ADVERTISEMENT

ಸಂಗತ| ಆಕೆಯ ಕರ್ತವ್ಯಪರತೆಗೆ ಅಂಜುವುದೇಕೆ?

ಹೆಣ್ಣುಮಕ್ಕಳ ಕುರಿತ ಚುಚ್ಚುಮಾತುಗಳಲ್ಲಿ ಅಡಗಿರುವುದು ಅವರ ಸಾಮರ್ಥ್ಯದ ಬಗೆಗಿನ ಭಯಮಿಶ್ರಿತ ಅಸೂಯೆ ಹಾಗೂ ಕೈಲಾಗದ ಅಸಹಾಯಕತೆ

ನಳಿನಿ ಟಿ.ಭೀಮಪ್ಪ
Published 22 ಜುಲೈ 2021, 19:31 IST
Last Updated 22 ಜುಲೈ 2021, 19:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮೊನ್ನೆ ಸ್ಕೂಟಿಯಲ್ಲಿ ಬರುವಾಗ ದಾರಿಯಲ್ಲಿ ಮಹಿಳಾ ಟ್ರಾಫಿಕ್ ಪೊಲೀಸ್‌ ಒಬ್ಬರು ಗಾಡಿಯನ್ನು ನಿಲ್ಲಿಸಲು ಸೂಚಿಸಿದರು. ನನ್ನ ಜೊತೆ ಮತ್ತಿಬ್ಬರು ಪುರುಷರ ಗಾಡಿಗಳನ್ನೂ ನಿಲ್ಲಿಸಲಾಯಿತು. ಎಮಿಶನ್ ಟೆಸ್ಟ್ ಸರ್ಟಿಫಿಕೇಟ್ ತೋರಿಸಿ ಎಂದು ಆಕೆ ಕೇಳಿದರು. ಅವರಲ್ಲೊಬ್ಬರು ‘ಮೇಡಮ್, ಇಲ್ಲೇ ಸಣ್ಣ ಕೆಲಸಕ್ಕೆ ಬಂದಿದ್ದೆವು. ನಾವು ಬರೀ ಕಾರ್‍ನಲ್ಲಿಯೇ ಅಡ್ಡಾಡುವುದು, ಹಾಗಾಗಿ ಮಾಡಿಸಿಲ್ಲ’ ಎಂದು ಏನೇನೋ ಸಬೂಬು ಹೇಳತೊಡಗಿದರು. ಆಕೆ ಯಾವುದಕ್ಕೂ ಸೊಪ್ಪು ಹಾಕದೆ, ‘ಐನೂರು ರೂಪಾಯಿ ದಂಡ ಕಟ್ಟಲೇಬೇಕು’ ಎಂದಾಗ, ‘ನಮಗೆ ಆರ್‌ಟಿಒದಲ್ಲಿ ಅವರು ಗೊತ್ತು, ಇವರು ಗೊತ್ತು, ದೊಡ್ಡ ಕಾಲೇಜಿನ ಉಪನ್ಯಾಸಕ ನಾನು’ ಅಂತೆಲ್ಲ ಸಮಜಾಯಿಷಿ
ನೀಡತೊಡಗಿದರು.

‘ಅದ್ಯಾರು ಗೊತ್ತಿದ್ದಾರೋ ಫೋನ್ ಮಾಡಿ’ ಎಂದು ಆಕೆ ಹೇಳಿದಾಗ, ಯಾರಿಗೋ ಡಯಲ್ ಮಾಡಿ ವಿಷಯ ತಿಳಿಸಿ, ಆಕೆಯ ಕೈಗೆ ಫೋನ್‌ ಕೊಟ್ಟು ‘ಮಾತನಾಡಿ ಮೇಡಮ್’ ಎಂದರು. ಆಕೆ ಮಾತನಾಡುವಾಗ ಮುಖ ಸಣ್ಣದು ಮಾಡಿಕೊಂಡು ‘ಎಸ್ ಸರ್, ಎಸ್ ಸರ್’ ಎನ್ನುವುದನ್ನು ಗಮನಿಸಿದೆ. ಫೋನ್ ಇವರ ಕೈಗೆ ವಾಪಸ್ ಕೊಟ್ಟು ಉದಾಸೀನದಿಂದ ‘ತಾವು ಹೋಗಬಹುದು’ ಎಂದರಾಕೆ. ತನ್ನ ಕರ್ತವ್ಯ ಸರಿಯಾಗಿ ನಿರ್ವಹಿಸಿದ್ದೇನೆಂಬ ಆತ್ಮವಿಶ್ವಾಸ, ಹೆಮ್ಮೆ ಆಕೆಯ ಮುಖದಲ್ಲಿ ಕಂಡುಬರುತ್ತಿತ್ತು. ಇವರಿಬ್ಬರ ಮುಖದಲ್ಲಿ ಆಕೆಯನ್ನು ಮಣಿಸಿದ ರೀತಿಗೆ ವ್ಯಂಗ್ಯ ನಗು ಜೊತೆಗೆ ದಂಡ ಕಟ್ಟುವುದನ್ನು ತಪ್ಪಿಸಿಕೊಂಡೆವು ಎನ್ನುವ ಉಡಾಫೆಯ ಮನೋಭಾವ ನೋಡುಗರಿಗೆ ಸಹ್ಯವೆನಿಸುತ್ತಿರಲಿಲ್ಲ.

