ADVERTISEMENT

ವಾಚಕರ ವಾಣಿ: ಮಸೂದೆಗಳ ಮೇಲಿನ ಚರ್ಚೆ-ಇರಲಿ ದೂರಾಲೋಚನೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2021, 21:00 IST
Last Updated 23 ಆಗಸ್ಟ್ 2021, 21:00 IST

ಹಿಂದೆ ಸಂಸತ್ತಿನಲ್ಲಿ ಸಂವಿಧಾನದ ವಿಧಿ-30ರ ಮೇಲಿನ ಕಲಮುವಾರು ಚರ್ಚೆಯಲ್ಲಿ, ಸಂಸದ ತ್ಯಾಗಿ ಅವರು ‘ಶ್ರಮಿಸುವುದು’ ಎಂಬ ಶಬ್ದವನ್ನು ಸಂವಿಧಾನದಿಂದ ತೆಗೆದುಹಾಕಲು ವಿನಂತಿಸಿರುತ್ತಾರೆ. ಡಾ. ಬಿ.ಆರ್‌.ಅಂಬೇಡ್ಕರ್‌ ಅವರು ‘ಈ ಸಂವಿಧಾನದಲ್ಲಿ ಬರುವ ‘ಶ್ರಮಿಸುವುದು’ ಎಂಬ ಪದ ನನ್ನ ಅಭಿಮತದಲ್ಲಿ ಬಹಳ ಮಹತ್ವದ್ದಾಗಿರುತ್ತದೆ. ಈ ಶಬ್ದವನ್ನು ಉಪಯೋಗಿಸುವಲ್ಲಿ ಇದರ ಹಿಂದೆ ಇದ್ದ ನಮ್ಮ ಉದ್ದೇಶವೇನೆಂದರೆ, ಒಂದು ವೇಳೆ ನಿರ್ದೇಶಿತ ತತ್ವಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಪರಿಸ್ಥಿತಿಗಳು ಪ್ರತಿಕೂಲವಾಗಿದ್ದರೂ ಮತ್ತು ಪರಿಸ್ಥಿತಿ ಕಠಿಣ ಹಾಗೂ ಪ್ರತಿಕೂಲವಾಗಿ ದ್ದರೂ ಸರ್ಕಾರ ಅವುಗಳನ್ನು ಅನುಷ್ಠಾನದಲ್ಲಿ ತರಲು ಶ್ರಮಿಸಬೇಕು. ಆದುದರಿಂದಲೇ ನಾವು ‘ಶ್ರಮಿಸಬೇಕು’ ಎಂಬ ಪದವನ್ನು ಉಪಯೋಗಿಸಿದ್ದೇವೆ. ಅನ್ಯಥಾ ಯಾವುದೇ ಸರ್ಕಾರ, ನಾನೇನು ಮಾಡಲಿ ಪರಿಸ್ಥಿತಿ ತುಂಬಾ ಕೆಟ್ಟಿದೆ ಮತ್ತು ಹಣಕಾಸಿನ ತೊಂದರೆ ಬಹಳ ಇದೆ ಎಂದು ಹೇಳಲಿಕ್ಕೆ ಬರುತ್ತದೆ. ನನ್ನ ಗೆಳೆಯ ‘ಶ್ರಮಿಸಬೇಕು’ ಎಂಬ ಪದವನ್ನು ಇಂಥ ತುಂಬಾ ಮಹತ್ವದ ಸನ್ನಿವೇಶದಲ್ಲಿ ನೋಡುತ್ತಾರೆಂದು ಮತ್ತು ಇದನ್ನು ತೆಗೆದುಹಾಕುವುದು ಬಹಳ ತಪ್ಪಾಗುತ್ತದೆ ಎಂದು ಭಾವಿಸುತ್ತೇನೆ’ (ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಸಮಗ್ರ ಬರಹಗಳು ಮತ್ತು ಭಾಷಣಗಳು ಸಂಪುಟ 13 ಭಾಗ-2).

ಚರ್ಚೆ ಎಷ್ಟು ಅರ್ಥಗರ್ಭಿತವಾಗಿದೆ ಎಂದರೆ, ಸಂವಿಧಾನ ಜಾರಿಯಾಗಿ ಎಪ್ಪತ್ತನಾಲ್ಕು ವರ್ಷಗಳ ನಂತರ, ಕೋವಿಡ್‌ನಂತಹ ವಿಪತ್ತುಗಳು ಎದುರಾದಾಗ ಸರ್ಕಾರ ಹೇಗೆ ದೇಶದ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲೇಬೇಕು ಎಂಬ ದೂರಾಲೋಚನೆ ಗೋಚರಿಸುತ್ತದೆ. ಆದರೆ ಇಂದು ತದ್ವಿರುದ್ಧ. ಹೆಚ್ಚಿನ ಮಸೂದೆಗಳು ಯಾವುದೇ ಚರ್ಚೆ ಇಲ್ಲದೆ ಅಂಗೀಕಾರವಾಗುತ್ತಿವೆ. ಸರ್ಕಾರವು ಹಿರಿಯರ ಮಾರ್ಗದಲ್ಲಿ ಸಾಗಿದರೆ ದೇಶವು ಭವಿಷ್ಯದಲ್ಲಿ ಸುಭಿಕ್ಷವಾಗುತ್ತದೆ.→

ಗಣೇಶ ಆರ್‌.,ಹಾಸನ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.