ADVERTISEMENT

ಭಾರತದ ಕಂಡ ಸಂಭಾವಿತ ರಾಜಕಾರಣಿ ಪ್ರಣಬ್ ಮುಖರ್ಜಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಆಗಸ್ಟ್ 2020, 14:11 IST
Last Updated 31 ಆಗಸ್ಟ್ 2020, 14:11 IST
ಪ್ರಣವ್‌ ಮುಖರ್ಜಿ
ಪ್ರಣವ್‌ ಮುಖರ್ಜಿ    

ಮಾಜಿ ರಾಷ್ಟ್ರಪತಿ ಪ್ರಣಬ್‌ ಮುಖರ್ಜಿ, ಕಮ್ಯುನಿಸ್ಟ್‌ ಪ್ರಾಬಲ್ಯದ ನಾಡಿನಲ್ಲಿ ಹುಟ್ಟಿದ್ದರೂ, ಕಾಂಗ್ರೆಸ್‌ ಪಕ್ಷದ ನಂಟಿನೊಂದಿಗೆ ದಂಟಿನ ಬಳ್ಳಿಯಂತೆ ಏರುತ್ತಾ ಸಾಗಿದವರು. ಆ ಪಕ್ಷದಿಂದಲೇ ರಾಜಕೀಯ ಪಯಣ ಆರಂಭಿಸಿ ಕೊನೆಯವರೆಗೂ ಆ ಪಕ್ಷಕ್ಕೆ ನಿಷ್ಠರಾಗಿದ್ದರು.

ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ ಕುಟುಂಬ ಆಪ್ತರಾಗಿದ್ದ ಪ್ರಣಬ್ ಅವರು, ಇಂದಿರಾ ಗಾಂಧಿಯವರ ‘ರಾಜಕೀಯ ಆಪ್ತೇಷ್ಟರ‘ ವಲಯದಲ್ಲಿ ಗುರುತಿಸಿಕೊಂಡಿದ್ದರು. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗಲೆಲ್ಲ ಕ್ಯಾಬಿನೆಟ್‌ನಲ್ಲಿ, ಹೈಕಮಾಂಡ್‌ನಲ್ಲಿ ಇವರಿಗೆ ಅಗ್ರಸ್ಥಾನ ಕಾಯಂ.

ಆರ್ಥಿಕ ತಜ್ಞ, ಉತ್ತಮ ಹಣಕಾಸು ಸಚಿವ, ರಾಜಕೀಯ ಮುತ್ಸದಿ, ಸಂಭಾವಿತ ರಾಜಕಾರಣಿ, ರಾಜನೀತಿ ನಿಪುಣ, ಟ್ರಬಲ್‌ ಶೂಟರ್.. ಇಂಥ ಹಲವು ಗುಣ ವಿಶೇಷಣಗಳಿಂದ ಗುರುತಿಸಿ ಕೊಳ್ಳುತ್ತಿದ್ದ ಪ್ರಣಬ್‌ ಮುಖರ್ಜಿ ಬಂಗಾಳಿಗರಿಗೆ ಮಾತ್ರ ಪ್ರೀತಿಯ ‘ಪ್ರಣಬ್‌ ದಾ‘ ಆಗಿದ್ದರು.

ADVERTISEMENT

ಪಶ್ಚಿಮ ಬಂಗಾಳದಲ್ಲಿ ಪ್ರಮುಖ ರಾಜಕಾರಣಿಗಳಲ್ಲಿ ಗಟ್ಟಿಯಾಗಿ ಕೇಳಿಬರುವ ರಾಜಕೀಯ ನಾಯಕರ ಹೆಸರಲ್ಲಿ ಪ್ರಣಬ್‌ ಮುಖರ್ಜಿಯವರಿಗೆ ಅಗ್ರಪಟ್ಟ. ಅವರು ಈ ಪರಿ ರಾಜಕೀಯ ನೇತಾರನಾಗಿ ಬೆಳೆದಿದ್ದೇ ಒಂದು ಅಚ್ಚರಿ. ಕಾಂಗ್ರೆಸ್‌ ಪಕ್ಷದ ರಾಜಕೀಯ ಪಡಸಾಲೆಯಲ್ಲಿ ರಾಜ್ಯಸಭಾ ಸದಸ್ಯನಾಗಿ ರಾಜಕೀಯ ಪಯಣ ಆರಂಭಿಸಿ, ಸಂಪುಟಗಳಲ್ಲಿ ವಿತ್ತ, ವಿದೇಶಾಂಗ, ರಕ್ಷಣೆ, ಗೃಹ ಸಚಿವಾಲಯದಂತಹ ದೊಡ್ಡ ದೊಡ್ಡ ಖಾತೆಗಳನ್ನು ನಿಭಾಯಿಸಿ, ದೇಶದ ಅತ್ಯುನ್ನತ ಪದವಿಯಾದ ‘ರಾಷ್ಟ್ರಪತಿ‘ ಹುದ್ದೆಯನ್ನೂ ಅಲಂಕರಿಸಿದರು.

