ADVERTISEMENT

ತಾಳೆ ಬೇಸಾಯ: ಪರಿಸರ, ಆಹಾರ ಭದ್ರತೆಗೆ ಮಾರಕ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2021, 19:30 IST
Last Updated 8 ಸೆಪ್ಟೆಂಬರ್ 2021, 19:30 IST

‘ತಣಿಯದ ತಾಳೆ ಎಣ್ಣೆಯ ದಾಹ’ ಎಂಬ ವಿ.ಗಾಯತ್ರಿ ಅವರ ಲೇಖನ (ಪ್ರ.ವಾ., ಸೆ. ) ಮಾಹಿತಿಪೂರ್ಣವಾಗಿದೆ. ಭಾರತದಲ್ಲಿ ದೊಡ್ಡ ರೀತಿಯಲ್ಲಿ ಸ್ಥಳೀಯ ಜೀವವೈವಿಧ್ಯ ನಾಶವಾಗಿದೆ. ದೇಶದ ಕಾಡು, ಕೃಷಿ, ಕಳೆ, ಬೆಳೆ, ಜಾನುವಾರು ಎಲ್ಲದರಲ್ಲಿಯೂ ಶೇ 40-50ರಷ್ಟು ಪರಕೀಯ ಜಾತಿಗಳಿವೆ. ಈ ಎಣ್ಣೆ ತಾಳೆಯೂ ಅಂತಹ ಒಂದು ಪರಕೀಯ ಜಾತಿಯ ಸಸ್ಯ. ಸ್ಥಳೀಯ ಆವಾಸ ಪ್ರದೇಶಗಳನ್ನು ವೇಗವಾಗಿ ನಶಿಸುವಂತೆ ಮಾಡುವಲ್ಲಿ ಇಂತಹ ಬೆಳೆಗಳ ಪಾತ್ರ ಅಪಾರ. ಹೀಗಿರುವಾಗ, ದೇಶದಲ್ಲಿ ಈಗ ನಾವು ಒಮ್ಮೆಗೇ ಆರೂವರೆ ಲಕ್ಷ ಹೆಕ್ಟೇರ್ ಭೂಮಿಯನ್ನು ಎಣ್ಣೆ ತಾಳೆ ಬೇಸಾಯದಡಿ ತಂದರೆ ನಮ್ಮ ಸೂಕ್ಷ್ಮ ಪರಿಸರ ವ್ಯವಸ್ಥೆಯ ಮೇಲೆ ಎಂತಹ ಪರಿಣಾಮ ಉಂಟಾಗಬಹುದು! ಅಧಿಕವಾದ ನೀರು, ಗೊಬ್ಬರ, ಕೀಟನಾಶಕ ಬಳಕೆಯ ಜೊತೆಗೆ ವಿನಿಯೋಗವಾಗದೆ ಉಳಿಯುವ ಅಪಾರ ತ್ಯಾಜ್ಯ ರಾಶಿಗಳು ಸ್ಥಳೀಯ ಕೃಷಿ ಪರಿಸರ ವ್ಯವಸ್ಥೆಗಳನ್ನು ಶಾಶ್ವತವಾಗಿ ಮಾರ್ಪಡಿಸಿಬಿಡುತ್ತವೆ.

ಕೇಂದ್ರ ಸರ್ಕಾರವು ₹ 11 ಸಾವಿರ ಕೋಟಿ ಪ್ರೋತ್ಸಾಹಧನವನ್ನು ಎಣ್ಣೆ ತಾಳೆಯ ಬದಲು ಎಣ್ಣೆ ಕಾಳುಗಳ ಉತ್ತೇಜನಕ್ಕೆ ಕೊಡಲಿ. ಎಣ್ಣೆ ಕಾಳಿನ ಬೆಳೆಗಳು ಅಪಾರ ಪರಿಸರ ಸೇವೆ ಒದಗಿಸುತ್ತವೆ. ಶೇಂಗಾ, ಸಾಸಿವೆ, ಎಳ್ಳು, ಉಚ್ಚೆಳ್ಳು, ಸೂರ್ಯಕಾಂತಿ, ಕುಸುಬೆ ಇವೆಲ್ಲಾ ಮಳೆಯಾಶ್ರಿತದಲ್ಲಿ ಬೆಳೆಯುವ ಅಲ್ಪಕಾಲಿಕ ಬೆಳೆಗಳು. ವಿವಿಧ ಏಕದಳ, ದ್ವಿದಳ ಧಾನ್ಯಗಳೊಂದಿಗೆ ಸಹಬೆಳೆಗಳಾಗಿ ಬೆಳೆಯುವ ಇವು ತಮ್ಮ ಆಕರ್ಷಕ ಹಳದಿ ಹೂವುಗಳಿಂದ ಪರಾಗಸ್ಪರ್ಶಿಗಳನ್ನು ಆಕರ್ಷಿಸಿ ಇತರ ಬೆಳೆಗಳಲ್ಲೂ ಶೇ 25ರಷ್ಟು ಇಳುವರಿ ಹೆಚ್ಚಿಸುತ್ತವೆ. ಜಾನುವಾರುಗಳಿಗೆ ಮೇವಿನ ಭದ್ರತೆಯನ್ನೂ ಒದಗಿಸುತ್ತವೆ.

ಆರೋಗ್ಯದ ವಿಷಯಕ್ಕೆ ಬಂದರೆ, ಒಂದೇ ಥರದ ಎಣ್ಣೆಯನ್ನು ಮತ್ತು ಅದನ್ನು ಬಳಸಿ ಮಾಡಿದ ಸಿದ್ಧ ಆಹಾರಗಳನ್ನು ಸೇವಿಸುವುದು ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳು ಸಿದ್ಧ ಆಹಾರವನ್ನು ಅತಿಯಾಗಿ ಇಷ್ಟಪಡುತ್ತಾರೆ ಮತ್ತು ಇದು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವುದನ್ನು ಗಮನಿಸಬಹುದು. ಭತ್ತದ ಗದ್ದೆಗಳನ್ನು, ಗಿರಿಜನರ ಬೇಸಾಯ ಭೂಮಿಯನ್ನು ತಾಳೆ ಬೇಸಾಯಕ್ಕೆ ಬಳಸುವುದು ಜನರ ಆಹಾರ ಭದ್ರತೆ ಮತ್ತು ಕೃಷಿ ಪರಿಸರ ವ್ಯವಸ್ಥೆಗೆ ತೀವ್ರ ಆಘಾತಕಾರಿ ಎನ್ನುವುದನ್ನು ವಿಜ್ಞಾನಿಗಳು ಮರೆಯದಿರಲಿ.

ADVERTISEMENT

- ಅ.ನಾ.ಯಲ್ಲಪ್ಪ ರೆಡ್ಡಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.