ADVERTISEMENT

ರಾಕೇಶ್ ಜುಂಝುನ್‌ವಾಲಾ: ಅಪರೂಪದ ಹೂಡಿಕೆದಾರ

ಪಿಟಿಐ
Published 15 ಆಗಸ್ಟ್ 2022, 1:26 IST
Last Updated 15 ಆಗಸ್ಟ್ 2022, 1:26 IST
ರಾಕೇಶ್ ಜುಂಝುನ್‌ವಾಲಾ
ರಾಕೇಶ್ ಜುಂಝುನ್‌ವಾಲಾ   

ಮುಂಬೈ: ಷೇರು ಮಾರುಕಟ್ಟೆ ವಹಿವಾಟಿನಲ್ಲಿ ಸವಾಲುಗಳು ಇದ್ದವು. ಷೇರುಗಳಲ್ಲಿ ಹೂಡಿಕೆ ಮಾಡಿ ಭಾರಿ ಪ್ರಮಾಣದಲ್ಲಿ ಹಣ ಸಂಪಾದನೆ ಮಾಡಿದವರನ್ನು ‘ಅಕ್ರಮ ಎಸಗಿದವರು’ ಎಂಬಂತೆ ಕಾಣಲಾಗುತ್ತಿತ್ತು. ಉದಾರೀಕರಣ ನಂತರದ ಭಾರತದಲ್ಲಿ ಷೇರು ಮಾರುಕಟ್ಟೆಗಳನ್ನು ಅನುಮಾನದಿಂದ ನೋಡುವುದೂ ಇತ್ತು.

ಆದರೆ, ಹೂಡಿಕೆಗಳ ಮೂಲಕ 5.8 ಬಿಲಿಯನ್ ಅಮೆರಿಕನ್ ಡಾಲರ್ (ಅಂದಾಜು ₹ 46 ಸಾವಿರ ಕೋಟಿ) ಸಂ‍‍ಪಾದಿಸಿದ ರಾಕೇಶ್ ಜುಂಝುನ್‌ವಾಲಾ ಅವರು ಈ ಮಾತುಗಳಿಗೆ ಅಪವಾದ ಆಗಿದ್ದರು. ಅವರು ಭಾರತದಲ್ಲಿ ವೈಯಕ್ತಿಕ ನೆಲೆಯಲ್ಲಿ ಹೂಡಿಕೆ ಮಾಡಿದವರ ಪೈಕಿ ಅತಿದೊಡ್ಡ ಹೂಡಿಕೆದಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅಷ್ಟೇ ಏಕೆ, ಜುಂಝುನ್‌ವಾಲಾ ಅವರು ನಡೆದುಬಂದ ಹಾದಿಯು ಬಹುಪಾಲು ಪರಿಶುದ್ಧವಾಗಿತ್ತು.

ಹರ್ಷದ್ ಮೆಹ್ತಾ, ಕೇತನ್ ಪಾರೇಖ್ ಅವರ ಹೆಸರಿನ ಜೊತೆ ಕೆಲವು ಹಗರಣಗಳೂ ಸುತ್ತಿಕೊಂಡಿದ್ದವು. ಆದರೆ, ಹೆಚ್ಚು ನಿಯಂತ್ರಿತವಾಗಿದ್ದ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಸಂಪತ್ತು ಸೃಷ್ಟಿಸಿದ ಜುಂಝುನ್‌ವಾಲಾ ಅವರ ಹೆಸರು ಹಗರಣಗಳ ಜೊತೆ ಹೆಚ್ಚಾಗಿ ತಳಕು ಹಾಕಿಕೊಂಡಿರಲಿಲ್ಲ.

