ADVERTISEMENT

ವಾಚಕರ ವಾಣಿ: ಅಧಿಕಾರ ಕೇಂದ್ರೀಕರಣ; ವಿಮರ್ಶೆಗೆ ಸಕಾಲ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 22:11 IST
Last Updated 21 ಸೆಪ್ಟೆಂಬರ್ 2021, 22:11 IST

ಇದೇ 17ರಂದು 2.5 ಕೋಟಿ ಡೋಸ್ ಕೊರೊನಾ ವ್ಯಾಕ್ಸಿನ್ ನೀಡಿರುವುದು ಸ್ವಾಗತಾರ್ಹ.

ಆದರೆ ವಿಡಿಯೊ ಕಾನ್ಫರೆನ್ಸ್ ಒಂದರಲ್ಲಿ ಪ್ರಧಾನಮಂತ್ರಿ ‘ಅಷ್ಟು ಜನ ಚುಚ್ಚುಮದ್ದು ತೆಗೆದುಕೊಂಡರೂಏನೂ ತೊಂದರೆಯಾಗಲಿಲ್ಲ. ಆದರೆ ಒಂದು ಪಕ್ಷಕ್ಕೆ ರಾತ್ರಿ ಜ್ವರ ಬಂತು’ ಎಂದು ವ್ಯಂಗ್ಯವಾಗಿಹೇಳುತ್ತಿದ್ದುದನ್ನು ಕೇಳಿದೆ. ನ.ಮೋ. 71- ಪಕ್ಷ ಆಚರಿಸುವುದರಲ್ಲಿ ತಪ್ಪಿಲ್ಲ (ಅವರು ಈಗಲೂ ಅದರ ಯಶಸ್ವಿ ಪ್ರಚಾರಕ). ಆದರೆ ಸರ್ಕಾರಗಳು ಮತ್ತು ಇಲಾಖೆಗಳು ಆ ದಿನಕ್ಕೆ ತಮ್ಮ ಕಾರ್ಯಕ್ರಮಗಳನ್ನು ಹೊಂದಿಸಿಕೊಂಡಿದ್ದು ಅಧಿಕಾರದ ದುರುಪಯೋಗ.

ನೆಹರೂ ಹದಿನೇಳು ವರ್ಷ ಪ್ರಧಾನಿ ಆಗಿದ್ದರು. ಅವರಮಗಳು ಸುಮಾರು ಹದಿನಾರು ವರ್ಷಗಳ ಕಾಲ ಆ ಸ್ಥಾನದಲ್ಲಿ ಇದ್ದರು. ವ್ಯಕ್ತಿಪೂಜೆ ಆ ಅವಧಿಯ ನಕಾರಾತ್ಮಕ ಅಂಶ. ಮುಂದೆ ರಾಜೀವ್‌ ಗಾಂಧಿಯವರ ಆಡಳಿತಾವಧಿಯಲ್ಲೂ ಹಲವು ಯೋಜನೆಗಳಿಗೆ ನೆಹರೂ ಹೆಸರಿಡುವುದು ನಿಲ್ಲಲಿಲ್ಲ.

ADVERTISEMENT

ಈಗ ‘ಕಾಂಗ್ರೆಸ್‌ಗಿಂತ ಭಿನ್ನ’ ಎಂದು ಹೇಳಿಕೊಂಡ ಪಕ್ಷ ಮಾಡುತ್ತಿರುವುದೇನು? ವಂಶಪಾರಂಪರ್ಯ ಇಲ್ಲ ನಿಜ, ಆದರೆ ಒಬ್ಬ ಅಧಿನಾಯಕನ ಪರಾಕು ಅವಿರತವಾಗಿ ನಡೆದಿದೆ. ಮೂರು ಮಂದಿಮತ್ತವರನ್ನು ಹೊಗಳುವವರ ಕೈಯಲ್ಲಿ ಶಕ್ತಿ ಕೇಂದ್ರಿತವಾಗಿದೆ. ಪಕ್ಷದಲ್ಲಿ ಹಾಗಾದರೆ ಹೆಚ್ಚು ತೊಂದರೆ ಇಲ್ಲ, ಆದರೆ ಸರ್ಕಾರದ ಮಟ್ಟದಲ್ಲಿ ಅದೇ ಪರಿ ಮುಂದುವರಿದರೆ ಪ್ರಜಾಪ್ರಭುತ್ವಕ್ಕೇ ಅಪಾಯ.

ಎಪ್ಪತ್ತು ವರ್ಷ ದಾಟಿದವರನ್ನು ಅಧಿಕಾರಕ್ಕೆ ಪರಿಗಣಿಸಬಾರದು, ಅದರ ಗಡಿಯಲ್ಲಿ ಇರುವವರು ಆ ವಯಸ್ಸು ತಲುಪಿದಾಗ ನಿವೃತ್ತಿ ಮಾರ್ಗ ತೋರಿಸಬೇಕು ಎಂಬ ಧೋರಣೆಯನ್ನು ಎಲ್ಲರಿಗೂ ಅನ್ವಯಿಸುವುದಾದರೆ, ಪ್ರಧಾನಿ ತಮ್ಮ 2024ರ ನಂತರದ ಯೋಜನೆಯನ್ನು ಈಗ ಹೇಳಬಹುದಿತ್ತು. ಒಬ್ಬ ವ್ಯಕ್ತಿಗೆ ಹತ್ತಕ್ಕೂ ಹೆಚ್ಚು ವರ್ಷ ರಾಜ್ಯ ಹಾಗೂ ಹತ್ತು ವರ್ಷ ದೇಶದ ಚುಕ್ಕಾಣಿ ಹಿಡಿಯಲು ಅವಕಾಶ ಸಿಗುವುದು ಸಾಕಲ್ಲವೇ? ಪಕ್ಷ ಹಾಗೂ ಸಂಘ ಪರಿವಾರ ಈ ಬಗೆಗೆ ಯೋಚಿಸಲು ಇದು ಸಕಾಲ.
-ಎಚ್.ಎಸ್.ಮಂಜುನಾಥ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.