ADVERTISEMENT

ವಾಚಕರ ವಾಣಿ: ಕನ್ನಡದಲ್ಲಿ ಕಾನೂನು ಶಿಕ್ಷಣ; ಸಮಿತಿ ರಚಿಸಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 20:43 IST
Last Updated 24 ಸೆಪ್ಟೆಂಬರ್ 2021, 20:43 IST

‘ಕಾನೂನು ಶಿಕ್ಷಣಕ್ಕೆ ಕನ್ನಡ ಮಾಧ್ಯಮ ಬೇಡವೇ?’ ಎಂಬ ಜಿನದತ್ತ ದೇಸಾಯಿ ಅವರ ಪ್ರಶ್ನೆ (ಸಂಗತ, ಸೆ. 21) ಸುಸಂಗತವಾಗಿದೆ. ಜಿಲ್ಲಾ ಮಟ್ಟದ ನ್ಯಾಯಾಲಯಗಳು ಕನ್ನಡ ಭಾಷೆಯಲ್ಲಿ ತೀರ್ಪು ನೀಡುವುದು ಅವಶ್ಯಕವಾಗಿದೆ. ಈ ದಿಸೆಯಲ್ಲಿ ಸದ್ಯಕ್ಕೆ ಕನ್ನಡ ಭಾಷೆಯಲ್ಲಿ ಸುಲಭವಾಗಿ ಲಭ್ಯವಿರದ ಶಬ್ದ, ಪದಗಳನ್ನು ವ್ಯುತ್ಪತ್ತಿ ಮಾಡುವ ಅನಿವಾರ್ಯ ಇರುವುದನ್ನು ಮನಗಾಣಬೇಕಾಗಿದೆ. ಈ ಸಮಸ್ಯೆಯನ್ನು ಪರಿಹರಿಸುವಲ್ಲಿ ಹಾಗೂ ರಾಜ್ಯದ ಎಲ್ಲಾ ಜಿಲ್ಲಾ ಮಟ್ಟದ ನ್ಯಾಯಾಲಯಗಳಲ್ಲಿ ಏಕರೂಪದ ಶಬ್ದಗಳನ್ನು ಬಳಸುವ ಅವಶ್ಯಕತೆ ಇರುವುದರಿಂದ, ಆ ದಿಸೆಯಲ್ಲಿ ಸಮಗ್ರ ಇಂಗ್ಲಿಷ್- ಕನ್ನಡ ಕಾನೂನು ಪದಕೋಶ ರಚಿಸುವ, ನಿರಂತರವಾಗಿ ಹಾಗೂ ನಿಯಮಿತವಾಗಿ ಅದರ ಪರಿಷ್ಕರಣೆ ಮಾಡುವ ಉದ್ದೇಶಕ್ಕಾಗಿ ಒಂದು ಕಾಯಂ ಸಮಿತಿಯನ್ನು ರಚಿಸುವ ಅವಶ್ಯಕತೆ ಇದೆ.

ಈ ಸಮಿತಿಯು ಕನ್ನಡ ಭಾಷೆಯಲ್ಲಿ ಉತ್ತಮ ಜ್ಞಾನ ಹೊಂದಿರುವ ಹೈಕೋರ್ಟ್‌ನ ಒಬ್ಬರು ನ್ಯಾಯಮೂರ್ತಿಯನ್ನು ಅಧ್ಯಕ್ಷರನ್ನಾಗಿ ಹೊಂದಿದ್ದು, ಜಿಲ್ಲಾ ಮಟ್ಟದ ನ್ಯಾಯಾಧೀಶರು, ಕನ್ನಡ ಸಾಹಿತ್ಯ ಪರಿಷತ್ತು, ಹಂಪಿ ಕನ್ನಡ ವಿಶ್ವವಿದ್ಯಾಲಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ವಿಶ್ವ ಕನ್ನಡ ಕೋಶ ಸಂಪಾದಕ ಮಂಡಳಿಯ ಪರವಾಗಿ ತಲಾ ಒಬ್ಬ ನಾಮನಿರ್ದೇಶಿತ ವ್ಯಕ್ತಿಗಳು, ಹೈಕೋರ್ಟ್‌ನಿಂದ ನೇಮಕಗೊಳ್ಳುವ ಇಬ್ಬರು ಸಾಹಿತಿಗಳನ್ನು ಸಮಿತಿಯ ಸದಸ್ಯರನ್ನಾಗಿ ಹೊಂದಿರಬೇಕು. ಈ ಸಮಿತಿಗೆ ಸಮಾನಾಂತರ ಪದಗಳ ಅರ್ಥೈಸುವಿಕೆ, ಪದಗಳ ಭಾಷಾಂತರ, ಇತರ ನಿರ್ದೇಶನ, ಸೂಚನೆಗಳನ್ನು ನೀಡುವ ಜವಾಬ್ದಾರಿಯನ್ನು ಸಹ ವಹಿಸುವುದು ಸೂಕ್ತವೆನಿಸುತ್ತದೆ.

ಈ ವಿಷಯವಾಗಿ ಕಳೆದ ಕೆಲವು ದಶಕಗಳಿಂದ ಸಂಬಂಧಪಟ್ಟ ಹಲವರಿಗೆ ಮೌಖಿಕವಾಗಿ ನಿವೇದನೆಗಳನ್ನು ಸಲ್ಲಿಸುತ್ತಲೇ ಬಂದಿದ್ದೇನೆ. ಆದಾಗ್ಯೂ ಗುರುತಿಸುವಂತಹ ಯಾವುದೇ ಬೆಳವಣಿಗೆಯಾಗಿಲ್ಲ. ಹೈಕೋರ್ಟ್‌, ರಾಜ್ಯ ಸರ್ಕಾರ, ಸಂಬಂಧಪಟ್ಟ ಇಲಾಖೆಗಳು ಹಾಗೂ ಸಾರ್ವಜನಿಕರು ಗಮನಹರಿಸುವುದು ಅವಶ್ಯಕ.

ADVERTISEMENT

-ಎಚ್.ಬಿ.ಪ್ರಭಾಕರ ಶಾಸ್ತ್ರಿ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.