ADVERTISEMENT

ಸಂಗತ: ಸರಳ ನಡೆಯ ಸೊಬಗು!

ಜನಪ್ರತಿನಿಧಿಯಾಗಿ ಆಯ್ಕೆಯಾಗುವುದು ಬದುಕಿನಲ್ಲಿ ಬರುವ ದೊಡ್ಡ ಅವಕಾಶ. ಅದನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುವುದು ಮತದಾರರಿಗೆ ಮಾಡುವ ದ್ರೋಹ

ಮಲ್ಲಿಕಾರ್ಜುನ ಹೆಗ್ಗಳಗಿ
Published 29 ಆಗಸ್ಟ್ 2021, 19:31 IST
Last Updated 29 ಆಗಸ್ಟ್ 2021, 19:31 IST
   

ಜಮಖಂಡಿಯ ಶಾಸಕರಾಗಿದ್ದ ಪಿ.ಎಂ.ಬಾಂಗಿ ಅವರು ಸ್ವಾತಂತ್ರ್ಯಪೂರ್ವದಲ್ಲಿ ಪ್ರಜಾಪರಿಷತ್ತಿಗೆ ಆಯ್ಕೆಯಾಗಿ ಜಮಖಂಡಿ ಸಂಸ್ಥಾನದ ಮುಖ್ಯಮಂತ್ರಿಯಾಗಿದ್ದರು. ಆಗಿನ್ನೂ ಜಮಖಂಡಿಗೆ ವಿದ್ಯುತ್ ದೀಪ ಬಂದಿರಲಿಲ್ಲ. ಸಂಸ್ಥಾನದ ದೊರೆ ಪಟವರ್ಧನ ಅವರು ಅರಮನೆ ಸಮೀಪ ಡೀಸೆಲ್‌ ಉಪಯೋಗಿಸಿ ವಿದ್ಯುತ್ ಉತ್ಪಾದಿಸುವ ಯಂತ್ರವನ್ನು ಅಳವಡಿಸಿದರು. ಈ ಕಿರು ವಿದ್ಯುತ್ ಉತ್ಪಾದನೆಯಿಂದ ಅರಮನೆ ಮತ್ತು ಮುಖ್ಯಮಂತ್ರಿಯ ಮನೆಗೆ ವಿದ್ಯುತ್ ಪೂರೈಸುವ ವ್ಯವಸ್ಥೆ ಮಾಡಲಾಯಿತು.

ಈ ವಿಷಯ ತಿಳಿದು ಬಾಂಗಿ ಅವರು ಪಟವರ್ಧನ ದೊರೆಯನ್ನು ಭೇಟಿ ಮಾಡಿ, ‘ನನ್ನನ್ನು ಆಯ್ಕೆ ಮಾಡಿದ ಜನರು ಚಿಮಣಿಯ ಬೆಳಕಿನಲ್ಲಿ ಬದುಕುವಾಗ ಅವರ ನಡುವೆ ಝಗಮಗಿಸುವ ವಿದ್ಯುತ್ ಬೆಳಕಿನಲ್ಲಿ ನಾನು ವಾಸಿಸುವುದು ಬಹಳ ಮುಜುಗರ ಉಂಟುಮಾಡುತ್ತದೆ. ನಮ್ಮ ಮನೆಗೆ ವಿದ್ಯುತ್ ಬೇಡ’ ಎಂದು ಮನವಿ ಮಾಡಿದ್ದರು. ಜನಪ್ರತಿನಿಧಿಗಳು ಹೊಂದಿರಬೇಕಾದ ಸೂಕ್ಷ್ಮ ಮತ್ತು ಮುಜುಗರದ ಮನಃಸ್ಥಿತಿಗೆ ಈ ಪ್ರಕರಣ ಒಂದು ಮಾದರಿಯಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಪ್ರಯಾಣಿಸುವ ಮಾರ್ಗದಲ್ಲಿ ಸಾರ್ವಜನಿಕರಿಗೆ ತೀವ್ರ ಕಿರಿಕಿರಿ ಉಂಟುಮಾಡುತ್ತಿದ್ದ ‘ಝೀರೊ ಟ್ರಾಫಿಕ್’ ವ್ಯವಸ್ಥೆ ರದ್ದುಪಡಿಸುವ ಮಹತ್ವದ ತೀರ್ಮಾನ ತೆಗೆದುಕೊಂಡದ್ದು ತಿಳಿದಾಗ ಬಾಂಗಿ ಅವರ ನೆನಪಾಯಿತು.

