ADVERTISEMENT

ವ್ಯಕ್ತಿತ್ವ | ಇಶಾನ್‌ ಕಿಶನ್‌: ಹಂತ ಹಂತವಾಗಿಯೇ ಮೇಲೇರಿ ಬಂದ ಪ್ರತಿಭೆ

ಮಹಮ್ಮದ್ ನೂಮಾನ್
Published 17 ಡಿಸೆಂಬರ್ 2022, 1:32 IST
Last Updated 17 ಡಿಸೆಂಬರ್ 2022, 1:32 IST
ಇಶಾನ್‌ ಕಿಶನ್
ಇಶಾನ್‌ ಕಿಶನ್   

‘ನನ್ನ ಭಾವನೆಗಳನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ‌. ಎಲ್ಲರ ಪ್ರೀತಿ, ಹಾರೈಕೆಗಳಲ್ಲಿ ಮಿಂದೆದ್ದಿದ್ದೇನೆ. ಈ ಇನಿಂಗ್ಸ್‌ ಹೃದಯದಲ್ಲಿ ಶಾಶ್ವತವಾಗಿ ಉಳಿಯುವಂತಹದ್ದು...’

–ಭಾರತ ಕ್ರಿಕೆಟ್‌ನ ಯುವ ಪ್ರತಿಭೆ ಇಶಾನ್‌ ಕಿಶನ್‌ ಅವರ ಟ್ವಿಟರ್‌ ಖಾತೆಯಲ್ಲಿರುವ ಬರಹ ಇದು. ಚತ್ತೊಗ್ರಾಮ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಡಿ.10ರಂದು ನಡೆದ ಮೂರನೇ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ದ್ವಿಶತಕ ಗಳಿಸಿದ ಬಳಿಕ ಈ ಬರಹ ಪೋಸ್ಟ್‌ ಮಾಡಿದ್ದರು.

‘ಕ್ರಿಕೆಟ್‌ ಕ್ರೇಜ್‌’ ವ್ಯಾಪಕವಾಗಿರುವ ಭಾರತದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಯುವ ಆಟಗಾರರ ನಡುವೆ ಪ್ರಬಲ ಸ್ಪರ್ಧೆಯಿದೆ. ತೀವ್ರ ಪೈಪೋಟಿಯ ನಡುವೆಯೂ ಒಂದಿಬ್ಬರು ಆಟಗಾರರು ಇತರರನ್ನು ಮೀರಿ ನಿಲ್ಲುವರು. ಆ ಸಾಲಿನಲ್ಲಿ ಇಶಾನ್‌ ಕಿಶನ್‌ ಸೇರಿಕೊಂಡಿದ್ದಾರೆ.

ADVERTISEMENT

ಬಾಂಗ್ಲಾ ಬೌಲಿಂಗ್‌ ದಾಳಿಯನ್ನು ಪುಡಿಗಟ್ಟಿ ಕಟ್ಟಿದ 210 ರನ್‌ಗಳ ಇನಿಂಗ್ಸ್‌ ಅವರಿಗೆ ಭಾರತದ ಕ್ರಿಕೆಟ್‌ನ ‘ನವತಾರೆ’ ಎಂಬ ಹೆಸರು ತಂದುಕೊಟ್ಟಿದೆ. ಅತಿವೇಗದ ದ್ವಿಶತಕ ಗಳಿಸಿ ವಿಶ್ವದಾಖಲೆ ಮಾಡಿದ್ದಾರೆ. 126 ಎಸೆತಗಳಲ್ಲಿ ದ್ವಿಶತಕ ಪೂರೈಸಿದ್ದರಲ್ಲದೆ, ವೆಸ್ಟ್‌ಇಂಡೀಸ್‌ನ ಕ್ರಿಸ್‌ ಗೇಲ್‌ (138 ಎಸೆತ) ಹೆಸರಲ್ಲಿದ್ದ ದಾಖಲೆಯನ್ನೂ ಮುರಿದರು.

