ADVERTISEMENT

ತ್ಯಾಗ, ಸ್ವಾಭಿಮಾನದ ಅನ್ವರ್ಥಕನಾಮ ಸೆಲ್ವಿ

​ಪ್ರಜಾವಾಣಿ ವಾರ್ತೆ
Published 22 ಮೇ 2021, 19:31 IST
Last Updated 22 ಮೇ 2021, 19:31 IST
ಕಲೆ: ಗುರು ನಾವಳ್ಳಿ
ಕಲೆ: ಗುರು ನಾವಳ್ಳಿ   

ಡಾ. ಪಿ. ಸೆಲ್ವಿ ದಾಸ್ (1932-2021) ಮೈಸೂರು ವಿಶ್ವವಿದ್ಯಾಲಯದ ಪ್ರಥಮ ಹಾಗೂ ಇಲ್ಲಿಯವರೆಗಿನ ಏಕೈಕ ಮಹಿಳಾ ಕುಲಪತಿ. ರಾಜ್ಯದಲ್ಲಿ ಇವರು ಎರಡನೆಯ ಮಹಿಳಾ ಕುಲಪತಿ ಹಾಗೂ ಕಾಲೇಜು ಶಿಕ್ಷಣ ವಿಭಾಗದ ಎರಡನೆಯ ಮಹಿಳಾ ನಿರ್ದೇಶಕರಾದವರು. ಈ ಎರಡೂ ಸ್ಥಾನಗಳಲ್ಲಿ ಅಧಿಕಾರ ನಿರ್ವಹಿಸಿದ ಮೊದಲನೆಯ ಮಹಿಳೆ ಎಂ.ಜಯಲಕ್ಷ್ಮಮ್ಮಣ್ಣಿಯವರು.

ಸೆಲ್ವಿ ದಾಸ್ ಅವರು ಅನೇಕ ತೊಂದರೆಗಳನ್ನು, ಅನನುಕೂಲಗಳನ್ನು ಅನುಭವಿಸಿ ಮುಂದೆ ಬಂದವರು. ಅವರದು ದೊಡ್ಡ ಕುಟುಂಬ - ಒಟ್ಟು ಹತ್ತು ಜನ ಮಕ್ಕಳು, ಐವರು ಗಂಡು ಮತ್ತು ಐವರು ಹೆಣ್ಣು ಮಕ್ಕಳು. ಇವರ ತಂದೆ ಕೆ.ಜಿ.ಎಫ್‍ನಲ್ಲಿ ಕಂಟ್ರಾಕ್ಟರ್ ಆಗಿದ್ದರು. ಅವರೂ ತಮ್ಮ ಜನಾಂಗದಲ್ಲಿ ಮೊತ್ತಮೊದಲ ಪದವೀಧರರಾಗಿದ್ದರು. ದುರ್ದೈವ ಎಂದರೆ ಸೆಲ್ವಿ ದಾಸ್ ಅವರು ಚಿಕ್ಕವಯಸ್ಸಿನಲ್ಲಿದ್ದಾಗ, 1959ರಲ್ಲಿ ಅವರ ತಂದೆ ತೀರಿಕೊಂಡರು.

