ADVERTISEMENT

ವ್ಯಕ್ತಿ ವಿಶೇಷ: ಟೆನಿಸ್‌ ಹೊಸತಾರೆ ಅಲ್ಕರಾಜ್

ವಿಶಾಖ ಎನ್.
Published 16 ಸೆಪ್ಟೆಂಬರ್ 2022, 19:31 IST
Last Updated 16 ಸೆಪ್ಟೆಂಬರ್ 2022, 19:31 IST
ಅಲ್ಕರಾಜ್
ಅಲ್ಕರಾಜ್   

ಮೊನ್ನೆ ಮೊನ್ನೆಯಂತಿದೆ; ಟೆನಿಸ್‌ನಲ್ಲಿ ಸ್ಪ್ಯಾನಿಷ್ ಜನರು ರಫೆಲ್ ನಡಾಲ್ ಅಂದೊಡನೆ ರೋಮಾಂಚನಗೊಳ್ಳುತ್ತಿದ್ದ ಕ್ಷಣ. ಅದರಲ್ಲೂ ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ನಡಾಲ್ ಆಟವೆಂದರೆ ಎಲ್ಲರಿಗೂ ಸಹಜ ಹಿಗ್ಗು. ಒಂದೊಂದು ಪಾಯಿಂಟ್ ಗೆದ್ದಾಗಲೂ ತನ್ನ ಭುಜಬಲ ಪರಾಕ್ರಮ ತೋರುವ ನಡಾಲ್‌ನ ಸಣ್ಣ ಕಣ್ಣೂ ಈಗ ಅಗಲಗೊಂಡಿದೆ. ನೋಟ ನೆಟ್ಟಿರುವುದು ಕಾರ್ಲೊಸ್ ಅಲ್ಕರಾಜ್ ಎನ್ನುವ ಹತ್ತೊಂಬತ್ತರ ಹುಡುಗನತ್ತ. ಟೆನಿಸ್ ಅಭಿಮಾನಿಗಳು ಈ ಹುಡುಗನಲ್ಲೀಗ ಭವಿತವ್ಯದ ನಡಾಲ್‌ನನ್ನು ನೋಡುತ್ತಿದ್ದಾರೆ. ಅಮೆರಿಕ ಓಪನ್ ಸಿಂಗಲ್ಸ್‌ ಗ್ರ್ಯಾನ್‌ ಸ್ಲ್ಯಾಮ್‌ನಲ್ಲಿ ಅಲ್ಕರಾಜ್ ಚಾಂಪಿಯನ್ ಆಗಿರುವುದು ಇಂತಹ ನಿರೀಕ್ಷೆಗೆ ಕಾರಣ. ಸಾಂಪ್ರಾಸ್ ತರಹದ ಕೂದಲು–ನೋಟ,ನಡಾಲ್‌ಗೆ ಹೊರತೇ ಆದ ಹುರಿಗಟ್ಟಿದ ಭುಜ,ಜೊಕೊವಿಚ್ ತರಹದ ಚುರುಕು ಪಾದಚಲನೆ...ಎಲ್ಲವೂ ಬೆರೆತಂಥ ಹುಡುಗ ಅಲ್ಕರಾಜ್.

