ADVERTISEMENT

ವಾಚಕರ ವಾಣಿ: ಅಸ್ಥಿ ಮಡಕೆಯೊಳಗೆ ಜೀವ ವಸ್ತಿ!

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2021, 21:30 IST
Last Updated 23 ಆಗಸ್ಟ್ 2021, 21:30 IST

ನಮ್ಮೂರ ಜೀವನಾಡಿ ತುಂಗಭದ್ರೆಯನ್ನು ನೋಡಲು ಹೋದಾಗ, ದಡದಲ್ಲಿ ಅಸ್ಥಿ ಮಡಕೆಯೊಂದು‌ ಅನಾಥವಾಗಿ ಬಿದ್ದಿತ್ತು. ಕೆಲವರು ಇಂತಹ ಮಡಕೆಗಳನ್ನು ಕಂಡೊಡನೆ ಕೆರಳಿ, ಅನಿಷ್ಟವೆಂದು ತಿಳಿದು ಒಡೆಯುತ್ತಾರೆ. ಆದರೆ ಅದರ ಹರಿತ ಚೂರುಗಳು ಎಷ್ಟೋ ಬಾರಿ ಚಪ್ಪಲಿ ಮೆಟ್ಟಿರದ ಕೃಷಿ ಕಾರ್ಮಿಕರಿಗೆ ಮತ್ತು ಇತರರಿಗೆ ನೆಟ್ಟು ಗಾಯಗೊಳಿಸುತ್ತವೆ. ಈ ಅಪಾಯವನ್ನು ತಪ್ಪಿಸಲು, ಅದನ್ನು ತೆಗೆದುಕೊಂಡು ದೂರದಲ್ಲಿದ್ದ ಮುಳ್ಳುಕಂಟಿಯೊಳಗೆ ಸಿಲುಕಿಸಿ ಬಂದೆ. ಮುಂದೆ ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರಿಡಲು ಅನುಕೂಲವಾಗಬಹುದೆಂದು ಯೋಚಿಸಿದ್ದೆ. ಕೆಲ ದಿನಗಳ ನಂತರ ಅದೇ ದಾರಿಯಲ್ಲಿ ನಡೆಯುತ್ತಿರುವಾಗ ಕುತೂಹಲಕ್ಕೆ ಮಡಕೆಯೊಳಗೆ ಇಣುಕಿದೆ. ಚಿಟ್ಟು ಮಡಿವಾಳ (Indian Robin) ಹಕ್ಕಿಯೊಂದು ಅದರಲ್ಲಿ ಗೂಡು ಕಟ್ಟುತ್ತಿತ್ತು! ದಿನಗಳುರುಳಿದಂತೆ ಮೊಟ್ಟೆಗಳೊಡೆದು ಮರಿಗಳು ಬೆಳೆದು ಬಾನಲ್ಲಿ‌ ತೇಲಿಹೋಗುವುದನ್ನು ಮನಸಾರೆ ಕಣ್ತುಂಬಿಕೊಂಡೆ.

ಹೇಗಿದೆ ನೋಡಿ ಪ್ರಕೃತಿಯ ಶಕ್ತಿ. ಮನುಷ್ಯನಿರ್ಮಿತ ಸಮಾಜದಲ್ಲಿ ಯಾವುದನ್ನು ಅನಿಷ್ಟವೆಂದು ತಿಳಿಯುತ್ತೇವೆಯೋ‌ ಅದನ್ನು ನಿಸರ್ಗ ಅಗೌರವಿಸದೇ ಸದುಪಯೋಗಪಡಿಸಿಕೊಂಡಿದೆ. ಬದಲಾದ ನೈಸರ್ಗಿಕ ವ್ಯವಸ್ಥೆಯಲ್ಲಿ ಬದುಕುಳಿಯಲು ಕ್ಷುದ್ರ ಜೀವಿಯೊಂದು ಇಷ್ಟೊಂದು ಬದಲಾವಣೆ ಮಾಡಿಕೊಂಡಿದೆ. ಆದರೆ ನಾವಿನ್ನೂ ಅದೇ ಹಳೆಯ ಮೌಢ್ಯದ ಜಾಡ್ಯಕ್ಕೆ ಜೋತುಬಿದ್ದಿದ್ದೇವೆ. ನಿಸರ್ಗವು ಅಸ್ಥಿ ತುಂಬಿದ್ದ ಮಡಕೆಯೊಳಗೆ ಜೀವಸಂಚಾರ ಮಾಡಿಸಿ ಸಾವಿಗೂ ಘನತೆ-ಗೌರವ ತಂದುಕೊಟ್ಟಿದೆ. ಇನ್ನಾದರೂ ನಾವು ಬದಲಾಗೋಣ, ವೈಚಾರಿಕತೆ ಬೆಳೆಸಿಕೊಳ್ಳೋಣ.

ಮಹೇಶ್ವರ ಹುರುಕಡ್ಲಿ,ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.