ADVERTISEMENT

ಸಂಗತ: ಶ್ರೇಷ್ಠತೆಯ ವ್ಯಸನಕ್ಕೆ ವರ್ಗಭೇದವಿಲ್ಲ

‘ವೇದಗಳ ಕಾಲದ ಬ್ರಾಹ್ಮಣ್ಯವನ್ನು ಈಗಿನ ಬ್ರಾಹ್ಮಣರಿಗೆ ಆರೋಪಿಸುವುದು ಸೂಕ್ತವಲ್ಲ’

​ಪ್ರಜಾವಾಣಿ ವಾರ್ತೆ
Published 1 ಜುಲೈ 2021, 20:03 IST
Last Updated 1 ಜುಲೈ 2021, 20:03 IST
   

ಬ್ರಾಹ್ಮಣ ಎನ್ನುವುದು ಜಾತಿವಾಚಕವಲ್ಲ, ಅದೊಂದು ವರ್ಣವಾಚಕ ಎಂದು ಗ.ನಾ.ಭಟ್ಟ ಅವರು ಹೇಳಿರುವುದು (ಚರ್ಚೆ, ಜೂನ್‌ 22) ಅಕ್ಷರಶಃ ನಿಜ. ಅದರೆ ಆ ಅರ್ಥದ ಕಾಲ ಕಳೆದುಹೋಗಿ ವರ್ಣಗಳೆಲ್ಲ ಜಾತಿಗಳಾಗಿ ಅದೆಷ್ಟೋ ಸಾವಿರ ವರ್ಷಗಳಾಗಿಬಿಟ್ಟಿವೆ. ಅವರು ಹೇಳಿದಂತೆ ವೇದಗಳ ಕಾಲದಲ್ಲಿ ಪ್ರಾರಂಭದಲ್ಲಿ ಸಮಾಜಜೀವನ ಸುಗಮವಾಗಿ ಸಾಗುವಂತಾಗಲು ಜನಸಮುದಾಯದಲ್ಲಿ ಒಂದು ವ್ಯವಸ್ಥೆ ಅಗತ್ಯವೆನಿಸಿ ಅವರು ತಮಗೆ ಆ ಕಾಲಕ್ಕೆ ತೋಚಿದಂತೆ ನಾಲ್ಕು ವರ್ಗಗಳನ್ನು (ವರ್ಣ) ರಚಿಸಿದರು. ಈಗ ನಮಗೆ ಅದು ಮೂರ್ಖತನದ್ದೆನಿಸಬಹುದು! ಅದು ಬೇರೆ.

