ADVERTISEMENT

ಕಾಯಕ ನಿಷ್ಠೆಗೆ ಇದ್ದೇ ಇದೆ ಜನಬೆಂಬಲ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 19:30 IST
Last Updated 16 ಸೆಪ್ಟೆಂಬರ್ 2021, 19:30 IST

ಆರೋಗ್ಯ ಸಚಿವರೇ ಕರೆ ಮಾಡಿದರೂ ತಾವು ನಿಮ್ಹಾನ್ಸಿಗೆ ಕಳಿಸಿದ ರೋಗಿಗೆ ಕೂಡಲೇ ವೆಂಟಿಲೇಟರ್ ಸಿಗಲಿಲ್ಲವೆಂದು ಜನಪ್ರತಿನಿಧಿಯೊಬ್ಬರು ಆಕ್ರೋಶಗೊಂಡದ್ದು, ವಿಧಾನಸಭೆಯಲ್ಲಿ ಈ ಕುರಿತು ಚರ್ಚೆಯಾದದ್ದು (ಪ್ರ.ವಾ., ಸೆ. 16) ಸುದ್ದಿಯಾಗಿದೆ. ಏಳೂವರೆ ಕೋಟಿ ಜನರ ಕರ್ನಾಟಕಕ್ಕೆ, ಒಂದು ಕೋಟಿ ಜನರ ಬೆಂಗಳೂರಿಗೆ ಎಷ್ಟು ವೆಂಟಿಲೇಟರ್‌ಗಳನ್ನು ತಾವು ಒದಗಿಸಿದ್ದೇವೆಂದು ಪ್ರಶ್ನಿಸಿಕೊಳ್ಳದ ಜನಪ್ರತಿನಿಧಿಗಳು, ನಿಮ್ಹಾನ್ಸಿನ ನಿರ್ದೇಶಕರು ತಮ್ಮ ಫೋನು ಎತ್ತುವುದಿಲ್ಲವೆಂದು ಕಿಡಿಕಾರಿದ್ದಾರೆ. ಇದರರ್ಥ ಯಾರೋ ಮಂತ್ರಿ– ಜನಪ್ರತಿನಿಧಿ ಫೋನಾಯಿಸಿದರೆ ವೆಂಟಿಲೇಟರ್‌ಗಳು ಸೃಷ್ಟಿಯಾಗುವವೇ? ಇರುವ ರೋಗಿಯನ್ನು ಕಳಿಸಿ ‘ಅವರು’ ಕಳಿಸಿದ ರೋಗಿಗೆ ವೆಂಟಿಲೇಟರ್ ಕೊಡಬೇಕೆ? ಇರುವ ಮೂರೂಮತ್ತೊಂದು ಸವಲತ್ತನ್ನು ಯಾರಿಗೆ ಕೊಡಬೇಕೆಂದು ಹಿರಿ, ಕಿರಿ, ಮರಿ ನಾಯಕರೆಲ್ಲ ಫೋನಾಯಿಸತೊಡಗಿದರೆ ಆಸ್ಪತ್ರೆಗಳ ನಿರ್ದೇಶಕರ ತಲೆ ಏನಾಗಬೇಕು? ಇದು ನಿಮ್ಹಾನ್ಸ್ ಅಷ್ಟೇ ಅಲ್ಲ, ಎಲ್ಲ ಆಸ್ಪತ್ರೆಗಳನ್ನೂ, ಸರ್ಕಾರಿ ಸಂಸ್ಥೆಗಳನ್ನೂ ಕಾಡುತ್ತಿರುವ ಕಂಟಕ. ಜನಸೇವಕರೆಂದು ಕರೆದುಕೊಳ್ಳುವವರು ನಿಯಮದ ಅನುಸಾರ ಸರ್ಕಾರಿ ಕೆಲಸ ಮಾಡಲು ಬಿಡದೇ ಮೂಗು ತೂರಿಸುವುದರಿಂದಲೇ ಭ್ರಷ್ಟಾಚಾರ ಹೆಚ್ಚಾಗಿದೆ.

ನಿಮ್ಹಾನ್ಸ್ ನಿರ್ದೇಶಕರೇ, ನೀವು ಯಾರ ಶಿಫಾರಸಿಗೂ ಮಣಿಯದೆ ಸರತಿಯಲ್ಲಿ ಕಾಯುವ ರೋಗಿಗಳಿಗೆ ಪಾಳಿಯಂತೆ ಅವಕಾಶ ಒದಗಿಸಿ ಕಾಯಕನಿಷ್ಠೆ ಮೆರೆಯಿರಿ. ನಿಮಗೆ ಜನಬೆಂಬಲ ಇದ್ದೇ ಇರುತ್ತದೆ.

– ಡಾ. ಎಚ್.ಎಸ್.ಅನುಪಮಾ,ಕವಲಕ್ಕಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.