ADVERTISEMENT

ನುಡಿ ನಮನ: ‘ಚಂದ್ರಗಿರಿಯ ತೀರ’ದ ಸ್ತ್ರೀ–ಸ್ವಾತಂತ್ರ್ಯವಾದಿ ಸಾರಾ

ಚಂದ್ರಕಲಾ ನಂದಾವರ
Published 10 ಜನವರಿ 2023, 19:30 IST
Last Updated 10 ಜನವರಿ 2023, 19:30 IST
ಸಾರಾ ಅಬೂಬಕ್ಕರ್
ಸಾರಾ ಅಬೂಬಕ್ಕರ್   

‘ಚಂದ್ರಗಿರಿಯ ತೀರದಲ್ಲಿ’ ಕಾದಂಬರಿ ‘ಲಂಕೇಶ್ ಪತ್ರಿಕೆ’ಯಲ್ಲಿ 1984ರಲ್ಲಿ ಧಾರಾವಾಹಿಯಾಗಿ ಬಂದಾಗ ಸಾರಾ ಅಬೂಬಕ್ಕರ್ ಎಂಬ ಹೆಣ್ಣು ಮಗಳ ಹೆಸರು ಕನ್ನಡ ಸಾಹಿತ್ಯ ಲೋಕದಲ್ಲಿ ಅಪೂರ್ವವಾಗಿ ಕಾಣಿಸಿತು. ಮಹಿಳಾ ಕಾದಂಬರಿಗಳ ಹುಲುಸಾದ ಬೆಳೆಯ ಆ ದಿನಗಳಲ್ಲಿ ಒಂದು ವೈಚಾರಿಕವಾದ ಸಾಮಾಜಿಕ ಕೃತಿಯಾಗಿ ಅದರ ಓದು ಕೊಟ್ಟ ಖುಷಿ ಅವಿಸ್ಮರಣೀಯ. ಅದುವರೆಗೆ ಮುಸ್ಲಿಂ ಜನಾಂಗದ ಬಗ್ಗೆ ತಿಳಿದುಕೊಳ್ಳಬೇಕೆಂಬ ಹಂಬಲಕ್ಕೆ ಅದಾಗಲೇ ಫಕೀರ್ ಮಹಮ್ಮದ್ ಕಟ್ಪಾಡಿ, ಬೊಳುವಾರು ಮಹಮ್ಮದ್ ಕುಂಞಿ ಅವರ ಕತೆಗಳು ಒಂದಷ್ಟು ಉತ್ತರಗಳನ್ನು ನೀಡಿದ್ದವಾದರೂ, ಮುಸ್ಲಿಂ ಜನಾಂಗದ ಕುರಿತು ಹೊಸ ತಿಳಿವಳಿಕೆಯನ್ನು ಅದಕ್ಕಿಂತಲೂ ಹೆಚ್ಚು ಆರ್ದ್ರವಾಗಿ, ವಾಸ್ತವವಾಗಿ, ಕಟ್ಟಿಕೊಟ್ಟಿದ್ದು ‘ಚಂದ್ರಗಿರಿಯ ತೀರದಲ್ಲಿ’ ಕಾದಂಬರಿ. ಮಹಿಳಾ ಸಾಹಿತ್ಯಕ್ಕೆ ಹೊಸ ಆಯಾಮ ನೀಡಿತು.