ಇದು, ಅಂಬೇಡ್ಕರ್ ಅವರು ಹೇಳಿದಂತೆ ಯಾವುದೋ ಒಬ್ಬ ವ್ಯಕ್ತಿ ಅಥವಾ ಒಂದು ವರ್ಗ ಸೃಷ್ಟಿಸಿದ್ದಲ್ಲ. ಒಟ್ಟಾರೆ ಇಡೀ ಜನಸಮುದಾಯವೇ ಒಂದು ತೀರ್ಮಾನಕ್ಕೆ ಬಂದು ರೂಪಿಸಿಕೊಂಡದ್ದು. ವೇದಗಳನ್ನು ಆಗಿನ ಇಡೀ ಸಮಾಜವು ಜ್ಞಾನದ ಭಂಡಾರಗಳೆಂದು ತಿಳಿದಿದ್ದರಿಂದ (‘ವಿದ್’ ಎಂದರೆ ತಿಳಿ ಅದರಿಂದ ‘ವೇದ’- ತಿಳಿವು ಶಬ್ದ) ಅವುಗಳನ್ನು ಅಭ್ಯಾಸ ಮಾಡುವ ಮೂಲಕ ನಿರಂತರವಾಗಿ ಉಳಿಸಿಕೊಂಡು ಬರುವ ಸಲುವಾಗಿ ಒಂದು ವರ್ಗ (ಬ್ರಾಹ್ಮಣ), ಪ್ರಜಾರಕ್ಷಣೆ, ರಾಜ್ಯವಾಳುವುದು ಮೊದಲಾದ ಕೆಲಸಗಳಿಗೆ ಒಂದು ವರ್ಗ (ಕ್ಷತ್ರಿಯ), ವ್ಯಾಪಾರ ವಹಿವಾಟು ನೋಡಿಕೊಳ್ಳಲು ಒಂದು ವರ್ಗ (ವೈಶ್ಯ) ಮತ್ತು ಕೃಷಿ, ಉಪಕರಣಗಳನ್ನು ತಯಾರಿಸುವುದು, ಇನ್ನಿತರ ಕೆಲಸಗಳಿಗೆಲ್ಲಾ ಒಂದು ಜನಸಮುದಾಯವಿದ್ದರೆ ಒಳಿತೆಂದು ಭಾವಿಸಿ ಒಂದು ವರ್ಗವನ್ನು (ಶೂದ್ರ) ಅವರು ರೂಪಿಸಿದರು. ಆಗ ಲಿಪಿಯಿರಲಿಲ್ಲ. ವೇದಗಳನ್ನು ಸರಿಯಾಗಿ ಉಚ್ಚರಿಸಲು, ಅವುಗಳನ್ನು ದೀರ್ಘಕಾಲ ಅಭ್ಯಾಸ ಮಾಡಿ ಬಾಯಿಪಾಠ ಮಾಡುವ ಮೂಲಕ ಉಳಿಸಬೇಕಾಗು ತ್ತದೆಂದು ಮನಗಂಡು ಅದಕ್ಕೊಂದು ವರ್ಗವೇ ಅಗತ್ಯವೆಂದು ಬ್ರಾಹ್ಮಣ ವರ್ಗ ರಚಿತವಾಯಿತು. ಹಾಗೆಯೇ ಉಳಿದ ವರ್ಗಗಳು. ಆಗ ಅದು ಯಾರೊಬ್ಬರಿಗೋ ಮೀಸಲಾಗಿರಲಿಲ್ಲ. ಯಾರು ಬೇಕಾದರೂ ಆ ವರ್ಗವನ್ನು, ಅದರ ವೃತ್ತಿಯನ್ನುಆರಿಸಿಕೊಳ್ಳಬಹುದಿತ್ತು.

