ADVERTISEMENT

ಕನ್ನಡದ ದೀಪಗಳು: ‘ಚನ್ನಯ್ಯನವರದು ಕ್ಯಾನರೀಸ್‌ ಕಣ್ರೀ...

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2021, 19:30 IST
Last Updated 30 ಅಕ್ಟೋಬರ್ 2021, 19:30 IST
ಡಾ.ಬಿ.ಆರ್‌. ಅಂಬೇಡ್ಕರ್‌ ಅವರ 59ನೇ ಜನ್ಮದಿನದ ಸಂಭ್ರಮದಲ್ಲಿ ರಾಜ್ಯಸಭೆಯ ಆಗಿನ ಇತರ ಸದಸ್ಯರೊಂದಿಗೆ ಟಿ.ಚನ್ನಯ್ಯ. ಅಂಬೇಡ್ಕರ್‌ ಅವರ ಪತ್ನಿ ಸವಿತಾ ದೇವಿ ಅವರೂ ಚಿತ್ರದಲ್ಲಿದ್ದಾರೆ.
ಡಾ.ಬಿ.ಆರ್‌. ಅಂಬೇಡ್ಕರ್‌ ಅವರ 59ನೇ ಜನ್ಮದಿನದ ಸಂಭ್ರಮದಲ್ಲಿ ರಾಜ್ಯಸಭೆಯ ಆಗಿನ ಇತರ ಸದಸ್ಯರೊಂದಿಗೆ ಟಿ.ಚನ್ನಯ್ಯ. ಅಂಬೇಡ್ಕರ್‌ ಅವರ ಪತ್ನಿ ಸವಿತಾ ದೇವಿ ಅವರೂ ಚಿತ್ರದಲ್ಲಿದ್ದಾರೆ.   

ಟಿ.ಚನ್ನಯ್ಯ ಸ್ವಾತಂತ್ರ್ಯ ಹೋರಾಟಗಾರರು. ಕಟ್ಟಾ ಗಾಂಧಿ ಅನುಯಾಯಿ. ಬಾಬಾಸಾಹೇಬ್ ಅಂಬೇಡ್ಕರ್‌ ಅವರ ಒಡನಾಡಿಯಾಗಿದ್ದವರು. ಕಟಿಬದ್ಧತೆಯಿಂದ ಸಮಾಜಸೇವೆಗಾಗಿ ರಾಜಕೀಯ ಸೇರಿದವರು. ಸ್ವಾತಂತ್ರ್ಯ ಭಾರತದ ಮೊದಲ ತಂಡದ ರಾಜ್ಯಸಭಾ ಸದಸ್ಯರಾಗಿ, ಮೈಸೂರು ರಾಜ್ಯದ ಮಂತ್ರಿಯಾಗಿ, ಬೆಂಗಳೂರು ನಗರಾಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ, ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಅಧ್ಯಕ್ಷರಾಗಿ ಜನಮಾನಸದಲ್ಲಿ ಉಳಿಯುವ ಕೆಲಸ ಮಾಡಿ, ದೇಶ ಕಂಡ ಅಪರೂಪದ ಜನಸೇವಾ ರಾಜಕಾರಣಿ ಎನಿಸಿಕೊಂಡವರು.

ಕೆಂಗಲ್‍ ಹನುಮಂತಯ್ಯ ಮಂತ್ರಿಮಂಡಲದಲ್ಲಿ ಆರೋಗ್ಯ, ಪೌರಾಡಳಿತ, ಕೃಷಿ, ಅರಣ್ಯ, ಯೋಜನೆ, ಅಬಕಾರಿ, ಬಂದೀಖಾನೆ ಸಚಿವರಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದವರು. ಬಡ ಪ್ರತಿಭಾನ್ವಿತ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ರಾಜ್ಯದಾದ್ಯಂತ ವಿದ್ಯಾರ್ಥಿನಿಲಯಗಳನ್ನು ನಿರ್ಮಿಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಆಸರೆಯಾದವರು. ಅವುಗಳಲ್ಲಿ ಕೋಲಾರದ ನಚಿಕೇತನ, ಮೈಸೂರಿನ ಸಿದ್ಧಾರ್ಥ ವಿದ್ಯಾರ್ಥಿನಿಲಯಗಳು ಪ್ರಮುಖವಾದವು.

