ADVERTISEMENT

ಡಿಎಂಎಫ್ ನಿಧಿ: ಜನಮುಖಿಯಾಗಬೇಕಿದೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2021, 19:31 IST
Last Updated 12 ಸೆಪ್ಟೆಂಬರ್ 2021, 19:31 IST

ಗಣಿಗಾರಿಕೆಯಿಂದ (ಅಕ್ರಮ-ಸಕ್ರಮ) ಉಂಟಾಗುವ ಪರಿಸರ, ಆರೋಗ್ಯ, ಕೃಷಿ ಮುಂತಾದವುಗಳ ಮೇಲಿನ ಹಾನಿಯನ್ನು ಸರಿಪಡಿಸಲು 2015ರಲ್ಲಿ ಎಂಎಂಆರ್‌ಡಿ– 1957 ಕಾಯ್ದೆಯ ತಿದ್ದುಪಡಿ ಮೂಲಕ ಅಸ್ತಿತ್ವಕ್ಕೆ ಬಂದ ವ್ಯವಸ್ಥೆ ಜಿಲ್ಲಾ ಗಣಿಗಾರಿಕೆ ಪ್ರತಿಷ್ಠಾನ (ಡಿಎಂಎಫ್). ಗಣಿಗಾರಿಕೆಯಿಂದ ಬಾಧಿತವಾದ ಪ್ರದೇಶ ಮತ್ತು ಗಣಿಬಾಧಿತ ಜನರ ಪುನಶ್ಚೇತನ ಇದರ ಪ್ರಮುಖ ಉದ್ದೇಶ. ಆದರೆ ಬಳ್ಳಾರಿ ಜಿಲ್ಲೆಯಲ್ಲಿ ಡಿಎಂಎಫ್ ನಿಧಿಯನ್ನು ನಗರ ಪ್ರದೇಶಗಳಲ್ಲಿ ಬಸ್ ತಂಗುದಾಣಗಳನ್ನು ನಿರ್ಮಿಸಲು ಬಳಸಲಾಗುತ್ತಿದೆ (ಹೊಸಪೇಟೆಯಲ್ಲಿ ಇದನ್ನು ನಾನೇ ನೋಡಿದ್ದೇನೆ). ಇದೀಗ ಜನಪ್ರತಿನಿಧಿಗಳು ಈ ನಿಧಿಗಾಗಿ ಕಿತ್ತಾಡುತ್ತಿದ್ದಾರೆ (ಪ್ರ.ವಾ., ಸೆ. 10).

ಕಾಂಟ್ರಾಕ್ಟ್‌ಗಿರಿ-ಕಾಮಗಾರಿ ಸಾಂದ್ರ ಚಟುವಟಿಕೆಗಳಿಗೆ ಇದು ವೆಚ್ಚವಾಗುತ್ತಿದೆ. ಗ್ರಾಮೀಣ ಜನರ ಬದುಕು-ಬವಣೆ ಇಲ್ಲಿ ಮುಖ್ಯವಾಗಿಲ್ಲ. ಅವಿಭಜಿತ ಬಳ್ಳಾರಿ ಜಿಲ್ಲೆಯು ರಾಜ್ಯದ 30 ಜಿಲ್ಲೆಗಳ ಪೈಕಿ ತಲಾ ವರಮಾನದಲ್ಲಿ 12ನೆಯ ಸ್ಥಾನದಲ್ಲಿದ್ದರೆ (2018-19), ಸಾಕ್ಷರತೆಯಲ್ಲಿ (2011) 25ನೆಯ ಸ್ಥಾನದಲ್ಲಿದೆ. ಆರೋಗ್ಯ ಸೂಚ್ಯಂಕದಲ್ಲಿ ಇದು 28ನೆಯ ಸ್ಥಾನದಲ್ಲಿದೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 26ನೆಯ ಸ್ಥಾನದಲ್ಲಿದೆ (ಮೂಲ: ಕರ್ನಾಟಕ ಮಾನವ ಅಭಿವೃದ್ಧಿ ವರದಿ– 2015). ಡಾ. ಡಿ.ಎಂ.ನಂಜುಂಡಪ್ಪ ವರದಿ ಪ್ರಕಾರ, ಬಳ್ಳಾರಿ ಮತ್ತು ಹೊಸಪೇಟೆ ತಾಲ್ಲೂಕುಗಳು ಅತ್ಯಂತ ಮುಂದುವರಿದ ಸ್ಥಿತಿಯಲ್ಲಿದ್ದರೆ, ಸಂಡೂರು ಅತ್ಯಂತ ಹಿಂದುಳಿದ ಸ್ಥಿತಿಯಲ್ಲಿದೆ. ಇವೆಲ್ಲವನ್ನೂ ಗಮನದಲ್ಲಿಟ್ಟು
ಕೊಂಡು ಡಿಎಂಎಫ್‌ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು. ಇದು ಸಾಧ್ಯವಾಗಿಲ್ಲ. ನಿಧಿಗಾಗಿ ಕಿತ್ತಾಡುವುದಕ್ಕೆ ಪ್ರತಿಯಾಗಿ ಜನಮುಖಿಯಾದ ಯೋಜನೆ ಸಿದ್ಧಪಡಿಸುವುದರ ಬಗ್ಗೆ ಜನಪ್ರತಿನಿಧಿಗಳು ಕ್ರಿಯಾಶೀಲರಾಗಬೇಕು. ಮೂರು ನೂರು- ನಾಲ್ಕು ನೂರು ಕೋಟಿ ಮೊತ್ತದ ಡಿಎಂಎಫ್ ನಿಧಿಗೆ ಇವರು ಕಿತ್ತಾಡುತ್ತಿದ್ದರೆ, ಗಣಿ ಬಾಧಿತ ಪ್ರದೇಶದ ಪುನಶ್ಚೇತನಕ್ಕಾಗಿ ಇರುವ ₹ 16 ಸಾವಿರ ಕೋಟಿ ಮೊತ್ತದ ಯೋಜನೆ ಜಾರಿಗೊಂಡ ಮೇಲೆ ಇವರು ಇನ್ನೆಷ್ಟು ಕಿತ್ತಾಡಬಹುದು?→→→→ಟಿ.ಆರ್.ಚಂದ್ರಶೇಖರ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT