ADVERTISEMENT

ವಾಚಕರ ವಾಣಿ: ಪುರುಷ ರಾಜಕೀಯದ ಹುನ್ನಾರ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 18:38 IST
Last Updated 19 ಸೆಪ್ಟೆಂಬರ್ 2021, 18:38 IST

‘ನಮ್ಮ ನಾಯಕಿಯರು ಪಕ್ಷಭೇದ ಮೀರಿ ದನಿಯೆತ್ತಿದರೆ ಮಾತ್ರ ಮಹಿಳಾ ಮೀಸಲಾತಿ ಮಸೂದೆ ಜಾರಿಯಾಗಬಹುದು’ ಎಂದು ನಟರಾಜ್‌ ಹುಳಿಯಾರ್‌ ಅವರು ಹೇಳಿರುವುದು (ಪ್ರ.ವಾ., ಸೆ. 17) ಸತ್ಯವಾದ ಮಾತು. ಇದುವರೆಗೂ ಯಾವ ರಾಜಕಾರಣಿಗೂ ಇದರ ಬಗ್ಗೆ ದನಿ ಎತ್ತಬೇಕು ಎಂದು ಅನಿಸದಿರುವುದು ಸಹಜವೆ. ಏಕೆಂದರೆ, ನಮ್ಮದು ಪುರುಷ ಪ್ರಧಾನ ಸಮಾಜವಲ್ಲವೇ? ಇಲ್ಲಿ ಯಾವತ್ತೂ ಪುರುಷ ರಾಜಕಾರಣಿಗಳ ಸ್ವಾರ್ಥ, ಹುನ್ನಾರಗಳೇ ಮೇಲುಗೈ ಸಾಧಿಸುವುದು. ಅಧಿಕಾರದ ದಾಹ, ದುರಾಸೆ, ಸ್ತ್ರೀವಿರೋಧಿ ಧೋರಣೆಗಳು ಎಲ್ಲವೂ ಮಸೂದೆಯು ಕಡತಗಳಲ್ಲಿ ಕೊಳೆಯುವಂತೆ ಮಾಡಿವೆ.

ಮನೆಯಿಂದಲೇ ಆರಂಭವಾಗುವ ಈ ಪುರುಷ ದಬ್ಬಾಳಿಕೆಯು ದೇಶದ ರಾಜಕಾರಣದವರೆಗೂ ಹೆಮ್ಮರವಾಗಿ ಬೆಳೆದು ನಿಂತಿದೆ. ಹೀಗಿರುವಾಗ, ಅಧಿಕಾರದಲ್ಲಿರುವ ಮಹಿಳೆಯರು, ಮುಂಚೂಣಿಯಲ್ಲಿರುವ ಮಹಿಳಾ ರಾಜಕಾರಣಿಗಳು, ಮಂತ್ರಿಗಳು ಮಸೂದೆಯ ಪರವಾಗಿ ಗಟ್ಟಿಯಾಗಿ ನಿಲ್ಲಬೇಕು. ಎಲ್ಲಾ ಪಕ್ಷಗಳ ಮಹಿಳಾಮಣಿಗಳು ಒಗ್ಗಟ್ಟಾಗಿ ಮೀಸಲಾತಿ ಜಾರಿಗೆ ಪಣ ತೊಡಬೇಕು. ಇಲ್ಲದಿದ್ದರೆ, ಪುರುಷ ರಾಜಕೀಯದ ಹುನ್ನಾರದಿಂದ ಪ್ರತಿಭೆ ಇದ್ದರೂ ಮಹಿಳೆಯು ಎಲ್ಲದರಿಂದ ವಂಚಿತಳಾಗುತ್ತಾ ಹೋಗುತ್ತಾಳೆ.
-ವೀಣಾ ಸುಬ್ರಹ್ಮಣ್ಯ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT