ADVERTISEMENT

ಆರ್‌ಟಿಇ: ನಿರೀಕ್ಷೆ ಫಲಿಸಿತೇ?

ಈ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಯಾಗಿದೆಯೇ ಎಂದು ಕೇಳಿಕೊಳ್ಳಬೇಕಾಗಿದೆ

ಡಾ.ನಿರಂಜನಾರಾಧ್ಯ ವಿ.ಪಿ
Published 2 ಏಪ್ರಿಲ್ 2021, 19:31 IST
Last Updated 2 ಏಪ್ರಿಲ್ 2021, 19:31 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ- 2009 (ಆರ್‌ಟಿಇ) ಜಾರಿಯಾಗಿ 11 ವರ್ಷ ಪೂರ್ಣಗೊಂಡಿದೆ. ಕಾಯ್ದೆಯು 2010ರ ಏಪ್ರಿಲ್‌ 1ರಂದು ಜಾರಿಯಾದಾಗ ಹಲವು ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿತ್ತು. ಅದರಲ್ಲಿ ಬಹಳ ಮುಖ್ಯವಾಗಿ, ಶಿಕ್ಷಣ ಒಂದು ಸಂವಿಧಾನಬದ್ಧ ನ್ಯಾಯಯುತ ಮೂಲಭೂತ ಹಕ್ಕಾಗಿದ್ದು, ಎಲ್ಲಾ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ದೊರೆಯುವ ಕಾಲ ಒದಗಿಬಂದಿದೆ ಎಂದು ಸಂಭ್ರಮಿಸಲಾಯಿತು.

ಪ್ರಗತಿಪರ ರಾಜ್ಯವೆನಿಸಿರುವ ಕರ್ನಾಟಕದಲ್ಲಿ ಈ ಕಾಯ್ದೆಯನ್ನು ಜಾರಿಗೊಳಿಸಲು ಸರ್ಕಾರ ವಿಶೇಷ ಕಾಳಜಿ ವಹಿಸುವುದಲ್ಲದೆ ಅಗತ್ಯ ಹಣಕಾಸನ್ನು ಒದಗಿಸಲು ಕ್ರಮ ಕೈಗೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಕಾಯ್ದೆ ಜಾರಿಯಾಗಿ 11 ವರ್ಷಗಳು ಮುಗಿದಿರುವ ಈ ಸಂದರ್ಭದಲ್ಲಿ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಯಾಗಿದೆಯೇ ಎಂದು ನೋಡಿದರೆ, ನಿರಾಶೆಯೇ ಹೆಚ್ಚು ಕಂಡುಬರುತ್ತದೆ.

ಮೊದಲನೆಯದಾಗಿ, ಎಲ್ಲಾ ಅವಕಾಶ
ಗಳನ್ನು ಒಂದು ಕಾಲಮಿತಿಯಲ್ಲಿ ಜಾರಿಗೊಳಿಸಲು ಸರ್ಕಾರ ನಿರ್ದಿಷ್ಟ ನೀಲಿ ನಕಾಶೆಯನ್ನು ತಯಾರಿಸಲು ವಿಫಲವಾಗಿದೆ. ಇದರಿಂದ ಮಕ್ಕಳ ಪ್ರವೇಶಕ್ಕೆ ಸಂಬಂಧಿಸಿದಂತೆ ಸರ್ಕಾರಿ, ಸರ್ಕಾರಿ ಅನುದಾನಿತ ಹಾಗೂ ಸರ್ಕಾರಿ ಅನುದಾನರಹಿತ ಶಾಲೆಗಳು ಮನಬಂದಂತೆ ಪ್ರವೇಶ ಪ್ರಕ್ರಿಯೆಯನ್ನು ಮಾಡುತ್ತಿವೆ. ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳು ಪ್ರತೀ ಶೈಕ್ಷಣಿಕ ವರ್ಷದ ಜೂನ್‌ ತಿಂಗಳಿನಲ್ಲಿ ಪ್ರವೇಶ ಪ್ರಕ್ರಿಯೆ ಪ್ರಾರಂಭಿಸಿದರೆ, ಸರ್ಕಾರಿ ಅನುದಾನರಹಿತ ಶಾಲೆಗಳು 6 ತಿಂಗಳು ಮುಂಚೆಯೇ ಪ್ರವೇಶ ಪ್ರಕ್ರಿಯೆ ಮುಗಿಸಿ ಸರ್ಕಾರಕ್ಕೆ ಸಡ್ಡು ಹೊಡೆಯುತ್ತವೆ. ಶಿಕ್ಷಣ ಹಕ್ಕು ಕಾಯ್ದೆ ಮಕ್ಕಳ ಪ್ರವೇಶಕ್ಕೆ ಯಾವುದೇ ಅರ್ಹತಾ ಪರೀಕ್ಷೆ ಅಥವಾ ಸಂದರ್ಶನ ನಡೆಸುವುದನ್ನು ನಿಷೇಧಿಸಿದ್ದರೂ ಖಾಸಗಿ ಶಾಲೆಗಳು ನಿರಂತರವಾಗಿ ಮಕ್ಕಳಿಗೆ ಹಾಗೂ ಪೋಷಕರಿಗೆ ಪರೀಕ್ಷೆ, ಸಂದರ್ಶನ ನಡೆಸುತ್ತಲೇ ಬಂದಿವೆ. ಇದನ್ನು ಪೂರ್ಣವಾಗಿ ನಿಷೇಧಿಸಿ ಕಾನೂನಿನ ಅನ್ವಯ ಪ್ರವೇಶ ಪ್ರಕ್ರಿಯೆ ನಡೆಸಲು ಸರ್ಕಾರ ಶೈಕ್ಷಣಿಕ ವರ್ಷದ ಕಾಯಂ ವೇಳಾಪಟ್ಟಿಯನ್ನು ನಿಗದಿಗೊಳಿಸಲು ಇಂದಿಗೂ ಸಾಧ್ಯವಾಗಿಲ್ಲ.