ಟೆನಿಸ್‌ನಲ್ಲಿ ಹೊಸ ನೀರು ಹಳೆನೀರಿನೊಟ್ಟಿಗೆ ಬೆರೆಯುವ ಪರಿಯೇ ಬೆರಗು. ಪೀಟ್ ಸಾಂಪ್ರಾಸ್ ತಣ್ಣಗೇ ಎದುರಾಳಿಯನ್ನು ಕೊಲ್ಲುವ ರೀತಿ ಆಡುತ್ತಿದ್ದಾಗ ಧ್ಯಾನಸ್ಥ ಫೆಡರರ್ ಬಂದು ಸವಾಲೆಸೆದಿದ್ದರು. ಫೆಡರರ್ ಪರಮ ಸಂಯಮದ ಆಟವೂ ಆವೆಮಣ್ಣಿನಲ್ಲಿ ಹುದುಗಿಹೋಗುವಂತೆ ಮಾಡಿ,ತಮ್ಮ ತೋಳುಗಳನ್ನು ಉಬ್ಬಿಸಿದ್ದವರು ರಫೆಲ್ ನಡಾಲ್. ಆಮೇಲೆ ನೊವಾಕ್ ಜೊಕೊವಿಚ್ ಸಪೂರ ಕಾಲುಗಳ ಪಾದರಸದಂಥ ಚಲನೆಗಳನ್ನು ಟೆನಿಸ್‌ ಅಭಿಮಾನಿಗಳು ಕಂಡರು. ಮೊನ್ನೆ ಅಲ್ಕರಾಜ್ ಅಮೆರಿಕ ಓಪನ್ ಸಿಂಗಲ್ಸ್‌ನಲ್ಲಿ ಆಡಿದ ಒಟ್ಟು 29 ಗಂಟೆ 39 ನಿಮಿಷಗಳ ಆಟವನ್ನು ಟೆನಿಸ್‌ನ ಪರಮ ಅಭಿಮಾನಿಗಳ್ಯಾರೂ ಮರೆಯಲಾರರು. ಎಟಿಪಿ ರ‍್ಯಾಂಕಿಂಗ್‌ನಲ್ಲಿ ಪ್ರಥಮ ಸ್ಥಾನಕ್ಕೆ ಜಿಗಿದ ವಿಶ್ವದ ಮೊದಲ ಹದಿಹರೆಯದ ಹುಡುಗ ಅರ್ಥಾತ್ ಟೀನೇಜರ್ ಅವರೆನಿಸಿಕೊಂಡ ಸಂದರ್ಭ ಅದು.

ಈ ವರ್ಷ ಮ್ಯಾಡ್ರಿಡ್‌ನ ಆವೆಮಣ್ಣಿನ ಅಂಕಣದಲ್ಲಿನಡಾಲ್ ಹಾಗೂ ಜೊಕೊವಿಚ್ ಇಬ್ಬರನ್ನೂ ಅಲ್ಕರಾಜ್ ಒಬ್ಬರ ನಂತರ ಒಬ್ಬರಂತೆ ಮಣಿಸಿದ್ದಕ್ಕೆ ಅಡಿಗೆರೆ ಎಳೆಯಬೇಕು. ಅವರನ್ನು ಅನೇಕರೀಗ ‘ಬೇಬಿ ನಡಾಲ್’ ಎನ್ನತೊಡಗಿದ್ದಾರೆ. ಇಂತಹ ಗುಣವಿಶೇಷಣವನ್ನು ಪ್ರೀತಿಯಿಂದ ಸ್ವೀಕರಿಸಿರುವ ಅವರು, ‘ಎಂಟನೇ ವಯಸ್ಸಿನಿಂದಲೇ ಅವರ ಆಟವನ್ನು ಕಣ್ತುಂಬಿಕೊಳ್ಳುತ್ತಾ ಬೆಳೆದವನು ನಾನು. ಟೆನಿಸ್‌ ಲೋಕದಲ್ಲಿ ರಫಾ ಅವರಿಂದ ಸ್ಫೂರ್ತಿ ಪಡೆದವರೆಷ್ಟೊ. ನಾನೂ ಅವರಲ್ಲಿ ಒಬ್ಬ’ಎನ್ನುತ್ತಾರೆ.

ADVERTISEMENT

ಐಟಿಎಫ್ ಟೂರ್ನಿಗಳಿಗೆ ಅಲ್ಕರಾಜ್‌ ಮೊದಲು ಪ್ರವೇಶ ಮಾಡಿದ್ದು 2018ರಲ್ಲಿ,ತಮ್ಮ ಹದಿನೈದನೇ ಹುಟ್ಟುಹಬ್ಬ ಆಚರಿಸಿಕೊಳ್ಳುವುದಕ್ಕೂ ಮೊದಲು. ನಡಾಲ್ ತಮಗೆ ಸ್ಫೂರ್ತಿ ಎಂದು ಹೇಳಿದರೂ,ಅವರೊಟ್ಟಿಗೆ ತಮ್ಮನ್ನು ಹೋಲಿಸುವುದು ಇಷ್ಟವಿಲ್ಲ. ಸ್ಪೇನ್‌ನ ನಿಕೊಲಸ್ ಆಲ್ಮಗ್ರೊ ಗತಕಾಲದಲ್ಲಿ ಫಾರ್ಮ್‌ನಲ್ಲಿದ್ದಾಗ ಸೃಜನಶೀಲವೂ ಆಕ್ರಮಣಕಾರಿಯೂ ಆದ ಆಟವಾಡುತ್ತಿದ್ದರು. ಅದೇ ದೇಶದ ಪ್ಯಾಬ್ಲೊ ಕ್ಯಾರೆನೊ ಬಸ್ಟಾ ರಕ್ಷಣಾತ್ಮಕವಾಗಿ ಆಡುತ್ತಲೇ ಎದುರಾಳಿಗಳ ಜಂಘಾಬಲ ಉಡುಗಿಸುತ್ತಿದ್ದ ಇನ್ನೊಂದು ತಂತ್ರವೂ ಇತ್ತು. ಅಲ್ಕರಾಜ್‌ ಇವೆರಡನ್ನು ತಮ್ಮದಾಗಿಸಿಕೊಂಡಂತೆ ಆಡುತ್ತಾರೆ.

