ADVERTISEMENT

ಸಂಗತ: ಹೀಗಿದ್ದರು, ಆ ಗುರುವರ್ಯರು..

ನಲ್ಮೆಯ ಗುರುವಿಗೆ ಸಂದ ಆ ಹೃದಯಸ್ಪರ್ಶಿ ಬೀಳ್ಕೊಡುಗೆಗೆ ಶತಮಾನ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 4:14 IST
Last Updated 6 ಸೆಪ್ಟೆಂಬರ್ 2021, 4:14 IST
   

ಮೈಸೂರು ವಿಶ್ವವಿದ್ಯಾಲಯದ ಕನ್ನಡದ ಮೊದಲ ಪ್ರೊಫೆಸರ್ ಎಂಬ ಹೆಗ್ಗಳಿಕೆಯ ಟಿ.ಎಸ್.ವೆಂಕಣ್ಣಯ್ಯ ಅವರು ವಿದ್ವತ್ತು, ಸಂಪನ್ನತೆ, ಸರಳತೆ, ಶಿಷ್ಯ ವಾತ್ಸಲ್ಯಕ್ಕೆ ಹೆಸರಾದವರು. ಅವರು ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆಯೇ ಭಾವಿಸಿದ ಗುರುವರ್ಯರು. ಮನೆಗೆ ಬರುವ ವಿದ್ಯಾರ್ಥಿಗೆ ‘ಕೈ ಕಾಲು ತೊಳೆದುಕೊ, ಊಟ ಮಾಡುವಿಯಂತೆ’ ಎನ್ನುತ್ತಿದ್ದ ಅವರ ಮನೆ ಗುರುಕುಲವೇ ಆಗಿತ್ತು.

ವೆಂಕಣ್ಣಯ್ಯ, ತೀ.ನಂ.ಶ್ರೀ., ಎ.ಆರ್.ಕೃಷ್ಣಶಾಸ್ತ್ರೀ- ಈ ತ್ರಿಮೂರ್ತಿ ಮಹನೀಯರಿಗೆ ಕನ್ನಡದ ಅಶ್ವಿನಿ ದೇವತೆಗಳೆನ್ನುವುದು ಇಂದಿಗೂ ಮನೆಮಾತು. ಒಮ್ಮೆ ವೆಂಕಣ್ಣಯ್ಯನವರು ಪಂಪನ ಕುರಿತ ಭಾಷಣಕ್ಕೆ‌ ತಯಾರಾಗುತ್ತಿದ್ದುದನ್ನು ಗಮನಿಸಿದ ಅವರ ಆಪ್ತ ರೊಬ್ಬರು ಅಚ್ಚರಿಯಿಂದ ‘ಇದೇನು ಸರ್, ಘನ ಪಾಂಡಿತ್ಯವುಳ್ಳ ನಿಮಗೂ ಪೂರ್ವಸಿದ್ಧತೆಯೇ’ ಎಂದು ಪ್ರಶ್ನಿಸಿದರು. ‘ಎಂತಹ ಪರಿಶ್ರಮವಿರಲಿ, ಪೂರ್ವಸಿದ್ಧತೆ ಅತ್ಯಗತ್ಯ. ಇಲ್ಲದಿದ್ದರೆ ತಬ್ಬಿಬ್ಬು, ವಿಷಯಾಂತರ ಖಾತರಿ’ ಎಂದರಂತೆ ಪ್ರೊಫೆಸರ್.

