ADVERTISEMENT

ಪತ್ರಿಕೋದ್ಯಮಕ್ಕೆ ಒಬ್ಬರೇ ನಾಡಿಗ!

​ಪ್ರಜಾವಾಣಿ ವಾರ್ತೆ
Published 3 ಜುಲೈ 2021, 19:31 IST
Last Updated 3 ಜುಲೈ 2021, 19:31 IST
ಕಲೆ: ಗುರು ನಾವಳ್ಳಿ
ಕಲೆ: ಗುರು ನಾವಳ್ಳಿ   

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಶಿಕ್ಷಣಕ್ಷೇತ್ರ ವಿದ್ಯಾರ್ಥಿಗಳಲ್ಲಿ ಇಂದು ಅತ್ಯಂತ ಜನಪ್ರಿಯ. ಹುಟ್ಟಿನಿಂದಲೇ ಪತ್ರಕರ್ತರು, ಅವರನ್ನು ನಿರ್ಮಿಸಲಾಗದು ಎಂಬ ನಂಬಿಕೆ ಬಹುಕಾಲ ರೂಢಿಯಲ್ಲಿತ್ತು. ಇದರ ವಿರುದ್ಧ ಸೆಣಸಿದ ಕಟಿಬದ್ಧ ಶಿಕ್ಷಕ ಡಾ. ನಾಡಿಗ ಕೃಷ್ಣಮೂರ್ತಿ. ಉತ್ತಮ ಶೈಕ್ಷಣಿಕ ಹಿನ್ನೆಲೆ ಮತ್ತು ಶಾಸ್ತ್ರೀಯ ತರಬೇತಿಯಿಂದ ಸಮರ್ಥ ಪತ್ರಕರ್ತರನ್ನು ನಿರ್ಮಿಸಲು ಸಾಧ್ಯ ಎಂಬುದನ್ನು ಸಾಬೀತುಪಡಿಸಿದ ಮೇಧಾವಿ ಹಾಗೂ ಸಮರ್ಪಣಾಭಾವದ ಶಿಕ್ಷಕ.

ದೇಶ ಕಟ್ಟುವಲ್ಲಿ ಸಮೂಹ ಮಾಧ್ಯಮಗಳು ನಿರ್ಣಾಯಕ ಎಂಬುದನ್ನು ಅಂದೇ ಮನಗಂಡ ನಾಡಿಗರು 1947ರಲ್ಲೇ ಅಮೆರಿಕೆಯ ಮಿಸ್ಸೌರಿ ವಿಶ್ವವಿದ್ಯಾಲಯಲ್ಲಿ ಎಂ.ಎ. ಪತ್ರಿಕೋದ್ಯಮ ಶಿಕ್ಷಣಕ್ಕೆ ಪ್ರವೇಶ ಪಡೆದ ಉತ್ಸಾಹಿ. ಶಿಕ್ಷಣ ಹಾಗೂ ಹಡಗಿನ ಪ್ರಯಾಣ ವೆಚ್ಚ ಹತ್ತುಸಾವಿರ ರೂಪಾಯಿ ಹೊಂದಿಸಲು ಅವರು ಪಡಬಾರದ ಕಷ್ಟಪಟ್ಟರು. ರಸ್ತೆಯಲ್ಲಿ ನಿಂತು ಪುಸ್ತಕಗಳನ್ನು ಮಾರಿ ಹಣ ಕೂಡಿಸಿದರು. ಹಿರಿಯ ಸಾಹಿತಿಗಳು, ಧನಿಕರಲ್ಲಿ ಸಾಲ ನೀಡಲು ವಿನಂತಿಸಿದರು. ವಾಪಸ್ಸು ನೀಡುವ ಗ್ಯಾರಂಟಿ ನೀಡಿದರು. ಒಂಬತ್ತು ಸಾವಿರ ಸಂಗ್ರಹಿಸಿ ಇನ್ನೊಂದೇ ಸಾವಿರ ಬೇಕಾಗಿದ್ದಾಗ ಉದ್ಯಮಿಯೊಬ್ಬರು ಈ ಯುವಕನ ಉತ್ಸಾಹ ನೋಡಿ ಅಮೆರಿಕೆಗೆ ಹೊರಡಲು ನೆರವಾದರು.