ADVERTISEMENT

ಜುಂಝುನ್‌ವಾಲಾ ಅವರನ್ನು ಖ್ಯಾತ ಹೂಡಿಕೆದಾರ ವಾರನ್ ಬಫೆಟ್ ಅವರೊಂದಿಗೆ ಮತ್ತೆ ಮತ್ತೆ ಹೋಲಿಸಲಾಗುತ್ತದೆ. ಸಂಪತ್ತು ಸೃಷ್ಟಿಯ ವಿಚಾರದಲ್ಲಿ ಜುಂಝುನ್‌ವಾಲಾ ಅವರಿಗೆ ಯಾವ ಸಂಕೋಚವೂ ಇರಲಿಲ್ಲ. ಇನ್‌ಸೈಡರ್ ಟ್ರೇಡಿಂಗ್‌ಗೆ ಸಂಬಂಧಿಸಿದ ಕೆಲವು ಪ್ರಕರಣಗಳಲ್ಲಿ ಜುಂಝುನ್‌ವಾಲಾ ಹೆಸರು ಕೇಳಿಬಂದಿತ್ತು. ಜೀ ಎಂಟರ್‌ಪ್ರೈಸಸ್‌ನಲ್ಲಿ ಹೂಡಿಕೆ ಮಾಡಿ ಅಲ್ಪಾವಧಿಯಲ್ಲಿ ₹ 70 ಕೋಟಿ ಗಳಿಸಿದ್ದು ಜುಂಝುನ್‌ವಾಲಾ ನಡೆಯ ಸುತ್ತ ಕೆಲವು ಗುಸುಗುಸು ಮಾತುಗಳಿಗೆ ಕಾರಣವಾಗಿತ್ತು.

ಅದೇನೇ ಇದ್ದರೂ, ಅಧ್ಯಯನ ಆಧರಿಸಿ ಟೈಟನ್ ಮತ್ತು ಇಂಡಿಯನ್‌ ಹೋಟೆಲ್ಸ್‌ ಕಂಪನಿಯಲ್ಲಿ ಮಾಡಿದ ಹೂಡಿಕೆಗಳು ಅವರಿಗೆ ದೇಶದ ಈಕ್ವಿಟಿ ಮಾರುಕಟ್ಟೆಗಳಲ್ಲಿ ದೊಡ್ಡ ಹೆಸರು ತಂದುಕೊಟ್ಟವು. ಜುಂಝುನ್‌ವಾಲಾ ಯಾವ ಕಂಪನಿಯ ಷೇರುಗಳಲ್ಲಿ ಹೂಡಿಕೆ ಮಾಡುತ್ತಾರೆ, ಯಾವ ಕಂಪನಿಯಿಂದ ಹೂಡಿಕೆ ಹಿಂದಕ್ಕೆ ಪಡೆಯುತ್ತಾರೆ ಎಂಬುದನ್ನು ದೇಶದ ಹೂಡಿಕೆದಾರರು ಕುತೂಹಲದಿಂದ ಗಮನಿಸುತ್ತಿದ್ದರು.

ಜುಂಝುನ್‌ವಾಲಾ ಅವರು ರೇರ್‌ ಎಂಟರ್‌ಪ್ರೈಸಸ್‌ನ ಪಾಲುದಾರ. ಈ ಕಚೇರಿ ಇರುವುದು ಮುಂಬೈನ ನರೀಮನ್ ಪಾಯಿಂಟ್‌ನಲ್ಲಿ. ಈ ಕಚೇರಿಯಲ್ಲಿ ಜುಂಝುನ್‌ವಾಲಾ ಮತ್ತು ಅವರ ತಂಡದ ವಿಶ್ಲೇಷಕರು ನಡೆಸುವ ಷೇರುಗಳ ಕುರಿತ ಅಧ್ಯಯನವು ಅವರು ಹೂಡಿಕೆಯ ಮೂಲಕ ಸಂಪತ್ತು ಸೃಷ್ಟಿಸಿಕೊಳ್ಳಲು ನೆರವಾಯಿತು ಎಂದು ಬಲ್ಲವರು ಹೇಳುತ್ತಾರೆ.

ಕಂಪನಿಗಳ ಹಣಕಾಸಿನ ಸಾಧನೆ ಚೆನ್ನಾಗಿಲ್ಲದಿದ್ದರೆ ಜುಂಝುನ್‌ವಾಲಾ ಪ್ರಶ್ನಿಸದೆ ಸುಮ್ಮನಿರುತ್ತಿರಲಿಲ್ಲ. ಹಲವು ಕಂಪನಿಗಳ ಆಡಳಿತ ಮಂಡಳಿಗಳನ್ನು ಅವರು ಪ್ರಶ್ನೆ ಮಾಡಿದ ನಿದರ್ಶನಗಳು ಇವೆ. ಎರಡು ದಶಕಗಳಿಂದ ಟೈಟನ್‌ ಕಂಪನಿಯಲ್ಲಿ ಹೂಡಿಕೆ ಮಾಡಿರುವ ಅವರು 2020ರಲ್ಲಿ ಒಮ್ಮೆ ಕಂಪನಿಯ ಆಡಳಿತ ಮಂಡಳಿಗೆ ಕಠಿಣ ಪ್ರಶ್ನೆಗಳನ್ನು ಕೇಳಿದ್ದರು.

ತಮ್ಮ ತಲೆಮಾರಿನ ಅನೇಕರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ಇಷ್ಟಪಡುತ್ತಿಲ್ಲದಿದ್ದರೂ, ಜುಂಝುನ್‌ವಾಲಾ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹಾಗೂ ಉದ್ಯಮಗಳು ಆಯೋಜಿಸುವ ಸೆಮಿನಾರ್‌ಗಳಲ್ಲಿ ಭಾಗವಹಿಸುತ್ತಿದ್ದರು. ಮಾರುಕಟ್ಟೆಯ ಬಗ್ಗೆ ಮಾತ್ರವೇ ಅಲ್ಲದೆ, ಹತ್ತು ಹಲವು ಇತರ ಸಂಗತಿಗಳ ಕುರಿತೂ ಅಭಿ‍ಪ್ರಾಯ ಹಂಚಿಕೊಳ್ಳುತ್ತಿದ್ದರು. ಅವರ ಹಲವು ಅನಿಸಿಕೆಗಳು ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ನಿಲುವುಗಳಿಗೆ ಸರಿಹೊಂದುವಂತೆ ಇರುತ್ತಿದ್ದವು.

ಜುಂಝುನ್‌ವಾಲಾ ‍ಪಾಲಿಗೆ ಎಲ್ಲವೂ ಸಲೀಸಾಗಿ ಆಗುತ್ತಿರಲಿಲ್ಲ. ಅಪಾರ ಹಣವಿದ್ದರೂ ಅದು ಎಲ್ಲ ಬಾರಿಯೂ ನೆರವಿಗೆ ಬರುತ್ತಿರಲಿಲ್ಲ. ದಕ್ಷಿಣ ಮುಂಬೈನಲ್ಲಿ ಮನೆ ಖರೀದಿಗೆ ಅವರು ನಡೆಸಿದ ಯತ್ನವು ‘ಮರಳಿ ಯತ್ನವ ಮಾಡು’ ಮಾತಿಗೆ ತಕ್ಕಂತಿದೆ. ಪತ್ನಿ ರೇಖಾ ಜೊತೆಗೂಡಿ 14 ಫ್ಲ್ಯಾಟ್‌ಗಳ ಅಪಾರ್ಟ್‌ಮೆಂಟ್‌ ಕಟ್ಟಡವನ್ನು ಐದು ವರ್ಷಗಳಲ್ಲಿ ಹಲವು ಒಪ್ಪಂದಗಳ ಮೂಲಕ ಖರೀದಿಸಿದರು. ಆ ಕಟ್ಟಡವನ್ನು ಬೀಳಿಸಿ, ಹೊಸ 14 ಮಹಡಿಯ ಮನೆ ಕಟ್ಟಿಸುತ್ತಿದ್ದರು.

ತಮ್ಮ ಪ್ರತಿ ವಹಿವಾಟಿನಲ್ಲಿಯೂ ಅವರು ಜೀವನಕ್ಕೆ ಬೇಕಿರುವ ಒಂದು ಪಾಠ ಕಲಿಯುತ್ತಿದ್ದರು. ಅಪಾರ್ಟ್‌ಮೆಂಟ್‌ ಖರೀದಿಯೂ ಅದೇ ರೀತಿಯಲ್ಲಿ ಆಯಿತು. ಮುಂಚೂಣಿ ರೇಟಿಂಗ್ಸ್ ಸಂಸ್ಥೆಯಾಗಿರುವ ಕ್ರಿಸಿಲ್‌ನಲ್ಲಿನ ಷೇರುಗಳನ್ನು ಮಾರಾಟ ಮಾಡಿ ಅವರು ಅಪಾರ್ಟ್‌ಮೆಂಟ್ ಕಟ್ಟಡ ಖರೀದಿಸಿದರು. ರಿಜ್‌ವೇನಲ್ಲಿ ಅಪಾರ್ಟ್‌ಮೆಂಟ್‌ ಕಟ್ಟಡ ಖರೀದಿಸುವುದು ಅವರ ಪಾಲಿಗೆ ಭಾವುಕ ತೀರ್ಮಾನ ಆಗಿತ್ತು. ಆದರೆ, ನಂತರದಲ್ಲಿ ಕ್ರಿಸಿಲ್‌ ಷೇರುಗಳಲ್ಲಿ ಕಂಡ ಮೌಲ್ಯವರ್ಧನೆಯ ಪ್ರಯೋಜನ ಜುಂಝುನ್‌ವಾಲಾ ಅವರಿಗೆ ಸಿಗಲಿಲ್ಲ. ಇದಕ್ಕಾಗಿ ಬೇಸರವನ್ನೂ ಅವರು ವ್ಯಕ್ತಪಡಿಸಿದ್ದರು.

ಹೂಡಿಕೆದಾರರು ಅಧ್ಯಯನಕ್ಕೆ ಹೆಚ್ಚು ಗಮನ ಕೊಡಬೇಕು ಎನ್ನುತ್ತಿದ್ದರು. ದೀರ್ಘಾವಧಿ ಕಾರ್ಯತಂತ್ರ ಹೊಂದಬೇಕು ಎಂದು ಕಿವಿಮಾತು ಹೇಳುತ್ತಿದ್ದರು. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗಲೆಲ್ಲ ಸರಳವಾದ ಪ್ಯಾಂಟ್, ಶರ್ಟ್‌ ಧರಿಸುತ್ತಿದ್ದರು. ಬಾಯಲ್ಲಿ ಗುಟ್ಖಾ ಅಥವಾ ಪಾನ್ ಇರುತ್ತಿತ್ತು. ಒಳ್ಳೆಯ ಆಹಾರ ಮತ್ತು ಮದ್ಯ ಅವರಿಗೆ ಇಷ್ಟವಾಗುತ್ತಿತ್ತು.

ತಮಗೆ ಅನ್ನಿಸಿದ್ದನ್ನು ಹೇಳಿಕೊಳ್ಳಲು ಅವರು ಹಿಂಜರಿಯುತ್ತಿರಲಿಲ್ಲ. ಸಂಪತ್ತು ಸೃಷ್ಟಿಗೆ ದಶಕಗಳಿಂದ ಶ್ರಮ ವಹಿಸಿದ ತಾವು ಆರೋಗ್ಯ ಕಾಪಾಡಿಕೊಳ್ಳಲು ಹೆಚ್ಚು ಗಮನ ನೀಡಲಿಲ್ಲ ಎಂದು ಈಚೆಗೆ ಒಮ್ಮೆ ಹೇಳಿದ್ದರು.

ಆಕಾಸಾ ಏರ್‌ ಕಂಪನಿಯ ಸೇವೆಗಳ ಆರಂಭ ಕಾರ್ಯಕ್ರಮ ಆಗಸ್ಟ್‌ 7ರಂದು ಮುಂಬೈ ವಿಮಾನ ನಿಲ್ದಾಣದಲ್ಲಿ ನಡೆಯಿತು. ಆಗ ಗಾಲಿಕುರ್ಚಿಯಲ್ಲಿ ಕುಳಿತಿದ್ದ ಜುಂಝುನ್‌ವಾಲಾ ದಣಿದವರಂತೆ ಕಾಣುತ್ತಿದ್ದರು. ಅವರ ಆರೋಗ್ಯದ ಕುರಿತು ಹಲವರು ಕಳವಳ ವ್ಯಕ್ತಪಡಿಸಿದ್ದರು.

ಹವಾಮಾನ, ಸಾವು, ಮಾರುಕಟ್ಟೆಯ ಬಗ್ಗೆ ಖಚಿತವಾಗಿ ಹೇಳಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವುದು ಜುಂಝುನ್‌ವಾಲಾ ಯಾವಾಗಲೂ ಹೇಳುವ ಮಾತಾಗಿತ್ತು.

*

ಜುಂಝುನ್‌ವಾಲಾ ನನ್ನ ಶಾಲೆ, ಕಾಲೇಜು ಸಹಪಾಠಿ. ನನಗಿಂತ ಒಂದು ವರ್ಷ ಚಿಕ್ಕವರು. ದೇಶದಲ್ಲಿ ಷೇರುಗಳ ಮೌಲ್ಯವು ಅವುಗಳ ವಾಸ್ತವ ಮೌಲ್ಯಕ್ಕಿಂತ ಕಡಿಮೆಯಿದೆ ಎಂದು ನಂಬಿದ್ದರು. ಹಣಕಾಸು ಮಾರುಕಟ್ಟೆಯನ್ನು ಅರ್ಥ ಮಾಡಿಕೊಳ್ಳುವ ಬಹಳ ತೀಕ್ಷ್ಣ ಬುದ್ಧಿ ಹೊಂದಿದ್ದರು. ನಾವು ಆಗಾಗ ಚರ್ಚಿಸುತ್ತಿದ್ದೆವು. ಕೋವಿಡ್‌ ಅವಧಿಯಲ್ಲಿ ಇದು ಹೆಚ್ಚಾಗಿತ್ತು. ರಾಕೇಶ್ ಅನುಪಸ್ಥಿತಿ ನನ್ನನ್ನು ಕಾಡಲಿದೆ.
– ಉದಯ್ ಕೋಟಕ್, ಬ್ಯಾಂಕಿಂಗ್ ಉದ್ಯಮಿ

*

ರಾಷ್ಟ್ರೀಯವಾದಿ ಎಂದು ಹೇಳಿಕೊಳ್ಳುವಲ್ಲಿ ಅವರಿಗೆ ವಿಷಾದವಿರಲಿಲ್ಲ. ಬಂಡವಾಳಶಾಹಿ ಎನ್ನಲೂ ಅವರಲ್ಲಿ ವಿಷಾದವಿರಲಿಲ್ಲ. ಸಂಪತ್ತು ಕೆಟ್ಟದ್ದಲ್ಲ ಎಂದು ನಮಗೆ ಕಲಿಸಿಕೊಟ್ಟರು. ದೇಶದ ಬಗ್ಗೆ ಭರವಸೆ ಹೊಂದಲು ಕಲಿಸಿದರು. ಷೇರುಗಳನ್ನು ಒಂದೇ ದಿನದ ಮಟ್ಟಿಗೆ ಇರಿಸಿಕೊಳ್ಳಬಲ್ಲವರಾಗಿದ್ದರು. ಟೈಟನ್ ಷೇರನ್ನು ದಶಕಗಳ ಅವಧಿಗೂ ಇರಿಸಿಕೊಂಡರು. ಹೂಡಿಕೆಯ ಕಲೆಯಲ್ಲಿ ಅವರು ಅಪಾರ ಕೌಶಲ ಹೊಂದಿದ್ದರು.
– ಡಿ. ಮುತ್ತುಕೃಷ್ಣನ್, ಹೂಡಿಕೆದಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.