ಇಷ್ಟೆಲ್ಲ ಸ್ಥಾನಗಳನ್ನು ನಿರ್ವಹಿಸಿದರೂ, ಹುದ್ದೆಗಳನ್ನು ಅಲಂಕರಿಸಿದರೂ ಎಲ್ಲೂ ತಾವು ನಂಬಿದ ತತ್ವ ಸಿದ್ಧಾಂತಗಳನ್ನು ಬಿಟ್ಟು ಬದುಕಲಿಲ್ಲ. ಸಾಂವಿಧಾನಿಕ ಮೌಲ್ಯಗಳ ಬದ್ಧತೆಯನ್ನೂ ಎಂದೂ ಬಿಟ್ಟುಕೊಡಲಿಲ್ಲ. ಪಕ್ಷದ ವಲಯದಲ್ಲಿ ಬಯಸಿದ್ದು ಸಿಗದಿರುವಂತಹ ಸಣ್ಣ ಪುಟ್ಟ ‘ವ್ಯತ್ಯಾಸ‘ಗಳಾದಾಗಲೂ ಎದೆಗುಂದದೆ ಸಮರ್ಪಕವಾಗಿ ಅವುಗಳನ್ನು ನಿರ್ವಹಿಸಿದರು. ಎರಡು ಬಾರಿ ಪ್ರಧಾನಿ ಹುದ್ದೆ ತಪ್ಪಿದಾಗಲೂ ಕುಗ್ಗದೇ ತುಂಬಾ ಸ್ಥಿತಪ್ರಜ್ಞರಾಗಿದ್ದರು. ಇಂಥ ಎಲ್ಲ ಗುಣಗಳಿಂದಾಗಿಯೆ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತ ರತ್ನ‘ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿತ್ತು.

ಬಂಗಾಲದ ಕುಡಿ ಇವರು..

ಪ್ರಣಬ್‌ ಮುಖರ್ಜಿಯವರ ಪೂರ್ಣ ಹೆಸರು ಪ್ರಣಬ್‌ ಕಾಮುದಾ ಕಿಂಕರ್‌ ಮುಖರ್ಜಿ. ಇವರು ಜನಿಸಿದ್ದು ಡಿಸೆಂಬರ್ 11, 1935ರಲ್ಲಿ. ಸ್ಥಳ ಬೀರ್‌ಭೂಮ್(Birbhum) ಜಿಲ್ಲೆಯ ಮಿರತಿಹಳ್ಳಿಯಲ್ಲಿ. ತಂದೆ ಕಾಮದಾ ಕಿಂಕರ್‌ ಮುಖರ್ಜಿ. ಇವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದರು. ತಾಯಿ ರಾಜಲಕ್ಷ್ಮಿ.

ಪ್ರಣಬ್‌ ಅವರು ಕೋಲ್ಕತ್ತಾ ವಿಶ್ವವಿದ್ಯಾಲಯದಿಂದ ಇತಿಹಾಸ ಮತ್ತು ರಾಜಕೀಯ ವಿಜ್ಞಾನ ಶಾಸ್ತ್ರದಲ್ಲಿ ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 1963ರಲ್ಲಿ ಕೋಲ್ಕತ್ತಾದ ಕಾಲೇಜೊಂದರಲ್ಲಿ ಶಿಕ್ಷಕರಾಗಿ ಸೇರಿದರು. ನಂತರ ಪತ್ರಕರ್ತರಾಗಿ ಕೆಲಸ ಮಾಡಿದ್ದಾರೆ. ಮುಂದೆ ಬಂಗಾಲಿ ಭಾಷೆಯ ಮಾಸಪತ್ರಿಕೆ, ವಾರಪತ್ರಿಕೆಗೆ ಸಂಪಾದಕರೂ ಆಗಿದ್ದರು.