ಸ್ವಯಂನಿರ್ಮಿತ ನಾಡಿಗರು ಶಿವಮೊಗ್ಗ ಜಿಲ್ಲೆಯ ಆನವಟ್ಟಿಯವರು. 1921ರಲ್ಲಿ ಜನನ. ತಂದೆ ನಾಡಿಗ ನರಸಿಂಗ ರಾವ್ ಶಾನುಭೋಗರು. ತಾಯಿ ರಮಾಬಾಯಿ. ಕಾಲೇಜು ಶಿಕ್ಷಣಕ್ಕಾಗಿ ನಾಡಿಗರು 1937ರಲ್ಲಿ ವಿದ್ಯಾಕಾಶಿ ಮೈಸೂರಿಗೆ ಬಂದರು. 1941ರಲ್ಲಿ ಬಿ.ಎ. ಪದವಿ ಪಡೆದು ಪ್ರೌಢಶಾಲೆ ಶಿಕ್ಷಕರಾಗಿ ಆಯ್ಕೆಯಾದರು. 1941ರಲ್ಲಿ ವಾರ್ಧಾ ಯಾತ್ರೆಮಾಡಿ ಗಾಂಧೀಜಿಯ ದರ್ಶನ ಮಾಡಿ ಬಂದರು. ಸ್ವಾತಂತ್ರ್ಯ ಚಳವಳಿಯ ಅದಮ್ಯ ತುಡಿತ ನಾಡಿಗರನ್ನು ಹೋರಾಟಕ್ಕೆ ಇಳಿಯಲು ಪ್ರೇರೇಪಿಸಿತು. ಸ್ವಾತಂತ್ರ್ಯ ಹೋರಾಟಗಾರರ ಸಾಹಸ ಮತ್ತು ತ್ಯಾಗಗಳ ಕುರಿತು ಬರೆಯುವ ಉತ್ಸಾಹ ಅವರಲ್ಲಿತ್ತು. ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲವನ್ನು ನೀಡಲು, ಜನರನ್ನು ಪ್ರೇರೇಪಿಸಲು ಹಲವಾರು ಲೇಖನಗಳು, ಪುಸ್ತಕಗಳನ್ನು ಪ್ರಕಟಿಸಿದರು. ಸ್ವಾತಂತ್ರ್ಯ ಚಳವಳಿಗೆ ಎಷ್ಟು ಬದ್ಧರಾಗಿದ್ದರು ಎಂದರೆ ಗಾಂಧೀಜಿ ಮತ್ತು ಇತರ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರ ಕುರಿತ ಒಂಬತ್ತು ಪುಸ್ತಕಗಳು ಅವರಿಂದ ಹೊರಬಂದವು. ಅವುಗಳನ್ನು ಚೀಲದಲ್ಲಿ ಹೊತ್ತು, ಜನರಿಗೆ ಖರೀದಿಸಲು ಮನವಿ ಮಾಡುತ್ತಿದ್ದರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಅವರ ಸಕ್ರಿಯ ಭಾಗವಹಿಸುವಿಕೆ ಅಧಿಕಾರಿಗಳ ಕೋಪಕ್ಕೆ ಕಾರಣವಾಯಿತು. ಅವರನ್ನು ಒಂದು ವರ್ಷದವರೆಗೆ ಜೈಲಿಗೆ ಕಳುಹಿಸಲಾಯಿತು.

ADVERTISEMENT

ಸ್ವಾತಂತ್ರ್ಯ ಹೋರಾಟಗಾರರಿಗೆ ಸಂಬಂಧಿಸಿದ ಪುಸ್ತಕಗಳ ಪ್ರಕಟಣೆಗಳಲ್ಲದೆ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ ಅವರು ನಿಯಮಿತವಾಗಿ ಬರೆದು ಜನರನ್ನು ಹುರಿದುಂಬಿಸಿದರು. ಈ ಬರಹಗಳು ಪತ್ರಿಕೋದ್ಯಮವನ್ನು ಪ್ರವೇಶಿಸಲು ನಾಡಿಗರನ್ನು ಪ್ರೇರೇಪಿಸಿದವು. ಸಕ್ರಿಯ ಪತ್ರಿಕಾ ಬರವಣಿಗೆ ಪತ್ರಿಕೋದ್ಯಮದಲ್ಲಿ ಉನ್ನತ ಶಿಕ್ಷಣ ಪಡೆಯಲು ಅವರನ್ನು ಉತ್ತೇಜಿಸಿತು.

