ADVERTISEMENT

ಹೋರಾಟದ ಮೂಸೆಯಲ್ಲಿ ರೂಪುಗೊಂಡ ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 17:22 IST
Last Updated 26 ಜುಲೈ 2021, 17:22 IST
ಬಿ.ಎಸ್‌ ಯಡಿಯೂರಪ್ಪ
ಬಿ.ಎಸ್‌ ಯಡಿಯೂರಪ್ಪ    

'ಹೋರಾಟದ ಮೂಸೆಯಲ್ಲಿ ರೂಪುಗೊಂಡ ಯಡಿಯೂರಪ್ಪ' ಎಂಬ ಈ ಲೇಖನವನ್ನು ಜುಲೈ 27, 2019ರಂದುಯಡಿಯೂರಪ್ಪ ಮುಖ್ಯಮಂತ್ರಿ ಗಾದಿಗೇರಿದಾಗ ಪ್ರಕಟಿಸಲಾಗಿತ್ತು. ಬಿಎಸ್‌ವೈ ರಾಜೀನಾಮೆ ಸಲ್ಲಿಸಿರುವ ಈ ಸಂದರ್ಭದಲ್ಲಿ ಲೇಖನವನ್ನು ಮತ್ತೊಮ್ಮೆ ಹಂಚಿಕೊಳ್ಳಲಾಗುತ್ತಿದೆ.

***

ಬೆಂಗಳೂರು: ಹೋರಾಟದ ಮೂಲಕವೇ ಸಾರ್ವಜನಿಕ ಜೀವನವನ್ನು ಕಳೆದಿರುವ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಜುಲೈ 26, 2019ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ನಾಲ್ಕನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ್ದರು. ಎರಡು ವರ್ಷಗಳ ನಂತರ ಅದೇ ದಿನ (ಜುಲೈ 26, 2021) ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ADVERTISEMENT

ಸದಾ ಸಿಟ್ಟು, ಸೆಡುವಿನ ಯಡಿಯೂರಪ್ಪ ಎಂದು ಕರೆಸಿಕೊಂಡರೂ, ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಜನಪರ ಕಾರ್ಯಕ್ರಮಗಳನ್ನು ನೀಡುವ ಮೂಲಕ ರಾಜ್ಯದ ಗಮನ ಸೆಳೆದಿದ್ದರು.ಅಧಿಕಾರ ಇದ್ದಾಗಲೂ ಹರ್ಷ ವ್ಯಕ್ತಪಡಿಸದೆ, ಅಧಿಕಾರ ಕಳೆದುಕೊಂಡಾಗಲೂ ಸಿಟ್ಟು ತೋರ್ಪಡಿಸದೆ ಸಮಚಿತ್ತ ಕಾಯ್ದುಕೊಂಡವರು.76ನೇ ವಯಸ್ಸಿನಲ್ಲೂ ಬತ್ತದ ಉತ್ಸಾಹ.

2008ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಪ್ರತ್ಯೇಕ ಕೃಷಿ ಬಜೆಟ್ ನೀಡುವ ಮೂಲಕ ರೈತಪರ ಕಾಳಜಿ ವ್ಯಕ್ತಪಡಿಸಿದ್ದರು. ರೈತಪರ, ಜನಪರ ಯೋಜನೆಗಳನ್ನು ರೂಪಿಸಿ, ಎಲ್ಲ ವರ್ಗ, ಸಮುದಾಯವನ್ನು ತಲುಪುವ ಪ್ರಯತ್ನ ಮಾಡಿದ್ದರು. ಅವರು ರೂಪಿಸಿದ ಕಾರ್ಯಕ್ರಮಗಳೇ ಅಪಾರ ಜನಪ್ರಿಯತೆ ತಂದುಕೊಟ್ಟಿದ್ದವು.