1969ರಲ್ಲಿ ರಾಜಕೀಯ ಪ್ರವೇಶ :

ಅಂದಿನ ಪ್ರಧಾನಿ ಇಂದಿರಾಗಾಂಧಿಯವರ ಸಲಹೆ ಮೇರೆಗೆ 1969ರಲ್ಲಿ ಬಾಂಗ್ಲಾ ಕಾಂಗ್ರೆಸ್‌ನಿಂದ ರಾಜ್ಯಸಭೆ ಸ್ಥಾನಕ್ಕೆ ಸ್ಪರ್ಧಿಸಿದರು ಪ್ರಣಬ್‌ ಮುಖರ್ಜಿ. ಮುಂದೆ ಬಾಂಗ್ಲಾ ಕಾಂಗ್ರೆಸ್‌, ಕಾಂಗ್ರೆಸ್‌ ಪಕ್ಷದೊಂದಿಗೆ ವಿಲೀನವಾಯಿತು. ನಂತರ, ನಾಲ್ಕು ಅವಧಿಗೆ ಪ್ರಣಬ್‌ ರಾಜ್ಯ ಸದಸ್ಯರಾಗಿ ಮುಂದುವರಿದಿದ್ದರು.

ಪ್ರಣಬ್ ಮುಖರ್ಜಿ 1966–77 ಮತ್ತು 1980–84ರ ಅವಧಿಯಲ್ಲಿ ಪ್ರಧಾನಿ ಇಂದಿರಾಗಾಂಧಿಯವರ ಆಡಳಿತದಲ್ಲಿದ್ದರು. 1973ರ ತುರ್ತು ಪರಿಸ್ಥಿತಿ ಅವಧಿಯಲ್ಲೂ ಇಂದಿರಾ ಅವರ ಕಾರ್ಯಗಳಿಗೆ ಒತ್ತಾಸೆಯಾಗಿ ನಿಂತಿದ್ದರು.

1982ರಲ್ಲಿ ಪ್ರಧಾನಿ ಇಂದಿರಾಗಾಂಧಿ ಅವರ ಸಂಪುಟದಲ್ಲಿ ವಿತ್ತ ಸಚಿವರಾಗಿದ್ದರು. ಇಂದಿರಾ ಹತ್ಯೆಯ ನಂತರ, ಪ್ರಣಬ್ ಮುಖರ್ಜಿಯವರಿಗೆ ಪ್ರಧಾನಿಯಾಗುವ ಅವಕಾಶವಿತ್ತು. ಆದರೆ ಅವರೇ ತಂದೊಡ್ಡಿಕೊಂಡ ತೊಡಕಿನಿಂದಾಗಿ ರಾಜೀವ್‌ಗಾಂಧಿ ಯವರ ಹೆಸರನ್ನು ಕಾಂಗ್ರೆಸ್‌ನ ‘ಇಂದಿರಾ‘ ಆಪ್ತವಲಯ ಸೂಚಿಸಿತು. ಹೀಗಾಗಿ ಪ್ರಣಬ್‌ ಅವರಿಗೆ ಪ್ರಧಾನಿ ಹುದ್ದೆ ಕೈತಪ್ಪಿತು. 1984ರಲ್ಲಿ ರಾಜೀವ್‌ಗಾಂಧಿ ಪ್ರಧಾನಿಯಾದರು. ಯಾವುದೋ ಕಾರಣಕ್ಕೆ ರಾಜೀವ್‌ ಸಂಪುಟದಲ್ಲಿ ಪ್ರಣಬ್‌ ಅವರಿಗೆ ಅವಕಾಶ ಸಿಗಲಿಲ್ಲ. ಆಗ 1986ರಲ್ಲಿ ಹೊಸ ಪಕ್ಷ ಸ್ಥಾಪಿಸಿದರು. ನಂತರದ ಬೆಳವಣಿಗೆಯಲ್ಲಿ, ರಾಜೀವ್‌, ಪ್ರಣಬ್‌ ಅವರ ಮನವೊಲಿಸಿದರು. 1989ರಲ್ಲಿ ತಮ್ಮ ಪಕ್ಷವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸಿದರು.