1947ರ ಜನವರಿ 26ರಂದು ಅಮೆರಿಕೆಗೆ ತೆರಳಿದ ನಾಡಿಗರು, ತಮ್ಮ ವಿದ್ಯಾಭ್ಯಾಸದ ಜತೆಗೆ ಅಲ್ಲಿಯೂ ಗಾಂಧೀಜಿ ಮತ್ತು ಅವರ ಅಹಿಂಸೆಯ ತತ್ವಗಳ ಕುರಿತು ಉಪನ್ಯಾಸಗಳನ್ನು ನೀಡಿ, ದೇಶದ ಹೋರಾಟವನ್ನು ಅಮೆರಿಕೆಯ ವಿದ್ಯಾರ್ಥಿ ಸಮುದಾಯಕ್ಕೆ ಪರಿಚಯಿಸಿದರು. ಪ್ರತಿಷ್ಠಿತ ಅಮೆರಿಕನ್ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯೊಂದಿಗೆ ಹಿಂತಿರುಗಿದ ನಂತರ, ನಾಡಿಗರು ದೆಹಲಿ ಮತ್ತು ಮದರಾಸಿನಲ್ಲಿ ಅಮೆರಿಕದ ರಾಯಭಾರ ಕಚೇರಿಯಲ್ಲಿ ಕನ್ನಡ ಪ್ರಕಟಣೆಗಳ ಮುಖ್ಯಸ್ಥರಾಗಿದ್ದರು. ಆದರೆ ಶಿಕ್ಷಕ ವೃತ್ತಿಯ ಸೆಳೆತ ಅವರನ್ನು ಮೈಸೂರಿನ ಮಹಾರಾಜ ಕಾಲೇಜಿಗೆ ಕರೆತಂದಿತು. ಪ್ರೊ. ನಂಬಿಯಾರ್ ಅವರ ಮುತುವರ್ಜಿಯಿಂದ ಮಹಾರಾಜ ಕಾಲೇಜಿನಲ್ಲಿ 1951ರಲ್ಲಿ ಆರಂಭವಾಗಿದ್ದ ಪತ್ರಿಕೋದ್ಯಮ ವಿಭಾಗಕ್ಕೆ ತರಬೇತಿ ಪಡೆದ ಶಿಕ್ಷಕನ ಅವಶ್ಯಕತೆ ಇತ್ತು. ಆ ಪದವಿ ನಾಡಿಗರಿಗೆ ಒಲಿಯಿತು. ಮುಂದೆ ಘಟಿಸಿದುದೆಲ್ಲ ಪತ್ರಿಕೋದ್ಯಮ ಶಿಕ್ಷಣದ ಮಹತ್ತರ ಹೆಜ್ಜೆಗುರುತುಗಳ ನಿರ್ಮಾಣ.

ನಾಡಿಗರ ಶೈಕ್ಷಣಿಕ ನಾಯಕತ್ವ ಮತ್ತು ಸಮರ್ಥ ಮಾರ್ಗದರ್ಶನದಲ್ಲಿ ಮಹಾರಾಜ ಕಾಲೇಜು ಪದವಿ ಕೋರ್ಸ್ ಯಶಸ್ವಿಯಾಗಿ ಮುನ್ನಡೆಯಿತು. ವಿದೇಶದಲ್ಲಿ ತರಬೇತಿ ಪಡೆದುಬಂದಿದ್ದ ನಾಡಿಗರು ಪತ್ರಿಕೋದ್ಯಮ ಶಿಕ್ಷಣ ಮತ್ತು ತರಬೇತಿಯನ್ನು ಸಮರ್ಥವಾಗಿ ಸಮ್ಮಿಳಿಸಿದರು. ಏಷ್ಯಾ ಮತ್ತು ಆಫ್ರಿಕಾದ ಅನೇಕ ಭಾಗಗಳಿಂದ ವಿದ್ಯಾರ್ಥಿಗಳನ್ನು ಮಹಾರಾಜ ಕಾಲೇಜು ಆಕರ್ಷಿಸಿತು. ಕೋರ್ಸ್ ಅನ್ನು ಅತ್ಯಂತ ಕ್ಷೇತ್ರ-ಆಧಾರಿತವಾಗಿಸಿದರು. ‘ಪತ್ರಿಕೋದ್ಯಮಿ’ ಎಂಬ ಕನ್ನಡ-ಇಂಗ್ಲಿಷ್‌ ಪ್ರಾಯೋಗಿಕ ಪತ್ರಿಕೆಯನ್ನು ನಿಯಮಿತವಾಗಿ ಪ್ರಕಟಿಸಿದರು. 1966ರಲ್ಲಿ ನಾಡಿಗರು ಅಮೆರಿಕೆಯ ಸದರ್ನ್ ಇಲಿನಾಯ್‌ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಜರ್ನಲಿಸಂನಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಬದಲಾಗುತ್ತಿರುವ ಸಮೂಹ ಮಾಧ್ಯಮ ಶಿಕ್ಷಣ ಮತ್ತು ತರಬೇತಿ ಕೌಶಲಗಳನ್ನು ವಿಸ್ತೃತವಾಗಿ ಅರಿಯಲು ಈ ಅವಕಾಶ ಅವರಿಗೆ ನೆರವಾಯಿತು.