ADVERTISEMENT

ಎರಡನೆಯದಾಗಿ, ಖಾಸಗಿ ಶಾಲೆಗಳು ವಂತಿಗೆ ಪಡೆಯುವುದನ್ನು ಕಾಯ್ದೆಯು ನಿಷೇಧಿಸಿದೆ. ಆದರೆ, ಈ ಶಾಲೆಗಳು ವಂತಿಗೆ ಮತ್ತು ದುಬಾರಿ ಶುಲ್ಕ ಸಂಗ್ರಹಿಸುವ ಪರಿಪಾಟ ಲಂಗು ಲಗಾಮಿಲ್ಲದೆ ಮುಂದುವರಿದಿದೆ. ನೆರೆ ರಾಜ್ಯವಾದ ತಮಿಳುನಾಡು ನಿವೃತ್ತ ನ್ಯಾಯಾಧೀಶ ರೊಬ್ಬರ ಅಧ್ಯಕ್ಷತೆಯಲ್ಲಿ ಶುಲ್ಕ ನಿಗದಿ ಸಮಿತಿಯನ್ನು ರಚಿಸಿ ಕಾಯ್ದೆಯ ಆಶಯವನ್ನು ಎತ್ತಿಹಿಡಿಯುವಲ್ಲಿ ಯಶಸ್ವಿಯಾಗಿದೆ. ನಮ್ಮ ರಾಜ್ಯ ಕೂಡ ಈ ದಿಕ್ಕಿನಲ್ಲಿ ಯೋಚಿಸಬೇಕು.

ಮೂರನೆಯದಾಗಿ, ಶಿಕ್ಷಣ ಹಕ್ಕು ಕಾಯ್ದೆ ಪ್ರತಿಯೊಂದು ಶಾಲೆಯಲ್ಲಿ ಕಡ್ಡಾಯವಾಗಿ ಇರಲೇಬೇಕಾದ ಕನಿಷ್ಠ ಮೂಲಭೂತ ಸೌಕರ್ಯ
ಗಳನ್ನು ನಿಗದಿಗೊಳಿಸಿ, ಕಾಯ್ದೆ ಜಾರಿಯಾದ 5 ವರ್ಷದ ಒಳಗಾಗಿ ಒದಗಿಸುವಂತೆ ಸೂಚಿಸಿತ್ತು. ಅವುಗಳೆಂದರೆ, ತರಬೇತಿ ಹೊಂದಿದ ಶಿಕ್ಷಕರು, ಉತ್ತಮ ತರಗತಿ ಕೋಣೆ, ಶುದ್ಧ ಕುಡಿಯುವ ನೀರು, ಹುಡುಗ ಹಾಗೂ ಹುಡುಗಿಯರಿಗೆ ಪ್ರತ್ಯೇಕ ಶೌಚಾಲಯ, ವಿದ್ಯುಚ್ಛಕ್ತಿ, ಆಟದ ಮೈದಾನ, ಗ್ರಂಥಾಲಯ, ಪ್ರತೀ ತರಗತಿವಾರು ಪೀಠೋಪಕರಣ ಮತ್ತು ಪಾಠೋಪಕರಣ, ತರಗತಿವಾರು ಕ್ರೀಡಾ ಸಾಮಗ್ರಿ ಮತ್ತು ಸುರಕ್ಷತೆಗಾಗಿ ಕಾಂಪೌಂಡು. ಆದರೆ, ಇಂದಿಗೂ ಈ ಸೌಲಭ್ಯಗಳು ಎಲ್ಲಾ ಶಾಲೆಗಳಲ್ಲಿ ಲಭ್ಯವಿಲ್ಲ. ಸರ್ಕಾರಿ ಶಾಲೆಗಳ ಸ್ಥಿತಿ ಶೋಚನೀಯವಾಗಿದೆ.