ಸಚಿನ್‌ ತೆಂಡೂಲ್ಕರ್‌, ವೀರೇಂದ್ರ ಸೆಹ್ವಾಗ್‌ ಮತ್ತು ರೋಹಿತ್‌ ಶರ್ಮ ಬಳಿಕ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಗಳಿಸಿದ ಭಾರತದ ನಾಲ್ಕನೇ ಬ್ಯಾಟರ್‌ ಅವರಾಗಿದ್ದಾರೆ. ಸಚಿನ್‌ ಈ ಸಾಧನೆಗೆ 431 ಇನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರೆ, ಸೆಹ್ವಾಗ್‌ 234 ಇನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದರು. ರೋಹಿತ್‌ ತಮ್ಮ 103ನೇ ಇನಿಂಗ್ಸ್‌ನಲ್ಲಿ ದ್ವಿಶತಕ ಗಳಿಸಿದ್ದರು. ಆದರೆ ಇಶಾನ್‌ 9ನೇ ಇನಿಂಗ್ಸ್‌ನಲ್ಲಿ ಅಪೂರ್ವ ಸಾಧನೆಗೆ ಭಾಜನರಾಗಿರುವುದು ವಿಶೇಷ.

ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕವನ್ನು ದ್ವಿಶತಕವಾಗಿ ಪರಿವರ್ತಿಸಿದ ಮೊದಲ ಬ್ಯಾಟರ್‌ ಅವರು. ಹೊಡೆತಗಳ ಆಯ್ಕೆ, ಚೆಂಡಿನ ಗತಿ ಅಂದಾಜಿಸುವ ರೀತಿ, ವೇಗ ಮತ್ತು ಸ್ಪಿನ್‌ ದಾಳಿಯನ್ನು ದಿಟ್ಟವಾಗಿ ಎದುರಿಸಬಲ್ಲ ಅವರ ಸಾಮರ್ಥ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಏಕದಿನ ಕ್ರಿಕೆಟ್‌ನಲ್ಲಿ ಸಾಮಾನ್ಯವಾಗಿ 11ನೇ ಓವರ್‌ನಿಂದ 40ನೇ ಓವರ್‌ವರೆಗೆ ಸ್ಕೋರಿಂಗ್‌ನ ವೇಗ ಹೆಚ್ಚು ಇರುವುದಿಲ್ಲ. ಬ್ಯಾಟರ್‌ಗಳು ವಿಕೆಟ್‌ ಕಾಪಾಡಿಕೊಂಡು ಇನಿಂಗ್ಸ್‌ಗೆ ಬಲ ನೀಡಲು ಮುಂದಾಗುತ್ತಾರೆ. ಆದರೆ ಇಶಾನ್‌ 11ರಿಂದ 40ನೇ ಓವರ್‌ ನಡುವೆ 91 ಎಸೆತಗಳಲ್ಲಿ 177 ರನ್‌ ಕಲೆಹಾಕಿದ್ದರು!

ಹಂತ ಹಂತವಾಗಿ ಮೇಲೇರಿದ ಬ್ಯಾಟರ್‌: 24 ವರ್ಷದ ಇಶಾನ್‌ ಹುಟ್ಟಿದ್ದು ಬಿಹಾರದ ಪಟ್ನಾದಲ್ಲಿ. ದೇಶಿ ಕ್ರಿಕೆಟ್‌ನಲ್ಲಿ ಅವರು ಬಿಹಾರ ಬದಲು, ಜಾರ್ಖಂಡ್ ತಂಡದ ಪರ ಆಡುತ್ತಿದ್ದಾರೆ. ಇಶಾನ್‌ ಇತರ ಕೆಲವು ಆಟಗಾರರಂತೆ ಐಪಿಎಲ್‌ನಲ್ಲಿ ಒಂದೆರಡು ಭರ್ಜರಿ ಇನಿಂಗ್ಸ್‌ ಆಡಿ ಆಯ್ಕೆಗಾರರ ಗಮನ ಸೆಳೆದು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿಲ್ಲ. ಹಂತ ಹಂತವಾಗಿಯೇ ಮೇಲೇರಿ ಬಂದವರು.