ಚನ್ನಯ್ಯನವರ ಶಿಸ್ತು, ಪ್ರಾಮಾಣಿಕತೆ, ದಕ್ಷತೆ ಹಾಗೂ ಅವರ ಜನಪರ ನಿಲುವಿಗೆ ಮಾರುಹೋಗಿದ್ದ ಕೆಂಗಲ್‍ ಹನುಮಂತಯ್ಯ ಅವರು ವಿಧಾನಸೌಧವನ್ನು ನಿರ್ಮಿಸುವಾಗ ಬಹಳವಾಗಿ ನೆಚ್ಚಿದ್ದು ಇದೇ ನೇತಾರನನ್ನು. ಬಂದೀಖಾನೆಯ ಖಾತೆಯನ್ನು ನಿರ್ವಹಿಸುತ್ತಿದ್ದ ಟಿ.ಚನ್ನಯ್ಯರವರು ಮನಃಪರಿವರ್ತನೆಯಾದ ಜೈಲು ಕೈದಿಗಳಿಗೂ ಶ್ರಮದಾನದ ಮಹತ್ವ ತಿಳಿಸಿ ಅವರೊಟ್ಟಿಗೆ ಹಗಲುರಾತ್ರಿ ಖುದ್ದಾಗಿ ವಿಧಾನಸೌಧದ ನಿರ್ಮಾಣ ಕೆಲಸಕಾರ್ಯದಲ್ಲಿ ಮುಳುಗಿದ್ದರು. ಅದನ್ನು ಕಂಡ ಕೆಂಗಲ್‍ ಹನುಮಂತಯ್ಯ ಅವರು, ‘ಸರ್ಕಾರದ ಕೆಲಸ ದೇವರ ಕೆಲಸ’ ಎಂಬುದು ಚನ್ನಯ್ಯ ಅವರಿಗೆ ಚೆನ್ನಾಗಿ ಅನ್ವಯವಾಗುತ್ತದೆ ಎಂದು ಅವರನ್ನು ಆಲಿಂಗಿಸಿಕೊಂಡಿದ್ದರಂತೆ.

ADVERTISEMENT

ಕೋಲಾರ-ಚಿಕ್ಕಬಳ್ಳಾಪುರಗಳ ಸಮಗ್ರ ಅಭಿವೃದ್ಧಿಯ ಹರಿಕಾರರಾಗಿದ್ದ ಅವರು ಕೋಲಾರ ಜಿಲ್ಲೆಗೆ ಮೊತ್ತಮೊದಲು ವಿದ್ಯುಚ್ಛಕ್ತಿಯನ್ನು ಒದಗಿಸಿಕೊಟ್ಟು ‘ಕರೆಂಟ್‍ ಚನ್ನಯ್ಯ’ ಎಂದೇ ಹೆಸರಾಗಿದ್ದರು. ಕೋಲಾರ-ಚಿಕ್ಕಬಳ್ಳಾಪುರಗಳಲ್ಲಿ ಅವರು ನಿರ್ಮಿಸಿರುವ ಮಕ್ಕಳ ಉದ್ಯಾನವನಗಳು, ಸಂತೆ ಮೈದಾನಗಳು ಬಹುಜನೋಪಯೋಗಿಯಾಗಿವೆ. ಕೋಲಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ಮಿಸಿರುವ ಕಲಾಮಂದಿರಕ್ಕೆ ‘ಟಿ.ಚನ್ನಯ್ಯ ಕಲಾಮಂದಿರ’ ಎಂದು ಹೆಸರಿಟ್ಟಿರುವುದು ಔಚಿತ್ಯಪೂರ್ಣವೇ ಆಗಿದೆ.