ದೊಡ್ಡ ಕುಟುಂಬವನ್ನು ಸಾಕಿ ಸಲಹುವ ಸಂಪೂರ್ಣ ಜಬಾಬ್ದಾರಿ ಇವರ ಮೇಲೆ ಬಂತು. ಅವರೇ ಒಂದು ಸಾರಿ ಹೇಳಿದ ಮಾತನ್ನು ಇಲ್ಲಿ ಉಲ್ಲೇಖಿಸಬೇಕು: ‘ನೋಡಿ ಸಂಸಾರದ ಹೊಣೆ ನನ್ನ ಮೇಲೆ ಬಿದ್ದ ಸಮಯದಲ್ಲೇ ನಾನು ಒಂದು ನಿರ್ಧಾರ ತೆಗೆದುಕೊಂಡೆ. ಏನೆಂದರೆ ನಾನು ಮದುವೆ, ನನ್ನ ಸಂಸಾರ ಇವುಗಳನ್ನು ಮರೆಯಬೇಕು. ನನ್ನ ವೈಯಕ್ತಿಕ ಸುಖಕ್ಕೆ ನಾನು ಗಮನಕೊಟ್ಟರೆ ನನ್ನ ತಂಗಿಯರು, ತಮ್ಮಂದಿರನ್ನು ನೋಡಿಕೊಳ್ಳುವುದು ಕಷ್ಟ’. ಈ ಗಂಭೀರ ನಿರ್ಧಾರವನ್ನು ಅವರು ಪಾಲಿಸಿಕೊಂಡು ಬಂದರು. ಆಗಿನ ಕಾಲಘಟ್ಟದಲ್ಲಿ ಅವರಿಗೆ ಎರಡು ದೊಡ್ಡ ತೊಂದರೆಗಳು – ಒಂದು ಮಹಿಳೆಯಾಗಿರುವುದು, ಮತ್ತೊಂದು ದಲಿತರಾಗಿರುವುದು – ಎರಡೂ ರೀತಿಯ ಶೋಷಣೆಗಳನ್ನು ಮೆಟ್ಟಿನಿಂತವರು.

ADVERTISEMENT

ಸೆಲ್ವಿ ಅವರ ಸಾಧನೆಗಳನ್ನು ನೋಡಿದಾಗ ನಮಗೆ ಅವರ ದಿಟ್ಟತನ, ಆತ್ಮವಿಶ್ವಾಸ ಮತ್ತು ಛಲ ಎಲ್ಲವೂ ಗೋಚರವಾಗುತ್ತವೆ. ಪದವೀಧರೆಯಾದ ನಂತರ ಕೆಲಕಾಲ ಮೈಸೂರಿನ ಸಿ.ಎಫ್.ಟಿ.ಆರ್.ಐನಲ್ಲಿ ಉದ್ಯೋಗ. ಅಮೆರಿಕಕ್ಕೆ ಪ್ರವಾಸ, ಅಲ್ಲಿ ಉನ್ನತ ಶಿಕ್ಷಣ. ಮತ್ತೆ ಕೆಲ ವರ್ಷಗಳ ನಂತರ ಅಮೆರಿಕದ ಕ್ವಾಲೆರಾಡೊವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದರು. ಆಮೇಲೆ ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಸೇವೆ. ಈಗ ಎಲ್ಲರಿಗೂ ಚಿರಪರಿಚಿತವಾಗಿರುವ ಗೃಹ ವಿಜ್ಞಾನ ಸಂಸ್ಥೆಯ ಸ್ಥಾಪನೆಗೆ ಅವರು ಶ್ರಮಿಸಿದರು. ಸಂಸ್ಥೆಯ ಪ್ರಾಂಶುಪಾಲರಾಗಿ ಕೆಲಸ ನಿರ್ವಹಿಸಿದರು. ಗೃಹವಿಜ್ಞಾನದಲ್ಲಿ ಆಹಾರ ಮತ್ತು ಪೌಷ್ಟಿಕತೆ– ಈಗ ಈ ವಿಷಯವನ್ನು Food Science and Nutrition ಎಂದು ಕರೆಯುತ್ತಾರೆ– ಸ್ನಾತಕೋತ್ತರ ತರಗತಿಗಳನ್ನು ಆರಂಭಿಸಿದ್ದು ಇವರೇ.