ಸರ್ಕಾರದ ಅಂಕಿ ಅಂಶಗಳ ಅನ್ವಯ, ರಾಜ್ಯದಲ್ಲಿ 30,815 ಪ್ರಾಥಮಿಕ ಹಾಗೂ 3,371 ಪ್ರೌಢಶಾಲಾ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಕಿರಿಯ ಪ್ರಾಥಮಿಕ ಶಾಲೆಯ 17,163 ಹಾಗೂ ಹಿರಿಯ ಪ್ರಾಥಮಿಕ ಶಾಲೆಯ 54,126 ಕೊಠಡಿಗಳು ದುರಸ್ತಿ ಸ್ಥಿತಿಯಲ್ಲಿವೆ. ಇನ್ನು ಶೌಚಾಲಯಗಳ ಸ್ಥಿತಿ ಹೇಳತೀರದು. ಈ ಕಾರಣದಿಂದಾಗಿ 2010– 11ರಲ್ಲಿ 45,677ರಷ್ಟಿದ್ದ ಸರ್ಕಾರಿ ಶಾಲೆಗಳ ಸಂಖ್ಯೆ 2018- 19ರಲ್ಲಿ 43,492ಕ್ಕೆ ಇಳಿದಿದೆ. ಅಂದರೆ, 2,185 ಸರ್ಕಾರಿ ಶಾಲೆಗಳು ಮಕ್ಕಳಿಲ್ಲದೆ ಮುಚ್ಚಿಹೋಗಿವೆ. ಇನ್ನು 2010- 11ರಲ್ಲಿ 1ರಿಂದ 10ನೇ ತರಗತಿಯವರೆಗೆ 54,53,725ರಷ್ಟಿದ್ದ ಮಕ್ಕಳ ಸಂಖ್ಯೆ 2018- 19ರಲ್ಲಿ 43,79,254ಕ್ಕೆ ಇಳಿದಿದೆ. ಸರಿಸುಮಾರು 10,74,471 ಮಕ್ಕಳು ಸರ್ಕಾರಿ ಶಾಲೆ ತೊರೆದಿದ್ದಾರೆ. ಇದು ಅತ್ಯಂತ ಗಂಭೀರವಾದ ವಿಷಯ. ಶಿಕ್ಷಣವು ಮೂಲಭೂತ ಹಕ್ಕಾಗಿದ್ದಾಗ್ಯೂ ಬಡ ಮತ್ತು ಅವಕಾಶವಂಚಿತ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ನ್ಯಾಯಸಮ್ಮತವಾದ ಗುಣಾತ್ಮಕ ಶಿಕ್ಷಣ ಒದಗಿಸುವ ಕೆಲಸದಲ್ಲಿ ಸರ್ಕಾರ ಸೋತಿದೆ.

ಕೊನೆಯದಾಗಿ, ಶಿಕ್ಷಣದ ಗುಣಮಟ್ಟ ಸುಧಾರಣೆ ನಮ್ಮ ಮುಂದಿರುವ ದೊಡ್ಡ ಸವಾಲು. ಎಲ್ಲಾ ಮಕ್ಕಳು ವಯಸ್ಸು ಮತ್ತು ತರಗತಿಗೆ ಅನುಗುಣವಾಗಿ ಪಡೆದುಕೊಳ್ಳಬೇಕಾದ ಶೈಕ್ಷಣಿಕ ಸಾಮರ್ಥ್ಯಗಳನ್ನು ಸಾಧಿಸುವಲ್ಲಿ ನಾವು ನಿರೀಕ್ಷಿತ ಯಶಸ್ಸನ್ನು ಸಾಧಿಸಲು ಇಂದಿಗೂ ಸಾಧ್ಯವಾಗಿಲ್ಲ. ಕೋವಿಡ್‌ ಪರಿಣಾಮದಿಂದ ಇದು ಮತ್ತಷ್ಟು ಉಲ್ಬಣಗೊಂಡಿದೆ. ಕಳೆದ ದಶಕದಲ್ಲಿ ಸಾಧಿಸಿದ್ದ ಸ್ವಲ್ಪಮಟ್ಟಿನ ಯಶಸ್ಸನ್ನೂ ಕೋವಿಡ್‌ ಇಲ್ಲವಾಗಿಸಿದೆ. ಶಾಲೆಗಳು ದೀರ್ಘಕಾಲ ಮುಚ್ಚಿದ ಕಾರಣ ಬಾಲಕಾರ್ಮಿಕ ಪದ್ಧತಿ, ಬಾಲ್ಯವಿವಾಹ, ಮಕ್ಕಳು ಶಾಲೆ ತೊರೆಯುವ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ.

ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ, ಕಾಯ್ದೆಯ ಪೂರ್ಣ ಹಾಗೂ ಪರಿಣಾಮಕಾರಿ ಜಾರಿಗಾಗಿ ಒಂದು ನೀಲಿ ನಕಾಶೆಯನ್ನು ತಯಾರಿಸಬೇಕಿದೆ. ರಾಜ್ಯ ಸಲಹಾ ಮಂಡಳಿಯನ್ನು ಕೂಡಲೇ ರಚಿಸಲು ಸರ್ಕಾರ ಕ್ರಮ ವಹಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.