ಚನ್ನಯ್ಯರವರು, ತಿಮ್ಮಪ್ಪ–ತಿಮ್ಮಕ್ಕ ದಂಪತಿಗೆ (ಜನನ: 03-10-1912) ಕೋಲಾರದ ಕೆಳಗಿನಪೇಟೆಯಲ್ಲಿ ಜನಿಸಿದರು. ಪ್ರೌಢಶಿಕ್ಷಣದವರೆಗೆ ಕೋಲಾರದಲ್ಲಿಯೇ ಓದಿದರು. ವಿದ್ಯಾರ್ಥಿ ದೆಸೆಯಿಂದಲೆ ಗಾಂಧೀಜಿಯವರಿಂದ ಪ್ರಭಾವಿತರಾದರು. ಕನ್ನಡ ನಾಡು ನುಡಿಯ ಮಮಕಾರವನ್ನೂ ಬೆಳೆಸಿಕೊಂಡರು. ಮೈಸೂರು ಮಹಾರಾಜ ಕಾಲೇಜು ಸೇರಿ ಬಿ.ಎಸ್ಸಿ ಪದವೀಧರರಾದರು. ಆಗ ಜಯಚಾಮರಾಜೇಂದ್ರ ಒಡೆಯರ್‌ ಅವರು ಇವರ ಸಹಪಾಠಿಯಾಗಿದ್ದರು. ಪದವೀಧರರಾಗಿದ್ದ ಚನ್ನಯ್ಯ ರೆವಿನ್ಯೂ ಸ್ಪೆಷಲ್ ಅಧಿಕಾರಿಯಾಗಿ ಚಿಕ್ಕಮಗಳೂರಿನಲ್ಲಿ ಕಾರ್ಯನಿರ್ವಹಿಸಿದರು. ಅಲ್ಲಿಯೇ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ತುಮಕೂರಿನ ಎಚ್.ಎಂ. ಗಂಗಾಧರಯ್ಯ ಅವರ ಪರಿಚಯವಾಯಿತು. ಇಬ್ಬರೂ ಕೆಲಸಕ್ಕೆ ರಾಜೀನಾಮೆ ನೀಡಿ ಮೈಸೂರು ಪ್ರಾಂತ್ಯದ ಪ್ರವಾಸದಲ್ಲಿದ್ದ ಗಾಂಧೀಜಿಯವರನ್ನು ಭೇಟಿಯಾಗಿ ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು.

ಮೈಸೂರು ದಿವಾನರಾಗಿದ್ದ ರಾಮಸ್ವಾಮಿ ಮೊದಲಿಯಾರ್‌ ಅವರು ಗಂಗಾಧರಯ್ಯ ಅವರನ್ನು ಕರೆಸಿ ‘ನಿಮ್ಮನ್ನು ಮೈಸೂರು ಪ್ರಾಂತ್ಯದ ಪ್ರತಿನಿಧಿಯಾಗಿ ರಾಜ್ಯಸಭಾ ಸದಸ್ಯರಾಗಿ ಮಾಡಲು ಇಚ್ಛಿಸಿದ್ದೇನೆ’ ಎಂದರು. ಗಂಗಾಧರಯ್ಯನವರು ‘ಚನ್ನಯ್ಯರವರು ಬಿ.ಎಸ್ಸಿ ಪದವೀಧರರು. ಇಂಗ್ಲಿಷ್‌–ಹಿಂದಿಯನ್ನು ಬಲ್ಲವರು. ದಯಮಾಡಿ ಅವರನ್ನು ನೇಮಕ ಮಾಡಿ’ ಎಂದು ದಿವಾನರನ್ನು ಕೋರಿದ್ದರು. ಆಗ ಸ್ವತಂತ್ರ ಭಾರತದ ಮೊದಲ ತಂಡಕ್ಕೆ ಮೈಸೂರು ಪ್ರಾಂತ್ಯದ ಪ್ರತಿನಿಧಿಯಾಗಿ ರಾಜ್ಯಸಭಾ ಸದಸ್ಯರಾಗಿ ಚನ್ನಯ್ಯ ಅವರು ನೇಮಕಗೊಂಡಿದ್ದರು.

