ADVERTISEMENT

ಕಮಲಾ ಹ್ಯಾರಿಸ್ ಆಯ್ಕೆ ಟ್ರಂಪ್‌ಗೆ ಸವಾಲು

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2020, 19:49 IST
Last Updated 12 ಆಗಸ್ಟ್ 2020, 19:49 IST
ಕಮಲಾ
ಕಮಲಾ   

ಅಮೆರಿಕದ ಜನಸಂಖ್ಯೆಯಲ್ಲಿ ಭಾರತ ಮೂಲದವರ ಪ್ರಮಾಣ ಶೇ 1ಕ್ಕಿಂತ ಸ್ವಲ್ಪ ಹೆಚ್ಚು. ಹಾಗಿದ್ದರೂ ಇತ್ತೀಚಿನ ವರ್ಷಗಳಲ್ಲಿ ಅಮೆರಿಕದ ರಾಜಕೀಯದಲ್ಲಿ ಈ ಸಮುದಾಯದ ಭಾಗವಹಿಸುವಿಕೆ ಮತ್ತು ಪ್ರಾಬಲ್ಯ ಹೆಚ್ಚುತ್ತಲೇ ಇದೆ. ಸಕ್ರಿಯ ರಾಜಕೀಯದಲ್ಲಿ ಭಾಗಿಯಾಗುವಿಕೆ ಮತ್ತು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ವಿಚಾರದಲ್ಲಿ ಇದು ವ್ಯಕ್ತವಾಗುತ್ತಿದೆ. 2020ರ ಅಧ್ಯಕ್ಷೀಯ ಚುನಾವಣೆಗೆ ಈ ಸಮುದಾಯ ನೀಡಿರುವ ದೇಣಿಗೆ 30 ಕೋಟಿ ಡಾಲರ್‌ಗೂ (ಸುಮಾರು ₹2,250 ಕೋಟಿ) ಹೆಚ್ಚು.

ಈಗ, ಭಾರತ ಸಂಜಾತೆ ಶ್ಯಾಮಲಾ ಗೋಪಾಲನ್‌ ಮತ್ತು ಜಮೈಕಾ ಮೂಲದ ಡೊನಾಲ್ಡ್‌ ಹ್ಯಾರಿಸ್‌ ಮಗಳು ಕಮಲಾ ಹ್ಯಾರಿಸ್‌ ಅವರು ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕೆ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿಯಾಗಿದ್ದಾರೆ.

ಅಮೆರಿಕದ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗುವ ಆಕಾಂಕ್ಷೆಯಿದ್ದ ಡೆಮಾಕ್ರಟಿಕ್‌ ಪಕ್ಷದ ನಾಯಕರ ದೊಡ್ಡ ಸಾಲಿನಲ್ಲಿ 2019ರ ಹೊತ್ತಿಗೆ ಸೆನೆಟರ್‌ ಕಮಲಾ ಹೆಸರೂ ಇತ್ತು. ಆರಂಭಿಕ ಹಂತದ ಚರ್ಚಾ ಸರಣಿಯಲ್ಲಿ ಅವರುಭಾಗವಹಿಸಿದ್ದರು ಮತ್ತು ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿಯಾಗಲು ಮುಂಚೂಣಿಯಲ್ಲಿದ್ದ ಜೋ ಬಿಡೆನ್‌ ವಿರುದ್ಧ ನಿರಂತರವಾಗಿ ವಾಗ್ದಾಳಿಯನ್ನೂ ನಡೆಸಿದ್ದರು. ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗುವ ಕಮಲಾ ಅವರ ಹೋರಾಟ ಹೆಚ್ಚು ದಿನ ಉಳಿಯಲಿಲ್ಲ. ಆದರೆ, ಈಗ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ಕಮಲಾ ಅವರನ್ನು ಬಿಡೆನ್‌ ಆಯ್ಕೆ ಮಾಡಿಕೊಂಡಿದ್ದಾರೆ.

ADVERTISEMENT

ಈ ಆಯ್ಕೆ ಅತ್ಯಂತ ವಿಶಿಷ್ಟವಾದುದು. ಪುನರಾಯ್ಕೆ ಬಯಸಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವರ್ಚಸ್ಸು ಮಂಕಾಗಿರುವ ಈ ಹೊತ್ತಿನಲ್ಲಿ ಕಮಲಾ ಅವರನ್ನು ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿಸುವ ಮೂಲಕ ಅಧ್ಯಕ್ಷ ಸ್ಥಾನದ ಸೆಣಸಾಟದಲ್ಲಿ ಬಿಡೆನ್‌ ಅವರು ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ. ಬಿಡೆನ್‌ ವಿರುದ್ಧದ ವಾಗ್ದಾಳಿ ಹೇಗಿರಬೇಕು ಎಂಬ ಗೊಂದಲದಲ್ಲಿ ಇರುವ ಟ್ರಂಪ್‌ಗೆ ಇದು ಸವಾಲಾಗಿ ಕಾಡಬಹುದು.

ಕಮಲಾ ಅವರ ಆಯ್ಕೆಯು ಪ್ರಕಟವಾಗುತ್ತಿದ್ದಂತೆಯೇ ಟ್ರಂ‍ಪ್‌ ಅವರು ತಮ್ಮ ಎಂದಿನ ಶೈಲಿಯಲ್ಲಿ ಹರಿಹಾಯ್ದಿದ್ದಾರೆ. ಕಮಲಾ ಅವರನ್ನು ‘ಕೊಳಕು’, ‘ಭೀಕರ’, ‘ಅವಮರ್ಯಾದೆ’ಯ ಹೆಂಗಸು ಎಂದು ಜರೆದಿದ್ದಾರೆ. ಅವರನ್ನು ‘ಎಡಪಂಥೀಯ ಒಲವಿರುವವರು’ ಎಂದು ಬಿಂಬಿಸುವ ಯತ್ನವನ್ನು ಟ್ರಂಪ್‌ ಮಾಡುತ್ತಿದ್ದಾರೆ. ಆದರೆ, ಅದು ಅಷ್ಟು ಸುಲಭವಲ್ಲ.

ಡೆಮಾಕ್ರಟಿಕ್‌ ಪಕ್ಷದ ಜತೆ ಗಟ್ಟಿಯಾದ ನಂಟು ಹೊಂದಿರುವ ಮತ್ತು ವಕೀಲೆ ಹಾಗೂ ಇತರ ಹುದ್ದೆಗಳಲ್ಲಿ ದೀರ್ಘ ಕಾಲದಿಂದ ಸಾರ್ವಜನಿಕ ಜೀವನದಲ್ಲಿ ಇರುವ ಕಮಲಾ ಎಂಪಂಥಕ್ಕೆ ಸೇರಿದವರು ಎನ್ನಲು ಯಾವ‍ಪುರಾವೆಯೂ ಇಲ್ಲ. ಟ್ರಂಪ್‌ ಅವರ ರಿಪಬ್ಲಿಕನ್‌ ಪಕ್ಷದ ಶೇ 21ರಷ್ಟು ನೋಂದಾಯಿತ ಮತದಾರರಿಗೆ ಕಮಲಾ ಬಗ್ಗೆ ಮೆಚ್ಚುಗೆ ಇದೆ ಎಂದು ರಾಯಿಟರ್ಸ್‌/ಇಪ್ಸಾಸ್‌ ಆಗಸ್ಟ್‌ 10–11ರಂದು ನಡೆಸಿದ ಸಮೀಕ್ಷೆ ಹೇಳಿದೆ. ಆ ಪಕ್ಷದಲ್ಲಿ ಬಿಡೆನ್‌ ಬಗ್ಗೆ ಗೌರವ ಇರುವವರು ಶೇ 13ರಷ್ಟು ಮತದಾರರು ಮಾತ್ರ.

ಕಮಲಾ ವಿರುದ್ಧ ಯಾವ ರೀತಿ ಮುಗಿಬೀಳಬೇಕು ಎಂಬುದೇ ಟ್ರಂಪ್‌ಗೆ ಸಂಕೀರ್ಣ ವಿಷಯವಾಗಿ ಕಾಡಬಹುದು. ಪ್ರಮುಖ ಪಕ್ಷವೊಂದರಿಂದ ಉಪಾಧ್ಯಕ್ಷ ಹುದ್ದೆ ಅಭ್ಯರ್ಥಿಯಾದ ಮಹಿಳೆಯ ವಿರುದ್ಧದ ಟೀಕೆಗಳು ಲಿಂಗತಾರತಮ್ಯ ಅಥವಾ ಜನಾಂಗೀಯ ಎನಿಸಿಕೊಳ್ಳಬಹುದು. ನಗರ ಹೊರವಲಯಗಳ ಮಹಿಳಾ ಮತದಾರರ ಮೇಲೆ ಇದು ಪರಿಣಾಮ ಬೀರಬಹುದು. ಟ್ರಂಪ್‌ ಪುನರಾಯ್ಕೆ ಆಗಬೇಕಿದ್ದರೆ ಈ ವರ್ಗದ ಮಹಿಳೆಯರ ಮತ ನಿರ್ಣಾಯಕ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.

ಕಮಲಾಗೆ ಏಳು ವರ್ಷವಿದ್ದಾಗಲೇ ತಂದೆ–ತಾಯಿ ವಿಚ್ಛೇದನ ಪಡೆದುಕೊಂಡಿದ್ದರು. ಕಮಲಾ ಅವರು ಹಿಂದೂ ಸಂಪ್ರದಾಯದಂತೆ ಬೆಳೆದಿದ್ದಾರೆ. ಆಕ್ಲೆಂಡ್‌ನಲ್ಲಿ ಹುಟ್ಟಿದ ಅವರು ತಮ್ಮ ಅಮೆರಿಕನ್‌ ಅಸ್ತಿತ್ವ ಮತ್ತು ತಾಯಿ ತಮ್ಮನ್ನು ಬೆಳೆಸಿದ ಬಗೆಯನ್ನು ಆಗಾಗ ನೆನಪಿಸಿಕೊಂಡಿದ್ದಾರೆ. ತಂದೆ ಡೊನಾಲ್ಡ್‌ ಬಗ್ಗೆ ಅವರು ಮಾತನಾಡಿದ್ದು ಕಡಿಮೆ. ಹಾಗಿದ್ದರೂ, ಈಗ ಟ್ರಂಪ್‌ ಮತ್ತವರ ಪ್ರಚಾರಪಡೆ ಕಮಲಾ ಅವರ ಮೂಲವನ್ನು ಕೆದಕಿ, ಜನಾಂಗೀಯ ವಿವಾದ ಸೃಷ್ಟಿಸುವ ಸಾಧ್ಯತೆ ಇದೆ. ಅದೇನೇ ಇದ್ದರೂ, ಅಮೆರಿಕದಲ್ಲಿ ಬದುಕು ಕಂಡುಕೊಂಡ ಭಾರತ, ಆಫ್ರಿಕದಂತಹ ದೇಶಗಳ ವಲಸಿಗ ಸಮುದಾಯಕ್ಕೆ ಕಮಲಾ ಅವರ ಆಯ್ಕೆಯು ಬಹುದೊಡ್ಡ ಆಶಾಕಿರಣ.

ಆಧಾರ: ರಾಯಿಟರ್ಸ್‌, ಬಿಬಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.