ADVERTISEMENT

ಪಕ್ಷಿಪ್ರೇಮ ಉಳಿಯಲಿ, ಸತ್ಯದ ಅರಿವಾಗಲಿ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2021, 20:18 IST
Last Updated 15 ಸೆಪ್ಟೆಂಬರ್ 2021, 20:18 IST

ಪಕ್ಷಿಗಳು ಹಿಕ್ಕೆ ಹಾಕಿ ಅರಳಿಕಟ್ಟೆಯನ್ನು ಗಲೀಜು ಮಾಡುತ್ತಿದ್ದವು ಎಂಬ ಕಾರಣಕ್ಕೆ ಟಿ.ನರಸೀಪುರ ತಾಲ್ಲೂಕಿನ ಕುಪ್ಯ ಎಂಬಲ್ಲಿ ಗ್ರಾಮಸ್ಥರು ಮರದ ಕೊಂಬೆಗಳನ್ನು ಏಕಾಏಕಿ ಕತ್ತರಿಸಿದ್ದರಿಂದ, ಬೆಳ್ಳಕ್ಕಿ ಮರಿಗಳು ಕೆಳಗೆ ಬಿದ್ದು ಮೃತ
ಪಟ್ಟಿರುವುದನ್ನು (ಪ್ರ.ವಾ., ಸೆ. 15) ಓದಿ ನೋವಾಯಿತು. ಮಾನವೀಯತೆ ಮರೆತ ಇವರ ಮನಃಸ್ಥಿತಿ ಮೃಗೀಯ, ಅಮಾನವೀಯ. ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿದೆ.

ಪ್ರಕೃತಿಯೇ ದೇವರು. ಅದರ ಸಾಂಕೇತಿಕ ರೂಪವಾಗಿ ಅರಳಿ ಮತ್ತು ಬೇವಿನ ಮರಗಳನ್ನು ಬೆಳೆಸಲಾಗುತ್ತದೆ ಹಾಗೂ ಈ ಮರಗಳು ಹಲವು ಪಕ್ಷಿಗಳ ಆಶ್ರಯತಾಣಗಳಾಗಿರುತ್ತವೆ ಎಂಬ ಸಾಮಾನ್ಯ ಸತ್ಯದ ಅರಿವು ಮೂಡದೇ ಇರುವುದು ಇವರ ಅಜ್ಞಾನಕ್ಕೆ ಉದಾಹರಣೆಯಾಗಿದೆ. ಆಧುನಿಕತೆಯ ಓಟದಿಂದ, ನಗರೀಕರಣದ ಪ್ರಭಾವದಿಂದ, ರಸ್ತೆ ವಿಸ್ತರಣೆಯಿಂದ, ಹೊಸ ಬಡಾವಣೆ, ಕಚೇರಿ ನಿರ್ಮಾಣದ ಕಾರಣಗಳಿಂದ ಮರಗಳ ಮಾರಣಹೋಮ ನಿತ್ಯದ ಸುದ್ದಿಯಾದರೂ ಸಂವೇದನಾರಹಿತ ವ್ಯವಸ್ಥೆಗೆ ಏನೂ ಅನ್ನಿಸುವುದಿಲ್ಲ. ಈ ಮರಗಳ ಮೇಲೆ ವಾಸ ಮಾಡುವ ಹಲವು ಬಗೆಯ ಪಕ್ಷಿಗಳು ಇಂದು ಅವಸಾನದ ಅಂಚನ್ನು ತಲುಪಿ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿವೆ.

ದೇವರಕಾಡುಗಳೆಂದು ಕರೆಯಲಾಗುವ ಮರಗಳ ಗುಂಪನ್ನು ಹಿಂದೆ ಯಾವುದೇ ರೀತಿಯಿಂದಲೂ ಅಡ್ಡಿಪಡಿಸದೇ ಕಾಪಾಡುತ್ತಿದ್ದರು. ಇಲ್ಲಿ ಹಲವು ಬಗೆಯ ಹಣ್ಣಿನ ಮರಗಳು, ಗಿಡಮೂಲಿಕೆಗಳು, ಬಗೆ ಬಗೆಯ ಹೂವಿನ ಮರಗಳನ್ನು ಬೆಳೆಸುತ್ತಿದ್ದರು. ಇದರ ಉದ್ದೇಶ ಪಕ್ಷಿಗಳಿಗೆ ಆಶ್ರಯ, ಹೂಗಳಿಂದ ಜೇನಿನ ಪರಾಗಸ್ಪರ್ಶ, ಉತ್ತಮ ಗಾಳಿ. ಇದು ಪರಿಸರ ಸಮತೋಲನ ಕಾಪಾಡುವ ವೈಜ್ಞಾನಿಕ ವಿಧಾನವಾಗಿತ್ತು. ಮನುಷ್ಯನ ಸ್ವಾರ್ಥ, ದುರಾಸೆಯಿಂದಾಗಿ ಇಂದು ಎಲ್ಲವೂ ನಾಶದ ಸ್ಥಿತಿಗೆ ತಲುಪಿವೆ. ಇನ್ನಾದರೂ ಗಿಡ, ಮರ, ಪ್ರಾಣಿ, ಪಕ್ಷಿ, ಕಾಡು, ಬೆಟ್ಟ ಇವುಗಳೊಂದಿಗೆ ಬದುಕು ಕಟ್ಟಿಕೊಳ್ಳೋಣ. ಅವುಗಳಿಗೂ ನಮ್ಮಂತೆಯೇ ಬದುಕುವ ಹಕ್ಕಿದೆ ಎಂಬ ಸತ್ಯವನ್ನು ಅರಿಯೋಣ.

ADVERTISEMENT

- ಎಚ್.ಎನ್.ಕಿರಣ್ ಕುಮಾರ್,ಹಳೇಹಳ್ಳಿ, ಗೌರಿಬಿದನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.