ನಾಡಿಗರು ತಮ್ಮ ಪ್ರಭಾವ ಮತ್ತು ಸಂಪರ್ಕಗಳನ್ನು ಜಾಣ್ಮೆಯಿಂದ ಬಳಸಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ವಿಭಾಗವನ್ನು ತೆರೆಯುವಂತೆ ಕುಲಪತಿ ದೇ.ಜವರೇಗೌಡರ ಮನ ಒಲಿಸಿದರು. 1971ರಲ್ಲಿ ಆ ವಿಭಾಗ ಮಾನಸಗಂಗೋತ್ರಿ ಆವರಣದಲ್ಲಿ ಆರಂಭವಾಯಿತು. ಸಹೋದ್ಯೋಗಿಗಳಾದ ಸೈಯದ್ ಇಕ್ಬಾಲ್ ಖಾದ್ರಿ ಮತ್ತು ಶ್ರೀಕರ್ ಎಲ್. ಭಂಡಾರ್ಕರ್ ಅವರು ಇಲಾಖೆಯನ್ನು ಮುನ್ನಡೆಸಲು ನೆರವಾದರು. ಇಡೀ ಆಗ್ನೇಯ ಏಷ್ಯಾದಲ್ಲಿ ಮೊದಲ ಸ್ನಾತಕೋತ್ತರ ಪತ್ರಿಕೋದ್ಯಮ ಕೋರ್ಸ್ ಸ್ಥಾಪಿಸಿದ ಕೀರ್ತಿ ಮೈಸೂರು ವಿಶ್ವವಿದ್ಯಾಲಯಕ್ಕೆ ದಕ್ಕಿತು.

‘ಮಾನಸಗಂಗೋತ್ರಿ’ ಎಂಬ ಪ್ರಾಯೋಗಿಕ ಪತ್ರಿಕೆ ಪ್ರಕಟಣೆ, ಹಿರಿಯ ಮಾಧ್ಯಮ ವ್ಯಕ್ತಿಗಳ ಉಪನ್ಯಾಸ, ಕಡ್ಡಾಯ ಅಧ್ಯಯನ ಪ್ರವಾಸ ಮತ್ತು ಮಾದರಿ ಪತ್ರಿಕಾಗೋಷ್ಠಿಗಳು ವಿದ್ಯಾರ್ಥಿಗಳಲ್ಲಿ ಮಾಧ್ಯಮ ಲೋಕದ ಅಗತ್ಯಗಳನ್ನು ಪರಿಚಯಿಸಿದವು. ವಿಶೇಷವಾಗಿ, ಅಧ್ಯಯನ ಪ್ರವಾಸ ವಿದ್ಯಾರ್ಥಿಗಳಿಗೆ ಪ್ರಮುಖ ಪತ್ರಿಕಾ ಕಚೇರಿಗಳಿಗೆ ಭೇಟಿ ನೀಡಲು ಮತ್ತು ಹಿರಿಯ ಸಂಪಾದಕರು ಮತ್ತು ಪತ್ರಕರ್ತರನ್ನು ಭೇಟಿಯಾಗಲು ಸಹಾಯ ಮಾಡಿತು. ಕೋರ್ಸ್ ಯಶಸ್ವಿಯಾಯಿತು ಮತ್ತು ಇಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಕ್ರಮೇಣ ಪ್ರಮುಖ ಪತ್ರಿಕೆಗಳಲ್ಲಿ ಕೆಲಸ ಸಿಗಲಾರಂಭಿಸಿತು.

