ADVERTISEMENT

ಸಂಗತ: ನಡುವಿನ ಗೆರೆಯೇ ಅಳಿಸಿರುವಾಗ

ಕೆಲವು ಮಠಗಳು ತಮ್ಮದೇ ಜಾತಿಯ ರಾಜಕಾರಣಿಗಳ ರಕ್ಷಣೆಗೆ ಕಂಕಣಬದ್ಧವಾಗುವುದು ಇಂದಿನ ಮಾರುಕಟ್ಟೆ ಆರ್ಥಿಕತೆಯ ಸೂತ್ರಗಳಿಗೆ ಅನುಗುಣವಾಗಿಯೇ ಇದೆಯಲ್ಲವೇ?

ನಡಹಳ್ಳಿ ವಂಸತ್‌
Published 3 ಆಗಸ್ಟ್ 2021, 19:30 IST
Last Updated 3 ಆಗಸ್ಟ್ 2021, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ರಾಜಕೀಯದಲ್ಲಿ ಧಾರ್ಮಿಕ ಕ್ಷೇತ್ರದವರು ಮೂಗು ತೂರಿಸುತ್ತಿದ್ದಾರೆ ಎಂದು ಪ್ರಜ್ಞಾವಂತರು ಇಂದು ತಕರಾರುಗಳನ್ನು ಎತ್ತುತ್ತಿದ್ದಾರೆ. ಸೋಜಿಗವೆಂದರೆ, ಇದರಿಂದ ತೊಂದರೆಗೊಳಗಾಗಿರುವ ಕೆಲವು ರಾಜಕಾರಣಿಗಳು ತಮ್ಮ ಆಕ್ಷೇಪಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಇವೆಲ್ಲಾ ಮೇಲ್ನೋಟಕ್ಕೆ ಕಾಣುವಷ್ಟು ಸರಳವಾದ ವಿಶ್ಲೇಷಣೆಗೆ ಸಿಗಲು ಸಾಧ್ಯವೇ?

ಚುನಾವಣೆಗೆ ಟಿಕೆಟ್‌ ಪಡೆಯುವ ಹಂತದಿಂದಲೇ ಜಾತಿ, ಧರ್ಮಗಳ ಲೆಕ್ಕಾಚಾರಗಳು ಶುರುವಾಗುತ್ತವೆ. ಇಲ್ಲಿಂದಲೇ ಧಾರ್ಮಿಕ ಮುಖಂಡರ ರಂಗಪ್ರವೇಶ ಪ್ರಾರಂಭವಾಗಿರುತ್ತದೆ. ವೋಟಿನ ಬೇಟೆಗೆ, ಮಂತ್ರಿ ಪದವಿ ಗಳಿಸಲು, ಆಪಾದನೆಗಳಿಂದ ತಪ್ಪಿಸಿಕೊಳ್ಳಲು- ಹೀಗೆ ಪ್ರತೀ ಹಂತದಲ್ಲಿಯೂ ರಾಜಕಾರಣಿ ಗಳು ಧಾರ್ಮಿಕ ಕ್ಷೇತ್ರಗಳಿಗೆ ಎಡತಾಕುತ್ತಾರೆ. ನಮ್ಮ ಮತದಾರರು ಕೂಡ ಇಂತಹ ಎಲ್ಲಾ ವರ್ತನೆಗಳನ್ನು ಮಾನ್ಯ ಮಾಡಿರುತ್ತಾರೆ. ಹೀಗೆ ಅಯಾಚಿತವಾಗಿ ಬಂದ ಅಧಿಕಾರವನ್ನು ಧರ್ಮಪಾಲಕರೆಂದು ಕರೆಸಿಕೊಳ್ಳುವವರು ಏಕೆ ಬಳಸಿಕೊಳ್ಳಬಾರದು? ಕೇಳ ದೆಯೇ ಓಡಿಬಂದು ಕಾಲಿಗೆರಗುವವರು ಇರುವಾಗ ಅವರು ಆಶೀರ್ವಾದ ಮಾಡಲೇಬೇಕಲ್ಲವೇ?

