ADVERTISEMENT

50 ವರ್ಷಗಳ ಹಿಂದೆ, ಮಂಗಳವಾರ, 07-09-1971

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 19:30 IST
Last Updated 6 ಸೆಪ್ಟೆಂಬರ್ 2021, 19:30 IST
   

ಯಾವುದೇ ವಿದೇಶಿ ಬೆದರಿಕೆ ಎದುರಿಸಲು ಭಾರತ ಸಿದ್ಧ: ಇಂದಿರಾ

ಉಧಂಪುರ (ಜಮ್ಮು) ಸೆ. 6– ಭಾರತದ ಏಕತೆ ಮತ್ತು ಸಮಗ್ರತೆಗೆ ವಿಶ್ವದ ಯಾವುದೇ ವಲಯದಿಂದ ಬೆದರಿಕೆ ಬಂದರೂ ಅದನ್ನು ಎದುರಿಸಲು ರಾಷ್ಟ್ರ ಈಗ ಸಿದ್ಧವಾಗಿದೆ ಎಂದು ಪ್ರಧಾನಿ ಇಂದಿರಾ ಗಾಂಧಿ ಇಂದು ಘೋಷಿಸಿದರು.

‘ನಮ್ಮ ಶಾಂತಿ ಮತ್ತು ಏಕತೆಗೆ ಧಕ್ಕೆಯುಂಟುಮಾಡಲು ಯಾರೇ ಯತ್ನಿಸಿದರೂ, ಅವರಿಗೆ ಸೂಕ್ತ ಉತ್ತರ ನೀಡಲು ಈಗ ನಾವು ಶಕ್ತರಾಗಿದ್ದೇವೆ’ ಎಂದೂ ಅವರು ತಿಳಿಸಿದರು.

ADVERTISEMENT

ಜಮ್ಮುವಿನಿಂದ 165 ಕಿ.ಮೀ. ದೂರದ ರಾಜೌರಿಯಲ್ಲಿ ಬೃಹತ್ ಸಭೆಯೊಂದನ್ನುದ್ದೇಶಿಸಿ ಮಾತನಾಡುತ್ತಾ, ನಮ್ಮ ರಕ್ಷಣಾ ಪಡೆಯವರು ನಮ್ಮ ಗಡಿಗಳನ್ನು ರಕ್ಷಿಸಲು ಸದಾ ಎಚ್ಚರದಿಂದಿದ್ದು ಶಕ್ತರಾಗಿದ್ದರೂ, ಪಾಕ್ ಆಡಳಿತಗಾರರ ಯಾವುದೇ ಬಗೆಯ ಪ್ರಚೋದನೆಗಳ ವಿರುದ್ಧ ಜನರು ಜಾಗೃತವಾಗಿದ್ದು ಸಹಕರಿಸುವ ಸಂಪ್ರದಾಯವನ್ನು ಕಾಪಾಡಿಕೊಂಡು ಬರಬೇಕು ಎಂದೂ ಪ್ರಧಾನಿ ನುಡಿದರು.

ನಗರದಲ್ಲಿ ಪಂಚಮಹಾಕ್ಷೇತ್ರ ಜಗದ್ಗುರುಗಳ ಸಮಾವೇಶ

ಬೆಂಗಳೂರು, ಸೆ. 6– ಮುಂದಿನ ನವೆಂಬರ್ ತಿಂಗಳಿನಲ್ಲಿ ಇತಿಹಾಸದಲ್ಲೇ ಪ್ರಥಮ ಬಾರಿಗೆ ಪಂಚ ಮಹಾಕ್ಷೇತ್ರಗಳಾದ ಶ್ರೀ ರಂಭಾಪುರಿ, ಶ್ರೀ ಉಜ್ಜಯಿನಿ, ಶ್ರೀ ಕಾಶೀ, ಶ್ರೀ ಕೇದಾರ ಹಾಗೂ ಶ್ರೀ ಶೈಲ ಜಗದ್ಗುರುಗಳು ನಗರದಲ್ಲಿ ಒಟ್ಟಿಗೆ ಸೇರುವರು.

ಈ ಸಂಬಂಧದಲ್ಲಿ ನವೆಂಬರ್ 13ರಂದು ಶ್ರೀ ಜಗದ್ಗುರು ಪಂಚಾಚಾರ್ಯರ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯಲಿದೆ. 15ರಂದು ವಿಶ್ವಶಾಂತಿ, ರಾಷ್ಟ್ರ ಕಲ್ಯಾಣ ಹಾಗೂ ಸಮಾಜೋನ್ನತಿಗಾಗಿ ಶ್ರೀ ರಂಭಾಪುರಿ ಜಗದ್ಗುರುಗಳ ಸನ್ನಿಧಿಯಲ್ಲಿ ಸಹಸ್ರ ಕುಂಭಾಭಿಷೇಕ ಶತಮಾನೋತ್ಸವವನ್ನು ಲಾಲ್‌ಬಾಗಿನ ಜ್ಯುಬಿಲಿ ಹಾಲಿನಲ್ಲಿ ಆಚರಿಸಲಾಗವುದು. 14ರಂದು ನವಗ್ರಹ ಜಪ, ರುದ್ರಾಭಿಷೇಕ ನಡೆಯುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.