ನಾನೂ ಸರ್ಟಿಫಿಕೇಟ್ ಇಲ್ಲದ ಕಾರಣ ಮತ್ತೊಬ್ಬರ ಜೊತೆಗೆ ದಂಡ ಕಟ್ಟಿ ಅಲ್ಲೇ ಮುಂದಿದ್ದ ತರಕಾರಿ ಅಂಗಡಿಗೆ ಹೋದೆ. ಅಲ್ಲಿ ಅವರಿಬ್ಬರೂ ಇದ್ದರು. ‘ಏನು ಮಾರಾಯ, ಈ ಲೇಡೀಸ್ ಹತ್ರ ಸಿಕ್ಕಿ ಹಾಕ್ಕೊಂಡರೆ ತುಂಬಾ ಕಷ್ಟ ನೋಡು. ಜೆಂಟ್ಸ್ ಆದರೆ ಒಂಚೂರು ಕೈಬೆಚ್ಚಗೆ ಮಾಡಿಯೋ ಹೇಗಾದರೂ ಏನಾದರೂ ಹೇಳಿಯೋ ಪಾರಾಗಬಹುದು. ಆದರೆ ಈ ಹೆಣ್ಣುಮಕ್ಕಳಿದ್ದರೆ ತುಂಬಾ ಕಿರಿಕಿರಿ ಮಾಡ್ತಾರೆ, ಯಾವುದಕ್ಕೂ ಬಗ್ಗುವುದೇ ಇಲ್ಲ ಅಂತಾರೆ. ದೊಡ್ಡ ಆರ್‌ಟಿಒ ಆಫೀಸರ್‌ ಕಡೆಯಿಂದಲೇ ಫೋನ್ ಮಾಡಿಸಿದೆ ನೋಡು, ಸುಮ್ಮನೆ ತಣ್ಣಗಾಗಿಬಿಟ್ಟಳು’ ಎಂದು ನಗಾಡುತ್ತಿದ್ದರು.

ADVERTISEMENT

ಅರೆ! ಆಕೆ ತನ್ನ ಪಾಲಿನ ಕರ್ತವ್ಯ ನಿರ್ವಹಿಸಿದ್ದೂ ಇವರ ಕಣ್ಣಿಗೆ ಘನಘೋರ ಅಪರಾಧ. ಅದೇ ಲಂಚಕ್ಕೆ ಕೈಯೊಡ್ಡಿದ್ದರೆ ಮತ್ತೊಂದು ರೀತಿಯಲ್ಲಿ ಚುಚ್ಚುತ್ತಿರಲಿಲ್ಲವೇ ಇವರು? ಆಕೆ ಪ್ರಾಮಾಣಿಕವಾಗಿ, ನಿಷ್ಠೆಯಿಂದ ಮಾಡಿದ ಕೆಲಸಕ್ಕೆ ಕಿಂಚಿತ್ತು ಬೆಲೆಯನ್ನೂ ಕೊಡದೆ, ಆಕೆ ಹೆಣ್ಣು, ತಮ್ಮ ಅಧಿಕಾರದ ಪ್ರಭಾವದಿಂದ ಅವಳನ್ನು ಹತ್ತಿಕ್ಕಿದೆವು ಎನ್ನುವ ಅಹಂಕಾರದ ಮನಃಸ್ಥಿತಿಯೇ ಅವರಿಬ್ಬರಲ್ಲಿ ಹೆಚ್ಚು ಎದ್ದು
ಕಾಣುತ್ತಿತ್ತು.