ಕನ್ನಡ, ತೆಲುಗು ಹಾಗೂ ಇಂಗ್ಲಿಷ್‍ ಭಾಷೆಗಳನ್ನು ಬಲ್ಲವರಾಗಿದ್ದ ಚನ್ನಯ್ಯ ಅವರು ಸಂವಿಧಾನ ಕರಡು ಸಮಿತಿಯ ಸದಸ್ಯರಾಗಿದ್ದರು. 1947ರ ಆಗಸ್ಟ್‌ 25ರಂದು ನಡೆದ ಸಮಿತಿಯ ಸಭೆಯಲ್ಲಿ ಚನ್ನಯ್ಯ ಅವರು ಕನ್ನಡದಲ್ಲಿ ಮಾತನಾಡಿದ್ದರು (ರಾಜಕೀಯ ನೇತಾರರೊಬ್ಬರು ದೆಹಲಿಯ ಮಹತ್ತರ ವೇದಿಕೆಯಲ್ಲಿ ಮಾಡಿದ ಮೊದಲ ಕನ್ನಡ ಭಾಷಣ ಇದು). ಅವರಿಗೆ ಇಂಗ್ಲಿಷ್‌ ಭಾಷೆ ಚೆನ್ನಾಗಿ ಗೊತ್ತಿದ್ದರೂ ಕನ್ನಡ ನಾಡು ನುಡಿಯ ಬಗ್ಗೆ ಅಪಾರಪ್ರೇಮದಿಂದ ಕನ್ನಡದಲ್ಲಿಯೇ ಮಾತನಾಡಿದ್ದರು.

ಸದಸ್ಯರಾಗಿದ್ದ ಎಚ್.ವಿ.ಕಾಮತ್‍ರವರು ಸಭೆಯ ಅಧ್ಯಕ್ಷರಾಗಿದ್ದ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್‍ರವರಿಗೆ, ಸನ್ಮಾನ್ಯ ಅಧ್ಯಕ್ಷರೇ, ಘನತೆವೆತ್ತ ಸದಸ್ಯರು ಚೆನ್ನಾಗಿ ಇಂಗ್ಲಿಷ್ ಬಲ್ಲವರಾಗಿದ್ದಾರೆ. ಆದ್ದರಿಂದ ನಾನು ನಿಮ್ಮಲ್ಲಿ ಅವರು ಇಂಗ್ಲಿಷ್‍ನಲ್ಲಿ ಮಾತನಾಡುವಂತೆ ಮನವಿ ಮಾಡಿಕೊಳ್ಳುತ್ತೇನೆ ಎಂದಿದ್ದರು. ಆಗ ಚನ್ನಯ್ಯರವರು, ನನಗೆ ಯಾವ ಭಾಷೆಯಲ್ಲಾದರೂ ಮಾತನಾಡುವ ಆಯ್ಕೆ ಇದೆ. ಹಾಗಾಗಿ ನನ್ನ ಮಾತೃಭಾಷೆಯಲ್ಲಿ ಮಾತನಾಡುತ್ತೇನೆ ಎಂದು ಕನ್ನಡದಲ್ಲಿ ಮಾತು ಮುಂದುವರಿಸಿದ್ದರು. ಬಾಂಬೆಯ ಪ್ರತಿನಿಧಿಯಾಗಿದ್ದ ಶಂಕರ್‌ ದತ್ತಾತ್ರೇಯ ದೇವ್‍ ಅವರು, ಮಾನ್ಯ ಸದಸ್ಯರು ಯಾವ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ ಎಂಬುದನ್ನು ತಿಳಿಸಿಕೊಡಬೇಕು ಎಂದು ಕೋರಿದ್ದರು. ಬಾಬುರಾಜೇಂದ್ರ ಪ್ರಸಾದ್‍ ಅವರು ನನ್ನ ಮಾಹಿತಿ ಪ್ರಕಾರ ಅವರು, ಕನ್ನಡದಲ್ಲಿ (ಕ್ಯಾನರೀಸ್) ಮಾತನಾಡುತ್ತಿದ್ದಾರೆ ಎಂದು ನಕ್ಕಿದ್ದರು.