ಧರ್ಮ– ರಾಜಕಾರಣದ ಸಂಬಂಧಕ್ಕೆ ಇನ್ನೂ ಆಳವಾದ ಒಳಸುಳಿಗಳಿವೆ. ಅಭಿವೃದ್ಧಿಯ ಹೆಸರಿನಲ್ಲಿ ಬದುಕಿನ ಸೌಲಭ್ಯಗಳನ್ನು ಹೆಚ್ಚಿಸಿಕೊಳ್ಳುತ್ತಾ ಜಾಗತೀ ಕರಣಗೊಂಡಿರುವ ಇಂದಿನ ಪ್ರಪಂಚದಲ್ಲಿ, ಎಲ್ಲ ಕ್ಷೇತ್ರಗಳಿಗೆ ಮೂಲ ಅಗತ್ಯ ಮತ್ತು ಪ್ರೇರಣೆ ಹಣ ಮಾತ್ರ ವಾಗಿದೆ. ಇಂದು ಹಣ ಗಳಿಕೆಗಾಗಿ ಕೇವಲ ವಸ್ತುಗಳನ್ನು ಮಾರುತ್ತಿಲ್ಲ. ವಿದ್ಯೆ, ಸಾರ್ವಜನಿಕ ಆರೋಗ್ಯವನ್ನೂ ಮಾರುತ್ತಿದ್ದೇವೆ. ಅಷ್ಟೇ ಅಲ್ಲ ಸಾಹಿತ್ಯ, ಕಲೆ, ಸಂಶೋಧನೆಯಂತಹ ದೂರಗಾಮಿ ಪರಿಣಾಮಗಳುಳ್ಳ ಮತ್ತು ಹಣ ಹೂಡುವಿಕೆ, ಗಳಿಸುವಿಕೆಗಿಂತ ಮಿಗಿಲಾದ ಉದ್ದೇಶಗಳುಳ್ಳ ಕ್ಷೇತ್ರಗಳನ್ನೂ ಈಗ ಬರೀ ಲಾಭದ ಮಾನದಂಡಗಳ ಮೇಲೆ ತೂಗಲಾಗುತ್ತದೆ.

ADVERTISEMENT

ಇದು ಹೋಗಲಿ, ವ್ಯಕ್ತಿಯೊಬ್ಬನ ಪ್ರೇಮ, ಮಮತೆಯಂತಹ ಮೃದು ಭಾವನೆಗಳು ಮತ್ತು ತೀರಾ ಆಪ್ತವಾದ ಕಾಮವೂ ಇಂದು ಮಾರುಕಟ್ಟೆ ವಸ್ತುಗಳಾಗಿವೆ. ಹೀಗಿರುವಾಗ ಧರ್ಮವೊಂದೇ ಇವತ್ತಿನ ಮಾರುಕಟ್ಟೆ ನೀತಿಯ ಹೊರಗಿರಬೇಕೆಂದು ನಿರೀಕ್ಷಿಸುವುದು ಸಾಧ್ಯವೇ? ಕ್ಯಾಪಿಟೇಷನ್‌ ಶುಲ್ಕದಲ್ಲಿ ವೈದ್ಯನಾದವನೊಬ್ಬ ‘ವೈದ್ಯೋ ನಾರಾಯಣೋ ಹರಿಃ’ ಎಂದು ಹೇಳುತ್ತಾ ಹಳ್ಳಿಯಲ್ಲಿ ವೃತ್ತಿಯನ್ನು ನಡೆಸುತ್ತಾನೆಂಬ ನಿರೀಕ್ಷೆಯೇ ಅವಾಸ್ತವಿಕ ಅಲ್ಲವೇ?