ತರಗತಿಯಲ್ಲಿ ವಿದ್ಯಾರ್ಥಿಗಳು ಕಲಿಯಲು ಅನುಕೂಲಕರವೂ ಆಸಕ್ತವೂ ಆದ ವಾತಾವರಣ ಸೃಷ್ಟಿಸುವಲ್ಲಿ ಅಧ್ಯಾಪನದ ಶ್ರೇಷ್ಠತೆಯಿದೆ. ಅಧ್ಯಾಪಕರು ತಾಕಲಾಟಕ್ಕೀಡುಮಾಡುವ ಪ್ರಶ್ನೆಗಳನ್ನು ಮಂಡಿಸಿ ಆ ಮೂಲಕ ಹೊಸ ಹೊಳಹುಗಳಿಗೆ ವಿದ್ಯಾರ್ಥಿಗಳನ್ನು ಪ್ರೇರೇಪಿಸುವುದು ಮಾದರಿ. ತಾದಾತ್ಮ್ಯದಿಂದ ಜಗತ್ತನ್ನು ಮಕ್ಕಳ ಕಣ್ಣುಗಳ ಮೂಲಕ ನೋಡುವ ಪ್ರವೃತ್ತಿ ಶಿಕ್ಷಕರಿಗಿದ್ದರೆ ತರಗತಿ ಸಜೀವವಾಗುತ್ತದೆ,ಕಳೆಗಟ್ಟುತ್ತದೆ. ಅಧ್ಯಾಪನಕ್ಕೆ ತಿಳಿಹಾಸ್ಯದ ಸ್ಪರ್ಶವಾದ ರಂತೂ ಮಕ್ಕಳ ತುಟಿಗಳಲ್ಲಿ ನಗು, ಮನಸ್ಸುಗಳು ಹಗುರ.

ADVERTISEMENT

ತರಗತಿಯೆನ್ನುವುದು ಶಿಕ್ಷಕರು ಮತ್ತು ವಿದ್ಯಾರ್ಥಿ ಗಳು ಜೊತೆಗೂಡಿ ಕಲಿಯುವ ತಾಣ. ಶಿಕ್ಷಕರು ಕಲಿ ಸುತ್ತಲೇ ಕಲಿತರೆ, ವಿದ್ಯಾರ್ಥಿಗಳು ಕಲಿಯುತ್ತಲೇ ಕಲಿಸಿ ರುತ್ತಾರೆ. ಹಾಗಾಗಿ ತರಗತಿ ಸಂವಾದಕ್ಕೆ ಒತ್ತು ನೀಡುವ ವೇದಿಕೆಯಾಗಬೇಕೆ ಹೊರತು ಪಠ್ಯಕ್ರಮ, ಪಾಠಕ್ಕೆ ಸೀಮಿತವಾಗಬಾರದು.

ಖಂಡಾಂತರ ವ್ಯಾಧಿ ಕೋವಿಡ್ ಕಾಡುತ್ತಿರುವಾಗ ಆನ್‍ಲೈನ್ ಬೋಧನೆಯಿಂದ ಇನ್ನೂ ಪೂರ್ತಿ ಯಾಗಿ ಹೊರಬರಲಾಗಿಲ್ಲ. ಆನ್‍ಲೈನ್ ತರಗತಿಯ ಇತಿಮಿತಿಗಳು ಗೊತ್ತೇ ಇದೆ. ಇದರ ನಡುವೆಯೂ ಸಕಾರಾತ್ಮಕವಾಗಿ ಭರವಸೆಯಿಂದಲೇ ಆಲೋಚಿ ಸೋಣ. ವಿದ್ಯಾರ್ಥಿಗಳಿಗೋ ಮನೆಯ ಸುರಕ್ಷತೆ, ಗುರು ವೊಂದಿಗೆ ಹಿರಿಯರ ಸಮ್ಮುಖವೂ ಲಭಿಸಿ ಕೌಶಲ ವೃದ್ಧಿಗೆ ಉತ್ತಮ ಉತ್ತೇಜನ, ಸಮಯದ ಸಮರ್ಥ ವಿನಿಯೋಗ.

ರಾಷ್ಟ್ರಪತಿಯಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್‍ ಅವರ ಜನ್ಮದಿನ ಸೆಪ್ಟೆಂಬರ್ 5. ಅನುಪಮ ಶಿಕ್ಷಕರಾಗಿದ್ದ ಅವರು ತಮ್ಮ ಜನ್ಮದಿನವನ್ನು ಶಿಕ್ಷಕರ ದಿನವಾಗಿ ಆಚರಿಸಲು ಅಪೇಕ್ಷಿಸಿದರು. 2021ರ ವಿಶೇಷವೆಂದರೆ, ರಾಧಾಕೃಷ್ಣನ್‍ ಅವರಿಗೆ ಮೈಸೂರಿನಲ್ಲಿ ವಿದ್ಯಾರ್ಥಿಗಳಿಂದ ಪ್ರದಾನವಾದ ಅಪೂರ್ವ ಬೀಳ್ಕೊಡುಗೆಗೆ ಒಂದು ಶತಮಾನ.

