ADVERTISEMENT

ಕನ್ನಡಿಗ ಈಗ ‘ಸೂಪರ್ ಫ್ಯಾನ್’

ಫಟಾಫಟ್

ಗಿರೀಶದೊಡ್ಡಮನಿ
Published 14 ಜೂನ್ 2019, 19:45 IST
Last Updated 14 ಜೂನ್ 2019, 19:45 IST
ಡಿ. ಸುಗುಮಾರ್, ‘ವಿಶ್ವ ಕ್ರೀಡಾ ಅಭಿಮಾನಿ– 2019’ ಪುರಸ್ಕೃತ
ಡಿ. ಸುಗುಮಾರ್, ‘ವಿಶ್ವ ಕ್ರೀಡಾ ಅಭಿಮಾನಿ– 2019’ ಪುರಸ್ಕೃತ   

ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ‘ವಿಶ್ವ ಕ್ರೀಡಾ ಅಭಿಮಾನಿ– 2019’ ಪುರಸ್ಕಾರವನ್ನು ನೀಡಲಾಗುತ್ತಿದೆ. ವಿಶ್ವದ ಐವರು ಪ್ರಮುಖ ಕ್ರಿಕೆಟ್ ‘ಸೂಪರ್‌ ಫ್ಯಾನ್‌’ಗಳಲ್ಲಿ ಬೆಂಗಳೂರಿನ ಡಿ. ಸುಗುಮಾರ್ ಕೂಡ ಒಬ್ಬರಾಗಿದ್ದಾರೆ. ಶುಕ್ರವಾರ ಮ್ಯಾಂಚೆಸ್ಟರ್‌ನಲ್ಲಿ ನಡೆದ ಸಮಾರಂಭದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನ ಇಲ್ಲಿದೆ:

* ಈ ಪ್ರಶಸ್ತಿ ಸಂದಿರುವ ಬಗ್ಗೆ ಹೇಳಿ?
ಇಂಗ್ಲೆಂಡ್‌ನಲ್ಲಿರುವ ಟೀಮ್ ಇಂಡಿಯಾ ಸ್ಪೋರ್ಟ್ಸ್‌ ಫ್ಯಾನ್ಸ್‌ ಇದೇ ಮೊದಲ ಬಾರಿಗೆ ಈ ಪ್ರಶಸ್ತಿಯನ್ನು ನೀಡುತ್ತಿದ್ದಾರೆ. ಸುಮಾರು ಒಂದು ದಶಕದಿಂದ ನಾನು ಕೆಪಿಎಲ್, ಐಪಿಎಲ್ ಮತ್ತು ಬೆಂಗಳೂರಿನಲ್ಲಿ ನಡೆಯುವ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ನಾಡಿನ ಮಹಾಪುರುಷರ ವೇಷಭೂಷಣ ಧರಿಸುತ್ತಿದ್ದೆ. 2014ರಿಂದ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಮತ್ತು ಭಾರತ ತಂಡಕ್ಕಾಗಿ ಈ ಕಾರ್ಯ ಮಾಡುತ್ತಿದ್ದೇನೆ. ಬೇರೆ ಬೇರೆ ದೇಶಗಳ ಸೂಪರ್‌ ಫ್ಯಾನ್‌ಗಳೊಂದಿಗೆ ಈ ಗೌರವ ಗಳಿಸಿರುವುದು ಹೆಮ್ಮೆಯಾಗಿದೆ.

* ನೀವು ಈ ಹವ್ಯಾಸ ಬೆಳೆಸಿಕೊಂಡಿದ್ದು ಏಕೆ?
ಮೊದಲಿನಿಂದಲೂ ಕ್ರಿಕೆಟ್‌ ಬಗ್ಗೆ ಹುಚ್ಚು ಪ್ರೀತಿ. ನಾನು ಕೆಲಸ ಮಾಡುವ ಕ್ಯಾರಿ ಇಂಡಿಯಾ ಕಾರ್ಗೊ ಸಂಸ್ಥೆ ಮತ್ತು ನನ್ನ ಕುಟುಂಬವು ಬೆಂಬಲಿಸಿತು. ನೆಚ್ಚಿನ ತಾರೆಗಳನ್ನು ಹತ್ತಿರದಿಂದ ನೋಡುವ ಅವಕಾಶ ಒದಗಿತು. ಇತ್ತೀಚೆಗೆ ಐಪಿಎಲ್ ಟೂರ್ನಿ ಮುಗಿದಾಗ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ತಮ್ಮ ಜರ್ಸಿಯ ಮೇಲೆ ಸಹಿ ಮಾಡಿಕೊಟ್ಟಿದ್ದು ಅವಿಸ್ಮರಣೀಯ ಗಳಿಗೆ. ನಾನು ಫುಟ್‌ಬಾಲ್ ಟೂರ್ನಿಯಲ್ಲಿಯೂ ಪ್ರಚಾರ ಪ್ರತಿನಿಧಿಯಾಗಿದ್ದೆ.

ADVERTISEMENT

* ನಿಮ್ಮ ವೈಶಿಷ್ಟ್ಯ ಏನು?
ನಮ್ಮ ಪೂರ್ವಜರು ಆಂಧ್ರ ಪ್ರದೇಶದವರು. ಆದರೆ ನಾನು ಕನ್ನಡಿಗನೇ. ಯಾವುದೇ ಪಂದ್ಯಕ್ಕೆ ಹೋದರೂ ಯಮಧರ್ಮರಾಯ, ನಾಡಿನ ದಿಗ್ಗಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್, ಬಸವೇಶ್ವರ ಅವರಂತಹ ಮಹನೀಯರ ವೇಷಗಳನ್ನು ಧರಿಸುತ್ತೇನೆ. ಪ್ರೇಕ್ಷಕರಿಗೆ ಅವರ ಬಗ್ಗೆ ಹೇಳುತ್ತೇನೆ. ಬರುವ ಕಾಣಿಕೆಗಳನ್ನು ಸರ್ಕಾರಿ ಶಾಲೆಗಳ ಮಕ್ಕಳಿಗೆ ಕೊಡುಗೆಯಾಗಿ ನೀಡುತ್ತೇನೆ. ಇದೀಗ ಇಂಗ್ಲೆಂಡ್‌ನಲ್ಲಿ ಐದು ಪಂದ್ಯಗಳನ್ನು ನೋಡುವ ಅವಕಾಶ ಲಭಿಸಿದೆ. ಅಲ್ಲಿಯೂ ಮಹನೀಯರ ವೇಷ ಧರಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.