ಧರ್ಮಗಳ ಇಂದಿನ ಸ್ಥಿತಿಯಾದರೂ ಎಂತಹುದು? ತಮ್ಮ ಉಳಿವಿಗಾಗಿ ಭಕ್ತರನ್ನು ಆಕರ್ಷಿಸಲೇಬೇಕಾಗಿರುವುದರಿಂದ ಧಾರ್ಮಿಕ ಕ್ಷೇತ್ರಗಳ ನಡುವೆ ಭಕ್ತರನ್ನು ಸೆಳೆಯಲು ಸ್ಪರ್ಧೆ ಇರುತ್ತದೆ. ಹಾಗಾಗಿ ಅವು ಕೂಡ ಮಾರುಕಟ್ಟೆ ವ್ಯವಸ್ಥೆಯ ತಂತ್ರಗಳನ್ನೆಲ್ಲಾ ಮೈಗೂಡಿಸಿಕೊಂಡಿವೆ. ಕೇವಲ ‘ಸ್ಥಾವರಗಳು’ ನಿರ್ಮಾಣವಾದರೆ ಸಾಲದು, ಅವು ಭವ್ಯವಾಗಿರ ಬೇಕು, ಆಕರ್ಷಕವಾಗಿರಬೇಕು. ಅವನ್ನು ನಿಭಾಯಿಸು ವವರು ಜನರನ್ನು ಸೆಳೆಯಬಲ್ಲವರಾಗಿರಬೇಕು. ಇಲ್ಲಿನ ಪೂಜೆ, ಉತ್ಸವಗಳು ಅದ್ಧೂರಿಯಾಗಿರಬೇಕು ಮತ್ತು ಅವುಗಳಿಗೆ ಎಲ್ಲಾ ಮಾಧ್ಯಮಗಳಲ್ಲಿ ಪ್ರಚಾರ ಸಿಕ್ಕಬೇಕು.

‘ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’ ಎನ್ನುವ ಬಸವಣ್ಣನ ವಚನ ಇಂದು ಮರೆತುಹೋಗಿದೆ. ನಾವು ನೋಡುತ್ತಿರುವುದು ಉಳ್ಳವರು ನಿರ್ಮಿಸಿದ ಭವ್ಯವಾದ ಸ್ಥಾವರಗಳು ಮಾತ್ರ.

ಹಣದ ಮೂಲ ಏನೇ ಇರಲಿ, ಹೆಚ್ಚು ದಾನ ಮಾಡುವವ ಮಹಾಭಕ್ತ. ನಮ್ಮ ಭಕ್ತಿ ನಾವು ದೇವರಿಗಾಗಿ ವ್ಯಯಿಸುವ ಹಣದ ನೇರ ಅನುಪಾತದಲ್ಲಿರುತ್ತದೆ ಎನ್ನುವುದು ಎಲ್ಲ ದೇವರುಗಳ ಅಲಿಖಿತ ಆದೇಶ ಎನ್ನುವಂತೆ ಹೆಚ್ಚಿನ ಧರ್ಮಾಧಿಕಾರಿಗಳು ನಡೆದುಕೊಳ್ಳುತ್ತಾರೆ. ಹಾಗಾಗಿ ಕಪ್ಪುಹಣಾಧಿಪತಿಗಳು ಇಂದಿನ ಮಹಾಭಕ್ತರು. ಅವರನ್ನು ರಕ್ಷಿಸುವುದು ದೇವರ, ಮಠಾಧಿಪತಿಗಳ ಹೊಣೆಯಾದಂತಿದೆ. ಅಂದಮೇಲೆ ಆಯಾ ಜಾತಿಯ ಮಠಗಳು ತಮ್ಮದೇ ಜಾತಿಯ ರಾಜಕಾರಣಿಗಳನ್ನು ರಕ್ಷಿಸಲು ಕಂಕಣಬದ್ಧವಾದರೆ, ಅದು ಇಂದಿನ ಮಾರುಕಟ್ಟೆ ಆರ್ಥಿಕತೆಯ ಸೂತ್ರಗಳಿಗೆ ಅನುಗುಣವಾಗಿಯೇ ಇರುತ್ತದಲ್ಲವೇ?