2016–17ರ ರಣಜಿ ಕ್ರಿಕೆಟ್‌ ಋತುವಿನಲ್ಲಿ ದೆಹಲಿ ವಿರುದ್ಧ 273 ರನ್‌ ಗಳಿಸಿ ಜಾರ್ಖಂಡ್‌ ಪರ ದಾಖಲೆ ಬರೆದಿದ್ದರು. 2017–18ರ ರಣಜಿ ಋತುವಿನಲ್ಲಿ ಆರು ಪಂದ್ಯಗಳಿಂದ 484 ರನ್‌ ಗಳಿಸಿ ತಮ್ಮ ರಾಜ್ಯದ ಪರ ಗರಿಷ್ಠ ಸ್ಕೋರರ್‌ ಎನಿಸಿಕೊಂಡಿದ್ದರು. 2018–19ರ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಹಾಗೂ ಮಣಿಪುರ ವಿರುದ್ಧ ಶತಕ ಗಳಿಸಿ ತಮ್ಮ ಬ್ಯಾಟಿಂಗ್‌ನ ಆಳ ಏನೆಂಬುದನ್ನು ತೆರೆದಿಟ್ಟಿದ್ದರು.

ದೇಶಿ ಕ್ರಿಕೆಟ್‌ನಲ್ಲಿ ತೋರಿದ ಸ್ಥಿರವಾದ ಪ್ರದರ್ಶನ, ಅವರಿಗೆ ರಾಷ್ಟ್ರೀಯ ತಂಡದ ಬಾಗಿಲು ತೆರೆಯುವಂತೆ ಮಾಡಿತು. 2021ರ ಮಾರ್ಚ್‌ 14ರಂದು ಇಂಗ್ಲೆಂಡ್‌ ವಿರುದ್ದದ ಟಿ20 ಪಂದ್ಯದೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ ಜೀವನ ಆರಂಭವಾಯಿತು. ಮೊದಲ ಪಂದ್ಯದಲ್ಲೇ 32 ಎಸೆತಗಳಲ್ಲಿ 56 ರನ್‌ ಗಳಿಸಿ ಪಂದ್ಯಶ್ರೇಷ್ಠ ಆಟದ ಹೆಗ್ಗಳಿಕೆ. 2021ರ ಜುಲೈನಲ್ಲಿ ಶ್ರೀಲಂಕಾ ಪ್ರವಾಸದ ವೇಳೆ ಏಕದಿನ ಅಂತರರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡುವ ಅವಕಾಶ ದೊರೆಯಿತು. ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ (42 ಎಸೆತಗಳಲ್ಲಿ 59) ಸಾಧನೆ ಮಾಡಿದ್ದರು.

ರಾಷ್ಟ್ರೀಯ ತಂಡಕ್ಕೆ ಅಯ್ಕೆಯಾಗುತ್ತಿದ್ದರೂ ಅಂತಿಮ ಇಲೆವೆನ್‌ನಲ್ಲಿ ಅವರಿಗೆ ಸ್ಥಾನ ಖಚಿತವಾಗಿರಲಿಲ್ಲ. ಹಿರಿಯ ಆಟಗಾರರು ಗಾಯಗೊಂಡಾಗ ಅಥವಾ ವಿಶ್ರಾಂತಿ ಪಡೆದಾಗ ಮಾತ್ರ ಅವಕಾಶ ಸಿಗುತ್ತಿತ್ತು. ನಾಯಕ ರೋಹಿತ್‌ ಶರ್ಮ ಅವರು ಗಾಯಗೊಳ್ಳದೇ ಇರುತ್ತಿದ್ದಲ್ಲಿ, ಇಶಾನ್‌ಗೆ ಬಾಂಗ್ಲಾ ವಿರುದ್ಧ ಆಡುವ ಅವಕಾಶವೇ ಸಿಗುತ್ತಿರಲಿಲ್ಲ. ಅನಿರೀಕ್ಷಿತವಾಗಿ ಲಭಿಸಿದ ಅವಕಾಶವನ್ನು ಎರಡೂ ಕೈಗಳಲ್ಲಿ ಬಾಚಿಕೊಂಡಿದ್ದಾರೆ.

