ADVERTISEMENT

ಯಕ್ಷಗಾನದ ಮಾತಿನ ಮಾಣಿಕ್ಯ ಕುಂಬ್ಳೆ ಸುಂದರ ರಾವ್

ಡಾ.ಎಂ.ಪ್ರಭಾಕರ ಜೋಶಿ
Published 30 ನವೆಂಬರ್ 2022, 17:44 IST
Last Updated 30 ನವೆಂಬರ್ 2022, 17:44 IST
ಕುಂಬ್ಳೆ ಸುಂದರ ರಾವ್‌
ಕುಂಬ್ಳೆ ಸುಂದರ ರಾವ್‌   

ಕುಂಬ್ಳೆ ಸುಂದರ ರಾವ್ (1934–2022) ಯಕ್ಷಗಾನ ರಂಗವನ್ನು ಬಹುವಾಗಿ ಪ್ರಭಾವಿಸಿದ ಶ್ರೇಷ್ಠ ಮಾತುಗಾರ, ವಾಗ್ಮಿ, ಭಾಷಣಕಾರ ಹಾಗೂ ಪ್ರವಚನಕಾರ. ಅವರ ಹಿರಿಯರು ಮಗ್ಗ ನೆಯ್ಗೆಯವರು. ಮಾತಿನ ನೆಯ್ಗೆಯಲ್ಲೂ ಸುಂದರ ರಾವ್ ಅದ್ಭುತ ಕುಸರಿಯನ್ನು ಮಾಡಿದ್ದಾರೆ.

ಕುಂಬ್ಳೆ ಸುಂದರ ರಾವ್

ಕಲಿತಿದ್ದು 8ನೇ ತರಗತಿ. ಕಂಡದ್ದನ್ನೆಲ್ಲ ಓದುವ ಹವ್ಯಾಸ. ಕನ್ನಡ, ಮಲಯಾಳ ಹಾಗೂ ಕಷ್ಟಪಟ್ಟು ಇಂಗ್ಲಿಷ್‌ ಕೂಡ ಓದುತ್ತಿದ್ದರು.ಸಿನಿಮಾ, ನಾಟಕ ನೋಡುವ ಹವ್ಯಾಸ, ಸತತ ಅಧ್ಯಯನ
ಶೀಲತೆ, ಬದುಕನ್ನು ನೋಡಿ ಗ್ರಹಿಸುವ ಸಾಮರ್ಥ್ಯ, ವಿನೋದಪ್ರಿಯತೆ ಅವರನ್ನು ಕಲಾವಿದರನ್ನಾಗಿ ಬೆಳೆಸಿತು. ದೇವದಾಸ ಮಾಸ್ಟರ್‌ ಅವರಲ್ಲಿ ಸಂಸ್ಕೃತ ಅಭ್ಯಾಸ ಮಾಡಿದ್ದು, ಬದುಕಿಗೆ ತಿರುವು ಕೊಟ್ಟಿತು. ಎರಡನೇ ತಿರುವು ಸಿಕ್ಕಿದ್ದು ಆರ್‌ಎಸ್‌ಎಸ್‌ ಸ್ವಯಂಸೇವಕನಾಗಿ; ಮುಂದೆ ಬಿಜೆಪಿಯಿಂದ ಶಾಸಕರೂ ಆದರು.

ಯಕ್ಷಗಾನ ರಂಗವನ್ನು ಆಳವಾಗಿ ಪ್ರಭಾವಿಸಿದ ಕುಂಬ್ಳೆ ಸೀಮೆಯ ಇಬ್ಬರು ಶ್ರೇಷ್ಠ ಮಾತುಗಾರರೆಂದರೆ ಕುಂಬ್ಳೆ ಸುಂದರ ರಾವ್‌ ಹಾಗೂ ಶೇಣಿ ಗೋಪಾಲಕೃಷ್ಣ ಭಟ್ಟರು. ಸುಂದರ ರಾವ್‌ ಯಕ್ಷಗಾನದ ಸಾಂಪ್ರದಾಯಿಕ ಕಲಾವಿದ ಅಲ್ಲ.ಅವರ ಕಾಲದಲ್ಲಿ ಶ್ರೇಷ್ಠ ಮಾತುಗಾರರಾದ ಶೇಣಿ ಗೋಪಾಲಕೃಷ್ಣ ಭಟ್‌, ಸಾಮಗ, ಅಳಕೆ ರಾಮಯ್ಯ ರೈ, ಗೋವಿಂದ ಭಟ್ಟರು, ಚಂದ್ರಗಿರಿ ಅಂಬು, ಪುತ್ತೂರು ನಾರಾಯಣ ಹೆಗ್ಡೆ, ಕೆರೆಮನೆ ಬಂಧುಗಳು.. ಹೀಗೆ ಪ್ರಭಾವಿ ಕಲಾವಿದರ ದಂಡೇ ಇತ್ತು. ಅಂತಹವರ ನಡುವೆಯೂ ಪ್ರತ್ಯೇಕವಾಗಿ ಗುರುತಿಸಿಕೊಂಡು, ಮೇಳಕ್ಕೆ ಆಕರ್ಷಣೆಯಾಗುವ ಯೋಗ್ಯತೆ ಅವರಲ್ಲಿತ್ತು. ಅವರು ವೃತ್ತಿಜೀವನ ಆರಂಭಿಸಿದ್ದು ಕೊಂಡಾವು ಮೇಳದಲ್ಲಿ. ಮೊದಲ ಹೆಸರು ಎನ್‌.ಸುಂದರ ಶೆಟ್ಟಿಗಾರ್‌. ಅವರಿಗೆ ಕುಂಬ್ಳೆ ಸುಂದರ್ ರಾವ್‌ ಎಂದು ಹೆಸರಿಟ್ಟಿದ್ದು ಕೊರಗ ಶೆಟ್ಟರು. ಅವರು ಹೆಸರಿನಲ್ಲಷ್ಟೇ ಅಲ್ಲ, ಯಕ್ಷಗಾನದಲ್ಲೂ ಮರುಹುಟ್ಟು ಪಡೆದರು. ಈ ರಂಗಕ್ಕೂ ಮರುಹುಟ್ಟನ್ನು, ನುಡಿಗಟ್ಟನ್ನು ಕೊಟ್ಟರು. ‘ಸುಂದರ ರಾವ್‌’ ಶೈಲಿಯನ್ನು ನೀಡಿದರು.