ಮಧ್ಯ ಪ್ರವೇಶಿಸಿದ ಮೋಹನ್‍ಲಾಲ್‍ ಸಕ್ಸೇನಾ ಅವರು, ‘ಮಾನ್ಯ ಸದಸ್ಯರು ಕ್ಯಾನರಿಸ್‌ನಲ್ಲಿ ಮಾತನಾಡುತ್ತಿದ್ದಾರೆಯೋ ಇಲ್ಲವೋ ಎಂಬುದನ್ನು ಹೇಗೆ ತಿಳಿಯುವುದು ಎಂದಿದ್ದರು. ಮತ್ತೊಬ್ಬ ಸದಸ್ಯರಾದ ದಿವಾನ್‍ ಚಮನ್‍ಲಾಲ್‍ರವರು, ‘ನಮ್ಮ ಮಾನ್ಯ ಸ್ನೇಹಿತರು ಮಾತನಾಡುತ್ತಿರುವ ಭಾಷೆ ಯಾವುದೇ ಆದರೂ ಅರ್ಥವಾಗುವಂತಹ ಭಾಷೆಯಲ್ಲಿ ಅನುವಾದ ಮಾಡಲು ಅವಕಾಶವಿದೆಯೇ’ ಎಂದು ಕೇಳಿದ್ದರು. ಅಧ್ಯಕ್ಷರು, ‘ಅನುವಾದಕ್ಕೆ ಅವಕಾಶವಿಲ್ಲ. ಮಾನ್ಯ ಸದಸ್ಯರೊಬ್ಬರು ತಮ್ಮ ಇಚ್ಛೆಯ ಭಾಷೆಯಲ್ಲಿ ಮಾತನಾಡಿದರೆ ಅದನ್ನು ನಾನು ತಡೆಯಲಾಗದು. ಅವರ ಭಾಷಣ ನೆರೆದಿರುವಂತಹ ಅನೇಕರಿಗೆ ಅರ್ಥವಾಗದಿರಬಹುದು. ಅದರಿಂದ ನಷ್ಟ ಸದಸ್ಯರದೇ ಹೊರತು ನೆರೆದಿರುವ ಬೇರೆಯವರಿಗಲ್ಲ’ ಎಂದು ಹೇಳಿದ್ದರು.

ಆಗ ಚನ್ನಯ್ಯ ಅವರು, ‘ಧನ್ಯವಾದಗಳು ಸನ್ಮಾನ್ಯ ಅಧ್ಯಕ್ಷರೇ’ ಎಂದು ಕನ್ನಡದಲ್ಲಿ ಮಾತು ಮುಂದುವರಿಸಿದ್ದರು. ಆಗ ಎಂ.ಎಸ್.ಆನ್ಯೆರವರು ಆಕ್ಷೇಪ ವ್ಯಕ್ತಪಡಿಸಿದಾಗ, ಅಧ್ಯಕ್ಷರು, ‘ಈ ಮೊದಲು ನಾನು ಒಬ್ಬ ಸದಸ್ಯರಿಗೆ ತೆಲುಗಿನಲ್ಲಿ ಹಾಗೂ ಮತ್ತೊಬ್ಬರಿಗೆ ತಮಿಳಿನಲ್ಲಿ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದೇನೆ. ಹಾಗಾಗಿ ಸದಸ್ಯರೊಬ್ಬರು ಕನ್ನಡದಲ್ಲಿ ಮಾತನಾಡಬಯಸಿದಾಗ ನಾನು ಅದನ್ನು ತಡೆಯಲಾಗುವುದಿಲ್ಲ’ ಎಂದು ಹೇಳಿದ್ದರು.