ನಾಡಿಗರು ಪತ್ರಿಕೋದ್ಯಮ ವಿಭಾಗವನ್ನು ಸ್ಥಾಪಿಸಲು ಮತ್ತು ವಿದ್ಯಾರ್ಥಿಗಳಿಗೆ ವೃತ್ತಿಪರ ಮಾರ್ಗದಲ್ಲಿ ತರಬೇತಿ ನೀಡಲು ಹೆಣಗಾಡುತ್ತಿರುವಾಗ, ಹಲವಾರು ಸಂಪಾದಕರು ಮತ್ತು ಪ್ರಕಾಶಕರು ಅವರನ್ನು ಗೇಲಿ ಮಾಡಿದರು. ಆದರೆ, ಇದರಿಂದ ನಾಡಿಗರು ಧೃತಿಗೆಡಲಿಲ್ಲ.

ನಾಡಿಗರು ತಮ್ಮ ಧುರೀಣತ್ವದಲ್ಲಿ ದೇಶದಾದ್ಯಂತ ಹಲವಾರು ವಿಭಾಗಗಳನ್ನು ಸ್ಥಾಪಿಸಲು ಶೈಕ್ಷಣಿಕ ಮಾರ್ಗದರ್ಶನ ಮಾಡಿ ದೇಶದ ಪ್ರತಿಷ್ಠಿತ ಪತ್ರಿಕೋದ್ಯಮ ಶಿಕ್ಷಕರಾಗಿ ಹೊರಹೊಮ್ಮಿದರು. ಅವರ ನಿರ್ದೇಶನದಲ್ಲಿ ಅನೇಕ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ, ಪದವಿ ಮತ್ತು ಡಿಪ್ಲೊಮಾ ಮಟ್ಟದಲ್ಲಿ ಪತ್ರಿಕೋದ್ಯಮ ಕಲಿಕೆ ಆರಂಭವಾಯಿತು. ಮೈಸೂರು ವಿಶ್ವವಿದ್ಯಾಲಯದ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯ ಮೂಲಕ ನಾಡಿಗರು ಸರ್ಟಿಫಿಕೇಟ್ ಕೋರ್ಸ್, ನಂತರ ಡಿಪ್ಲೊಮಾ ಕೋರ್ಸ್ ಪ್ರಾರಂಭಿಸಿದರು. ಈ ಕೋರ್ಸ್‌ಗಳು ಇಡೀ ದೇಶದಲ್ಲಿಯೇ ಹೆಸರು ಪಡೆದವು.

ನಾಡಿಗ ಅವರ ಪ್ರಮುಖ ಕೊಡುಗೆಗಳಲ್ಲಿ ಬಹುಮುಖ್ಯವಾದುದು ಎಂದರೆ ಅವರು ರಚಿಸಿದ ‘ಭಾರತೀಯ ಪತ್ರಿಕೋದ್ಯಮ’ ಕೃತಿ. ಇದು ಅವರ ಪಿಎಚ್.ಡಿ ಪ್ರಬಂಧವಾಗಿದ್ದು ನಂತರ 1966ರಲ್ಲಿ ಪುಸ್ತಕವಾಗಿ ಪ್ರಕಟವಾಯಿತು. ಇದು ಮೊದಲ ಬಾರಿಗೆ ಪ್ರಮುಖ ಭಾರತೀಯ ಭಾಷೆಗಳ ಸಮಗ್ರ ಪತ್ರಿಕಾ ಇತಿಹಾಸ ಮತ್ತು ಬೆಳವಣಿಗೆಗಳನ್ನು ದಾಖಲಿಸಿದೆ. ಈ ಕೃತಿಯನ್ನು ಕನ್ನಡಕ್ಕೆ ನಾಡಿಗರೇ ಅನುವಾದಿಸಿದ್ದಾರೆ. ಈ ಪುಸ್ತಕವು ಮೈಸೂರು ವಿಶ್ವವಿದ್ಯಾಲಯದಿಂದ ಪ್ರಶಸ್ತಿಯನ್ನು ಸಹ ಪಡೆದಿದೆ.