1991 ರಲ್ಲಿ ರಾಜೀವ್ ಗಾಂಧಿ ಹತ್ಯೆಯಾದ ನಂತರ, ಪಿ.ವಿ. ನರಸಿಂಹ ರಾವ್ ಅವರು ಕಾಂಗ್ರೆಸ್ ನಾಯಕತ್ವ ವಹಿಸಿಕೊಂಡರು. ಸಂಸತ್ತಿನ ಚುನಾವಣೆಯಲ್ಲಿ ಪಕ್ಷದ ಯಶಸ್ಸಿನ ನಂತರ ಅವರನ್ನೇ ಪ್ರಧಾನಿ ಹುದ್ದೆಗೆ ಆಯ್ಕೆ ಮಾಡಲಾಯಿತು. 1996ರಲ್ಲಿ ಪಿವಿ ನರಸಿಂಹರಾವ್‌ ಪ್ರಧಾನಿಯಾದರು. 1993–95 ಅವಧಿಯಲ್ಲಿ ವಾಣಿಜ್ಯ, 1995–96 ಮತ್ತು 2006–09ರಲ್ಲಿ ವಿದೇಶಾಂಗ ವ್ಯವಹಾರ, 2009–12ರ ಅವಧಿಯಲ್ಲಿ ಹಣಕಾಸು ಖಾತೆಗಳನ್ನು ನಿರ್ವಹಿಸಿದರು.

1998ರಲ್ಲಿ ಸೋನಿಯಾ ಗಾಂಧಿ ಪಕ್ಷದ ಅಧ್ಯಕ್ಷರಾದರು. ಯುಪಿಎ ಮೊದಲ ಆಡಳಿತಾವಧಿ ಯಲ್ಲೂ ಪ್ರಧಾನಿ ಹುದ್ದೆಗೆ ಪ್ರಣಬ್‌ ಅವರ ಹೆಸರು ಕೇಳಿಬಂದಿತ್ತು. ಆದರೆ, ಸುದ್ದಿ ನಿಜವಾಗಲಿಲ್ಲ.

2004ರಲ್ಲಿ ಕಾಂಗ್ರೆಸ್ ಮಿತ್ರ ಪಕ್ಷಗಳೊಡಗೂಡಿ ಸರ್ಕಾರ ರಚಿಸುವ ವೇಳೆ, ಬಹುಪಾಲು ಸೋನಿಯಾ ಜತೆಗೆ, ಪ್ರಣವ್ ಅವರ ಹೆಸರೂ ಮತ್ತೊಮ್ಮೆ ಕೇಳಿಬಂದಿತ್ತು. ಕೊನೆಗೆ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯನ್ನಾಗಿಸಿದರು. 2004 ರಲ್ಲೂ ಪ್ರಣಬ್‌ ರಾಜ್ಯಸಭೆ ಸ್ಥಾನ ಬಿಟ್ಟುಕೊಟ್ಟರು. ಮುಂದೆ ಲೋಕಸಭಾ ಸ್ಥಾನಕ್ಕೆ ಸ್ಪರ್ಧಿಸಿ, ಜನರಿಂದ ಆಯ್ಕೆಯಾಗಿ ಸಂಸತ್ ಪ್ರವೇಶಿಸಿದರು. ಪ್ರಣಬ್ ವಿದೇಶಾಂಗ ಸಚಿವರಾದರು. ಯುಪಿಎ 2ರ ಅವಧಿಯಲ್ಲಿ ಹಣಕಾಸು ಸಚಿವರಾದರು. ಕಾಂಗ್ರೆಸ್‌ನಲ್ಲಿ ಮಾಜಿ ಪ್ರಧಾನಿ ಮನಮಹೋನ್‌ ಸಿಂಗ್ ಅವರಂತೆ ಹೆಚ್ಚು ಬಾರಿ ರಾಜ್ಯಸಭೆ ಆಯ್ಕೆಯಾದವರು ಪ್ರಣಬ್‌ ಮುಖರ್ಜಿ.