ಚನ್ನಯ್ಯ ಅವರು ಆಡಿದ ಮಾತುಗಳು ಬಾಂಬೆಯ ಬಿ.ಜಿ.ಖೇರ್‌ ಅವರಿಗೆ ಸ್ವಲ್ಪಮಟ್ಟಿಗೆ ಅರ್ಥವಾಗಿತ್ತು ಎನಿಸುತ್ತದೆ. ಹಾಗಾಗಿ ಅವರು ಕೇಂದ್ರ ಮತ್ತು ರಾಜ್ಯಗಳ ನಡುವಣ ಸಂಬಂಧಗಳನ್ನು ಕುರಿತು ಮಾತನಾಡುತ್ತಿದ್ದಾರೆ, ನಾವು ಚರ್ಚಿಸುತ್ತಿರುವ ವಿಷಯಕ್ಕೂ ಅದಕ್ಕೂ ಸಂಬಂಧವಿಲ್ಲ ಎಂದು ಆಕ್ಷೇಪ ಎತ್ತಿದ್ದರು. ‘ಸಭೆಯಲ್ಲಿ ಹಿಂದುಸ್ತಾನಿ (ಹಿಂದಿ ಅಥವಾ ಉರ್ದು) ಅಥವಾ ಇಂಗ್ಲಿಷ್‍ನಲ್ಲಿ ವ್ಯವಹರಿಸಬಹುದು. ಈ ಭಾಷೆಗಳಲ್ಲಿ ಯಾರಾದರೂ ತಮ್ಮ ಅಭಿಪ್ರಾಯಗಳನ್ನು ಅಭಿವ್ಯಕ್ತಿಸಲು ಆಗದಿದ್ದಾಗ ಅವರು ತಮ್ಮ ತಾಯ್ನುಡಿಯಲ್ಲಿ ಮಾತನಾಡಲು ಅಧ್ಯಕ್ಷರು ಅವಕಾಶ ನೀಡಬಹುದು. ಗೌರವಾನ್ವಿತ ಸದಸ್ಯರು ಈ ನಿಯಮದ ಅನುಕೂಲವನ್ನು ಪಡೆದುಕೊಳ್ಳುತ್ತಿದ್ದಾರೆ. ಅವರು ಈ ಲಾಭವನ್ನು ಪಡೆದುಕೊಳ್ಳುವ ಅಗತ್ಯವಿರಲಿಲ್ಲ. ಅವರಿಗೆ ಇಂಗ್ಲಿಷ್ ಬರುತ್ತದೆ. ಹಾಗಾಗಿ ಅವರಿಗೆ ತಾಯ್ನುಡಿಯಲ್ಲಿ ಮಾತನಾಡಲು ಅವಕಾಶಕೊಡಬಾರದು’ ಎಂದೂ ಅವರು ವಾದಿಸಿದ್ದರು. ಆದರೆ, ಅವರ ವಾದವನ್ನು ಅಧ್ಯಕ್ಷರು ತಳ್ಳಿ ಹಾಕಿದ್ದರು.

ಒಡಿಶಾದ ರಾಮಕೃಷ್ಣ ಬೋಸ್‍ರವರು, ‘ಸದಸ್ಯರೊಬ್ಬರು ಉಳಿದ ಸದಸ್ಯರೊಬ್ಬರಿಗೆ ಅರ್ಥವಾಗದ ಭಾಷೆಯಲ್ಲಿ ಮಾತನಾಡಲು ಅವಕಾಶ ಮಾಡಿಕೊಟ್ಟ ಸಂದರ್ಭದಲ್ಲಿ ಅಧ್ಯಕ್ಷರು ಕೊನೆಪಕ್ಷ ಸದಸ್ಯರು ಮಾತನಾಡಿದ್ದು ಏನೆಂದು ತಿಳಿಯಲು ಒಬ್ಬ ಅನುವಾದಕರನ್ನು ಇರಿಸಿಕೊಳ್ಳಬೇಕು’ ಎಂದು ಆಗ್ರಹಿಸಿದ್ದರು. ಯಾವ ಒತ್ತಡಕ್ಕೂ ಬಾಗದೆ ಚನ್ನಯ್ಯ ಅವರು ಕನ್ನಡದಲ್ಲಿಯೇ ತಮ್ಮ ಮಾತುಗಳನ್ನು ಮುಂದುವರಿಸಿ ಮುಗಿಸಿದ್ದರು.

ಸಂವಿಧಾನ ಕರಡು ರಚನಾ ಸಮಿತಿ ಸಭೆಯಲ್ಲಿ ಚನ್ನಯ್ಯ ಅವರು ತಮ್ಮ ಕಟಿಬದ್ಧತೆಯ ಮಾತೃಭಾಷಾ ಪ್ರೇಮದಿಂದ ಕನ್ನಡದಲ್ಲಿ ದಿಟ್ಟತೆಯಿಂದ ಮಾತನಾಡಿರುವುದು ಒಕ್ಕೂಟ ವ್ಯವಸ್ಥೆಯ ಮುಂದಿನ ಯಾನಕ್ಕೆ ದಿಕ್ಸೂಚಿಯಂತಿತ್ತು ಎಂಬುದು ಗಮನಾರ್ಹ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.