ADVERTISEMENT

ಜನಪ್ರತಿನಿಧಿಗಳ ಅತಿಯಾದ ವೈಭವ ಪ್ರದರ್ಶನ, ಲೋಲುಪತೆ ಜನಸಾಮಾನ್ಯರಿಗೆ ಮಾಡುವ ಅಪಮಾನ. ಭೋಗ ಸಂಸ್ಕೃತಿ ವಿನಾಶಕ್ಕೆ ಮೂಲ. ತಮಗೆ ಲಾಭ ತರುವ ಖಾತೆಯೇ ಬೇಕು ಎಂದು ಗದ್ದಲ ಹಾಕುವ ಮಂತ್ರಿಗಳನ್ನು ಕಂಡು ಮರುಕ ಹುಟ್ಟುತ್ತದೆ. ಜನಪ್ರತಿನಿಧಿಯಾಗಿ ಆಯ್ಕೆಯಾಗುವುದು ಬದುಕಿನಲ್ಲಿ ಬರುವ ಒಂದು ದೊಡ್ಡ ಅವಕಾಶ. ಅದನ್ನು ಸ್ವಂತದ ಆಸ್ತಿ ಅಂತಸ್ತು ಹೆಚ್ಚಿಸಿಕೊಳ್ಳುವುದಕ್ಕೆ ಬಳಸುವುದು ಮತದಾರರಿಗೆ ಮಾಡುವ ದ್ರೋಹ.

ಜನಪ್ರತಿನಿಧಿಗಳು ಕೋಟ್ಯಂತರ ಬೆಲೆಬಾಳುವ ಅರಮನೆಯಂತಹ ಮನೆ ಕಟ್ಟಿಸಿಕೊಳ್ಳುವುದು ಆಗಾಗ ಚರ್ಚೆಗೆ ಬರುತ್ತಿರುತ್ತದೆ. ಕುವೆಂಪು ತಮ್ಮ ಒಂದು ಕವನದಲ್ಲಿ ‘ಅತಿಭೋಗವದು ರೋಗ, ಕೊಲ್ಲುವುದು ಬೇಗ, ಸಾಮಾನ್ಯ ಜೀವನವು ಪರಮಸುಧೆಯಂತೆ’ ಎಂದು ತುಂಬ ಅರ್ಥಪೂರ್ಣವಾಗಿ ಹೇಳಿದ್ದಾರೆ. ಸರಳ ಜೀವನಕ್ಕೆ ಜನಪ್ರತಿನಿಧಿಗಳು ಮಾದರಿಯಾಗಬೇಕು.

70- 80ರ ದಶಕದಲ್ಲಿ ಕೆ.ಪಿ.ನಾಡಗೌಡ ಅವರು ಮುಧೋಳ ಕ್ಷೇತ್ರದ ಶಾಸಕರಾಗಿದ್ದರು. ಅವರು ಕೃಷಿಯ ಬಗ್ಗೆ ಬಹಳ ಆಸಕ್ತಿ ಹೊಂದಿದ್ದರು. ತಮ್ಮ 50 ಎಕರೆ ಭೂಮಿಯಲ್ಲಿ ಕಬ್ಬು ಬೆಳೆಯುತ್ತಿದ್ದರು. ಸಕ್ಕರೆ ಕಾರ್ಖಾನೆಯೊಂದರ ಅಧಿಕಾರಿಗಳು ಅವರನ್ನು ಭೇಟಿ ಮಾಡಿ ‘ನಿಮ್ಮ ಜಮೀನಿನಲ್ಲಿ ರೈತರಿಗೆ ಮಾರ್ಗದರ್ಶನ ಮಾಡುವುದಕ್ಕೆ ಸುಧಾರಿಸಿದ ಪದ್ಧತಿಯಲ್ಲಿ ಕಬ್ಬಿನ ಬೇಸಾಯ ಮಾಡುತ್ತೇವೆ. ನಾವೇ ಉಚಿತವಾಗಿ ಕಬ್ಬಿನ ಬೀಜ, ಗೊಬ್ಬರ, ಆಳುಗಳನ್ನು ಕೊಟ್ಟು ಕಬ್ಬು ಬೆಳೆಯುತ್ತೇವೆ. ಬೆಳೆದ ಕಬ್ಬನ್ನು ನಿಮ್ಮ ಹೆಸರಿನಲ್ಲಿ ಖರೀದಿಸಿ ಪೂರ್ಣ ಹಣ ನಿಮಗೆ ಪಾವತಿಸುತ್ತೇವೆ’ ಎಂದು ಹೇಳಿದರು.

ನಾಡಗೌಡರು ನಕ್ಕು, ‘ನೀವು ಸಕ್ಕರೆ ಕಾರ್ಖಾನೆಯವರು ಕಬ್ಬಿಗೆ ಸರಿಯಾದ ಬೆಲೆ ಕೊಡುವುದಿಲ್ಲ. ಬಾಕಿ ಹಣ ಕೊಡದೆ ರೈತರಿಗೆ ತೊಂದರೆ ಕೊಡುತ್ತೀರಿ. ಶಾಸಕನಾಗಿ ನಾನು ಅವರ ಪರವಾಗಿ ಧ್ವನಿ ಎತ್ತಬೇಕಾಗುತ್ತದೆ. ನೀವು ನಮ್ಮ ಭೂಮಿಯಲ್ಲಿ ಪುಕ್ಕಟೆ ಕಬ್ಬು ಬೆಳೆದುಕೊಟ್ಟರೆ ನಿಮ್ಮ ಹಂಗಿನಲ್ಲಿ ಸಿಲುಕಿ ಧ್ವನಿ ಕಳೆದುಕೊಳ್ಳಬೇಕಾಗುತ್ತದೆ. ಇಂತಹ ತಂತ್ರಗಳಲ್ಲಿ ನನ್ನನ್ನು ಸಿಲುಕಿಸಬೇಡಿ’ ಎಂದು ಹೇಳಿ ಅವರನ್ನು ಹೊರ ಹಾಕಿದರು.

