಿ ವರ್ಷಕ್ಕೊಮ್ಮೆ ಬರುವ ವಾರ್ಷಿಕ ಕ್ರೀಡಾಕೂಟಗಳ ವ್ಯವಸ್ಥೆಯ ಮಟ್ಟಿಗೆ ಕ್ರೀಡೆಗಳತ್ತ ಗಮನ ಹರಿಸಲಾಗುತ್ತದೆ. ಎಷ್ಟೋ ಶಾಲೆಗಳಲ್ಲಿ ಆಟದ ಮೈದಾನಗಳೇ ಇಲ್ಲ. ಕ್ರೀಡಾಸಕ್ತರಿಗೆ, ಭರವಸೆಯ ಕ್ರೀಡಾಪಟುಗಳಿಗೆ ನಿಯಮಬದ್ಧ ತರಬೇತಿಗಳು ಸಿಗುತ್ತಿಲ್ಲ. ಕ್ರೀಡೆಗಳಿಗಾಗಿ ವಿದ್ಯಾಲಯದ ವೇಳಾಪಟ್ಟಿಗಳಲ್ಲಿ ಸಮಯವನ್ನು ಮೀಸಲಾಗಿಟ್ಟಿಲ್ಲ, ದೈಹಿಕ ಶಿಕ್ಷಣ ನಿರ್ದೇಶಕರನ್ನು ನೇಮಕ ಮಾಡುವುದು ಬಹಳ ಕಡಿಮೆ. ಇದ್ದರೂ ಕೇವಲ ವಾರ್ಷಿಕ ಕ್ರೀಡಾಕೂಟದ ಸಮಯಕ್ಕಾಗಿ ನಾಲ್ಕಾರು ದಿನ ಪ್ರ್ಯಾಕ್ಟೀಸ್‌ ನೀಡುವುದಕ್ಕಾಗಿ ಅಷ್ಟೇ ಎಂಬಂತೆ ಇರುತ್ತದೆ.

ಮನೆಯಲ್ಲಿ ಮಕ್ಕಳನ್ನು ಅಪ್ಪ, ಅಮ್ಮ ಆಟಕ್ಕೆ ಬಿಡದೆ ದಿನ ಪೂರ್ತಿ ಓದಬೇಕೆಂಬ ಒತ್ತಾಯವನ್ನು ಹೇರುತ್ತಾರೆ. ನಮ್ಮ ಪರಿವಾರಗಳಲ್ಲಾಗಲಿ, ಸಾಮಾಜಿಕ ಪರಿಸರದಲ್ಲಾಗಲಿ ಕ್ರೀಡೆಗಳ ಮೂಲಕ ಮಕ್ಕಳನ್ನು ಆರೋಗ್ಯವಂತರನ್ನಾಗಿ, ಶಕ್ತಿವಂತರನ್ನಾಗಿ ಬೆಳೆಸಿದರೆ ಅವರು ಭವಿಷ್ಯದಲ್ಲಿ ಹೆಚ್ಚಿನ ಲವಲವಿಕೆಯಿಂದ, ಏಕಾಗ್ರತೆಯಿಂದ, ಆಸಕ್ತಿಯಿಂದ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಬಹುದು ಅಲ್ಲವೇ?

ಇಂದು ಕ್ರೀಡಾಪಟುಗಳಿಗೆ ಸಮಾಜದಲ್ಲಿ ಉನ್ನತ ಸ್ಥಾನಮಾನವಿದೆ. ಆರ್ಥಿಕ ಭರವಸೆಗಳೂ ಹರಿದು ಬರುತ್ತಿವೆ. ಕ್ರೀಡೆಯನ್ನು ತಮ್ಮ ಉಪಜೀವನದ ಮಾರ್ಗವನ್ನಾಗಿ ಆಯ್ಕೆ ಮಾಡಿಕೊಂಡ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ.

ಸ್ಪರ್ಧೆಗಳಿಗಾಗಿ ಅಷ್ಟೇ ಅಲ್ಲ ನಮ್ಮ ಮಕ್ಕಳಿಗೆ, ಯುವಜನರಿಗೆ ಅವರ ವ್ಯಾಸಂಗದ ಜೊತೆ ಜೊತೆಗೆ ಸದೃಢ ದೇಹ ಕಟ್ಟಿಕೊಡಲು ಆಟ, ಪಾಠ, ಯೋಗಾಸನ, ಕರಾಟೆ, ಒಳಾಂಗಣ, ಹೊರಾಂಗಣ ಕ್ರೀಡೆಗಳಿಗಾಗಿ ನಿಯಮಿತ ಸಮಯ ನೀಡಬೇಕಾದುದು ಅಪೇಕ್ಷಣೀಯ. ನಾಲ್ಕು ಗಂಟೆ ಕಲಿಕೆಯ ನಂತರ ಎರಡು ಗಂಟೆ ವಿವಿಧ ಆಟಗಳಲ್ಲಿ ತರಬೇತಿ ಕೊಡಬಹುದು. ಬೆಳೆಯುವ ಸಸಿಗೆ ಸೂರ್ಯನ ಬಿಸಿಲಷ್ಟೇ ಸಾಕಾಗದು, ಮೇಲೆ ನೀರನ್ನು ಎರೆಯುವಂತೆ ಕ್ರೀಡೆಗಳೂ ನಮ್ಮ ಶಿಕ್ಷಣ ಸಂಹಿತೆಯಲ್ಲಿ ಸೇರಿಕೊಳ್ಳಬೇಕಾದುದು ಈ ಸಮಯದ ಬೇಡಿಕೆ ಎಂದೆನಿಸುತ್ತದೆ.