ಹಿನ್ನೆಲೆ: ಹುಟ್ಟೂರು ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕು ಬೂಕನಕೆರೆಯಲ್ಲಿ ಬಾಲ್ಯ ಕಳೆದರೂ, ರಾಜಕೀಯ ಜೀವನ ರೂಪಿಸಿಕೊಂಡಿದ್ದು ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ. ಬೂಕನಕೆರೆಯಿಂದ ವಲಸೆಹೋಗಿ ಶಿಕಾರಿಪುರದಲ್ಲಿ ನೆಲೆ ನಿಂತ ನಂತರ ಅವರ ಬದುಕಿನಲ್ಲಿ ಸಾಕಷ್ಟು ಬದಲಾವಣೆಗಳಾದವು. ಪುರಸಭಾ ಸದಸ್ಯ ಸ್ಥಾನದಿಂದ ಮುಖ್ಯಮಂತ್ರಿ ಗಾದಿಗೆ ಏರುವವರೆಗೂ ಕಠಿಣ ಶ್ರಮ ಅವರದ್ದು. ರಾಜಕೀಯ ಏರಿಳಿತ, ಸೋಲು–ಗೆಲುವು, ಮುಖ್ಯಮಂತ್ರಿ ಸ್ಥಾನಕ್ಕೇರಿದರೂ ಅಧಿಕಾರ ಅನುಭವಿಸಲಾಗದ ತೊಳಲಾಟಗಳನ್ನು ಕಂಡ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಿದ್ದಾರೆ.

*1943ರಲ್ಲಿ ಕೆ.ಆರ್.ಪೇಟೆ ತಾಲ್ಲೂಕು ಬೂಕನಕೆರೆಯಲ್ಲಿ ಜನನ

* 1965 ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರವೇಶ

* 1970 ಆರ್‌ಎಸ್‌ಎಸ್ ಶಿಕಾರಿಪುರ ತಾಲ್ಲೂಕು ಕಾರ್ಯವಾಹರಾಗಿ ನೇಮಕ

* 1972 ಜನಸಂಘದ ಶಿಕಾರಿಪುರ ತಾಲ್ಲೂಕು ಅಧ್ಯಕ್ಷರಾಗಿ ನೇಮಕ

* 1975 ರಾಜಕೀಯ ಪ್ರವೇಶ. ಶಿಕಾರಿಪುರ ಪುರಸಭಾ ಸದಸ್ಯರಾಗಿ ಆಯ್ಕೆ. ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ, 45 ದಿನ ಜೈಲುವಾಸ

* 1983 ಮೊದಲ ಬಾರಿಗೆ ವಿಧಾನಸಭೆ ಪ್ರವೇಶ

* 1985 ಬಿಜೆಪಿ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ

* 1988 ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

* 1994 ವಿಧಾನಸಭೆ ವಿರೋಧಪಕ್ಷದ ನಾಯಕ

* 2006 ಉಪಮುಖ್ಯಮಂತ್ರಿ, ಹಣಕಾಸು ಖಾತೆ ನಿರ್ವಹಣೆ

* 2007 ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಅಧಿಕಾರ ಸ್ವೀಕಾರ

* 2008 2ನೇ ಬಾರಿಗೆ ಮುಖ್ಯಮಂತ್ರಿ

* 2011 ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ

* 2012 ಬಿಜೆಪಿ ತೊರೆದು ಕೆಜೆಪಿ ಸ್ಥಾಪನೆ

* 2013 ಕೆಜೆಪಿಯಿಂದ ಶಾಸಕರಾಗಿ ಆಯ್ಕೆ

* 2014 ಬಿಜೆಪಿ ಸೇರ್ಪಡೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಆಯ್ಕೆ

* 2016 ಬಿಜೆಪಿ ಅಧ್ಯಕ್ಷರಾಗಿ ಪುನರ್ ಆಯ್ಕೆ

* 2109 4ನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ

ಜುಲೈ 27, 2019ರ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಲೇಖನ. ಜುಲೈ 26, 2019ರಲ್ಲಿ ಬಿ.ಎಸ್‌ ಯಡಿಯೂರಪ್ಪ ಅವರು ನಾಲ್ಕನೇ ಬಾರಿಗೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.