2020ರಲ್ಲಿ ಸ್ಪೇನ್‌ ಹಾಗೂ ರಿಯೊ ಡಿ ಜನೈರೊದಲ್ಲಿ ನಡೆದ ಐಟಿಎಫ್ ಟೂರ್ನಿಗಳಲ್ಲಿ ಅವರು ಸಾಧಿಸಿದ ಗೆಲುವು ಮುಂದಿನ ನಡೆಗಳ ಮುನ್ನುಡಿಯಂತಿತ್ತು. ಆ ವರ್ಷ ಆಗಸ್ಟ್‌ನಿಂದ ಅಕ್ಟೋಬರ್ ಅವಧಿಯಲ್ಲಿ ಎಟಿಪಿ ಚಾಲೆಂಜರ್‌ ಟೂರ್‌ ಟೂರ್ನಿಗಳಲ್ಲಿ ಮೂರು ಪ್ರಶಸ್ತಿಗಳು ಹುಡುಗನ ಶಿರದಲ್ಲಿ ಗರಿ ಮೂಡಿಸಿದ್ದವು. ಎಟಿಪಿ ರ‍್ಯಾಂಕಿಂಗ್‌ನಲ್ಲಿ ಚಕಚಕನೆ ಮೇಲೇರಲು ಕಾರಣವಾದ ವಿಜಯಗಳಿವು. ಆಗ 490ನೇ ರ‍್ಯಾಂಕ್‌ನಲ್ಲಿದ್ದ ಅವರು,ನೋಡನೋಡುತ್ತಲೇ 136ನೇ ರ್‍ಯಾಂಕ್‌ಗೆ ಏರಿದ್ದು ಸೋಜಿಗ.

ಅಲ್ಕರಾಜ್ತವರು ಮುರ್ಸಿಯಾ ಬಳಿಯ ಎಲ್ ಪಾಮರ್‌. ಅಲ್ಲೀಗ ಈ ಹುಡುಗನಿಗೆ ಟೆನಿಸ್‌ನಲ್ಲಿ ಸರಿಸಮಾನರು ಯಾರೂ ಇಲ್ಲ. ತರಬೇತುದಾರ ಜುವಾನ್ ಕಾರ್ಲೊಸ್ ಫೆರೆರೊ ಹುಡುಗನ ವೃತ್ತಿಯನ್ನು ಈ ಪಥಕ್ಕೆ ತಂದಿರುವುದು ಗಮನಾರ್ಹ. ಅಲ್ಕರಾಜ್‌ ಆತ್ಮವಿಶ್ವಾಸಕ್ಕೆ ಕಸುವು ತುಂಬಿದ್ದು ಅವರೇ.