ಉತ್ತಮ ಅಧ್ಯಯನಕಾರ

ಅಧ್ಯಯನಶೀಲರಾದ ಮುಖರ್ಜಿ ಬರಹಗಾರರೂ ಆಗಿದ್ದಾರೆ. ಬಿಯಾಂಡ್‌ ಸರ್ವೈವಲ್‌: ಎಮರ್ಜಿಂಗ್‌ ಡೈಮೆನ್ಷನ್ಸ್‌ ಆಫ್‌ ಇಂಡಿಯನ್‌ ಇಕಾನಮಿ’, ಚಾಲೆಂಜಸ್‌ ಬಿಫೋರ್‌ ದಿ ನೇಷನ್‌’, ದಿ ಕೊಯಲೇಷನ್‌ ಇಯರ್ಸ್‌’ ಮತ್ತಿತರ ಕೃತಿಗಳನ್ನು ಬರೆದಿದ್ದಾರೆ.

ಪ್ರತಿಭಾ ಪಾಟೀಲ್ ಅಧಿಕಾರಾವಧಿ ಪೂರ್ಣಗೊಂಡ ನಂತರ 2012ರಲ್ಲಿ ಪ್ರಣಬ್‌ ಮುಖರ್ಜಿ ದೇಶದ 13ನೇ ರಾಷ್ಟ್ರಪತಿಯಾಗಿ ಆಯ್ಕೆಗೊಂಡರು. ಯುಪಿಎ –2 ಅವಧಿಯಲ್ಲಿ ರಾಷ್ಟ್ರಪತಿಯಾಗಿ ಆಯ್ಕೆಯಾದರು. ಮುಂದೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂತು. ಆದರೂ ಎಲ್ಲೂ ವಿವಾದಕ್ಕೆಡೆಯಿಲ್ಲದಂತೆ ಆ ಸ್ಥಾನವನ್ನು ನಿರ್ವಹಿಸಿದರು.

ರಾಷ್ಟ್ರಪತಿ ಹುದ್ದೆಯಿಂದ ನಿರ್ಗಮಿಸುವ ವೇಳೆ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಾತನಾಡುತ್ತಾ, ‘ಪ್ರಣಬ್‌ ಮುಖರ್ಜಿ ಜನರ ನಡುವಿನಿಂದ ಬಂದವರು. ಅದಕ್ಕೆ ಅವರು ರಾಷ್ಟ್ರಪತಿಯಾದ ಮೇಲೆ ರಾಷ್ಟ್ರಪತಿ ಭವನವನ್ನು ಜನರ ಭವನವನ್ನಾಗಿ ಮಾಡಿದರು‘ ಎಂದು ಶ್ಲಾಘಿಸಿದ್ದರು.

ರಾಷ್ಟ್ರಪತಿ ಹುದ್ದೆಯಿಂದ ನಿರ್ಗಮಿಸಿದ ನಂತರ, 2015ರಲ್ಲಿ ಪ್ರಣಬ್ ಮುಖರ್ಜಿ ಅವರಿಗೆ ಭಾರತದ ಅತ್ಯುನ್ನದ ಗೌರವವಾದ ‘ಭಾರತ ರತ್ನ’ ಪುರಸ್ಕಾರ ನೀಡಿ ಗೌರವಿಸಲಾಯಿತು.

‘ಭಾರತೀಯರಿಗೆ ಕೃತಜ್ಞತೆ ತೋರುತ್ತಲೇ ಈ ಪುರಸ್ಕಾರದ ಗೌರವವನ್ನು ಒಪ್ಪಿಕೊಳ್ಳುತ್ತೇನೆ. ನನ್ನ ದೇಶದ ಜನರಿಗೆ ನಾನು ನೀಡಿದ್ದಕ್ಕಿಂತಲೂ ಹೆಚ್ಚಿನದನ್ನು ಜನರಿಂದ ಪಡೆದಿದ್ದೇನೆ ಎಂದು ಪದೇಪದೆ ಹೇಳುತ್ತೇನೆ‘ ಎಂದು ‘ಭಾರತ ರತ್ನ‘ ಪುರಸ್ಕಾರ ಸ್ವೀಕರಿಸುವಾಗ ಈ ಮಾತನ್ನು ಹೇಳಿದ್ದರು ಪ್ರಣಬ್‌ ಮುಖರ್ಜಿ.

(ಪೂರಕ ಮಾಹಿತಿ : ವಿವಿಧ ಮೂಲಗಳಿಂದ)

ಇವುಗಳನ್ನು ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.