ADVERTISEMENT

‘ತುಳುನಾಡ ಸಿರಿ’ ಪ್ರಸಂಗದ ‘ಕಾಂತ ಪೂಂಜ’ದಂತಹ ಸವಾಲಿನ ಪಾತ್ರವನ್ನೂ ಚೆನ್ನಾಗಿ ನಿಭಾಯಿಸಿದ್ದರು. ಶೇಣಿ ಗೋಪಾಲಕೃಷ್ಣ, ಕೊಳ್ಯೂರು ರಾಮಚಂದ್ರರಾವ್‌, ಪಾತಾಳ, ನಾರಾಯಣ ಹೆಗಡೆ, ಗೋವಿಂದ ಭಟ್‌ ಜೊತೆಗಾರಿಕೆ ಬಹುಕಾಲ ರಂಗದಲ್ಲಿ ಮೆರೆದಿದೆ. ಜೊತೆಗಾರರ ಮಧ್ಯದಲ್ಲಿ ಎದ್ದು ಕಾಣುವ ತಾಕತ್ತು ಅವರಿಗಿತ್ತು. ಮಾತನ್ನು ಸಭೆಗೆ ಪರಿಪೂರ್ಣವಾಗಿ ಮುಟ್ಟಿಸುವುದರಲ್ಲಿ ಸಮರ್ಥರು. ಮಾತು ಆರಂಭಿಸುವ ಕ್ರಮ, ನಿಲ್ಲಿಸುವ ರೀತಿ.. ಮುಂತಾದ ತಾಂತ್ರಿಕ ಅಂಶಗಳೂ
ವಿಭಿನ್ನವಾಗಿದ್ದವು. ಗಂಟೆಗಟ್ಟಲೆ
ರಂಗಸ್ಥಳದಲ್ಲಿದ್ದರೂ ಅವರ ಅರ್ಥಗಾರಿಕೆ ಬೋರು ಹೊಡೆಸುತ್ತಿರಲಿಲ್ಲ.

ಅವರ ಸಾಮರ್ಥ್ಯ ಮತ್ತು ಮಿತಿ ಅವರಿಗೆ ಗೊತ್ತಿತ್ತು. ಧ್ವನಿವರ್ಧಕ ಬಳಸುವ ರೀತಿ, ಎದುರಿನ ಕಲಾವಿದರನ್ನು ಬಳಸಿಕೊಳ್ಳುವ ಕ್ರಮ, ಭಾಗವತರ ಜೊತೆಗಿನ ಸಂವಾದ ಎಲ್ಲವೂ ವಿಶಿಷ್ಟ. ಕಡತೋಕ ಮಂಜುನಾಥ ಭಾಗವತರು, ಅಗರಿ ರಘುರಾಮರಾಯರು, ಧರ್ಮಸ್ಥಳ ಮೇಳದ ರಘುರಾಮ ಹೊಳ್ಳರು ಅವರನ್ನು ಮೆರೆಯಿಸಿದ ಭಾಗವತರು. ಯಕ್ಷಗಾನದ ಮಾತುಗಾರಿಕೆ ಹಾಗೂ ಪ್ರಸಂಗ ನಿರ್ವಹಣೆಯ ಸ್ವರೂಪ ಬದಲಾಯಿಸಿದವರಲ್ಲಿ ಅವರೂ ಒಬ್ಬರು.

ಹಣ, ಜಾತಿ ಬಲವಿಲ್ಲದೆಯೂ ಶಾಸಕನಾಗಬಹುದು ಎಂದು ತೋರಿಸಿಕೊಟ್ಟರು.

(ಲೇಖಕರು ಬಹುಶ್ರುತ ವಿದ್ವಾಂಸ, ತಾಳಮದ್ದಲೆಯ ಪ್ರಸಿದ್ಧ ಅರ್ಥದಾರಿ, ಸಂಶೋಧಕ. ಕುಂಬ್ಳೆ ಅವರ ಒಡನಾಡಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.