ADVERTISEMENT

ದೇಶದಲ್ಲಿ ಪ್ರೋತ್ಸಾಹ ಸಿಗುತ್ತಿಲ್ಲವೇಕೆ?

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2021, 19:30 IST
Last Updated 7 ಸೆಪ್ಟೆಂಬರ್ 2021, 19:30 IST

‘ಎಲ್ಲಿ ಹೋದರು ನಮ್ಮ ಚಿನ್ನದ ಹುಡುಗಿಯರು’ ಎಂಬ ಡಾ. ಅನುಪಮಾ ಎಚ್‌.ಎಸ್. ಅವರ ಲೇಖನ
(ಪ್ರ.ವಾ., ಸೆ. 6) ಮಹಿಳೆಯರ ವಾಸ್ತವಿಕ ಸ್ಥಿತಿಗತಿಗೆ ಹಿಡಿದ ಕನ್ನಡಿಯಂತಿದೆ. ಇಲ್ಲಿ ಅನುಪಮಾ ಕೂಗು ತಳಮಳದ್ದು, ಅಂತಃಕರಣದ್ದು. ಲೇಖನದ ಈ ತಲೆಬರಹವನ್ನು ಓದಿದ ಕ್ಷಣ ನನ್ನ ಮನಸ್ಸು ಪ್ರವೇಶಿಸಿದ್ದು, ಮೊನ್ನೆ ಮೊನ್ನೆ ಜಪಾನಿನಲ್ಲಿ ಸಮಾಪನಗೊಂಡ ಒಲಿಂಪಿಕ್ಸ್‌ ಕ್ರೀಡಾಕೂಟವನ್ನು. ಹಾಗೆಯೇ ಈ ಕ್ರೀಡಾಕೂಟದ ಹಿಂದಿನ ಪುಟಗಳನ್ನು ತೆಗೆದುನೋಡಿದೆ. ಕಳೆದ ಎರಡು ದಶಕಗಳಲ್ಲಿ ಕೇವಲ ಏಳು ಜನ ಭಾರತೀಯ ಮಹಿಳೆಯರು ಒಲಿಂಪಿಕ್ಸ್ ಕ್ರೀಡೆಗಳಲ್ಲಿ ಗೆದ್ದು ತಂದದ್ದು ಒಟ್ಟು ಎರಡು ಬೆಳ್ಳಿ, 6 ಕಂಚಿನ ಪದಕಗಳನ್ನು. ನಮ್ಮ ಪರಿಸರದಲ್ಲಿಯ ಹಲವು ಅಭಾವಗಳ ನಡುವೆಯೂ ಈ ಹೆಣ್ಣುಮಕ್ಕಳು ತಂದಿದ್ದಾರಲ್ಲಾ ಪದಕಗಳನ್ನು ಎಂದು ಮನಸ್ಸಿನಲ್ಲಿಯೇ ಅವರಿಗೆ ‘ಶಹಬ್ಬಾಸ್’ ಹೇಳಿದೆ.

ಇವರನ್ನು ಹಿಂದುಳಿದವರೆಂದು ನಾವು ಗುರುತಿಸುತ್ತೇವೆ. ಕೆನ್ಯಾ, ಇಥಿಯೋಪಿಯಾ, ನೈಜೀರಿಯಾ, ಮೊರೊಕ್ಕೊದಂಥ ಆಫ್ರಿಕನ್ ದೇಶದ ಆಟಗಾರ್ತಿಯರು ಗೆದ್ದುಕೊಂಡಿದ್ದಾರೆ ಬಂಗಾರ, ಬೆಳ್ಳಿ, ಕಂಚಿನ ಪದಕಗಳ ಸರಮಾಲೆಯನ್ನು! ಜನಸಂಖ್ಯೆಯಲ್ಲಿ ನಮ್ಮದು ಎರಡನೆಯ ಸ್ಥಾನ. ದೇಶದ ಜನಸಂಖ್ಯೆಯಲ್ಲಿ ಸುಮಾರು ಅರ್ಧದಷ್ಟು ಮಹಿಳೆಯರು ಇದ್ದಾಗಲೂ ಒಲಿಂಪಿಕ್ಸ್‌ನಂಥ ವಿಶ್ವ ಮಟ್ಟದ ಆಟೋಟ ಸ್ಪರ್ಧೆಗಳಿಂದ ಏಕೆ ಹಿಂದೆ ಸರಿದಿದ್ದಾರೆ? ವಿಶ್ವವಿದ್ಯಾಲಯಗಳಲ್ಲಿ ಇವರು ಬಂಗಾರದ ಪದಕಗಳನ್ನು ಬಾಚಿಕೊಂಡಿದ್ದಾರೆ. ಆದರೆ ಇಂಥ ಆಟೋಟಗಳಿಗೆ ನಮ್ಮ ದೇಶದಲ್ಲಿ ಪ್ರೋತ್ಸಾಹವೇಕೆ ಸಿಗುತ್ತಿಲ್ಲ? ಆಧುನಿಕ ಜಗತ್ತಿನಲ್ಲಿ ಒಲಿಂಪಿಕ್ಸ್ ವೇದಿಕೆಯ ಮೇಲೆ ನಮ್ಮ ಹುಡುಗಿಯರು ಭಾರತದ ಪತಾಕೆಯನ್ನು ಏಕೆ ಹಾರಿಸಲು ಸಾಧ್ಯವಾಗಿಲ್ಲ? ಈ ಪ್ರಶ್ನೆಗಳಿಗೆ ಉತ್ತರಿಸಬೇಕಾದವರು ನಮ್ಮನ್ನಾಳುವ ಜನನಾಯಕರು, ಶಿಕ್ಷಣ ತಜ್ಞರು, ಸಮಾಜಸೇವಕರು, ಮಹಿಳಾ ಪ್ರತಿನಿಧಿಗಳು, ಶಿಕ್ಷಕರು, ಪಾಲಕರು ಹಾಗೂ ಸ್ವತಃ ಮಹಿಳೆಯರು ಕೂಡಾ!

- ಮಾಲತಿ ಪಟ್ಟಣಶೆಟ್ಟಿ, ಧಾರವಾಡ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.