ADVERTISEMENT

ಇದು ಕೃತಿಚೌರ್ಯವಲ್ಲ, ಭಾವಚೌರ್ಯ!

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 19:30 IST
Last Updated 30 ಆಗಸ್ಟ್ 2021, 19:30 IST

ನಾನು ವಿದ್ಯಾರ್ಥಿ ದೆಸೆಯಲ್ಲಿ ಕನ್ನಡದ ನವ ಸಂವೇದನಾಶೀಲ ಚಿಂತಕರಾದ ಲಂಕೇಶ್, ತೇಜಸ್ವಿ, ಚಿದಾನಂದ ಮೂರ್ತಿ, ಎಂ.ಎಂ.ಕಲಬುರ್ಗಿ ಮುಂತಾದವರ ಕೆಲವು ವಿಮರ್ಶಾ ಮತ್ತು ಸಂಶೋಧನಾ ಲೇಖನಗಳನ್ನು ಓದುತ್ತಿದ್ದಾಗ, ನನ್ನೊಳಗಿನ ಬರಹಗಾರನೂ ಜಾಗೃತನಾಗುತ್ತ ಹೋಗುತ್ತಿದ್ದ. ಅವರೆಲ್ಲರ ಆಲೋಚನಾ ಕ್ರಮಗಳು, ಸಾಹಿತ್ಯ ಹಾಗೂ ಸಂಸ್ಕೃತಿಯ ವಿಚಾರಗಳು ಹೊಸ ಮಾದರಿಗಳನ್ನು ನನಗೆ ಪರಿಚಯಿಸಿದವು. ಜೊತೆಗಿವು ಸೃಜನಶೀಲ ಮನಸ್ಸುಗಳಿಗೆ ಪರಿಕಲ್ಪನಾತ್ಮಕವಾಗಿ ಅಕ್ಷರ ಭಿತ್ತಿಯಾಗಿ ಪಡಿಯಚ್ಚು ಮೂಡಿಸಿಕೊಳ್ಳಲು ಸಹಾಯಕ ವಾಗುತ್ತಿದ್ದವು ಕೂಡ. ಆದರಿಂದು ಬಹುತೇಕ ಅಕಡೆಮಿಕ್ ಬರಹಗಾರರ ಕೃತಿಗಳು ಕನ್ನಡ ಪುಸ್ತಕ ಭಂಡಾರಗಳನ್ನು ಆಕ್ರಮಿಸಿಕೊಳ್ಳುತ್ತಿವೆ. ಇವುಗಳಲ್ಲಿ ಸ್ವಂತಿಕೆ ಹೋಗಲಿ ಸರಿಯಾದ ಪರಾಮರ್ಶೆಯನ್ನು ಸಹ ಕಾಣಲು ಸಾಧ್ಯವಾಗುತ್ತಿಲ್ಲ. ಇದು ನಿಜಕ್ಕೂ ಬೇಸರದ ಸಂಗತಿ.

ವಿದ್ಯಾರ್ಥಿಗಳು ಪಠ್ಯವನ್ನು ಓದಿ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳಿಗೆ ಉತ್ತರ ರೂಪವಾಗಿ ಸಾರಾಂಶವನ್ನು ಸಂಗ್ರಹಿಸಿ ಬರೆದಂತೆ ಇತ್ತೀಚಿನ ಹಲವು ಬರಹಗಳು ಕಂಡುಬರುತ್ತಿವೆ. ಅಂದರೆ ಮೂಲ ಲೇಖಕನ ಚಿಂತನೆಯನ್ನು ತನ್ನದೆಂದು ಪ್ರತಿಬಿಂಬಿಸಿಕೊಳ್ಳುವ ಚಾಲಾಕಿತನ. ಇದು ಕೃತಿಚೌರ್ಯವಲ್ಲ, ನಿಜ. ಆದರೆ ಅದರ ಪರಿಷ್ಕೃತ ಕುರೂಪವಾದ ಭಾವಚೌರ್ಯ!

-ಡಾ. ಸಂಪತ್ ಬೆಟ್ಟಗೆರೆ, ಮೂಡಿಗೆರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.