ಸೆಲ್ವಿ ದಾಸ್ ಅವರು 1988ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಅಧಿಕಾರ ವಹಿಸಿಕೊಂಡರು. ಆ ವೇಳೆಗೆ ನಾನು ಅಧ್ಯಾಪಕರ ಸಂಘದ ಅಧ್ಯಕ್ಷನಾಗಿದ್ದೆ. ಇಂಗ್ಲಿಷ್ ವಿಭಾಗದಲ್ಲಿ ಪ್ರವಾಚಕರಾಗಿದ್ದ ಡಾ.ಕೆ.ಸಿ. ಬೆಳ್ಳಿಯಪ್ಪ –ಮುಂದೆ ಅರುಣಾಚಲಪ್ರದೇಶದ ಕೇಂದ್ರ ವಿಶ್ವವಿದ್ಯಾಲಯದ ಕುಲಪತಿಯಾದರು- ನಮ್ಮ ಕಾರ್ಯದರ್ಶಿಗಳು. ಸೆಲ್ವಿ ಅವರು ಕುಲಪತಿಗಳಾದ ಒಂದು ವರ್ಷದ ಮೇಲೆ ಬೆಳ್ಳಿಯಪ್ಪ ಅವರನ್ನು ಉಪಕುಲಸಚಿವರನ್ನಾಗಿ ನೇಮಿಸಿದರು. ಇದಾದ ಹಲವು ತಿಂಗಳ ಮೇಲೆ ನನ್ನನ್ನು ಕುಲಸಚಿವನನ್ನಾಗಿ ನೇಮಿಸಿದರು. ನನಗೆ ತಿಳಿದಮಟ್ಟಿಗೆ ಅಧ್ಯಾಪಕರ ಸಂಘದ ಹಾಲಿ ಮತ್ತು ಮಾಜಿ ಪದಾಧಿಕಾರಿಗಳಿಗೆ ಆಡಳಿತದಲ್ಲಿ ಪ್ರಮುಖ ಸ್ಥಾನಗಳನ್ನು ಕೊಡುವುದು ಅತಿ ವಿರಳ. ಮೈಸೂರು ವಿಶ್ವವಿದ್ಯಾಲಯದಲ್ಲಿ ಈ ರೀತಿಯ ಬೆಳವಣಿಗೆ ಅದುವರೆಗೆ ನಡೆದಿರಲಿಲ್ಲ.

ಸೆಲ್ವಿ ದಾಸ್ ಅವರು ಕುಲಪತಿಯಾಗಿದ್ದಾಗ ಒಂದು ಸ್ನಾತಕೋತ್ತರ ವಿಭಾಗದಲ್ಲಿ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿದ್ದರು. ಎಲ್ಲಾ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸದೇ ಇದ್ದರೂ ಪಾಠ ಪ್ರವಚನಗಳು ನಡೆಯುತ್ತಿರಲಿಲ್ಲ. ಕುಲಸಚಿವನಾಗಿ ಇದನ್ನು ನಿಭಾಯಿಸುವ ಜವಾಬ್ದಾರಿ ನನ್ನದಾಗಿತ್ತು. ಪ್ರತೀ ಹಂತದಲ್ಲೂ ಕುಲಪತಿಯವರ ಮಾರ್ಗದರ್ಶನದ ಸೌಲಭ್ಯ ನನಗಿತ್ತು. ಅವರ ಅಪಾರವಾದ ಅನುಭವ, ವಿದ್ಯಾರ್ಥಿಗಳೊಡನೆ ಸಮಾಲೋಚನೆ ಮಾಡುವಾಗ ತೋರುತ್ತಿದ್ದ ತಾಳ್ಮೆ, ಅಗತ್ಯವಿದ್ದಾಗ ಕಟ್ಟುನಿಟ್ಟಿನ ನಿಲುವು ಇವೆಲ್ಲವೂ ಎದ್ದು ಕಾಣುತ್ತಿದ್ದವು. ಅನೇಕ ವಾರಗಳು ಕಳೆದ ನಂತರ ಆ ಸಮಸ್ಯೆ ಬಗೆಹರಿಯಿತು. ಇದರಲ್ಲಿ ಕುಲಪತಿಯವರ ನಾಯಕತ್ವ ಬಹಳ ಮುಖ್ಯಪಾತ್ರವನ್ನು ವಹಿಸಿತ್ತು.