ಭಾರತೀಯ ವಿಶ್ವವಿದ್ಯಾಲಯ ವೊಂದು ಪತ್ರಿಕೋದ್ಯಮದಲ್ಲಿ ನೀಡಿದ ಪ್ರಥಮ ಡಾಕ್ಟರೇಟ್ ಪದವಿ ಪಡೆದ ಕೀರ್ತಿಗೆ 1964ರಲ್ಲಿ ನಾಡಿಗರು ಭಾಜನರಾದರು.

ಲಂಡನ್‍ನ ಇಂಡಿಯಾ ಆಫೀಸ್ ಲೈಬ್ರರಿ ಮತ್ತು ಬ್ರಿಟಿಷ್‌ ಮ್ಯೂಸಿಯಂನಲ್ಲಿ ಹಳೆಯ ದಾಖಲೆಗಳನ್ನು ಉಲ್ಲೇಖಿಸಲು ಬ್ರಿಟಿಷ್‌ ಸರ್ಕಾರದ ಆಹ್ವಾನವು ಅವರಿಗೆ ನೆರವಾಯಿತು. ಯುನೆಸ್ಕೊ ಫೆಲೋ ಆಗಿ, ಸೋವಿಯತ್ ಒಕ್ಕೂಟ ಮಾತ್ರವಲ್ಲದೆ ಯುರೋಪಿನ ದೇಶಗಳಿಗೆ ಭೇಟಿ ನೀಡುವ ಅವಕಾಶವನ್ನು ಅವರು ಪಡೆದರು. ಇದು ಆ ದೇಶಗಳಲ್ಲಿನ ಪತ್ರಿಕೋದ್ಯಮದ ಸ್ಥಿತಿಗತಿಗಳನ್ನು ಸಮಗ್ರವಾಗಿ ಅಧ್ಯಯನ ಮಾಡಲು ನೆರವಾಯಿತು.

ನಾಡಿಗರು ಕನ್ನಡಕ್ಕೆ ಇನ್ನೂ ಎರಡು ಪುಸ್ತಕಗಳನ್ನು ಅನುವಾದಿಸಿದ್ದಾರೆ; ಮಿಸ್ಸೌರಿಯಲ್ಲಿ ಅವರ ಶಿಕ್ಷಕರಾಗಿದ್ದ ಡಾ. ಫ್ರ್ಯಾಂಕ್ ಲೂಥರ್ ಮಾಟ್ ಬರೆದ ‘ಅಮೆರಿಕನ್ ಜರ್ನಲಿಸಂ’ ಮತ್ತು ಇನ್ನೊಂದು ಆಂಗ್ಲಕೃತಿ ‘ಬ್ರಿಟಿಷ್‌ ಜರ್ನಲಿಸಂ’ಅನ್ನು ಕನ್ನಡೀಕರಿಸಿದ್ದಾರೆ. ನಾಡಿಗರು 18 ಪುಸ್ತಕಗಳ ಲೇಖಕರು ಮತ್ತು 30 ಕೃತಿಗಳ ಅನುವಾದಕರು. ಜತೆಗೆ ನೂರಾರು ಲೇಖನಗಳನ್ನು ಪ್ರಕಟಿಸಿದ್ದಾರೆ.

