ADVERTISEMENT

ರೈತರಿಗೆ ನೆರವಾದ ಮಹಾನುಭಾವ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2021, 19:31 IST
Last Updated 31 ಆಗಸ್ಟ್ 2021, 19:31 IST

ಪಿ.ಎಂ.ಬಾಂಗಿಯವರ ಜನಪರ ಕಾಳಜಿ ಕುರಿತಾದ ಮಲ್ಲಿಕಾರ್ಜುನ ಹೆಗ್ಗಳಗಿ ಅವರ ಲೇಖನ ‘ಸರಳ ನಡೆಯ ಸೊಬಗು’ (ಸಂಗತ, ಆ. 30) ಓದಿದ ನನಗೆ, ಬಾಂಗಿಯವರ ಕಾರ್ಯವೊಂದು ನೆನಪಿಗೆ ಬಂತು. ಬಾಂಗಿಯವರು 1972ರಲ್ಲಿ ಜಮಖಂಡಿ ಭಾಗದ ಶಾಸಕರಾಗಿದ್ದರು. ಆಗ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದರು. ಆ ವರ್ಷ ಈ ಪ್ರದೇಶ ಭೀಕರ ಬರಗಾಲಕ್ಕೆ ತುತ್ತಾಯಿತು. ಸಾಮಾನ್ಯವಾಗಿ ಬನಹಟ್ಟಿ, ರಬಕವಿ, ಹೊಸೂರ, ಚಿಮ್ಮಡ, ಜಗದಾಳ ಮತ್ತು ನಾವಲಗಿ ಊರುಗಳಲ್ಲಿನ ಬಾವಿಗಳೆಲ್ಲ ಡಿಸೆಂಬರ್‌ ತಿಂಗಳಲ್ಲೇ ಬತ್ತಿ ಹೋಗಿರುತ್ತಿದ್ದವು. ರೈತರ ಸ್ಥಿತಿ ಚಿಂತಾಜನಕವಾಗಿರುತ್ತಿತ್ತು. ಇದನ್ನು ಮನಗಂಡಿದ್ದ ಬಾಂಗಿಯವರು ಈ ಊರುಗಳ ಮಧ್ಯದಲ್ಲಿ ಕೆರೆ ನಿರ್ಮಾಣಕ್ಕೆ ಒಂದು ಪ್ರಶಸ್ತವಾದ ಸ್ಥಳ ಗುರುತಿಸಿ, ಮುಖ್ಯಮಂತ್ರಿಯವರ ಒಪ್ಪಿಗೆ ಪಡೆದುಕೊಂಡು ಕಾರ್ಯೋನ್ಮುಖರಾದರು.

ಕೆರೆ ನಿರ್ಮಾಣದ ಜವಾಬ್ದಾರಿಯನ್ನು ನಿರುದ್ಯೋಗಿ ತರುಣ ಎಂಜಿನಿಯರ್‌ ಒಬ್ಬರಿಗೆ ವಹಿಸಿಕೊಟ್ಟರು. ಕೆಲಸ ಪ್ರಾಮಾಣಿಕ ರೀತಿಯಲ್ಲಿ ನಡೆದು ₹ 6 ಲಕ್ಷ ವೆಚ್ಚದಲ್ಲಿ, ವರ್ಷೊಪ್ಪತ್ತಿನಲ್ಲಿ ಕೆರೆ ನಿರ್ಮಾಣಗೊಂಡಿತು. ಮುಂಬರುವ ದಿನಗಳಲ್ಲಿ ಸುಮಾರು ನಾಲ್ಕುನೂರ ಬಾವಿಗಳಲ್ಲಿ ಮೇ ಮಾಸದವರೆಗೂ ನೀರು ತುಂಬಿಕೊಂಡಿರಲಾರಂಭಿಸಿತು. ಇದರಿಂದಾಗಿ ಸಾವಿರಾರು ರೈತರು ಇಂದಿಗೂ ಸಂತೃಪ್ತಿಯ ಜೀವನ ನಡೆಸುತ್ತಿದ್ದಾರೆ. ಈ ಕೃತಜ್ಞ ಕೃಷಿಕರು ಈ ಕೆರೆಗೆ ‘ಪಿ.ಎಂ.ಬಾಂಗಿ ಸರೋವರ’ ಎಂದು ನಾಮಕರಣ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ.

-ಜಯವಂತ ಕಾಡದೇವರ, ಬನಹಟ್ಟಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.