ADVERTISEMENT

ವಾಚಕರ ವಾಣಿ: ಪಶುಸಂಗೋಪನೆ; ನೌಕರರ ಕೊರತೆ ನೀಗಿಸಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 18:37 IST
Last Updated 19 ಸೆಪ್ಟೆಂಬರ್ 2021, 18:37 IST

ಗ್ರಾಮೀಣಾಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಪಶುವೈದ್ಯಕೀಯ ಮತ್ತು ಪಶುಸಂಗೋಪನಾ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆಯ ಬಗ್ಗೆ ವಿಸ್ತೃತ ವರದಿ ಪ್ರಕಟಿಸಿರುವುದು (ಪ್ರ.ವಾ., ಸೆ. 19) ಶ್ಲಾಘನೀಯ. ಹೈನೋದ್ಯಮ ಅತ್ಯಂತ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಹೊಂದಿರುವ ರಾಜ್ಯದ ದಕ್ಷಿಣ ಜಿಲ್ಲೆಗಳಲ್ಲಿ ಪದವೀಧರ ಪಶುವ್ಯೆದ್ಯರ ಕೊರತೆ ಅಷ್ಟೊಂದು ತೀವ್ರವಾಗಿಲ್ಲ. ಆದರೆ ಪಶುಚಿಕಿತ್ಸಾಲಯಗಳಲ್ಲಿ ಪೂರಕ ಸಿಬ್ಬಂದಿ, ವಿಶೇಷವಾಗಿ ಗ್ರೂಪ್ ‘ಡಿ’ ನೌಕರರ ತೀವ್ರ ಕೊರತೆಯಿದೆ. ಪಶು ಚಿಕಿತ್ಸಾಲಯಗಳಲ್ಲಿ ಜಾನುವಾರುಗಳಿಗೆ ಚಿಕಿತ್ಸೆ ನೀಡುವಾಗ ಅವುಗಳನ್ನು ನಿಯಂತ್ರಿಸಲು ನುರಿತ ಹಾಗೂ ಗಟ್ಟಿಮುಟ್ಟಾದ ಸಹಾಯಕ ಸಿಬ್ಬಂದಿ ಅತ್ಯವಶ್ಯಕ. ಆದರೆ ಇಲಾಖೆಯಲ್ಲಿ ಹಲವಾರು ವರ್ಷಗಳಿಂದ ಗ್ರೂಪ್ ‘ಡಿ’ ನೌಕರರ ನೇಮಕಾತಿಯೇ ನಡೆದಿಲ್ಲ. ಪ್ರಸ್ತುತ ಇರುವ ನೌಕರರು ಈಗಾಗಲೇ ನಿವೃತ್ತಿಯ ಅಂಚಿಗೆ ಬಂದಿದ್ದಾರೆ. ಹೊರಗುತ್ತಿಗೆಯಲ್ಲಿ ನೇಮಿಸಿಕೊಳ್ಳಲು ಆರ್ಥಿಕ ಕೊರತೆ.

ಪ್ರಸ್ತುತ ಗ್ರಾಮೀಣ ಭಾಗದ ಅನೇಕ ಚಿಕಿತ್ಸಾಲಯಗಳಲ್ಲಿ ಪಶುವ್ಯೆದ್ಯರೇ ಬಾಗಿಲು ತೆಗೆದು, ಸ್ವಚ್ಛಗೊಳಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಹೈನೋದ್ಯಮ ಉಚ್ಛ್ರಾಯ ಸ್ಥಿತಿಯಲ್ಲಿರುವ ದಕ್ಷಿಣ ಕರ್ನಾಟಕ ಭಾಗದ ಜನಪ್ರತಿನಿಧಿಯು ಇಲಾಖೆಯ ಸಚಿವರಾದರೆ, ಅವರಿಗೆ ಹೈನೋದ್ಯಮದ ಬಗ್ಗೆ ಒಳನೋಟ ಇರುತ್ತದೆ. ಆ ಕಾರಣದಿಂದ ಅಂತಹವರಿಂದ ಇಲಾಖೆಯ ಸುಧಾರಣೆ ನಿರೀಕ್ಷಿಸಬಹುದು. ಹಿಂದೆ, ದಿವಂಗತ ನಾಗೇಗೌಡರು ಪಶುಸಂಗೋಪನಾ ಸಚಿವರಾಗಿ ಜಿಲ್ಲಾ ಕೇಂದ್ರಗಳಲ್ಲಿ ಪಾಲಿ ಕ್ಲಿನಿಕ್‌ಗಳ ಪ್ರಾರಂಭದಂತಹ ಹಲವಾರು ನೂತನ ಕಾರ್ಯಕ್ರಮಗಳನ್ನು ಕೈಗೊಂಡು, ಇಲಾಖೆಗೆ ಹೆಚ್ಚಿನ ಮಹತ್ವ ಸಿಗುವ ರೀತಿ ಕಾರ್ಯನಿರ್ವಹಿಸಿದ್ದನ್ನು ಸ್ಮರಿಸಬಹುದು.
-ಡಾ. ಟಿ.ಜಯರಾಂ, ಕೋಲಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT