ADVERTISEMENT

ಮಿಖಾಯಿಲ್‌ ಗೋರ್ಬಚೆವ್: ಬದಲಾವಣೆಯ ಹರಿಕಾರನ ಯುಗಾಂತ್ಯ

ಏಜೆನ್ಸೀಸ್
Published 1 ಸೆಪ್ಟೆಂಬರ್ 2022, 19:31 IST
Last Updated 1 ಸೆಪ್ಟೆಂಬರ್ 2022, 19:31 IST
ಮಿಖಾಯಿಲ್‌ ಗೋರ್ಬಚೆವ್ (ಜನನ: 02–03–1931 ಮರಣ: 30–08–2022)
ಮಿಖಾಯಿಲ್‌ ಗೋರ್ಬಚೆವ್ (ಜನನ: 02–03–1931 ಮರಣ: 30–08–2022)   

ಮಾಸ್ಕೊ: ಮಿಖಾಯಿಲ್‌ ಗೋರ್ಬಚೆವ್. 20ನೇ ಶತಮಾನದ ದ್ವಿತೀಯಾರ್ಧದಲ್ಲಿ ಜಾಗತಿಕ ರಾಜಕಾರಣದಲ್ಲಿ ಬಹು ಚರ್ಚಿತ ಹೆಸರು. ರಷ್ಯಾದ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಾಗಿ ಜನರ ಜೀವನಶೈಲಿ, ಗುಣಮಟ್ಟದಲ್ಲಿ ಆಮೂಲಾಗ್ರ ಬದಲಾವಣೆಯ ಕನಸು ಕಂಡಿದ್ದ ನೇತಾರ.

ಸುಮಾರು ಏಳು ವರ್ಷ ರಷ್ಯಾದ ಸಂಯುಕ್ತ ಸಂಸ್ಥಾನದ (ಯುಎಸ್‌ಎಸ್‌ಆರ್‌) ಅಧ್ಯಕ್ಷರಾಗಿದ್ದ ಗೋರ್ಬಚೆವ್ ಹಲವು ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಂಡಿದ್ದರು. ಆದರೆ, ಕೆಲವು ನಿರ್ಧಾರಗಳ ಹಿಂದಿನ ಲೆಕ್ಕಾಚಾರ ತಪ್ಪಿತ್ತು. ಕೆಲವು ನಿರ್ಧಾರಗಳೇ ತಿರುವುಮುರುವಾಗಿತ್ತು. ಇದರ ಪರಿಣಾಮ, ರಷ್ಯಾ ಒಕ್ಕೂ ಟದಿಂದ ಯುರೋಪಿಯನ್ ಪೂರ್ವಪ್ರಾಂತ್ಯದ 15ಕ್ಕೂ ಹೆಚ್ಚು ರಾಷ್ಟ್ರಗಳು ಪ್ರತ್ಯೇಕರಾಷ್ಟ್ರವಾಗಿ ಅಸ್ತಿತ್ವ ಪಡೆದವು.

20ನೇ ಶತಮಾನದಲ್ಲಿ ವಿಶ್ವದಲ್ಲೇ ಅದ್ವಿತೀಯ ಶಕ್ತಿಯಾಗಿದ್ದ ರಷ್ಯಾ ಸಂಯುಕ್ತ ಸಂಸ್ಥಾನದಲ್ಲಿ ಆಂತರಿಕ ಸ್ಫೋ ಟಕ್ಕೆ ಕಾರಣರಾದರು ಎಂದೇ ಹೆಚ್ಚಿನ ರಷ್ಯನ್ನರಿಗೆ ಇವರ ಮೇಲೆ ಮುನಿಸಿತ್ತು.

ADVERTISEMENT

ವಿಶ್ವದ ಪ್ರಭಾವಿ ಒಕ್ಕೂಟದ ಅಧ್ಯಕ್ಷರಾಗಿ ಜಾಗತಿಕ ರಾಜಕಾರಣದ ಗಮನಸೆಳೆದರೂ ಆಡಳಿತಾವಧಿಯ ಅಂತ್ಯದಲ್ಲಿ ಅಧಿಕಾರ ಚಲಾಯಿಸುವ ಪ್ರಭಾವವನ್ನೇ ಕಳೆದುಕೊಂಡಿದ್ದರು. ಆಡಳಿತಾತ್ಮಕವಾಗಿ ತಾವೇ ಆರಂಭಿಸಿದ್ದ ಬಿರುಗಾಳಿಯನ್ನು ನಿಲ್ಲಿಸಲು ಅವರು ಶಕ್ತರಾಗಿರಲಿಲ್ಲ.

ಸುಧಾರಣೆ ಕುರಿತಂತೆ ರಷ್ಯನ್ನರಿಗೆ ಇವರ ಬಗ್ಗೆ ಇದ್ದ ಅಸಮಾಧಾನದ ಪರಿಣಾಮವಾಗಿಯೇ 1996ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಡೆದಿದ್ದ ಚುನಾವಣೆ ಯಲ್ಲಿ ಅವರು ಶೇ 1ಕ್ಕೂ ಕಡಿಮೆ ಮತಗಳಿಸಿದ್ದರು. ಇವರ ಸ್ಪರ್ಧೆಯೇ ನಗೆಪಾಟಲಿಗೆ ಒಳಗಾಗಿತ್ತು. ಅಂತಿ ಮವಾಗಿ ತಮ್ಮದೇ ಆದ ದತ್ತಿ ಸಂಸ್ಥೆಗೆ ಸಂಪನ್ಮೂಲ ಕ್ರೋಡಿಕರಿಸಲು ಪಿಜ್ಜಾ ಹಟ್‌ಗಾಗಿ ಟಿ.ವಿ.ಜಾಹೀರಾತು ಅನ್ನು ಗೋರ್ಬಚೆವ್ ನಿರ್ಮಿಸಿದ್ದರು.

‘ಗೋರ್ಬಚೆವ್ ಆಡಳಿತದ ಕಡೆಯ ದಿನಗಳು ಅಪಮಾನಕರವಾಗಿದ್ದವು. ಸುಧಾರಣೆ ಕ್ರಮಗಳಿಂದಾಗಿಯೇ ತಿರಸ್ಕಾರಕ್ಕೆ ಒಳಗಾಗಿದ್ದರು. 1991ರ ಆಗಸ್ಟ್‌ನಲ್ಲಿ ಅವರ ವಿರುದ್ಧ ಆಂತರಿಕವಾಗಿ ದಂಗೆ ಆರಂಭವಾಗಿತ್ತು. ಡಿ.25, 1991ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೆ ಸಂಯುಕ್ತ ಸಂಸ್ಥಾನದ ಅವನತಿಯನ್ನು ನೋಡಬೇಕಾಯಿತು’ ಎಂದು ರಾಜಕೀಯ ವಿಶ್ಲೇಷಕ ಮಿಖಾಯಿಲ್ ಮ್ಯಾಕ್‌ಫಾಲ್‌ ಸ್ಮರಿಸುತ್ತಾರೆ.

ಅಧಿಕಾರದಿಂದ ನಿರ್ಗಮಿಸಿದ 25 ವರ್ಷಗಳ ಬಳಿಕ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ್ದ ಗೋರ್ಬಚೆವ್‌, ‘ಸೋವಿಯತ್ ಒಕ್ಕೂಟವನ್ನು ಹಾಗೇ ಉಳಿಸಿಕೊಳ್ಳಲು ಆಗ ನಾನು ಭದ್ರತಾ ಪಡೆಯನ್ನು ಪೂರ್ಣವಾಗಿ ಬಳಸಲಿಲ್ಲ. ಬಳಸಿದರೆ ಅರಾಜಕತೆ ಮೂಡಬಹುದು ಎಂಬ ಭಯವಿತ್ತು. ಒಕ್ಕೂಟದಲ್ಲಿ ಶಸ್ತ್ರಾಸ್ತ್ರಗಳ ಸಂಗ್ರಹ ಹೇರಳವಾಗಿತ್ತು. ನಾಗರಿಕ ಯುದ್ಧ ಕಾಣಿಸಿಕೊಳ್ಳುವ ಅಪಾಯವಿತ್ತು’ ಎಂದು ಹೇಳಿದ್ದರು.

ನೊಬೆಲ್‌ ಶಾಂತಿ ಪ್ರಶಸ್ತಿ: ಶೀತಲ ಸಮರಕ್ಕೆ ಅಂತ್ಯ ಹಾಡಿ ಜಾಗತಿಕವಾಗಿ ಮನ್ನಣೆಗೆ ಪಾತ್ರರಾದ ಅವರಿಗೆ 1990ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಸಂದಿತ್ತು. ವಿಶ್ವದ ವಿವಿಧೆಡೆ ಹಲವು ಪ್ರಮುಖ ಪ್ರಶಸ್ತಿಗಳು ಸಂದಿದ್ದವು.

ಸೋವಿಯತ್ ಒಕ್ಕೂಟ ಅಸ್ಥಿರಗೊಳಿಸುವ ಉದ್ದೇಶ ಗೋರ್ಬಚೆವ್‌ ಅವರದಾಗಿರಲಿಲ್ಲ. ಅಧ್ಯಕ್ಷರಾಗಿ ಆರ್ಥಿಕ ಸುಧಾರಣೆ ಮತ್ತು ರಾಜಕೀಯ ಸ್ಥಿರತೆಗೆ ಮುಂದಾಗಿದ್ದರು. ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಹೆಚ್ಚು ಚಾಲ್ತಿಯಲ್ಲಿದ್ದ 2 ಪದಗಳು: ಗ್ಲಾಸನಾಸ್ತ್ ಮತ್ತು ಪೆರಸ್ತ್ರೋಯ್ಕ. ‘ಪಾರದರ್ಶಕತೆ’ ಹಾಗೂ ‘ಮರುಕಟ್ಟೋಣ’ ಎಂಬುದು ಇದರ ಅರ್ಥ.‘ವಿಫುಲ ಪ್ರಾಕೃತಿಕ ಸಂಪತ್ತು ಇದ್ದರೂ ದೇಶದಲ್ಲಿ ಅಸಂಖ್ಯಾತ ಜನರು ಬಡವರಾಗೇ ಇದ್ದಾರೆ ಎಂಬುದನ್ನು ನೋಡಿ ಭ್ರಮನಿರಸನಗೊಂಡಿದ್ದೆ. ಒಮ್ಮೆ ಅಧಿಕಾರ ಸಿಕ್ಕಾಗ ಸುಧಾರಣೆಗಳಿಗೆ ಮುಂದಾಗಿದ್ದೆ. ರಾಜಕೀಯ ಕೈದಿಗಳ ಬಿಡುಗಡೆ, ಮುಕ್ತ ಚರ್ಚೆಗೆ ಅವಕಾಶ, ಚುನಾವಣೆಗಳಲ್ಲಿ ಹಲವು ಅಭ್ಯರ್ಥಿಗಳ ಸ್ಪರ್ಧೆ, ಮುಕ್ತ ಸಂಚಾರಕ್ಕೆ ಜನರಿಗೆ ಅವಕಾಶ, ಪಾಶ್ಚಿಮಾತ್ಯ ದೇಶಗಳ ಜೊತೆಗೆ ಬಾಂಧವ್ಯ ಇವುಗಳಲ್ಲಿ ಪ್ರಮುಖ ವಾದವು. ಆದರೆ, ನಾನು ಮುಕ್ತ ಅವಕಾಶ ನೀಡಿದ ಶಕ್ತಿಗಳೇ ಬಳಿಕ ನನ್ನ ಹಿಡಿತಕ್ಕೆ ಸಿಗಲಿಲ್ಲ’ ಎಂದು ಅವರು ಹೇಳಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.