ಅನೇಕ ಜನಪ್ರತಿನಿಧಿಗಳು ಇಂದು ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ಶಕ್ತಿಮೀರಿ ಶ್ರಮಿಸುತ್ತಿದ್ದಾರೆ. ಅವರಿಗೆ ಕಡಿಮೆ ಬೆಲೆಗೆ ಸರ್ಕಾರಿ ಭೂಮಿ ಕೊಡಿಸುವುದು, ಅವರ ಹಿತಾಸಕ್ತಿ ಕಾಪಾಡುವ ರೀತಿಯಲ್ಲಿ ಸರ್ಕಾರಿ ಆಜ್ಞೆ ಹೊರಡಿಸುವ ಕೆಲಸ ಮಾಡುತ್ತಿದ್ದಾರೆ. ಜನಹಿತಕ್ಕೆ ದ್ರೋಹವಾಗುತ್ತಿದ್ದರೂ ಅವರ ಪರವಾಗಿ ಧ್ವನಿ ಎತ್ತುವುದಿಲ್ಲ. ಪ್ರಜಾಪ್ರಭುತ್ವದ ತತ್ವಗಳನ್ನೇ ಅವರು ಬುಡಮೇಲು ಮಾಡುತ್ತಾರೆ.

ರಾಜಧರ್ಮವಾದರೂ ಸನ್ಯಾಸಿ ಧರ್ಮದಷ್ಟೇ ಶ್ರೇಷ್ಠವಾದುದು. ವೈಭವ ಹೆಚ್ಚಾದ ಹಾಗೆ ಆತ್ಮದ ಅಧಃಪತನವೂ ದೊಡ್ಡದಾಗುತ್ತದೆ. ಉಪಭೋಗಕ್ಕಿಂತಲೂ ಹೆಚ್ಚಿನದಾದ ಆನಂದ ತ್ಯಾಗದ್ದು ಎಂದು ಪಂಪ ಮಹಾಕವಿ ಜನಪ್ರತಿನಿಧಿಗಳನ್ನು ಕುರಿತು ಹೇಳಿದ ಮಾತು ತುಂಬ ಮಾರ್ಮಿಕವಾಗಿದೆ.

ಇಟಲಿಯ ಸರ್ವಾಧಿಕಾರಿ ಮುಸೋಲಿನಿ, ರೋಮ್‌ನಲ್ಲಿ ಗಾಂಧೀಜಿ ಇದ್ದಾಗ ಭೋಜನ ಕೂಟಕ್ಕೆ ಬರಲು ಎರಡು ಬಾರಿ ಆಮಂತ್ರಿಸಿದ. ಗಾಂಧೀಜಿ ನಿರಾಕರಿಸಿದರು. ಆಗ ಮುಸೋಲಿನಿ ತನ್ನ ಪತ್ನಿಯ ಮುಖಾಂತರ ಅವರಿಗೆ ಊಟದ ಡಬ್ಬಿ ಕಳಿಸಿದ. ನಡೆದುಕೊಂಡೇ ಬಂದ ಆ ಮಹಿಳೆಯನ್ನು ಗೌರವಿಸಿ ಗಾಂಧೀಜಿ ಊಟದ ಡಬ್ಬಿ ಸ್ವೀಕರಿಸಿದರು. ಅಹಂಕಾರವನ್ನು ದೂರವಿಟ್ಟು ಸರಳವಾಗಿ ಬಂದ ಆ ಮಹಿಳೆಯ ನಡೆ ಗಾಂಧೀಜಿಯ ಮನ ಗೆದ್ದಿತು.

ಯಾವುದೇ ಸಂದರ್ಭದಲ್ಲಿ ಆಸೆ ಹುಟ್ಟಿಸುವ ಆಫರ್‌ಗಳು ಬಂದಾಗ ಜನಪ್ರತಿನಿಧಿಗಳು ನಿರಾಕರಿಸುವ ಮನಃಸ್ಥಿತಿ ಬೆಳೆಸಿಕೊಳ್ಳಬೇಕು. ಇದರಿಂದ ಅವರಲ್ಲಿ ಆತ್ಮವಿಶ್ವಾಸ ಮತ್ತು ಧೈರ್ಯ ಹೆಚ್ಚುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.