ವೇದವ್ಯಾಸ ಹುಟ್ಟಿನಿಂದ ಬ್ರಾಹ್ಮಣನೇ ಅಲ್ಲ. ಅವನು ‘ಬೋಯಿತಿಯ’ ಮಗ. ಅಗಸ್ತ್ಯನೂ ಅಷ್ಟೇ, ಬ್ರಾಹ್ಮಣನಲ್ಲ. ಆದರೆ ಬ್ರಹ್ಮರ್ಷಿ ಎನಿಸಿಕೊಂಡ. ದ್ರೋಣ ಹುಟ್ಟಿನಿಂದ ಬ್ರಾಹ್ಮಣನಾದರೂ ವೃತ್ತಿಯಿಂದ ಕ್ಷತ್ರಿಯ. ವಿಶ್ವಾಮಿತ್ರ ಮೊದಲಿಗೆ ಕ್ಷತ್ರಿಯನಾಗಿದ್ದು ಆಮೇಲೆ ಬ್ರಾಹ್ಮಣನಾದ ಪ್ರಸಿದ್ಧ ಕಥೆ ಗೊತ್ತೇ ಇದೆ. ನಿರಂತರ 12 ವರ್ಷಗಳ ಕಾಲ ಬ್ರಹ್ಮಚರ್ಯಾಶ್ರಮದಲ್ಲಿ ಗುರುಕುಲ ವಾಸದಲ್ಲಿದ್ದುಕೊಂಡು ವೇದಾಭ್ಯಾಸ ಮಾಡಬೇಕಾ ಗುತ್ತಿತ್ತು. ಅದು ಕಷ್ಟಸಾಧ್ಯವಾದ್ದರಿಂದ ಅದನ್ನು ಆರಿಸಿ ಕೊಂಡು ಹೋದವರ ಸಂಖ್ಯೆ ಕಡಿಮೆಯೇ. ಪ್ರಖ್ಯಾತ ಕಮ್ಯುನಿಸ್ಟ್ ಇ.ಎಂ.ಎಸ್. ನಂಬೂದಿರಿಪಾಡ್ ಅವರು ಹಾಗೆ ಹನ್ನೆರಡು ವರ್ಷ ವೇದಾಭ್ಯಾಸ ಮಾಡಿ ಕೊನೆಗೆ ‘I wasted my twelve precious years’ ಎಂದು ಹೇಳಿದರು. ಅವರಿಗೆ ಈಗ ಅನ್ನಿಸಿದ ಹಾಗೆಯೇ ಇನ್ನಿತರ ಸಹಸ್ರಾರು ಜನಸಮುದಾಯಕ್ಕೆ ಅಂದೇ ಅದು ವ್ಯರ್ಥ ಅನಿಸಿರಬೇಕು. ಅವರಾರೂ ಬ್ರಾಹ್ಮಣ್ಯವನ್ನು ವರಿಸಲಿಲ್ಲ; ಬ್ರಾಹ್ಮಣರಾಗಲಿಲ್ಲ. ಆದರೆ ಮುಂದೆ ಈ ವರ್ಣಗಳೆಲ್ಲವೂ ಜಾತಿಗಳಾಗಿ ಪರಿಣಮಿಸಿ, ಆಯ್ಕೆ ಹೋಗಿ ಹುಟ್ಟಿನಿಂದಲೇ ನಿರ್ಧರಿತವಾಗುವ ಕಾಲ ಬಂದಮೇಲೆ ಜಾತಿ ಜಾತಿಗಳಲ್ಲಿ ಮೇಲು ಕೀಳು ಭಾವನೆ, ಮಡಿ ಮೈಲಿಗೆ ಭಾವನೆ ಶುರುವಾಯಿತು. ಅದಕ್ಕೆ ಬ್ರಾಹ್ಮಣನೊಬ್ಬನೇ ಕಾರಣನಲ್ಲ. ಪ್ರತಿಯೊಂದು ಜಾತಿಯೂ ತಾನು ‘ಆ’ ಇನ್ನೊಂದು ಜಾತಿಗಿಂತ ಶ್ರೇಷ್ಠ ಎಂದು ತಿಳಿಯುವುದು ಇಂದಿಗೂ ಇದ್ದೇ ಇದೆ. ಇದು ಬರೀ ಬ್ರಾಹ್ಮಣರ ಚಾಳಿಯೇನಲ್ಲ. ಹಾಗೆ ಬದಲಾದ ಕಾಲದಲ್ಲಿ ಬ್ರಾಹ್ಮಣನೆಂದರೆ ತನ್ನ ಹುಟ್ಟಿನ ಕಾರಣಕ್ಕಾಗಿಯೇ ಶ್ರೇಷ್ಠನೆನಿಸಿಕೊಳ್ಳುವ, ಇನ್ಯಾರೋ ಹುಟ್ಟಿನ ಕಾರಣಕ್ಕಾಗಿಯೇ ಕೀಳೆನಿಸಿಕೊಳ್ಳುವ ಕಾಲವೂ ಬಂದು ಸ್ಥಿರವಾದದ್ದು ಈಗ ಇತಿಹಾಸ.