ಬಾಂಗ್ಲಾ ವಿರುದ್ಧದ ದ್ವಿಶತಕದ ಇನಿಂಗ್ಸ್‌ ಅವರಿಗೆ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ನೆರವಾಗಲಿದೆ. ಇಶಾನ್‌ ಅವರ ದಿಟ್ಟ ಆಟ, ಶಿಖರ್‌ ಧವನ್‌ ಸ್ಥಾನಕ್ಕೆ ಕುತ್ತು ತರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

‘ದ್ವಿಶತಕದ ಇನಿಂಗ್ಸ್‌ಅನ್ನು ತಲೆಯಲ್ಲೇ ಇಟ್ಟುಕೊಂಡು, ಯಶಸ್ಸಿನ ಅಲೆಯಲ್ಲಿ ತೇಲಾಡಬೇಡ’ ಎಂದು ತಂದೆ ಪ್ರಣವ್‌ ಕುಮಾರ್‌ ಪಾಂಡೆ, ಮಗನಿಗೆ ಕಿವಿಮಾತು ಹೇಳಿದ್ದಾರೆ.‘ಶತಕ ಹೊಡೆದಾಗ ನಾನು ಮಗನಿಗೆ ಹೆಚ್ಚಿನದ್ದೇನೂ ಹೇಳುವುದಿಲ್ಲ. ಏಕೆಂದರೆ ಎಲ್ಲರಿಂದಲೂ ಆತ ಅಭಿನಂದನೆ ಸ್ವೀಕರಿಸುತ್ತಾನೆ. ದ್ವಿಶತಕದ ಬಳಿಕ ನನಗೆ ಕರೆಮಾಡಿದ್ದ. ಮುಂದಿನ ಪಂದ್ಯದಲ್ಲಿ ನೀನು ಸೊನ್ನೆಯಿಂದ ಇನಿಂಗ್ಸ್‌ ಆರಂಭಿಸುತ್ತಿ. ಈ ಸಾಧನೆಯನ್ನು ತಲೆಯಲ್ಲಿ ಇಟ್ಟುಕೊಳ್ಳಬೇಡ ಎಂದಿದ್ದೆ’ ಎಂಬುದು ಪ್ರಣವ್‌ ಅವರ ಮಾತು.

ತಂದೆಯ ಮಾತನ್ನು ಇಶಾನ್‌ ಗಂಭೀರವಾಗಿ ತೆಗೆದುಕೊಂಡಂತಿದೆ. ಏಕೆಂದರೆ ಬಾಂಗ್ಲಾದಿಂದ ನೇರವಾಗಿ ರಾಂಚಿಗೆ ಬಂದು ಜಾರ್ಖಂಡ್‌ ರಣಜಿ ತಂಡವನ್ನು ಸೇರಿಕೊಂಡಿದ್ದಾರೆ. ಕೇರಳ ವಿರುದ್ಧದ ಪಂದ್ಯದಲ್ಲಿ 132 ರನ್‌ ಕಲೆಹಾಕಿದ್ದಾರೆ. ದ್ವಿಶತಕ ಗಳಿಸಿದ ಐದು ದಿನಗಳ ಬಳಿಕ ರಣಜಿ ಕ್ರಿಕೆಟ್‌ನಲ್ಲಿ ಶತಕ ಸಾಧನೆ ಮೂಡಿಬಂದಿದೆ. ತನ್ನ ಮುಂದಿರುವ ಸವಾಲು ಏನೆಂಬುದು ಈ ಯುವ ಆಟಗಾರನಿಗೆ ತಿಳಿದಿದೆ. ಅದನ್ನು ಎದುರಿಸುವ ಛಲವೂ ಅವರಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.