‘ಶೀಲವೇ ಶೈಲಿ’ ಎಂಬ ಕಾವ್ಯ ಸಿದ್ಧಾಂತವು ಸಾರಾ ಅವರ ಬರಹ– ಬದುಕು ಎರಡಕ್ಕೂ ಸಮಾನವಾದುದು. ಸರಳ, ಸಹಜವಾದ ನೇರ ಮಾತುಗಳ ಆತ್ಮೀಯವಾದ ಶೈಲಿಯಿಂದಾಗಿ ಅವರ ಬರಹಗಳು ಆಪ್ತವಾಗುತ್ತವೆ. ಮುಸ್ಲಿಂ ಮಹಿಳೆಯರು ಬರೆಯುವುದು ಬಿಡಿ, ವಿದ್ಯಾಭ್ಯಾಸ ಪಡೆಯುವುದಕ್ಕೂ ನಿರ್ಬಂಧಗಳಿದ್ದ ಕಾಲದಲ್ಲಿ ಬರಹದ ಮೂಲಕ ಕ್ರಾಂತಿಗೆ ಮುಂದಡಿ ಇಟ್ಟವರು ಅವರು. ಸಮಾಜದ, ಸಮುದಾಯದ ಆಚರಣೆ, ಮೌಢ್ಯಗಳ ಕುರಿತು ಧ್ವನಿ ಎತ್ತಲು ಯಾವತ್ತೂ ಹಿಂಜರಿದವರಲ್ಲ. ‌ಬರಹ, ಭಾಷಣಗಳ ಪ್ರಾರಂಭದ ದಿನಗಳಲ್ಲಿ ತಮ್ಮ ಸಮುದಾಯದ ಜನರಿಂದಲೇ ಅಪಮಾನ, ಆಕ್ರೋಶಗಳಿಗೆ ಒಳಗಾದ ಸಾರಾ, ಧೈರ್ಯಗೆಡದೆ ತಮ್ಮ ನ್ಯಾಯಯುತ
ವಾದ ಸತ್ಯದ ದಾರಿಯಲ್ಲಿ ಮುಂದುವರಿದವರು. ತಮ್ಮ ಕೃತಿಗಳ ಪ್ರಕಟಣೆಗಾಗಿ ‘ಚಂದ್ರಗಿರಿ ಪ್ರಕಾಶನ’ ಸಂಸ್ಥೆ ಹುಟ್ಟುಹಾಕಿ, ಸ್ವತಃ ನಿರ್ವಹಿಸುವ ಛಾತಿ ತೋರಿದ ಗಟ್ಟಿಗಿತ್ತಿ. ಅವರು ತೋರಿದ ಆತ್ಮವಿಶ್ವಾಸ, ಆತ್ಮಸ್ಥೈರ್ಯ ಮಹಿಳೆಯರಿಗೆಲ್ಲ ಮಾದರಿ.

ಸಾರಾ, ಬರಹವನ್ನೇ ವೃತ್ತಿಯಾಗಿಸಿಕೊಂಡವರು. ಸಾಕಷ್ಟು ಹೆಸರು ಮಾಡಿದ ಬಳಿಕವೂ ತಾನೊಬ್ಬ ದೊಡ್ಡ ಲೇಖಕಿಯೆಂಬ ಜಂಭ ಅವರನ್ನು ಎಂದಿಗೂ ಕಾಡಿದ್ದಿಲ್ಲ. ಕರ್ನಾಟಕದ ಮೂಲೆಮೂಲೆಗೂ ತೆರಳಿ ಮಹಿಳಾಪರ, ಹೋರಾಟದ ದನಿಯಾದವರು. ಮುಸ್ಲಿಮರಷ್ಟೇ ಅಲ್ಲ, ಎಲ್ಲ ಧರ್ಮಗಳ ಮಹಿಳೆಯರ ಜಾಗೃತಿಗೆ ಬೆಳಕಾದವರು. ಬದುಕನ್ನು ವಾಸ್ತವದ ಸತ್ಯವಾಗಿ ಸ್ವೀಕರಿಸುವ ಸಾರಾ ಅವರು ಜಾತಿ– ಮತಗಳ ಸಂಕುಚಿತತೆಯನ್ನು ಮೀರಿ ಎಲ್ಲಾ ಧರ್ಮಗಳ ಕುರಿತೂ ತಿಳಿದುಕೊಳ್ಳಬೇಕೆನ್ನುವ ಕುತೂಹಲ ಹೊಂದಿದ್ದವರು.

ADVERTISEMENT

ಕರಾವಳಿ ಲೇಖಕಿಯರ– ವಾಚಕಿಯರ ಸಂಘದ ಸ್ಥಾಪಕ ಉಪಾಧ್ಯಕ್ಷೆಯಾಗಿದ್ದ ಅವರನ್ನು ಬಲು ಹತ್ತಿರದಿಂದ ಬಲ್ಲೆ. ಅವರ ಜತೆಗೆ ಕರ್ನಾಟಕದೊಳಗೆ–ಹೊರಗೆ ಅನೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದೇನೆ. ಅವರು ಜನರೊಂದಿಗೆ ಬೆರೆಯುವ ಸರಳ, ಸಾದಾ ರೀತಿ ಬಹು ಮೆಚ್ಚುಗೆಯಾದುದು. ಸಂಘದ ಆಜೀವ ಸದಸ್ಯತ್ವ ಹೊಂದಿದ್ದು ಮಾತ್ರವಲ್ಲ ಕೊನೆಯವರೆಗೂ ಸಕ್ರಿಯ ಸದಸ್ಯೆಯಾಗಿದ್ದರು. ಸಂಘದೊಂದಿಗೆ ಗುರುತಿಸಿಕೊಳ್ಳುವಲ್ಲಿ ಅಭಿಮಾನ ಪಡುತ್ತಿದ್ದವರು. ಅವರಿಗೆ ಬಹುಮಾನ, ಪ್ರಶಸ್ತಿಗಳು ಬಂದಂತೆಲ್ಲಾ ಈ ಸಂಘಕ್ಕೆ ಹೊಸ ಹುರುಪು, ಹೆಮ್ಮೆ.