ಒಮ್ಮೆ ಆಡಳಿತ ವರ್ಗದ ಸಿಬ್ಬಂದಿ ಕೆಲವು ಬೇಡಿಕೆಗಳನ್ನು ಮುಂದಿಟ್ಟು ಒಂದು ರೀತಿಯ ಮುಷ್ಕರವನ್ನು ಪ್ರಾರಂಭಿಸಿದ್ದರು. ನಾನು ಅಧ್ಯಾಪಕರ ಸಂಘದ ಅಧ್ಯಕ್ಷನಾಗಿ ಕುಲಪತಿಯವರಿಗೆ ಈ ಸಮಸ್ಯೆಯನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಹಲವು ಸಲಹೆಗಳನ್ನು ಕೊಟ್ಟೆ. ಅಧ್ಯಾಪಕೇತರ ಸಂಘದ ನೌಕರರ ಪ್ರತಿನಿಧಿಗಳೊಡನೆ ಚರ್ಚಿಸುವುದಕ್ಕೆ ನನಗೆ ಅನುಮತಿಯನ್ನು ಕೊಟ್ಟರು. ಗೊಂದಲ ನಿವಾರಣೆಯಾಯಿತು. ಒಳ್ಳೆಯ ಸಲಹೆಗಳು ಯಾವ ದಿಕ್ಕಿನಿಂದ ಬಂದರೂ ಅವುಗಳನ್ನು ಸ್ವೀಕರಿಸಲು ಅವರು ತಯಾರಾಗಿದ್ದರು.

ಅವರ ಅಧಿಕಾರ ಅವಧಿಯಲ್ಲಿ ನಡೆದ ಇನ್ನೊಂದು ಬಹುಮುಖ್ಯವಾದ ಬೆಳವಣಿಗೆ ಎಂದರೆ, ವಿಶ್ವವಿದ್ಯಾಲಯದ ಮುದ್ರಣಾಲಯಕ್ಕೆ ಸಂಬಂಧಪಟ್ಟಿದ್ದು. ಅಲ್ಲಿನ ಸಿಬ್ಬಂದಿಗೆ ಭವಿಷ್ಯನಿಧಿ ಬದಲು ಪಿಂಚಣಿ ಸೌಲಭ್ಯ ಒದಗಿಸುವ ನಿರ್ಧಾರವನ್ನು ಅವರು ದಿಟ್ಟತನದಿಂದ ತೆಗೆದುಕೊಂಡರು. ಅದು ಕಾರ್ಯಗತವಾಗುವುದಕ್ಕೆ ಸುಮಾರು ಕಾಲ ಹಿಡಿಯಿತು. ಆದರೆ ಇದರ ತಳಹದಿಯಾದ ಈ ನಿರ್ಧಾರವನ್ನು ತೆಗೆದುಕೊಂಡಿದ್ದು ಸೆಲ್ವಿಯವರು.

ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರ ಸೆಲ್ವಿ ಅವರ ಕೊಡುಗೆ. 1989-90ರ ಸಾಲಿನಲ್ಲಿ ಇದನ್ನು ಸ್ಥಾಪಿಸಿ ಆರಂಭದಲ್ಲಿ ಅಭಿವೃದ್ಧಿ ಅಧ್ಯಯನ ಸಂಸ್ಥೆಯ ಒಂದು ಭಾಗವಾಗಿ ಮಾಡಿದರು. ರಾಜ್ಯದಲ್ಲಿ ಎಲ್ಲಾ ವಿಶ್ವವಿದ್ಯಾಲಯಗಳು ಅನುಭವಿಸುತ್ತಿರುವ ಆರ್ಥಿಕ ಕೊರತೆ ಮೈಸೂರು ವಿಶ್ವವಿದ್ಯಾಯಲವನ್ನೂ ಕಾಡದೆ ಬಿಟ್ಟಿಲ್ಲ. ಹಾಗಾಗಿ ಮಹಿಳಾ ಅಧ್ಯಯನ ಕೇಂದ್ರಕ್ಕೆ ಒದಗಬೇಕಾಗಿರುವ ಸಂಪನ್ಮೂಲಗಳು ಒದಗಿಬಂದಿಲ್ಲ. ಆದರೆ, ಸೆಲ್ವಿ ಅವರ ಅಧಿಕಾರ ಅವಧಿಯಲ್ಲಿ ವಿಶ್ವವಿದ್ಯಾಲಯದ ಅಮೃತ ಮಹೋತ್ಸವ ವರ್ಷದ ಉದ್ಘಾಟನೆ ನಡೆಯಿತು. ಆ ಸಂದರ್ಭದಲ್ಲಿ ಕುಲಪತಿಯವರು ವಿಶ್ವವಿದ್ಯಾಲಯಕ್ಕೆ ಒಂದು ವಿಶೇಷವಾದ ಅನುದಾನ ಸರ್ಕಾರದಿಂದ ಬರಬೇಕು ಎಂದು ಕುಲಾಧಿಪತಿಗಳು ಮತ್ತು ಉನ್ನತ ಶಿಕ್ಷಣ ಸಚಿವರ ಮುಂದೆ ಮನವಿಯನ್ನು ಸಲ್ಲಿಸಿದರು.