ನಾಡಿಗರು ಸ್ಫೂರ್ತಿದಾಯಕ ಶಿಕ್ಷಕರಾಗಿದ್ದರು ಮತ್ತು ವಿದ್ಯಾರ್ಥಿಗಳಿಗೆ ಯಾವಾಗಲೂ ಬೆಂಬಲ ನೀಡಿದರು. ವಿದ್ಯಾರ್ಥಿ ದಿನಗಳಲ್ಲಿ ಅವರು ಅನುಭವಿಸಿದ ಸಮಸ್ಯೆಗಳನ್ನು ಮರೆಯಲಿಲ್ಲ. ಸದಾ ಖಾದಿಧಾರಿ ನಾಡಿಗರು ಸರಳ ಹಾಗೂ ವಿನಮ್ರತೆಗೆ ಸಾಕ್ಷಿಪ್ರಜ್ಞೆಯಂತಿದ್ದರು. ನಾಡಿಗರ ಮತ್ತೊಂದು ಗಮನಾರ್ಹ ಕೊಡುಗೆ ಕರ್ನಾಟಕ ಪತ್ರಿಕಾ ಅಕಾಡೆಮಿಯನ್ನು ಸ್ಥಾಪಿಸುವುದರಲ್ಲಿ ಅವರು ವಹಿಸಿದ ಮುತುವರ್ಜಿ. ಕೇರಳ ಪತ್ರಿಕಾ ಅಕಾಡೆಮಿ ನಂತರ ಇದು ದೇಶದ ಎರಡನೇ ಅಂತಹ ಸಂಸ್ಥೆಯಾಗಿತ್ತು. ಪತ್ರಕರ್ತರ ವೃತ್ತಿಪರ ಕೌಶಲವರ್ಧನೆ ಮತ್ತು ಉಪಯುಕ್ತ ಪ್ರಕಟಣೆಗಳನ್ನು ಹೊರತರುವುದು ಅಕಾಡೆಮಿಯ ಮುಖ್ಯ ಉದ್ದೇಶಗಳಾಗಿದ್ದವು. 1981ರಲ್ಲಿ ಅವರು ಕರ್ನಾಟಕ ಪತ್ರಿಕಾ ಅಕಾಡೆಮಿಯ ಮೊದಲ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಅನೇಕ ಕಾರಣಗಳಿಂದ ಅವರು ಸಕ್ರಿಯರಾಗಿ ಕಾರ್ಯನಿರ್ವಹಿಸಲಾಗಲಿಲ್ಲ.

1980ರಲ್ಲಿ ನಾಡಿಗರು ನಿವೃತ್ತಿಗೊಂಡರು. ಪತ್ರಿಕೋದ್ಯಮ ಶಿಕ್ಷಣದ ಪ್ರವರ್ತಕರಾಗಿ ಮತ್ತು ಪತ್ರಿಕೋದ್ಯಮದಲ್ಲಿ ಮೊದಲ ಸ್ನಾತಕೋತ್ತರ ವಿಭಾಗವನ್ನು ಸ್ಥಾಪಿಸಿದ ಅವರ ನಾಯಕತ್ವ, ಪತ್ರಿಕಾ ಅಕಾಡೆಮಿಯ ಸ್ಥಾಪನೆ ಮತ್ತು ದೇಶದಲ್ಲಿ ಪತ್ರಿಕೋದ್ಯಮ ಶಿಕ್ಷಣದ ಬೇರುಗಳು ಗಟ್ಟಿಗೊಳ್ಳಲು ಕಾರಣರಾದ ಅವರನ್ನು ಭಾರತೀಯ ಪತ್ರಿಕೋದ್ಯಮ ಶಿಕ್ಷಣದ ಪಿತಾಮಹ ಎಂದು ಬಣ್ಣಿಸಲಾಗುತ್ತದೆ. ಅವರು 1983ರಲ್ಲಿ ವಿಧಿವಶರಾದಾಗ ಪತ್ರಿಕೋದ್ಯಮ ಒಬ್ಬ ಮಹಾನ್ ಶಿಕ್ಷಕನನ್ನು ಕಳೆದುಕೊಂಡಿತು.

2021 – ನಾಡಿಗರ ಜನ್ಮ ಶತಮಾನೋತ್ಸವ ವರ್ಷ. ಇದೇ ವರ್ಷ ಮೈಸೂರು ವಿಶ್ವವಿದ್ಯಾಲಯ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಸುವರ್ಣ ಮಹೋತ್ಸವ ವರ್ಷ ಕೂಡ. 1971ನೇ ಸಾಲಿನಲ್ಲಿ ಆರಂಭವಾದ ಈ ವಿಭಾಗ ನಾಡಿಗೆ ಸಾವಿರಕ್ಕೂ ಹೆಚ್ಚು ಪ್ರತಿಷ್ಠಿತ ಮಾಧ್ಯಮ ವೃತ್ತಿಪರರನ್ನು ನೀಡಿದ ಕೀರ್ತಿ ಹೊಂದಿದೆ. ಮೈಸೂರಿನ ಮಹಾರಾಜ ಕಾಲೇಜಿನ ಪತ್ರಿಕೋದ್ಯಮ ವಿಭಾಗಕ್ಕೆ 70 ವರ್ಷಗಳ ಸಂಭ್ರಮಾಚರಣೆ. ಇದೆಲ್ಲ ಒಂದು ಯೋಗಾಯೋಗವೇ ಸರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.