ಇಂದಿನ ಬಹುತೇಕ ಧರ್ಮಾಧಿಕಾರಿಗಳು ನಡೆಸುತ್ತಿರುವ ಜೀವನಶೈಲಿಯಾದರೂ ಎಂತಹುದು? ಹೆಚ್ಚಿನವರು, ಧರಿಸುವ ಬಟ್ಟೆಯಲ್ಲಿ ಮಾತ್ರ ನಮ್ಮಂತಹ ಹುಲುಮಾನವರಿಗಿಂತ ಭಿನ್ನ. ನಡೆ–ನುಡಿ, ಜೀವನಶೈಲಿಯಿಂದ ಸಮಾಜಕ್ಕೆ ಮಾರ್ಗ
ದರ್ಶಕರಾಗಬಲ್ಲವರು ಎಂಬ ವಿಶ್ವಾಸವನ್ನು ನಮ್ಮಲ್ಲಿ ಇವರೆಲ್ಲಾ ಹುಟ್ಟಿಸುವುದು ಸಾಧ್ಯವೇ? ಮಾರ್ಗದರ್ಶನ ಮಾಡುವುದಿರಲಿ ಸಮಾಜಕಂಟಕರಾಗದಿದ್ದರೆ ಅದೇ ದೊಡ್ಡ ಉಪಕಾರ ಎನ್ನುವ ಪರಿಸ್ಥಿತಿ ಸೃಷ್ಟಿಯಾಗಿದೆ. ಇವರಲ್ಲಿ ಕೆಲವರ ಧನದಾಹ, ವೃತ್ತಿವೈಷಮ್ಯ, ರಾಜಕೀಯ ಕುಟಿಲತೆ ಇವುಗಳೆಲ್ಲಾ ವ್ಯಾಪಾರಿ ಜಗತ್ತಿನ ಧನದಾಹಿಗಳ ನಡುವೆ ನಡೆಯುವ ವ್ಯವಹಾರಗಳಿಗಿಂತ ಕಡಿಮೆಯೇನೂ ಇಲ್ಲ. ಅಂತಹವರು ನಡೆಸುವ ವಿದ್ಯಾಸಂಸ್ಥೆಗಳು ಶುದ್ಧ ವ್ಯಾಪಾರವಲ್ಲದೆ ಮತ್ತೇನು?

ಇಂದು ಧರ್ಮ ಧರ್ಮವಾಗಿಯೂ ಉಳಿದಿಲ್ಲ, ರಾಜಕೀಯ ರಾಜಕೀಯವಾಗಿಯೂ ಉಳಿದಿಲ್ಲ. ನಮ್ಮೆಲ್ಲರ ಬದುಕಿನ ಮೂಲ ಸೂತ್ರವೇ ಹಣವಾಗಿರು ವಾಗ, ಎಲ್ಲಾ ಕ್ಷೇತ್ರಗಳು ಮೇಲ್ನೋಟಕ್ಕೆ ಭಿನ್ನವೆಂದು ಕಾಣಿಸಿದರೂ ಅವೆಲ್ಲವೂ ಒಂದೇ ಗುರಿಯೆಡೆಗೆ ಸಾಗಿರುವ ಭಿನ್ನಭಿನ್ನ ಸಮಾನಾಂತರ ರೇಖೆಗಳು ಮಾತ್ರ.

ಅಕ್ಕನವರ ಕ್ಷಮೆ ಕೇಳುತ್ತಾ, ‘ಧನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು, ಹಣ ಕೊಡದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯಾ ನೀನು’ ಎಂದು ಹಾಡಬಹುದೇನೋ ಅಥವಾ ದಾಸರ ಪದವನ್ನು ‘ರೊಕ್ಕ ಎಲ್ಲಕ್ಕೂ ಬಹುದೊಡ್ಡದು ಕಾಣಕ್ಕಾ’ ಎಂದೂ ಹಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.