ಎಷ್ಟೋ ಸಲ ರೈಲ್ವೆಯಲ್ಲಿ ಟಿಕೆಟ್ ಚೆಕಿಂಗ್‍ಗೆ ಬರುವ ಅಧಿಕಾರಿ ಮಹಿಳೆಯಾಗಿದ್ದರೆ, ಟಿಕೆಟ್ ಕೊಳ್ಳದೆ ಪ್ರಯಾಣಿಸುವವರ ಗಂಟಲಲ್ಲಿ ಮುಳ್ಳು ಸಿಕ್ಕಿಹಾಕಿಕೊಂಡ ಹಾಗಾಗುತ್ತದೆ. ಏಕೆಂದರೆ ಅವರನ್ನು ಯಾಮಾರಿಸುವುದು ಅಷ್ಟು ಸುಲಭವಲ್ಲ ಎಂಬ ಅರಿವು ಬಹುತೇಕರಿಗೆ ಇರುತ್ತದೆ. ಕಿರಣ್ ಬೇಡಿಯವರಿಗಿಂತ ಮಾದರಿ ಬೇಕೆ? ತಾನು ಕರ್ತವ್ಯದಲ್ಲಿದ್ದಾಗ ತಪ್ಪು ಮಾಡಿದ ದೊಡ್ಡ ರಾಜಕಾರಣಿಗೇ ದಂಡ ಹಾಕಿ, ಕಾನೂನಿನ ಮುಂದೆ ಎಲ್ಲರೂ ಒಂದೇ ಎನ್ನುವುದನ್ನು ತೋರಿಸಿಕೊಟ್ಟ ದಿಟ್ಟ ಮಹಿಳೆ. ಹಾಗೆಯೇ ಶಾಲೆಗಳಿರಲಿ, ಬ್ಯಾಂಕುಗಳಿರಲಿ, ಪತ್ರಿಕೋದ್ಯಮ, ಐ.ಟಿ ಕ್ಷೇತ್ರವೇ ಇರಲಿ ಪ್ರತಿಯೊಂದರಲ್ಲಿಯೂ ಹೆಚ್ಚಿನ ಹೆಣ್ಣುಮಕ್ಕಳು ಅತ್ಯಂತ ಶಿಸ್ತು, ಬದ್ಧತೆಯಿಂದ ಕೆಲಸ ಮಾಡುತ್ತಾ ತಮ್ಮ ಛಾಪನ್ನು ಮೂಡಿಸುತ್ತಿದ್ದಾರೆ. ಆದರೆ ಸಹಿಸದ ಜನ ಮಾತ್ರ ಆಕೆಯನ್ನು ಯಾವ ರೀತಿಯಲ್ಲಿ ಕೆಳಗಿಳಿಸಿ ತಮಾಷೆ ನೋಡಲಿ ಎಂದು
ಕಾಯುತ್ತಿರುತ್ತಾರೆ.

ಮಹಿಳಾ ಉದ್ಯೋಗಿಗಳಿರುವ ಪ್ರತಿಯೊಂದು ಕ್ಷೇತ್ರದಲ್ಲಿಯೂ ಹೆಚ್ಚು ಕಡಿಮೆ ಇದೇ ಮನಃಸ್ಥಿತಿ ಹಾಗೂ ಪರಿಸ್ಥಿತಿ. ಆಕೆ ಅತ್ಯಂತ ಕರ್ತವ್ಯಪರತೆಯಿಂದ ಕೆಲಸ ಮಾಡಿದರೂ ಆಡಿಕೊಳ್ಳುವ ವಿಕೃತ ಮನಸ್ಸಿನವರೇ ಹೆಚ್ಚು. ಇನ್ನು ಕೆಲಸದಲ್ಲಿ ಅಕಸ್ಮಾತ್ ತಪ್ಪುಗಳಾಗಿಬಿಟ್ಟರೆ ‘ಈ ಹೆಂಗಸರಿಗೆ ವಹಿಸಿದರೆ ಹೀಗೇ ಆಗೋದು’ ಎನ್ನುವ ವ್ಯಂಗ್ಯದ ಬಾಣಗಳು ತೂರಿ
ಬರುತ್ತಿರುತ್ತವೆ.

ಉನ್ನತ ಹುದ್ದೆಗೆ ಸ್ವಂತ ಪರಿಶ್ರಮದಿಂದಲೇ ಮೇಲೇರಿದರೂ ‘ಹೆಂಗಸರು ಹೇಗಾದರೂ ಗಿಟ್ಟಿಸಿಕೊಂಡುಬಿಡುತ್ತಾರೆ’ ಎನ್ನುವ ಅಸಹ್ಯಕರ ಮಾತುಗಳು ಸಿದ್ಧವಾಗಿರುತ್ತವೆ. ಇಲ್ಲಿ ‘ಹೇಗಾದರೂ’ ಎನ್ನುವುದು, ಮೂದಲಿಸುವವರ ಕೀಳು ಮನಃಸ್ಥಿತಿಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಆದರೆ ಆಡುವವರು ಏನು ಆಡಿಕೊಂಡರೂ ಕೆಲಸ ಮಾಡುವವರಿಗೆ ಬೆಲೆ, ಗೌರವ ಯಾವತ್ತೂ ಇದ್ದೇ ಇರುತ್ತದೆ. ಹೊಟ್ಟೆಕಿಚ್ಚಿನವರ ಇಂತಹ ಚುಚ್ಚುಮಾತುಗಳಲ್ಲಿ ಅಡಗಿರುವುದು ಹೆಣ್ಣಿನ ಸಾಮರ್ಥ್ಯದ ಬಗೆಗಿನ ಒಂದು ರೀತಿಯ ಭಯಮಿಶ್ರಿತ ಅಸೂಯೆ ಹಾಗೂ ಕೈಲಾಗದ ಅಸಹಾಯಕತೆ. ತಮ್ಮ ಪಾಲಿನ ಕರ್ತವ್ಯವನ್ನು ಯಾವ ಅಂಜಿಕೆ, ಅಳುಕೂ ಇಲ್ಲದೆ ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವ ಹೆಣ್ಣುಮಕ್ಕಳ ಬಗ್ಗೆ ನಿಜವಾಗಿಯೂ ಹೆಮ್ಮೆಯೆನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.