ADVERTISEMENT

ಮೊನ್ನೆ ಬ್ರಾಹ್ಮಣ್ಯದ ಬಗ್ಗೆ ಹೇಳಿದವರು ಮತ್ತು ಬರೆದವರೆಲ್ಲರೂ ‘ಬ್ರಾಹ್ಮಣ’ ಎಂದರೆ, ‘ಬ್ರಾಹ್ಮಣಿಕೆ’ ಎಂದರೆ ಹುಟ್ಟಿನ ಕಾರಣಕ್ಕಾಗಿಯೇ ತಮ್ಮನ್ನು ಶ್ರೇಷ್ಠರೆಂದು ತಿಳಿಯುವುದು, ಮಡಿಮೈಲಿಗೆಯ ಆಚರಣೆಗಳಿಂದ ಇತರೆ ಬೃಹತ್ ಜನಸಮುದಾಯ ದಿಂದ ತಮ್ಮನ್ನು ಪ್ರತ್ಯೇಕಿಸಿಕೊಳ್ಳುವುದು ಎಂಬ ಅರ್ಥದಲ್ಲಿಯೇ ಹೇಳಿದ್ದಾರೆಂದೇ ತಿಳಿಯುತ್ತೇನೆ. ಅದೇನೂ ಸುಳ್ಳಲ್ಲವಲ್ಲ. ಇದಕ್ಕೆ ಅಪವಾದಗಳಿರುವುದು ಬೇರೆ ಮಾತು. ಈ ಅರ್ಥದಲ್ಲೇ ತೀರ ತಳ ಸಮುದಾಯದಲ್ಲಿ ಹುಟ್ಟಿದರೂ ಸರ್ಕಾರಿ ಸವಲತ್ತುಗಳನ್ನು ಪಡೆದು ಉತ್ತಮ ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆಗಳಿಗೆ ಹೋಗಿ ಆ ತಳ ಸಮುದಾಯದಿಂದ ತಾವು ವಿವಿಕ್ತವಾಗಿದ್ದುಕೊಂಡು, ಅವರಿಂದ ಪ್ರತ್ಯೇಕಿಸಿಕೊಳ್ಳುವವರನ್ನು ‘ನವಬ್ರಾಹ್ಮಣ’ರೆಂದು ಕರೆಯುವುದೂ ಆ ಅರ್ಥದಲ್ಲೇ. ವೇದಗಳ ಕಾಲದ ಬ್ರಾಹ್ಮಣ್ಯವನ್ನು ಈಗಿನ ಬ್ರಾಹ್ಮಣರಿಗೆ ಆರೋಪಿಸುವುದು ಸೂಕ್ತವಲ್ಲ.

ಹಿಂದಿನವರು ಮಾಡಿದ್ದು ಸರಿಯಿಲ್ಲ ಎಂದು ಹೇಳುವ ನಾವು ಈಗ ತಾನೆ ಉತ್ತಮವಾದದ್ದೇನು ಮಾಡಿದ್ದೇವೆ? ಮಾಡುತ್ತಿದ್ದೇವೆ? ಜಾತಿಗಳು ಬೇರೆಬೇರೆಯಾಗಿದ್ದರೂ ಹಳ್ಳಿಗಳಲ್ಲಿ ನಮ್ಮ ಜನ ಸಮುದಾಯದ ನಡುವೆ ಸಾಮರಸ್ಯಕ್ಕೇನೂ ಕೊರತೆ ಇರಲಿಲ್ಲ. ಅಲ್ಪಸಂಖ್ಯಾತರ ವಿಷಯಕ್ಕೂ ದ್ವೇಷಭಾವನೆ ಖಂಡಿತ ಇರಲಿಲ್ಲ. ಆದರೆ ಆದದ್ದೇನು? ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯ ಇತಿಹಾಸವೆಂದರೇನೇ ವೋಟಿಗಾಗಿ ನಮ್ಮ ದೇಶದಲ್ಲಿ ಮೊದಲಿನಿಂದಲೂ ಇದ್ದ ಜಾತಿಗಳ ಬೇರು ಬುಡಗಳನ್ನು ಇನ್ನಷ್ಟು ಗಟ್ಟಿಗೊಳಿಸುತ್ತ ಹೋದದ್ದು ಮತ್ತು ಜಾತ್ಯತೀತತೆಯ ಹೆಸರಿನಲ್ಲಿ ಅಲ್ಪಸಂಖ್ಯಾತರನ್ನು ತುಷ್ಟೀಕರಿಸುವ ಮೂಲಕ ಕೋಮುಭಾವನೆಯನ್ನು ಇನ್ನಷ್ಟು ದೃಢಗೊಳಿಸುತ್ತ ಕೋಮುದ್ವೇಷವನ್ನಾಗಿ ಪರಿವರ್ತಿಸಿದ್ದು ಎನ್ನುವ ಮಟ್ಟಿಗೆ ಆದದ್ದನ್ನು ದುರಂತವೆನ್ನದೆ ವಿಧಿಯಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.