ಡಾ. ರಾಧಾಕೃಷ್ಣನ್ ಅವರು ಮೈಸೂರು ವಿಶ್ವವಿದ್ಯಾ ಲಯದಲ್ಲಿ ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಅವರ ಬೋಧನೆಯು ವಿದ್ಯಾರ್ಥಿಗಳಿಗೆ ಹಬ್ಬವೆನ್ನಿಸಿತ್ತು. ತತ್ವಶಾಸ್ತ್ರ ಹೇಳಿಕೇಳಿ ಕಬ್ಬಿಣದ ಕಡಲೆ! ಅದನ್ನು ಸರಳಗೊಳಿಸುತ್ತಿದ್ದ ರಾಧಾಕೃಷ್ಣನ್ ಒಬ್ಬ ಜಾದೂಗಾರನಂತೆ ತೋರುತ್ತಿದ್ದರು. ಅವರ ವಿದ್ಯಾರ್ಥಿಯಾಗಿದ್ದ ಎ.ಎನ್.ಮೂರ್ತಿರಾಯರು ತಮ್ಮ ‘ಅಲೆಯುವ ಮನ’ದಲ್ಲಿ ರಾಧಾಕೃಷ್ಣನ್ ಅವರ ತರಗತಿಯನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸಿದ್ದಾರೆ: ‘ಪಾಠ ಆರಂಭಕ್ಕೆ ಮೊದಲು ಸುಮಾರು ಹತ್ತು ನಿಮಿಷ ವಿದ್ಯಾರ್ಥಿಗಳನ್ನು ಮಾತಾಡಿಸಿ, ಕೀಟಲೆ ಮಾಡಿ ನಗಿಸುವುದಕ್ಕೆ ಮೀಸಲು. ಆಗ ಗುರುಶಿಷ್ಯರು ಕಾಫಿ ಒಳ್ಳೆಯದೊ ಅಥವಾ ಟೀನೋ, ಬಂಧನವಿಲ್ಲದ ಸ್ವಾತಂತ್ರ್ಯವುಂಟೇ, ಪ್ರಾಚಾರ್ಯರಂತೆ ಎಲ್ಲರೂ ನಿಲುವಂಗಿ ಧರಿಸಿದರೆ ಹೇಗೆ?... ಇಂಥ ಹತ್ತು ಹಲವು ಪ್ರಶ್ನೆಗಳು. ಹಿಂದಿನ ತರಗತಿಯ ಪಾಠದ ಪುನರಾವರ್ತನೆಯೇ ಒಂದು ಸಮಾರಾಧನೆ. ವಾಕ್‌ಸೌಂದರ್ಯವೂ ವಿಚಾರಸರಣಿಯೂ ಹದವಾಗಿ ಬೆರೆತ ಪಾಕ. ಸಮೃದ್ಧ ವಿವರಣೆ...’

1921, ಒಂದು ದಿನ ವಿದ್ಯಾರ್ಥಿಗಳಿಗೆ ಅರಗಿಸಿಕೊಳ್ಳಲಾಗದ ಸುದ್ದಿ. ತಮ್ಮ ಅಚ್ಚುಮೆಚ್ಚಿನ ಗುರುವರ್ಯರಿಗೆ ಕಲ್ಕತ್ತಾದ ವಿಶ್ವವಿದ್ಯಾಲಯಕ್ಕೆ ವರ್ಗ ವಾಗಿದೆ ಎನ್ನುವುದು. ತನ್ನ ಇಂಪಾದ ಗಾನ ನಿಲ್ಲಿಸಿ ಸಂಗೀತಪಟುವೊಬ್ಬ ವೇದಿಕೆಯಿಂದ ಕೆಳಗಿಳಿದರೆ ಶ್ರೋತೃಗಳಿಗೆ ಹೇಗಾಗಬೇಡ? ಆದರೆ ಕೋಗಿಲೆಯನ್ನು ಕಳುಹಿಸಿಕೊಡದೆ ಗತ್ಯಂತರವಿಲ್ಲ.