ಹೊಡೆತ ಪ್ರಯೋಗಿಸುವಾಗ ಮೋನಿಕಾ ಸೆಲೆಸ್ ಜೋರಾದ ಶಬ್ದವೊಂದನ್ನು ಹೊಮ್ಮಿಸುತ್ತಿದ್ದರು. ಅಲ್ಕರಾಜ್ ಕೂಡ ಹಾಗೆಯೇ. ಅಮೆರಿಕ ಓಪನ್‌ ಫೈನಲ್‌ನಲ್ಲಿ ಅವರು 6–4, 2–6, 7–6 (7–1), 6–3ರಲ್ಲಿ ರುಡ್ ಅವರನ್ನು ಮಣಿಸಿದ್ದೇ ತಡ,ಅಂಗಳದ ಮೇಲೆ ಅಂಗಾತವಾದರು, ಮಕಾಡೆ ಮಲಗಿದರು. ಇಡೀ ಅಂಕಣದ ಮೇಲೆಯೇ ಮುದ್ದುಚೆಲ್ಲುವ ಸಂಭ್ರಮ. ಎದ್ದವರೇ, ಗ್ಯಾಲರಿಯಲ್ಲಿದ್ದ ಕುಟುಂಬದ ಸದಸ್ಯರನ್ನು ಅಪ್ಪಿಕೊಂಡರು. ಕೋಚ್ ಫೆರರೊ ಅವರಿಗೆ ವಿಶೇಷ ಬಿಸಿಯಪ್ಪುಗೆ. ಎಲ್ಲರ ಕಣ್ಣಾಲಿಗಳಲ್ಲಿ ನೀರಿತ್ತು. 14 ಏಸ್‌ಗಳನ್ನು ಪ್ರಯೋಗಿಸಿದ್ದ ಆಟಗಾರ ಇಷ್ಟು ಚಿಕ್ಕ ಹುಡುಗನಾ ಎನಿಸಿದ್ದು ಅಂತಹ ಬಾಲಸುಖವನ್ನು ಕಂಡಾಗಲೇ.

ಅಲ್ಕರಾಜ್ ತಂದೆ ಕಾರ್ಲೊಸ್ ರಿಯಲ್ ಸೊಸೈಡ್ಯಾಡ್ ಡಿ ಕ್ಯಾಂಪೊ ಡಿ ಮುರ್ಸಿಯಾದಲ್ಲಿ ಟೆನಿಸ್‌ ಅಕಾಡೆಮಿ ನಿರ್ದೇಶಕರಾಗಿದ್ದರು. ಅವರೂ ವೃತ್ತಿಪರ ಟೆನಿಸ್‌ ಆಡಿದ್ದವರೆ. ಹೀಗಾಗಿ ನಾಲ್ಕು ವರ್ಷದ ಪುಟ್ಟ ಮಗನ ಕೈಗೆ ಅವರು ರ‍್ಯಾಕೆಟ್ ಕೊಟ್ಟಿದ್ದರು. ಅಪ್ಪನ ಆ ಉಡುಗೊರೆಯನ್ನು ಇತಿಹಾಸ ಸೃಷ್ಟಿಸುವ ಪರಿಕರವಾಗಿಸಿಕೊಂಡರು ಅಲ್ಕರಾಜ್.

ಇದೇ ವರ್ಷ 19ನೇ ಹುಟ್ಟುಹಬ್ಬ ಆಚರಿಸಿದ ಮರುದಿನವೇ ಮ್ಯಾಡ್ರಿಡ್‌ನಲ್ಲಿ ರಫೆಲ್ ನಡಾಲ್ ಅವರನ್ನು ಅಲ್ಕರಾಜ್ ಸೋಲಿಸಿದ್ದರು. ಐದು ಸಲ ನಡಾಲ್ ಅಲ್ಲಿ ಪ್ರಶಸ್ತಿ ಗೆದ್ದಿದ್ದವರು. ಅಂತಹ ಆಟಗಾರನನ್ನು ಅವರ ಮೆಚ್ಚಿನ ಆವೆಮಣ್ಣಿನ ಅಂಗಳದಲ್ಲಿ ಸೋಲಿಸುವುದೆಂದರೆ,ತಮಾಷೆಯಲ್ಲ. ಅಮೆರಿಕ ಓಪನ್‌ ಕ್ವಾರ್ಟರ್‌ಫೈನಲ್‌ನಲ್ಲಿ ಜನಿಕ್ ಸಿನ್ನರ್‌ ಅವರನ್ನು ಸೋಲಿಸಲು ಐದೂಕಾಲು ಗಂಟೆ ಐದು ಸೆಟ್‌ ಆಡಬೇಕಾಯಿತು. ಅಮೆರಿಕ ಓಪನ್ ಪುರುಷರ ಸಿಂಗಲ್ಸ್‌ ಇತಿಹಾಸದಲ್ಲೇ ಇದು ದಾಖಲೆ. ಹುಡುಗನೊಬ್ಬ
ಮೊದಲ ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿ ಗೆದ್ದಾಗ ಕೂಡಿಡಲು ಇಷ್ಟೆಲ್ಲ ಸಂಗತಿಗಳು ಸಿಗುವುದು ಶುಭಸೂಚನೆಯಂತೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.