ADVERTISEMENT

25 ವರ್ಷಗಳ ಹಿಂದೆ: ಭಾನುವಾರ 18.8.1996

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2021, 19:45 IST
Last Updated 17 ಆಗಸ್ಟ್ 2021, 19:45 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ದೇಶದ ನದಿಗಳ ಸಂಪರ್ಕ ಯತ್ನ

ಬೆಂಗಳೂರು, ಆ. 17– ದೇಶದ ಎಲ್ಲ ನದಿಗಳಿಗೆ ಅಂತರ್ ಸಂ‍ಪರ್ಕ ಕಲ್ಪಿಸಿ, ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಗೆ ಅದರ ಬಳಕೆಯಾಗುವಂತೆ ಮಾಡಲು ಕೇಂದ್ರ ಯೋಜನೆ ಮತ್ತು ಕಾರ್ಯಕ್ರಮ ಜಾರಿ ಸಚಿವ ಡಾ. ವೈ.ಕೆ. ಅಲಘ್ ಅವರ ನೇತೃತ್ವದಲ್ಲಿ ತಜ್ಞ ಎಂಜಿನಿಯರ್‌ಗಳನ್ನು ಒಳಗೊಂಡ ಸಮಿತಿಯೊಂದನ್ನು ಕೇಂದ್ರ ಸರ್ಕಾರ ಶೀಘ್ರವೇ ರಚಿಸಲಿದೆ ಎಂದು ಪ್ರಧಾನ ಮಂತ್ರಿ ಎಚ್‌.ಡಿ. ದೇವೇಗೌಡ ಇಂದು ಇಲ್ಲಿ ಪ್ರಕಟಿಸಿದರು.

ಘನೀಕೃತ ನೀರಿನ ಪರ್ವತವೇ ಆಗಿರುವ ಹಿಮಾಲಯದ ಹಿನ್ನೆಲೆಯಿದ್ದರೂ ದೇಶ ಪ್ರತಿವರ್ಷ ಅತಿವೃಷ್ಟಿ ಇಲ್ಲವೇ ಅನಾವೃಷ್ಟಿಯಿಂದ ಬಳಲುತ್ತಿದೆ. ಪ್ರಾದೇಶಿಕವಾದ ಸಂಕುಚಿತ ಭಾವನೆಯಿಂದ ನಾವು ಸಮಸ್ಯೆಯನ್ನು ರಾಕೀಕರಣಗೊಳಿಸುತ್ತಿದ್ದೇವೆ. ಸಮಸ್ಯೆಯನ್ನು ಪರಿಹರಿಸುವ ಸಾಹಸಕ್ಕೆ ಕೈ ಹಾಕಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲ. ಮುಂದುವರಿದ ರಾಷ್ಟ್ರಗಳಲ್ಲಿ ನೀರನ್ನು ರಾಷ್ಟ್ರೀಯ ಆಸ್ತಿ ಎಂದು ಪರಿಗಣಿಸುತ್ತಾರೆ. ಆದರೆ ಚಿನ್ನಕ್ಕಿಂತ ಅಮೂಲ್ಯವಾದ ಈ ಪ್ರಾಕೃತಿಕ ಸಂಪನ್ಮೂಲಗಳನ್ನು ನಾವು ಆ ಅರ್ಥದಲ್ಲಿ ಭಾವಿಸುತ್ತಿಲ್ಲ ಎಂದು ಅವರು ವಿಷಾದಿಸಿದರು.

ADVERTISEMENT

ಮಾತುಕತೆಗೆ ಆಂಧ್ರ ಒಪ್ಪಿಗೆ: ಪಟೇಲ್

ಬೆಂಗಳೂರು, ಆ. 17– ಭಾರಿ ವಿವಾದವನ್ನೇ ಹುಟ್ಟು ಹಾಕಿರುವ ಅಲಮಟ್ಟಿ ಅಣೆಕಟ್ಟೆಯ ಸಮಸ್ಯೆಗೆ ಪರಿಹಾರ ಹುಡುಕುವ ಮೊದಲ ಯತ್ನವಾಗಿ ಪರಸ್ಪರ ಮಾತುಕತೆ ನಡೆಸಲು ಕರ್ನಾಟಕ ಮತ್ತು ಆಂಧ್ರಪ್ರದೇಶ ಒಪ್ಪಿಕೊಂಡಿವೆ.

ಒಂದು ದಿನದ ಭೇಟಿಗಾಗಿ ನಗರಕ್ಕೆ ಆಗಮಿಸಿದ್ದ ಪ್ರಧಾನಿ ಎಚ್‌.ಡಿ. ದೇವೇಗೌಡರನ್ನು ವಿಮಾನ ನಿಲ್ದಾಣದಲ್ಲಿ ಬೀಳ್ಕೊಟ್ಟ ನಂತರ ಪತ್ರಕರ್ತರ ಜತೆ ಮಾತನಾಡಿದ ಮುಖ್ಯಮಂತ್ರಿಗಳು, ಆಲಮಟ್ಟಿ ಅಣೆಕಟ್ಟೆ ಎತ್ತರ ಕುರಿತು ಚರ್ಚಿಸಲು ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ರಾಜ್ಯಕ್ಕೆ ಆಹ್ವಾನಿಸಿರುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.