ಅಂದು ಡಾ. ರಾಧಾಕೃಷ್ಣನ್ ಪ್ರಯಾಣಿಸುವ ದಿನ. ಬೆಳಗ್ಗೆ ಹತ್ತೂವರೆ ವೇಳೆಗೆ ವಿದ್ಯಾರ್ಥಿಗಳ ಒಂದು ಗುಂಪು ಲಕ್ಷ್ಮೀಪುರಂನ ಅವರ ಮನೆಯ ಬಳಿ ತೆರಳಿತು. ರಾಧಾಕೃಷ್ಣನ್‍ ಅವರನ್ನು ರೈಲು ನಿಲ್ದಾಣಕ್ಕೆ ಕರೆದೊಯ್ಯಲು ಸಾರೋಟು ಸಿದ್ಧವಾಗಿ ನಿಂತಿತ್ತು. ವಿದ್ಯಾರ್ಥಿಗಳು ಮಾಡಿದ್ದೇನು? ಕುದುರೆಯನ್ನು ಬಿಚ್ಚಿದರು. ಸಾರೋಟನ್ನು ನೀರಿನಿಂದ ತೊಳೆದು ಹೂಗಳಿಂದ ಅಲಂಕರಿಸಿದರು. ಇನ್ನೊಂದು ಗುಂಪು ಆಗಲೇ ರೈಲು ನಿಲ್ದಾಣಕ್ಕೆ ಹೋಗಿ ರಾಧಾಕೃಷ್ಣನ್ಪ್ರಯಾಣಿಸಲಿದ್ದ ಬೋಗಿಯನ್ನು ತಳಿರು ತೋರಣ ಗಳಿಂದ ಶೃಂಗರಿಸಿತ್ತು. ಗುರುವನ್ನು ಕೂರಿಸಿ ಸಾರೋ ಟನ್ನು ಸ್ವತಃ ವಿದ್ಯಾರ್ಥಿಗಳೇ ಮನೆಯಿಂದ ರೈಲು ನಿಲ್ದಾಣದ ತನಕ ಎಳೆದರು. ‘ಮತ್ತೆ ಬರುವೆ’ ಅನ್ನುತ್ತ ಗುರುಗಳು ಬೋಗಿ ಏರಿದರು. ರೈಲು ಮರೆಯಾಗುವವರೆಗೆ ಕಣ್ಣೀರುಗರೆಯುತ್ತಿದ್ದ ಶಿಷ್ಯರು, ಅಧ್ಯಾಪಕರು, ಪೋಷಕರು ‘ಗುರುಗಳಿಗೆ ಜಯವಾಗಲಿ’ ಎನ್ನುತ್ತಿದ್ದರು. ಕೈ ಬೀಸುತ್ತಿದ್ದ ರಾಧಾಕೃಷ್ಣನ್‍ ಅವರ ಕಣ್ಣಾಲಿ ಗಳು ತುಂಬದಿರಲು ಸಾಧ್ಯವೇ?

ನಿಸ್ಸಂದೇಹವಾಗಿ ಮೈಸೂರು ಅಂದು ‘ಟ್ರಾಫಿಕ್ ಜಾಂ’ ಪರಿಚಯಿಸಿಕೊಂಡಿತ್ತು! ರಾಧಾಕೃಷ್ಣನ್ ಈ ಅಪೂರ್ವ ಬೀಳ್ಕೊಡುಗೆಯನ್ನು ಮತ್ತೆ ಮತ್ತೆ ನೆನಪಿಸಿ ಕೊಳ್ಳುತ್ತಿದ್ದರು: ‘ನನಗೆ ನನ್ನ ಬದುಕಿನಲ್ಲಿ ಏನೆಲ್ಲ ಸನ್ಮಾನ, ಸತ್ಕಾರ, ಪ್ರಶಸ್ತಿಗಳು ಸಂದಿವೆ. ಆದರೆ ಮೈಸೂರಿನಲ್ಲಿ ವಿದ್ಯಾರ್ಥಿಗಳು ನೀಡಿದ ಗೌರವವನ್ನು ಮಾತ್ರ ಮರೆಯಲಾರೆ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.