ದೇಶದಲ್ಲಿ ಕ್ರೀಡಾಸಕ್ತರಾಗಿರುವ ಎಷ್ಟೋ ಮಕ್ಕಳಿದ್ದಾರೆ, ಯುವಜನರಿದ್ದಾರೆ. ಎಲ್ಲರೂ ವೈಯಕ್ತಿಕವಾಗಿ ತರಬೇತಿ ಪಡೆಯುವುದಕ್ಕಾಗಿ ಹಣ ಸುರಿದು ಕ್ರೀಡಾ ಪರಿಣತರನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ. ಅನೇಕ ಕ್ರೀಡಾಕಾಂಕ್ಷಿಗಳಿಗೆ ನಿಯಮಿತ ತರಬೇತಿ ಇಲ್ಲ. ಕ್ರೀಡೆಯನ್ನು ತಮ್ಮ ಧ್ಯೇಯವನ್ನಾಗಿ ರೂಪಿಸಿಕೊಳ್ಳಬೇಕೆಂದು ಕನಸು ಕಾಣುತ್ತಿರುವ ಯುವಕ, ಯುವತಿಯರು ಇರುವುದರಿಂದ ಪ್ರತ್ಯೇಕವಾಗಿ ಕ್ರೀಡಾ ತರಬೇತಿ ಕೇಂದ್ರಗಳನ್ನು ಸ್ಥಾಪಿಸಬೇಕಾದ ಅನಿವಾರ್ಯ ಇದೆ. ಶಾಲೆ, ಕಾಲೇಜುಗಳಲ್ಲಿ ಇರುವಂತೆ ಇಲ್ಲಿಯೂ ಅಧ್ಯಯನಕ್ಕಾಗಿ ಪಠ್ಯಕ್ರಮಗಳಿದ್ದು, ಪರೀಕ್ಷೆಗಳೂ ರೂಪುಗೊಂಡು ಹೊಸ ಸ್ವರೂಪದ ಕ್ರೀಡಾ ವಿದ್ಯಾಲಯಗಳ ನಿರ್ಮಾಣವಾಗಬೇಕಿದೆ. ಪದವಿಪೂರ್ವ ಪರೀಕ್ಷೆ ಪಾಸಾದ ವಿದ್ಯಾರ್ಥಿಗಳಿಗೆ ಮೂರು ವರ್ಷಗಳ ಕ್ರೀಡಾ ಪದವಿಯ ಕೋರ್ಸ್‌ಗಾಗಿ ಕ್ರೀಡಾ ಅಧ್ಯಯನ ಮತ್ತು ತರಬೇತಿ ನೀಡುವಂಥ ವಿದ್ಯಾಲಯಗಳ ಅಗತ್ಯವಿದೆ.

ಅಂಗವಿಕಲ ಕ್ರೀಡಾಪಟುಗಳಿಗೆ ಕ್ರೀಡಾಶಾಲೆಗಳಲ್ಲಿ ಕೆಲವು ಸೌಲಭ್ಯಗಳನ್ನು ನೀಡಿ ಆಮಂತ್ರಿಸಬಹುದು. ಇವರಿಗಾಗಿ ಒಂದು ವಿಶೇಷವಾದ ವಿಭಾಗವನ್ನು ತೆರೆದು ಪರಿಣತ ಶಿಕ್ಷಕರಿಂದ ತರಬೇತಿ ನೀಡುವ ಮೂಲಕ ಅವರ ಬಾಳಿನಲ್ಲಿ ಬೆಳಕು ತೋರಿದಂತಾದೀತು.

ದೇಶದ ಯಾವ ರಾಜ್ಯದಲ್ಲಿಯೇ ಇರಲಿ ಯೋಗ್ಯವಾದ ನಾಲ್ಕು ಜಿಲ್ಲೆಗಳಲ್ಲಿ ಕನಿಷ್ಠಪಕ್ಷ ನಾಲ್ಕು ಗುಣಮಟ್ಟದ ಸುಸಜ್ಜಿತ ವಿದ್ಯಾಲಯಗಳು ಸ್ಥಾಪನೆಯಾದಾಗ ಮಾತ್ರ ಆಧುನಿಕ ಜಗತ್ತಿನ ಪ್ರಗತಿಯ ಓಟದಲ್ಲಿ ನಮ್ಮ ದೇಶವೂ ಸೇರಿಕೊಳ್ಳಬಲ್ಲದೆಂಬ ಭರವಸೆ ನಮ್ಮಲ್ಲಿ ಮೂಡಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.