ಸಂಘಕ್ಕೆ ಕಟ್ಟಡ ಇಲ್ಲದ ದಿನಗಳಲ್ಲಿ ನಮ್ಮ ಕಾರ್ಯಕಾರಿ ಸಭೆಗಳು ಪದಾಧಿಕಾರಿಗಳ ಮನೆಗಳಲ್ಲಿ, ಸದಸ್ಯೆಯರ ಮನೆಗಳಲ್ಲಿ ನಡೆಯುತ್ತಿದ್ದವು. ಸಾರಾ ಅವರ ಮನೆಯಲ್ಲಿ ಸಭೆ ನಡೆದಾಗ, ಅವರ ಕೈಯಲ್ಲಿ ಲೇಖನಿ ಮೆರೆದಂತೆ ಸೌಟೂ ಮೆರೆಯುವುದನ್ನು ಕಂಡಿದ್ದೇನೆ. ಅವರ ಕೈರುಚಿಯಲ್ಲಿ ಕೇರಳದ ಸ್ವಾದಿಷ್ಟ ತಿನಿಸುಗಳ ಸ್ವಾದವನ್ನು ಸವಿದಿದ್ದೇವೆ. ಮನೆ, ಕುಟುಂಬ ನಿರ್ವಹಣೆಯೂ ಅವರಿಗೆ ಕರತಲಾಮಲಕ. ಮೊಮ್ಮಕ್ಕಳ ಪ್ರೀತಿಯ ಅಜ್ಜಿಯಾಗಿದ್ದ ಅವರು ಕುಟುಂಬ ವತ್ಸಲೆ. ಹೆಣ್ಣುಮಕ್ಕಳಿಲ್ಲ ಎಂಬ ಕೊರತೆಯನ್ನು ವಿದ್ಯಾವತಿಯರಾದ ಸೊಸೆಯಂದಿರು ನೀಗಿಸಿದ್ದಾರೆ. ಇಷ್ಟೆಲ್ಲಾ ಸಾಹಿತ್ಯಕ ಕಾರ್ಯಕ್ರಮ ಬರಹಗಳ ಎಡೆಯಲ್ಲೂ ಹಬ್ಬ ಉಪವಾಸ, ನೆಂಟರಿಷ್ಟರ ಮದುವೆ, ಸೀಮಂತಗಳಲ್ಲಿ ಭಾಗಿಯಾಗುತ್ತಲೇ ಅವುಗಳ ಗುಣದೋಷಗಳನ್ನು ತನ್ನ ಬರಹಕ್ಕೆ ವಸ್ತುಗಳನ್ನಾರಿಸುವ ಜಾಣ್ಮೆ ಅವರದು.

ಕನ್ನಡ ಸಾಹಿತ್ಯ ಕ್ಷೇತ್ರದ ‘ಚಂದ್ರಗಿರಿಯ ತೀರ’ದಿಂದ ಬಂಡಾಯದ ಪಯಣ ಆರಂಭಿಸಿದ ಸಾರಾ, ಬಹುದೂರ ಸಾಗಿದ್ದರು. ಬಲು ಎತ್ತರಕ್ಕೆ ಏರಿದ್ದರು. ಅನ್ಯಾಯದ ವಿರುದ್ಧದ ದನಿಯಾಗಿ, ಮಹಿಳೆಯರ ಪಾಲಿಗೆ ಹಿರಿಯಕ್ಕನಾಗಿ ಕೆಚ್ಚು, ಧೈರ್ಯಗಳ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ಸಾಹಿತ್ಯ ಲೋಕದಲ್ಲಿ ಅವರು ಇಟ್ಟ ಪ್ರತಿ ಹೆಜ್ಜೆಯಲ್ಲೂ ಅವರು ಕಂಡಿದ್ದ ಮಹಿಳಾ ಸ್ವಾತಂತ್ರ್ಯ ಮತ್ತು ಸಬಲೀಕರಣದ ಪಡಿಯಚ್ಚುಗಳು ಕಾಣಿಸುತ್ತವೆ.

ಲೇಖಕಿ: ಸಾರಾ ಅಬೂಬಕ್ಕರ್‌ ಅವರ ಒಡನಾಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.