ಅಮೃತ ಮಹೋತ್ಸವ ಉದ್ಘಾಟನೆಯಾದ ನಂತರ ವಿಜ್ಞಾನ ವಸ್ತುಪ್ರದರ್ಶನವನ್ನು ಮಾನಸ ಗಂಗೋತ್ರಿಯಲ್ಲಿ ಏರ್ಪಡಿಸಲಾಯಿತು. ಇದರ ಉದ್ಘಾಟನೆಯನ್ನು ಮಾಡಿದ್ದು ಹೆಸರಾಂತ ಭೌತಶಾಸ್ತ್ರಜ್ಞ ಡಾ. ರಾಜಾರಾಮಣ್ಣನವರು. ಮತ್ತೊಂದು ಗಮನಾರ್ಹವಾದ ಬೆಳವಣಿಗೆ ಎಂದರೆ ಇವರ ನೇತೃತ್ವದಲ್ಲಿ ವಿಶ್ವವಿದ್ಯಾಲಯವು ಕೆಲವು ಉನ್ನತ ವ್ಯಕ್ತಿಗಳಿಗೆ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿದ್ದು. ಮೈಸೂರು ವಿಶ್ವವಿದ್ಯಾಲಯದ ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಎಸ್. ಚಂದ್ರಶೇಖರ್, ಭಾರತ ರತ್ನ ಪ್ರಶಸ್ತಿಗೆ ಭಾಜನರಾಗಿರುವ ಸಿ.ಎನ್.ಆರ್. ರಾವ್, ಪರಮಾಣು ಶಕ್ತಿ ಆಯೋಗದಲ್ಲಿ ದೊಡ್ಡಸ್ಥಾನದಲ್ಲಿದ್ದ ಡಾ.ಎಂ.ಆರ್. ಶ್ರೀನಿವಾಸನ್, ಆಗ ಕೇಂದ್ರದಲ್ಲಿ ಸಚಿವರಾಗಿದ್ದ ಮಾರ್ಗರೇಟ್‌ ಆಳ್ವಾ ಮತ್ತು ಸುತ್ತೂರು ಮಠದ ಹಿಂದಿನ ಪೀಠಾಧಿಪತಿ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ.

ಕುಲಪತಿಗಳಾಗಿ ತಮ್ಮ ಅಧಿಕಾರ ಅವಧಿ ಮುಗಿದಮೇಲೆ ಸೆಲ್ವಿ ಅವರು ಕೇಂದ್ರ ಲೋಕಸೇವಾ ಆಯೋಗದ ಸದಸ್ಯರಾಗಿ ಆರು ವರ್ಷ ಸೇವೆ ಸಲ್ಲಿಸಿದರು. ಅದು ಮುಗಿದಮೇಲೆ ರಾಜ್ಯಸಭೆಯಲ್ಲಿ ನಾಮನಿರ್ದೇಶಿತ ಸದಸ್ಯರಾಗಿ ಕೆಲಸ ಮಾಡಿದರು. ಮೂರು ಪ್ರತಿಷ್ಠಿತ ಹುದ್ದೆಗಳನ್ನು ಈ ರೀತಿ ಅಲಂಕರಿಸಿದವರು ಪ್ರಾಯಶಃ ಇವರೊಬ್ಬರೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.